Kannada Actress Malashree: ಚಂದನವನದಲ್ಲಿ ಮಾಲಾಶ್ರೀ ಅವರು ಸೃಷ್ಟಿಸಿರುವ ದಾಖಲೆಯನ್ನು ಇದುವರೆಗೆ ಯಾರೂ ಮುರಿಯಲು ಸಾಧ್ಯವಾಗಿಲ್ಲ. 1990 ರ ದಶಕದಲ್ಲಿ ಬಹುಬೇಡಿಕೆಯ ನಟಿಯಾಗಿದ್ದ ಮಾಲಾಶ್ರೀ ಅವರ ಚಿತ್ರಗಳನ್ನು ಜನರು ಜಾಗರಣೆ ಮಾಡಿ ನೋಡುತ್ತಿದ್ದರು.

ಬೆಂಗಳೂರು: ಚಂದನವನದ ಕನಸಿನ ರಾಣಿ ಮಾಲಾಶ್ರೀ ಸಿನಿಮಾ ಅಂದ್ರೆ ಅಭಿಮಾನಿಗಳು ಥಿಯೇಟರ್ ಮುಂದೆಯೇ ಜಾಗರಣೆ ಮಾಡುತ್ತಿದ್ದರು. ಎಲ್ಲಾ ಪಾತ್ರಗಳಿಗೂ ಒಪ್ಪಿಗೆಯಾಗುವ ಚೆಲುವೆಯೇ ಈ ಮಾಲಾಶ್ರೀ. 1990ರ ದಶಕದಲ್ಲಿ ಎಲ್ಲಾ ನಿರ್ಮಾಪಕರು ಮಾಲಾಶ್ರೀ ಕಾಲ್‌ಶೀಟ್‌ಗಾಗಿ ಕಾಯುತ್ತಿದ್ದರು. ಮಾಲಾಶ್ರೀ ಮನೆಯಿಂದ ಹೊರ ಬಂದ್ರೆ ಅವರಿಗಾಗಿ ಮೂರ್ನಾಲ್ಕು ಕಾರ್‌ಗಳು ಕಾಯುತ್ತಿದ್ದವು. ಆ ದಿನ ಯಾವ ಸಿನಿಮಾ ಶೂಟಿಂಗ್‌ಗೆ ಹೋಗಬೇಕು ಅನ್ನೋದನ್ನು ಮಾಲಾಶ್ರೀ ಡಿಸೈಡ್ ಮಾಡ್ತಿದ್ದರಂತೆ. ಮಾಲಾಶ್ರೀ ಅವರ ಅನುಕೂಲಕ್ಕೆ ತಕ್ಕಂತೆ ದಿನಾಂಕಗಳನ್ನು ಹೊಂದಾಣಿಕೆ ಮಾಡಿಕೊಡಲಾಗುತ್ತಿತ್ತು. ಸಮಾರು 10 ರಿಂದ 15 ವರ್ಷ ಚಂದನವನದ ಬಹುಬೇಡಿಕೆಯ ನಟಿಯಾಗಿ ಮಾಲಾಶ್ರೀ ಗುರುತಿಸಿಕೊಂಡಿದ್ದರು. ಮಾಲಾಶ್ರೀ ಅವರ ಹೆಸರಿನಲ್ಲಿರುವ ಒಂದು ದಾಖಲೆಯನ್ನು ಈವರೆಗೆ ಸ್ಯಾಂಡಲ್‌ವುಡ್‌ನ ಯಾವ ನಟಿಯಿಂದಲೂ ಬ್ರೇಕ್ ಮಾಡಲು ಸಾಧ್ಯವಿಲ್ಲ. ಮುಂದೆಯೂ ಈ ದಾಖಲೆ ಬ್ರೇಕ್ ಮಾಡಲು ಸಾಧ್ಯವಿಲ್ಲ ಅಂತಾರೆ ಮಾಲಾಶ್ರೀ ಅಭಿಮಾನಿಗಳು.

ಬಾಲ ಕಲಾವಿದೆಯಾಗಿ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ ಮಾಲಾಶ್ರೀ ಅವರ ನಿಜವಾದ ಹೆಸರು ಶ್ರೀ ದುರ್ಗಾ. 1989ರಲ್ಲಿ ಬಿಡುಗಡೆಯಾದ ನಂಜುಂಡಿ ಕಲ್ಯಾಣ ಸಿನಿಮಾ ಮೂಲಕ ಇಡೀ ಕರುನಾಡಿನ ಮನೆಮಾತಾದರು. ಗ್ಲಾಮರ್ ಆಂಡ್ ಟ್ರೆಡಿಷನ್ ಲುಕ್‌ನಲ್ಲಿ ಕಾಣಿಸಿಕೊಂಡ ಮಾಲಾಶ್ರ ಮೊದಲ ಸಿನಿಮಾದಲ್ಲಿ ಕರ್ನಾಟಕದ ಕನಸಿನ ರಾಣಿಯಾದರು. ಕೈಯಲ್ಲಿ ಬಾಟೆಲ್ ಹಿಡಿದು, ಸಾರಾಯಿ ಗುಟುಕು ಹೀರುತ್ತಾ ಪರದೆ ಮೇಲೆ ಮಾಲಾಶ್ರೀ ತೂರಾಡಿದ್ರೆ ನೋಡುಗರಿಗೆ ಫುಲ್ ಕ್ವಾಟರ್‌ ಕುಡಿದಷ್ಟೇ ಕಿಕ್ ಏರುತ್ತಿತ್ತು. ನಂಜುಂಡಿ ಕಲ್ಯಾಣ ನಂತರ ಮಾಲಾಶ್ರೀ ಮುಟ್ಟಿದ್ದೆಲ್ಲಾ ಚಿನ್ನವಾಗಲಾರಂಭಿಸಿತು.

ಚಾಮುಂಡಿ ಮಾಲಾಶ್ರೀ ಹೆಸರಿನಲ್ಲಿದೆ ಅಳಿಸಲಾಗದ ದಾಖಲೆ

ಹೌದು, ಸುಮಾರು 100ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಮಾಲಾಶ್ರೀ ಅವರ ಹೆಸರಿನನಲ್ಲಿ ವಿಶೇಷ ದಾಖಲೆಯೊಂದಿದೆ. ಈ ದಾಖಲೆ ಈವರೆಗೂ ಯಾರಿಂದಲೂ ಬ್ರೇಕ್ ಮಾಡಲು ಸಾಧ್ಯವಾಗಿಲ್ಲ. 1992ರಲ್ಲಿ ಮಾಲಾಶ್ರೀ ನಾಯಕಿಯಾಗಿ ನಟಿಸಿದ್ದ ಬರೋಬ್ಬರಿ 20 ಸಿನಿಮಾಗಳು ಬಿಡುಗಡೆಯಾಗಿದ್ದವು. ಇವುಗಳಲ್ಲಿ ಭಾಗಶಃ ಎಲ್ಲಾ ಸಿನಿಮಾಗಳು ಹೌಸ್ ಫುಲ್ ಪ್ರದರ್ಶನ ಕಂಡು ಅರ್ಧ ಶತಕ ಪ್ರದರ್ಶನ ಕಂಡಿದ್ದವು.

View post on Instagram

1992 ರಲ್ಲಿ ಬಿಡುಗಡೆಯಾದ ಮಾಲಾಶ್ರೀ ಸಿನಿಮಾಗಳ ಹೆಸರು

ಬೆಳ್ಳಿ ಕಾಲುಂಗುರ, ಹಠಮಾರಿ ಹೆಣ್ಣು ಕಿಲಾಡಿ ಗಂಡು, ಶಿವಗಂಗಾ, ಬೆಳ್ಳಿ ಮೋಡಗಳು, ಸಿಂಧೂರ ತಿಲಕ, ವಜ್ರಾಯುಧ, ಮಾಲಾಶ್ರೀ ಮಾಮಾಶ್ರೀ, ಸೋಲಿಲ್ಲದ ಸರದಾರ, ನಗರದಲ್ಲಿ ನಾಯಕರು, ಕನಸಿನ ರಾಣಿ, ಸಾಹಸಿ, ಪ್ರೇಮ ಸಂಗಮ, ಮೇಘ ಮಂದಾರ, ಗೃಹಲಕ್ಷ್ಮೀ, ಹಳ್ಳಿ ಕೃಷ್ಣ, ದೆಲ್ಲಿ ರಾಧಾ, ಸ್ನೇಹದ ಕಡಲಲ್ಲಿ, ಮನ ಮೆಚ್ಚಿದ ಸೊಸೆ, ಮರಣ ಮೃದಂಗ, ಬೆಳ್ಳಿಯಪ್ಪ ಬಂಗಾರಪ್ಪ (ವಿಶೇಷ ಅತಿಥಿ ಪಾತ್ರ), ಕಲಿಯುಗ ಸೀತೆ

ಹೀಗೆ ಒಂದೇ ವರ್ಷದಲ್ಲಿಯೇ ಮಾಲಾಶ್ರೀ ಅವರ 20 ಸಿನಿಮಾಗಳು ಬಿಡುಗಡೆಯಾಗಿದ್ದವು. ಬೆಳ್ಳಿ ಕಾಲುಂಗರ ಸಿನಿಮಾದಲ್ಲಿ ಕೇಳಿಸದೇ ಕಲ್ಲಿನಲಿ ಹಾಡನ್ನು ಇಂದಿಗೂ ಜನರು ನೆನಪಿನಲ್ಲಿಟ್ಟುಕೊಂಡಿದ್ದಾರೆ. ಮುಖ್ಯಮಂತ್ರಿ ಚಂದ್ರು ಜೊತೆಗಿನ ಜುಗಲ್ ಬಂದಿಯ ಕಾಮಿಡಿ ಮಿಶ್ರಿತ ಸಾಹಸದೃಶ್ಯವುಳ್ಳ ಮಾಲಾಶ್ರೀ ಮಾಮಾಶ್ರೀ ಸಿನಿಮಾದ ದೃಶ್ಯಗಳು ಇಂದಿಗೂ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. 

ಇನ್ನು ಶಿವಗಂಗಾದಲ್ಲಿ ನಾಗಿಣಿಯಾಗಿ ಮಿಂಚಿನ ನೋಟ ಯಾರಿಂದ ಮರೆಯಲು ಸಾಧ್ಯ. ಹೀಗೆ ಪ್ರತಿಯೊಂದು ಸಿನಿಮಾದಲ್ಲಿ ವಿಭಿನ್ನ ಪಾತ್ರವಾಗಿ ಮಾಲಾಶ್ರೀ ಕಾಣಿಸಿಕೊಳ್ಳುತ್ತಿದ್ದರು. ಮಾಲಾಶ್ರೀ ಮೊದಲ ಕನ್ನಡದ ಸೂಪರ್ ಸ್ಟಾರ್ ಎಂಬ ಬಿರುದು ಸಹ ಹೊಂದಿದ್ದಾರೆ. ಸಿಬಿಐ ದುರ್ಗಾ, ಚಾಮುಂಡಿ, ಸರ್ಕಲ್ ಇನ್‌ಸ್ಪೆಕ್ಟರ್, ಲೇಡಿ ಟೈಗರ್ ಸೇರಿದಂತೆ ಹಲವು ಸಾಹಸ ಪ್ರಧಾನ ಚಿತ್ರಗಳಲ್ಲಿಯೂ ಮಾಲಾಶ್ರೀ ನಟಿಸಿದ್ದಾರೆ.

View post on Instagram