ಇಂದು ಜುಟ್ಟು ಬಿಡುವುದು ಒಂದು ಫ್ಯಾಷನ್. 'ಶಿಷ್ಟ ಹೇರ್‌ಸ್ಟೈಲ್‌ಗಳಿಗಾಗಿ ತಲೆಯ ಯಾವ್ಯಾವುದೋ ಭಾಗದಲ್ಲಿ ಕೆಲ ಹುಡುಗರು ಜುಟ್ಟು ಬಿಡುವುದುಂಟು. ಆದರೆ, ಸಂಪ್ರದಾಯಸ್ಥರು ಜುಟ್ಟು ಬಿಟ್ಟರೆ ಮಾತ್ರ ಎಲ್ಲರೂ ನಗುತ್ತಾರೆ! 

ವಾಸ್ತವವಾಗಿ 'ಹೀಗೆ ಜುಟ್ಟು ಬಿಡುವುದು ಒಂದು ಸಂಪ್ರದಾಯವೇ ಅಲ್ಲ. ಇದು ಹಳೆಯ ಕಾಲದ' ಹಿಂದೂಗಳ, ಅದರಲ್ಲೂ ಮುಖ್ಯವಾಗಿ ಬ್ರಾಹ್ಮಣರ ಸಹಜ ಜೀವನಶೈಲಿಯೇ ಆಗಿತ್ತು. ಆಗ ಜುಟ್ಟು ಬಿಡುವುದರಲ್ಲಿ ಯಾವ ವಿಶೇಷತೆಯೂ ಇರಲಿಲ್ಲ. ಉಪನಯನವಾದ ಹುಡುಗರಿಗೆ ಕ್ಷೌರ ಮಾಡುವ ರೀತಿಯೇ ಅದಾಗಿತ್ತು. ಇಂದು ಕರ್ಮಠ ಬ್ರಾಹ್ಮಣರಷ್ಟೇ ಜುಟ್ಟು ಬಿಡುತ್ತಾರೆ. ಬೇರೆಯವರು ಯಾರೂ ಜುಟ್ಟಿನ ಗೊಡವೆಗೆ ಹೋಗುವುದಿಲ್ಲ.

ಶಿಖೆಯಲ್ಲಿ ಎರಡು ವಿಧ. ಅಗ್ರಶಿಖೆ ಮತ್ತು ಪೃಷ್ಠ ಶಿಖೆ. ಅಗ್ರಶಿಖೆ ಎಂದರೆ ತಲೆಯ ಮುಂಭಾಗದಲ್ಲಿ ಗೋಪಾದದಷ್ಟು ಕೂದಲನ್ನು ಬಿಟ್ಟು ಅದಕ್ಕೆ ಗಂಟು ಹಾಕುವುದು. ಪೃಷ್ಠಶಿಖೆಯು ತಲೆಯ ಹಿಂಭಾಗದಲ್ಲಿ ಗೋಪಾದದಷ್ಟು ಪ್ರದೇಶದ ಕೂದಲನ್ನು ಕತ್ತರಿಸದೇ ಹಾಗೆಯೇ ಬಿಟ್ಟು ಗಂಟು ಹಾಕುತ್ತಾರೆ. 

ಶಿಖೆ ಹಾಕುವುದಕ್ಕೆ ಎರಡು ಕಾರಣಗಳುಂಟು. ಮೊದಲನೆಯದು ಅಗ್ರಶಿಖೆ ಹಾಗೂ ಪೃಷ್ಠಶಿಖೆಗಳನ್ನು ಹಾಕುವ ಸ್ಥಳದಲ್ಲಿ ಮೂಳೆಗಳು ಮೃದುವಾಗಿರುತ್ತವೆ. ಇದೇ ಪ್ರದೇಶದಲ್ಲಿ ಸಹಸ್ರಾರ ಚಕ್ರವಿರುತ್ತದೆ. ಬ್ರಹ್ಮರಂಧ್ರವೂ ಇಲ್ಲೇ ಇರುತ್ತದೆ ಎನ್ನುವುದು ನಂಬಿಕೆ. ವಯಸ್ಕ ವ್ಯಕ್ತಿಯ ತಲೆಯಲ್ಲಿರುವ ಎಲ್ಲ ಮೂಳೆಗಳು ಏಕರೂಪವಾಗಿರುವುದಿಲ್ಲ. ಅಲ್ಪಸ್ವಲ್ಪ ವ್ಯತ್ಯಾಸವಾಗುತ್ತದೆ. ಪುರುಷರ ಮೂಳೆಯು ಸರಾಸರಿ 6.5 ಎಂ.ಎಂ ದಪ್ಪವಿದ್ದರೆ ಸ್ತ್ರೀಯರ ಮೂಳೆಯು 7.1 ಎಂಎಂನಷ್ಟು ದಪ್ಪವಿರುತ್ತದೆ. ಅಂದರೆ ಪುರುಷರ ತಲೆ ಮೂಳೆ ಸ್ತ್ರೀಯರ ತಲೆ ಮೂಳೆಗಿಂತ ತೆಳ್ಳಗಿರುತ್ತದೆ. ಈ ತೆಳ್ಳಗಿರುವ ಭಾಗದಲ್ಲಿ ಶಿಖೆಯನ್ನು ಬಿಡುವುದು ವಾಡಿಕೆ. 

ಹಳೆ ಆಚಾರ, ಹೊಸ ವಿಚಾರ

ಎರಡನೆಯ ಕಾರಣ ನಮ್ಮ ಶರೀರದ ಉಷ್ಣತೆಯು ಪ್ರಧಾನವಾಗಿ ತಲೆ ಮತ್ತು ಮುಖದ ಮೂಲಕ ಹೊರ ಹರಿಯುತ್ತದೆ. ಈ ಹಿನ್ನೆಲೆಯಲ್ಲಿ ತಲೆ ಮೇಲಿರುವ ಗೋಪಾದ ಪ್ರದೇಶ ಶಿಖೆಯು ಶರೀರ ಉಷ್ಣತೆಯನ್ನು ಕಾದಿಟ್ಟುಕೊಳ್ಳಲು ನೆರವಾಗುತ್ತದೆ.

- ಮಹಾಬಲ ಸೀತಾಳಬಾವಿ