
ಇಸ್ಲಾಮಾಬಾದ್(ಡಿ.31): ಅದು ಅಕ್ಟೋಬರ್ 12, 1999.. ಕಾರ್ಗಿಲ್ ಯುದ್ಧ ಮುಗಿದು ಕೇವಲ ಮೂರು ತಿಂಗಳಾಗಿತ್ತು. ಭಾರತೀಯ ಸೇನೆಯಿಂದ ಹೊಡೆತ ತಿಂದು ಇಂಗು ತಿಂದ ಮಂಗನಂತಾಗಿದ್ದ ಪಾಕ್ ಸೇನಾ ಮುಖ್ಯಸ್ಥ ಪರ್ವೇಜ್ ಮುಶ್ರಫ್ ಒಂದೆಡೆಯಾದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಖಭಂಗಕ್ಕೀಡಾದ ಪಾಕ್ ಪ್ರಧಾನಿ ನವಾಜ್ ಶರೀಫ್ ಮತ್ತೊಂದೆಡೆ.
ಕಾರ್ಗಿಲ್ ಯುದ್ಧ ಮುಗಿದೊಡನೆ ಪಾಕ್ ರಾಜಕೀಯದಲ್ಲಿ ಅಸ್ಥಿರತೆ ಕಾಣಲಾರಂಭಿಸಿತ್ತು. ಸೇನೆ ಮತ್ತು ಸರ್ಕಾರದ ನಡುವೆ ವೈಷಮ್ಯ ಹೊಗೆಯಾಡುತ್ತಿರುವುದು ಸ್ಪಷ್ಟವಾಗಿತ್ತು. ಜನರಲ್ ಪರ್ವೇಜ್ ಮುಶ್ರಫ್ ಹಾಗೂ ಪ್ರಧಾನಿ ನವಾಜ್ ಶರೀಫ್ ನಡುವಿನ ಸಂಬಂಧ ಹಳಸಿದ್ದು, ಒಬ್ಬರನ್ನೊಬ್ಬರು ಮೂಲೆಗುಂಪು ಮಾಡಲು ಹಾತೋರೆಯುತ್ತಿದ್ದರು.
ಪರ್ವೇಜ್ ಮುಶ್ರಫ್ ಅವರನ್ನು ಚೀಫ್ ಆಫ್ ಆರ್ಮಿ ಸ್ಟಾಫ್ ಹುದ್ದೆಯಿಂದ ಕೆಳಗಿಳಿಸಲು ಬಯಿಸಿದ್ದ ಪ್ರಧಾನಿ ನವಾಜ್ ಶರೀಫ್. ಒಂದೊಳ್ಳೆಯ ಅವಕಾಶಕ್ಕಾಗಿ ಕಾಯುತ್ತಿದ್ದರು.
ಸೇನಾ ಕ್ರಾಂತಿಗೂ ಮೊದಲು:
ಅದರಂತೆ ಪರ್ವೇಜ್ ಮುಶ್ರಫ್ ಶ್ರೀಲಂಕಾ ಸೇನಾ ಮುಖ್ಯಸ್ಥ ಲೆ.ಜ. ಸಿಎಸ್ ವೀರಸೂರ್ಯ ಆಹ್ವಾನದ ಮೇರೆಗೆ ಶ್ರೀಲಂಕಾಗೆ ಅಧಿಕೃತ ಭೇಟಿಗೆ ತೆರಳಿದ್ದರು. ಇದೇ ಸಮಯಕ್ಕಾಗಿ ಕಾಯುತ್ತಿದ್ದ ನವಾಜ್ ಶರೀಫ್, ಮುಶ್ರಫ್ ಮರಳಿ ಬರುವ ದಿನ ಅಂದರೆ ಅಕ್ಟೋಬರ್ 12, 1999ರಂದು ಮುಶ್ರಫ್ ಅವರನ್ನು ಸೇನಾ ಮುಖ್ಯಸ್ಥರ ಹುದ್ದೆಯಿಂದ ವಜಾಗೊಳಿಸಿ ಐಎಸ್‌ಐ ಮುಖ್ಯಸ್ಥರಾಗಿದ್ದ ಲೆ. ಜ. ಜಿಯಾವುದ್ದೀನ್ ಭಟ್ ಅವರನ್ನು ನೂತನ ಸೇನಾ ಮುಖ್ಯಸ್ಥರನ್ನಾಗಿ ನೇಮಿಸಿದರು.
ಲೆ.ಜ. ಜಿಯಾವುದ್ದೀನ್ ಭಟ್ ಅವರನ್ನು ಅದೆಷ್ಟು ತರಾತುರಿಯಲ್ಲಿ ಸೇನಾ ಮುಖ್ಯಸ್ಥರನ್ನಾಗಿ ನೇಮಿಸಲಾಗಿತ್ತೆಂದರೆ, ಅಧ್ಯಕ್ಷ ಮೊಹ್ಮದ್ ರಫೀಕ್ ತರಾರ್ ಅವರ ಕೊಠಡಿಯಲ್ಲಿ ಅವರಿಗೆ ಸೇನಾ ಮುಖ್ಯಸ್ಥರ ಹೊಸ ರ್ಯಾಂಕ್‌ಗಳನ್ನು ಅಳವಡಿಸಲಾಗಿತ್ತು. ಹೊಸ ರ್ಯಾಂಕ್‌ಗಳನ್ನು ಅಳವಡಿಸಲು ಪಿನ್ ಸಿಗದೇ ಬೆಂಕಿಪೊಟ್ಟಣದ ಕಡ್ಡಿಗಳನ್ನು ಸಿಕ್ಕಿಸಿ ಮೆಡಲ್‌ಗಳನ್ನು ಹಾಕಲಾಗಿತ್ತು. ಅಲ್ಲದೇ ಸ್ಥಳದಲ್ಲಿ ಹಾಜರಿದ್ದ ಕಿರಿಯ ಅಧಿಕಾರಿಯ ಭುಜದ ಮೇಲಿದ್ದ ಮೆಡಲ್‌ಗಳನ್ನು ತೆಗೆಸಿ ಜಿಯಾವುದ್ದೀನ್ ಅವರಿಗೆ ತೊಡಿಸಲಾಗಿತ್ತು.
ಮುಶ್ರಫ್ ಇದ್ದ ವಿಮಾನಕ್ಕೆ ಪಾಕ್‌ನಲ್ಲಿ ಇಳಿಯದಂತೆ ಸೂಚನೆ:
ಈ ಮಧ್ಯೆ ಶ್ರೀಲಂಕಾದಿಂದ ವಾಪಸ್ಸಾಗುತ್ತಿದ್ದ ಜನರಲ್ ಪರ್ವೇಜ್ ಮುಶ್ರಫ್, ಪಾಕಿಸ್ತಾನದ ಸರ್ಕಾರಿ PIA 777-200 ವಿಮಾನದಲ್ಲಿ ಕರಾಚಿ ತಲುಪಲಿದ್ದರು. ಆದರೆ ಮಾರ್ಗ ಮಧ್ಯೆದಲ್ಲೇ PIA 777-200 ವಿಮಾನಕ್ಕೆ ಪಾಕಿಸ್ತಾನದ ಯಾವುದೇ ವಿಮಾನ ನಿಲ್ದಾಣದಲ್ಲಿ ಇಳಿಯದಂತೆ ಸೂಚಿಸಲಾಯಿತು.
ಏಕಾಏಕಿ ಬಂದ ಈ ಆದೇಶದಿಂದ ಪೈಲೆಟ್ ಗಾಬರಿಗೊಂಡಿದ್ದಲ್ಲದೇ ವಿಮಾನದಲ್ಲಿ ಇಂಧನ ಖಾಲಿಯಾಗುತ್ತಿರುವ ಕುರಿತು ಕಂಟ್ರೋಲ್ ರೂಂಗೆ ಮಾಹಿತಿ ರವಾನಿಸಿದ. ಆದರೆ ವಿಮಾನವನ್ನು ಭಾರತದ ಯಾವುದಾದರೂ ನಗರಕ್ಕೆ ಕೊಂಡೊಯ್ದು ತುರ್ತು ಲ್ಯಾಂಡಿಂಗ್ ಮಾಡಿಸುವಂತೆ ಪೈಲೆಟ್‌ಗೆ ಸಿಎಎ ಆದೇಶ ನೀಡಿತ್ತು.
ಆದರೆ ವಿಮಾನವನ್ನು ಭಾರತಕ್ಕೆ ತಿರುಗಿಸಲು ವಿರೋಧ ವ್ಯಕ್ತಪಡಿಸಿದ್ದ ಮುಶ್ರಫ್, 'ಓವರ್ ಮೈ ಡೆಡ್ ಬಾಡಿ'(ನನ್ನ ಹೆಣದ ಮೇಲೆ) ಎಂದು ಕೂಗಿ ಹೇಳಿದ್ದು ವಿಮಾನದ ಕಾಕ್‌ಪೀಟ್‌ನಲ್ಲಿ ರೆಕಾರ್ಡ್ ಆಗಿತ್ತು.
ತಮ್ಮನ್ನು ಸೇನಾ ಮುಖ್ಯಸ್ಥರ ಹುದ್ದೆಯಿಂದ ವಜಾಗೊಳಿಸಿರುವ ಕುರಿತು ಮಹಿತಿ ಪಡೆದ ಪರ್ವೇಜ್ ಮುಶ್ರಫ್, ತಮ್ಮ ಬೆಂಬಲ ಅಧಿಕಾರಿಗಳ ಸಹಾಯದಿಂದ ಕ್ಷಿಪ್ರ ಸೇನಾ ಕ್ರಾಂತಿಗೆ ಮುಂದಡಿ ಇಟ್ಟರು.
ಮುಶ್ರಫ್ ಇದ್ದ ವಿಮಾನದಲ್ಲಿ ಸುಮಾರು 180 ಪಾಕಿಸ್ತಾನಿ ನಾಗರಿಕರು ಸಂಚರಿಸುತ್ತಿದ್ದು, ವಿಮಾನದಲ್ಲಿ ಇಂಧನ ಖಾಲಿಯಾಗುತ್ತಿರುವ ಕುರಿತು ಚಿಂತಾಕ್ರಾಂತರಾಗಿದ್ದರು. ಈ ವೇಳೆ ಮುಶ್ರಫ್ ಬೆಂಬಲಿತ ಸೇನಾ ಅಧಿಕಾರಿಗಳು ಕರಾಚಿ ವಿಮಾನ ನಿಲ್ದಾಣವನ್ನು ತಮ್ಮ ವಶಕ್ಕೆ ಪಡೆದು PIA 777-200 ವಿಮಾನ ಲ್ಯಾಂಡ್ ಆಗುವಂತೆ ನೋಡಿಕೊಂಡರು.
ಕರಾಚಿ ವಿಮಾನ ನಿಲ್ದಾಣ ಮಿಲಿಟರಿ ವಶಕ್ಕೆ:
ಇದಕ್ಕೂ ಮೊದಲು ಕರಾಚಿ ವಿಮಾನ ನಿಲ್ದಾಣವನ್ನು ವಶಕ್ಕೆ ಪಡೆದಿದ್ದ ಮಿಲಿಟರಿ ಪೊಲೀಸ್ ಮುಖ್ಯಸ್ಥ ಲೆ.ಜ ಮುಜಫರ್ ಉಸ್ಮಾನಿಗೆ ವಿಮಾನದಿಂದಲೇ ಸಂಪರ್ಕ ಸಾಧಿಸಿದ ಮುಶ್ರಫ್, ಅವರ ಗುರುತು ಪತ್ತೆಗಾಗಿ ತಮ್ಮ ಎರಡು ನಾಯಿಯ ಹೆಸರು ಹೇಳುವಂತೆ ಸೂಚಿಸಿದರು. ಅದರಂತೆ ಉಸ್ಮಾನಿ ಮುಶ್ರಫ್ ಸಾಕುನಾಯಿಗಳ ಹೆಸರನ್ನು ಸರಿಯಾಗಿ ಹೇಳಿದಾಗ ವಿಮಾನ ಲ್ಯಾಂಡ್ ಮಾಡುವಂತೆ ಮುಶ್ರಫ್ ಪೈಲೆಟ್‌ಗೆ ಆದೇಶ ನೀಡಿದ್ದರು.
ಬಳಿಕ ಮುಶ್ರಫ್ ಪದಚ್ಯುತಿ ಸುದ್ದಿ ಬಿತ್ತರಿಸುತ್ತಿದ್ದ ಪಾಕಿಸ್ತಾನ ಸರ್ಕಾರಿ ಸುದ್ದಿವಾಹಿನಿ ಮೇಲೆ ದಾಳಿ ಮಾಡಿದ ಮುಶ್ರಫ್ ಬೆಂಬಲಿತ ಸೈನಿಕರು ಕಚೇರಿಯನ್ನು ವಶಕ್ಕೆ ಪಡೆದಿದ್ದಲ್ಲದೇ ಸುದ್ದಿ ಪ್ರಸಾರವನ್ನು ತಡೆಹಿಡಿದರು.
ಬಳಿಕ ಪ್ರಧಾನಿ ನವಾಜ್ ಶರೀಫ್ ಕಚೇರಿ ಮೇಲೆ ದಾಳಿ ಮಾಡಿದ ಮುಶ್ರಫ್ ಬೆಂಬಲಿತ ಸೇನಾಧಿಕಾರಿಗಳು ಅಲ್ಲಿರುವ ಭದ್ರತಾ ಸಿಬ್ಬಂದಿ ಜೊತೆಗೆ ಶರೀಫ್ ಅವರನ್ನು ವಶಕ್ಕೆ ಪಡೆದರು. ಈ ವೇಳೆ ಸ್ಥಳದಲ್ಲಿ ಹಾಜರಿದ್ದ ಲೆ.ಜ. ಜಿಯಾವುದ್ದೀನ್ ಭಟ್ ಅವರ ಮನವಿಯ ಮೇರೆಗೆ ಸೈನಿಕರು ಸಂಭವನೀಯ ರಕ್ತಪಾತವನ್ನು ತಡೆದರು.
ನವಾಜ್ ಪದಚ್ಯುತಿಗೊಳಿಸಿದ ಮುಶ್ರಫ್:
ಕರಾಚಿ ವಿಮಾನ ನಿಲ್ದಾಣ ಬಂದಿಳಿಯುತ್ತಿದ್ದಂತೇ ಚುರುಕುಗೊಂಡ ಪರ್ವೇಜ್ ಮುಶ್ರಫ್, ಸೇನೆ ಮತ್ತು ಸರ್ಕಾರವನ್ನು ತಮ್ಮ ವಶಕ್ಕೆ ಪಡೆದರು. ಬಳಿಕ ಅಕ್ಟೋಬರ್ 14, 1999ರಂದು ನವಾಜ್ ಶರೀಫ್ ಅವರನ್ನು ಪದಚ್ಯುತಿಗೊಳಿಸುವ ನಿರ್ಧಾರ ಪ್ರಕಟಿಸಿದ ಪರ್ವೇಜ್ ಮುಶ್ರಫ್, ಪಾಕಿಸ್ತಾನದಲ್ಲಿ ಮಾರ್ಷಲ್ ಲಾ ಜಾರಿಗೊಳಿಸಿ ಸೇನಾಡಳಿತವನ್ನು ಹೇರಿದರು. ಜೀವಭಯದಿಂದ ನವಾಜ್ ಶರೀಫ್ ಹಾಗೂ ಅವರ ಕುಟುಂಬ ದೇಶ ಬಿಡುವಂತಾಯಿತು.
ಅಕ್ಟೋಬರ್ 12, 1999ರ ಎಲ್ಲ ಬೆಲವಣಿಗೆಗಳ ಕುರಿತು ಜನರಲ್ ಪರ್ವೇಜ್ ಮುಶ್ರಫ್ ತಮ್ಮ 'ಇನ್ ದಿ ಲೈನ್ ಆಫ್ ಫಯರ್: ಎ ಮೆಮೊರ್' ಎಂಬ ಪುಸ್ತಕದಲ್ಲಿ ಸವಿಸ್ತಾರವಾಗಿ ಚರ್ಚಿಸಿದ್ದು, ಜನರಿಂದ ಚುನಾಯಿತವಾದ ಸರ್ಕಾರವನ್ನು ಬರ್ಖಾಸ್ತುಗೊಳಿಸಿ ಅಧಿಕಾರ ಪಡೆಯುವ ಹಂಬಲ ಇರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನವಾಜ್ ಶರೀಫ್ ಹುನ್ನಾರವನ್ನು ತಡೆಗಟ್ಡುವ ಉದ್ದೇಶದಿಂದ ಸೇನಾ ಕ್ರಾಂತಿ ನಡೆಸಬೇಕಾಯಿತು ಎಂದು ಮುಶ್ರಫ್ ಸಬೂಬು ನೀಡುತ್ತಾರೆ.
ಆದರೆ ಮುಶ್ರಫ್ ವಿರೋಧಿಗಳು ಅದರಲ್ಲೂ ನೂತನ ಸೇನಾ ಮುಖ್ಯಸ್ಥರಾಗಿ ನಿಯೋಜಿತರಾಗಿದ್ದ ಲೆ.ಜ. ಜಿಯಾವುದ್ದೀನ್ ಭಟ್ ಪ್ರಕಾರ ಮುಶ್ರಫ್ ಹಾಗೂ ಅವರ ಬೆಂಬಲಿತ ಸೇನಾಧಿಕಾರಿಗಳು ಸೇನಾ ಕ್ರಾಂತಿಗೆ ಬಹಳ ದಿನಗಳಿಂದ ಯೋಜನೆ ಮಾಡಿದ್ದರು. ಇದಕ್ಕೆ ಸಾಕ್ಷಿಯಾಗಿ ಸೇನಾ ಕ್ರಾಂತಿಗೂ ಮೊದಲು ಪ್ರಧಾನಿ ಕಚೇರಿಯಲ್ಲಿ ಆದ ಭದ್ರತಾ ವ್ಯತ್ಯಾಸಗಳನ್ನು ಭಟ್ ನೀಡುತ್ತಾರೆ.
ಮುಶ್ರಫ್ ಸೇನಾ ಕ್ರಾಂತಿಗೆ ಸಹಕರಿಸಿದ ಸೇನಾಧಿಕಾರಿಗಳು:
1. ಲೆ.ಜ. ಮುಜಫರ್ ಉಸ್ಮಾನಿ-ಮಿಲಿಟರಿ ಪೊಲೀಸ್ ಮುಖ್ಯಸ್ಥ
2.ಜನರಲ್ ಮೊಹ್ಮದ್ ಅಜೀಜ್ ಖಾನ್- ಜಾಯಿಂಟ್ ಚೀಫ್ ಆಫ್ ಸ್ಟಾಫ್ ಕಮಿಟಿ
3.ಲೆ.ಜ. ಮೆಹಮೂದ್ ಅಹ್ಮದ್-ಐಎಸ್‌ಐ ಡೈರೆಕ್ಟರ್ ಜನರಲ್
4. ಜನರಲ್ ಶಾಹೀದ್ ಅಜೀಜ್- ಚೀಫ್ ಆಫ್ ಜನರಲ್ ಸ್ಟಾಫ್-ಇವರು ಸೇನೆಯಿಂದ ನಿವೃತ್ತಿ ಹೊಂದಿದ ಬಳಿಕ ಅಫ್ಘಾನಿಸ್ತಾನದಲ್ಲಿ ಉಗ್ರವಾದಿಗಳೊಂದಿಗೆ ಸೇರಿ ಅಮೆರಿಕ ಸೇನೆಯ ವಿರುದ್ಧ ಹೋರಾಟಕ್ಕೆ ಇಳಿದಿದ್ದರು. ಇತ್ತೀಚಿಗೆ ಅವರು ಅಮೆರಿಕದ ದ್ರೋಣ್ ದಾಳಿಯಲ್ಲಿ ಹತರಾಗಿದ್ದಾರೆ ಎಂಬ ಮಾಹಿತಿ ಇದ್ದು, ಇದುವರೆಗೂ ಖಚಿತತೆ ಇಲ್ಲ.
ಹೀಗೆ ಪಾಕ್ ಸರ್ಕಾರವನ್ನು ಮಿಲಿಟರಿ ಕ್ರಾಂತಿಯ ಮೂಲಕ ತಮ್ಮ ವಶಕ್ಕೆ ಪಡೆದ ಜನರಲ್ ಪರ್ವೇಜ್ ಮುಶ್ರಫ್, ಮಾರ್ಷಲ್ ಲಾ ಸಹಾಯದೊಂದಿಗೆ ಸತತ 9 ವರ್ಷಗಳ ಕಾಲ ಪಾಕಿಸ್ತಾನವನ್ನು ಸರ್ವಾಧಿಕಾರಿಯಾಗಿ ಆಳಿದರು. ಸೇನೆಯ ತಾಕತ್ತಿನ ಮತ್ತಿನಲ್ಲಿದ್ದ ಮುಶ್ರಫ್ ಮತ್ತೆ ಅಧಿಕಾರ ಕಳೆದುಕೊಂಡು ಮೂಲೆಗುಂಪಾಗಿದ್ದು ಇತಿಹಾಸ.
'ಶಿಕ್ಷೆಗೆ ಮುನ್ನ ಮುಷರ್ರಫ್ ಸತ್ತರೆ ಇಸ್ಲಾಮಾಬಾದಲ್ಲಿ 3 ದಿನ ನೇತು ಹಾಕಿ'
ಆದರೆ ತನ್ನೆಲ್ಲಾ ಕೃತ್ಯಗಳನ್ನು ಯಾರೂ ಪ್ರಶ್ನಿಸುವುದಿಲ್ಲ ಎಂದು ಭಾವಿಸಿದ್ದ ಪರ್ವೇಜ್ ಮುಶ್ರಫ್‌ಗೆ ಪಾಕ್ ನ್ಯಾಯಾಲಯ ಸದ್ಯ ಮರಣದಂಡನೆ ವಿಧಿಸಿದೆ.
ದುಬೈನಲ್ಲಿ ತಲೆಮರೆಸಿಕೊಂಡಿರುವ ಪರ್ವೇಜ್ ಮುಶ್ರಫ್ ಅನಾರೋಗ್ಯಕ್ಕೆ ತುತ್ತಾಗಿದ್ದು, ಒಂದು ವೇಳೆ ಮುಶ್ರಫ್ ದುಬೈನಲ್ಲೇ ಮೃತಪಟ್ಟರೆ ಅವರ ಶವವನ್ನು ಪಾಕ್‌ಗೆ ತಂದು ಸಂಸತ್ತಿನ ಎದುರಿಗೆ ನೇಣು ಹಾಕಿ ಎಂಬ ಆದೇಶ ಮುಶ್ರಫ್ ವಿರುದ್ಧದ ಪಾಕಿಸ್ತಾನಿಯರ ಕೋಪದ ದಿವ್ಯಾಗ್ನಿಯನ್ನು ತೋರಿಸುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ