ಅಫ್ಘಾನಿಸ್ತಾನ ಜನ ಕಂಗಾಲು: ಆಶ್ರಯ ನೀಡಿ ಮಾನವೀಯತೆ ಮೆರೆದ ಭಾರತ, ಇತರ ದೇಶಗಳು!

By Suvarna NewsFirst Published Aug 23, 2021, 1:16 PM IST
Highlights

* ಕಂಗೆಟ್ಟಆಫ್ಘನ್ನರಿಗೆ ಈಗ ಈ ದೇಶಗಳೇ ಆಸರೆ

* ತಾಲಿಬಾನ್‌ ಅಟ್ಟಹಾಸದಿಂದ ಅಷ್ಘಾನಿಸ್ತಾನ ಜನ ಕಂಗಾಲು

* ಇವರಿಗೆ ಆಶ್ರಯ ನೀಡಿ ಮಾನವೀಯತೆ ಮೆರೆದ ಭಾರತ, ಇತರ ದೇಶಗಳು

ಕಾಬೂಲ್(ಆ.23): ಅಫ್ಘಾನಿಸ್ತಾನ ತಾಲಿಬಾನ್‌ ಉಗ್ರರ ಕಪಿಮುಷ್ಟಿಗೆ ಸಿಲುಕಿದೆ. ಉಗ್ರರ ಕ್ರೌರ‍್ಯಕ್ಕೆ ನಲುಗಿರುವ ಜನರು ದೇಶ ತೊರೆಯಲು ಹರಸಾಹಸ ಪಡುತ್ತಿದ್ದಾರೆ. ಇಂಥ ನಿರಾಶ್ರಿತರಿಗೆ ಹಲವು ದೇಶಗಳು ನೆಲೆ ನೀಡಲು ಮುಂದೆ ಬಂದಿವೆ. ಭಾರತ ಸೇರಿದಂತೆ ಅನೇಕ ದೇಶಗಳು ತಮ್ಮ ದೇಶದ ಪ್ರಜೆಗಳೂ ಸೇರಿ ಆಫ್ಘನ್‌ ಪ್ರಜೆಗಳನ್ನೂ ಏರ್‌ಲಿಫ್ಟ್‌ ಮಾಡುತ್ತಿದೆ.

ಭಾರತ

ಭಾರತ 1967ರ ನಿರಾಶ್ರಿತರ ಸ್ಥಿತಿಗೆ ಸಂಬಂಧಿಸಿದ ಒಪ್ಪಂದಕ್ಕೆ ಸಹಿ ಹಾಕಿಲ್ಲ ಮತ್ತು ಪ್ರತ್ಯೇಕ ಕಾಯ್ದೆಯನ್ನೂ ಹೊಂದಿಲ್ಲ. ಈವರೆಗೆ ಭಾರತ ನೆರೆಹೊರೆಯ ಮತ್ತು ವೈಯಕ್ತಿಯ ಪ್ರಕರಣದ ಆಧಾರದಲ್ಲಿ ಮಾತ್ರ ನಿರಾಶ್ರಿತರ ಬಿಕ್ಕಟ್ಟನ್ನು ನಿಭಾಯಿಸಿದೆ. ಆದರೆ ಅಫ್ಘಾನಿಸ್ತಾನ ತಾಲಿಬಾನ್‌ ವಶವಾದ ಬೆನ್ನಲ್ಲೇ ಆಫ್ಘನ್‌ ಪ್ರಜೆಗಳಿಗಾಗಿ ನೂತನ ತ್ವರಿತ ಇ-ವೀಸಾವನ್ನು ಪರಿಚಯಿಸಿದೆ. ಈ ವೀಸಾಗಳು 6 ತಿಂಗಳು ಮಾತ್ರ ಮಾನ್ಯವಾಗಿರುತ್ತವೆ. ನಂತರ ಏನೆಂಬುನ್ನು ಕೇಂದ್ರ ಸರ್ಕಾರ ಇನ್ನೂ ಸ್ಪಷ್ಟಪಡಿಸಿಲ್ಲ.

ಅಮೆರಿಕ

ಅಮೆರಿಕ ಈವರೆಗೆ 1200 ಆಫ್ಘನ್‌ ಪ್ರಜೆಗಳನ್ನು ಅಲ್ಲಿಂದ ಸ್ಥಳಾಂತರಿಸಿದೆ. ಈ ಸಂಖ್ಯೆ ಮುಂದಿನ ವಾರದ ಒಳಗಾಗಿ 3,500ಕ್ಕೆ ಏರಿಕೆಯಾಗುವ ನಿರೀಕ್ಷೆ ಇದೆ. ‘ಶಾಂತಿ ಮತ್ತು ಜಾತ್ಯತೀತ ಅಫ್ಘಾನಿಸ್ತಾನವೇ ಅಮೆರಿಕದ ಉದ್ದೇಶ. ಆದಾಗ್ಯೂ ತಾಲಿಬಾನ್‌ ಹಿಂಸಾಚಾರ ಅಲ್ಪಮಟ್ಟಿಗೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅಮೆರಿಕದೊಂದಿಗೆ ಕೆಲಸ ಮಾಡಿದವರೂ ಸೇರಿದಂತೆ ಕೆಲವು ನಿರಾಶ್ರಿತರ ಪುನರ್‌ವಸತಿಗೆ ಅಮೆರಿಕ ಬದ್ಧವಾಗಿದೆ ಎಂದು ತಿಳಿಸಿದೆ. ಅಮೆರಿಕ ಸರ್ಕಾರಕ್ಕೆ ನೆರವು ನೀಡಿದವರೂ ಸೇರಿ ಒಟ್ಟು 10,000 ಅಫ್ಘಾನಿಸ್ತಾನ ಪ್ರಜೆಗಳಿಗೆ ಆಶ್ರಯ ನೀಡಬಹುದು ಎನ್ನಲಾಗಿದೆ.

ಕೆನಡಾ

ಈಗಾಗಲೇ ದೇಶಕ್ಕೆ ಬಂದಿರುವ 20,000 ಆಫ್ಘನ್‌ ನಿರಾಶ್ರಿತರಿಗೆ ಆಶ್ರಯ ನೀಡುವುದಾಗಿ ಕೆನಡಾ ಕಳೆದ ವಾರ ಘೋಷಿಸಿತ್ತು. ಅನಂತರ ಶುಕ್ರವಾರ ನಿರಾಶ್ರಿತರ ಸಂಖ್ಯೆಯ ಹೆಚ್ಚಳವಾಗುವ ನಿರೀಕ್ಷೆ ಇದೆ ಮತ್ತು ಕೆನಡಾ ಅದನ್ನು ಮುಕ್ತವಾಗಿ ಸ್ವೀಕರಿಸುತ್ತದೆ ಎಂದು ತಿಳಿಸಿದೆ. ಅಫ್ಘಾನಿಸ್ತಾನದಲ್ಲಿ ಪಾಶ್ಚಿಮಾತ್ಯ ಕಾರಾರ‍ಯಚರಣೆಯನ್ನು ಬೆಂಬಲಿಸಿದ ಅಫ್ಘನ್‌ ನಾಗರಿಕರನ್ನು ಅಲ್ಲಿಂದ ಸ್ಥಳಾಂತರಿಲು ಪ್ರಯತ್ನಿಸುತ್ತಿರುವ ದೇಶಗಳಲ್ಲಿ ಕೆನಡಾವೂ ಸೇರಿದೆ. ಕೆನಡಾ 2011ರಲ್ಲಿಯೇ ಆಫ್ಘನ್‌ನಿಂದ ತನ್ನ ಸೇನೆಯನ್ನು ವಾಪಸ್‌ ಕರೆಸಿಕೊಂಡಿತ್ತು. ಆದರೆ ನ್ಯಾಟೋ ಜೊತೆಗೆ ಸೇರಿ ಆಫ್ಘನ್‌ ಸೇನೆಯನ್ನು ತರಬೇತಿಗೊಳಿಸುವ ಕೆಲಸವನ್ನು 2014ರ ವರೆಗೂ ಮುಂದುವರೆಸಿತ್ತು.

ಬ್ರಿಟನ್‌

ಮಹಿಳೆಯರು, ಮಕ್ಕಳು, ಧಾರ್ಮಿಕ ಅಲ್ಪಸಂಖ್ಯಾತರಿಗೆ ಆದ್ಯತೆ ನೀಡುವ ನೂತನ ಪುನರ್‌ವಸತಿ ಕಾರ‍್ಯಕ್ರಮದ ಭಾಗವಾಗಿ ಮೊದಲ ವರ್ಷ ಗರಿಷ್ಠ 5000 ಆಫ್ಘನ್‌ ನಿರಾಶ್ರಿತರನ್ನು ಸ್ವಾಗತಿಸುವುದಾಗಿ ಬ್ರಿಟನ್‌ ಘೋಷಿಸಿದೆ.

ಪಾಕಿಸ್ತಾನ

ಪಾಕಿಸ್ತಾನ ಈಗಾಗಲೇ 30 ಲಕ್ಷ ಆಫ್ಘನ್‌ ವಲಸಿಗರಿಂದ ಹೆಣಗಾಡುತ್ತಿದೆ. ಹಾಗಾಗಿ ತಾಲಿಬಾನ್‌ ಉಗ್ರರು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡರೆ ಆಫ್ಘನ್‌-ಪಾಕಿಸ್ತಾನ ಗಡಿಯನ್ನು ಮುಚ್ಚಲಿದೆ ಎಂದು ಪ್ರಧಾನಿ ಇಮ್ರಾನ್‌ ಖಾನ್‌ ಜೂನ್‌ನಲ್ಲಿ ಹೇಳಿದ್ದರು. ಆದಾಗ್ಯೂ ಗಡಿಗಳು ಇನ್ನೂ ತೆರೆದಿವೆ.

ಇರಾನ್‌

ಅಫ್ಘಾನಿಸ್ತಾನದ ನಿರಾಶ್ರಿತರು ಧಾವಿಸುವ ನಿರೀಕ್ಷೆಯಲ್ಲಿ ಇರಾನ್‌ ಮೂರು ಪ್ರಾಂತ್ಯಗಳಲ್ಲಿ ತಾತ್ಕಾಲಿಕ ಶಿಬಿರಗಳನ್ನು ಆರಂಭಿಸಿದೆ. ಇರಾನ್‌ ಅಫ್ಘಾನಿಸ್ತಾನದೊಂದಿಗೆ 900 ಕಿಲೋಮೀಟರ್‌ ಗಡಿ ಹಂಚಿಕೊಂಡಿದ್ದು, ಸುಮಾರು 35 ಲಕ್ಷ ಆಫ್ಘನ್‌ ವಲಸಿಗರಿಗೆ ಆಶ್ರಯ ನೀಡಿದೆ.

ಉತ್ತರ ಮ್ಯಾಸಿಡೋನಿಯಾ

ಈ ವಾರಾಂತ್ಯದ ಒಳಗಾಗಿ ಮ್ಯಾಸಿಡೋನಿಯಾ ಅಮೆರಿಕ ವೀಸಾಕ್ಕಾಗಿ ಎದುರು ನೋಡುತ್ತಿರುವ 450 ನಿರಾಶ್ರಿತರಿಗೆ ಆಶ್ರಯ ನೀಡಲಿದೆ. ನಿರಾಶ್ರಿತರ ಪೈಕಿ ಪತ್ರಕರ್ತರು, ಅನುವಾದಕರು, ವಿದ್ಯಾರ್ಥಿಗಳು, ಆಫ್ಘನ್‌ ಉದ್ಯೋಗಿಗಳು ಮತ್ತು ಅವರ ಕಟುಂಬಸ್ಥರು ಸೇರಿದ್ದಾರೆ. ಆಫ್ಘನ್‌ ನಿರಾಶ್ರಿತರಿಗೆ ಆಶ್ರಯ ನೀಡುವಂತೆ ಕೋರಿದ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಮನವಿಯನ್ನು ಪುರಸ್ಕರಿಸಿದ ಮೂರನೇ ದೇಶ ಉತ್ತರ ಮ್ಯಾಸಿಡೋನಿಯಾ.

ಉಗಾಂಡಾ

ಅಫ್ಘಾನಿಸ್ತಾನದ 2000 ನಿರಾಶ್ರಿತರಿಗೆ ಆಶ್ರಯ ನೀಡುವಂತೆ ಹೇಳಿದ ಅಮೆರಿಕ ಮನವಿಗೆ ಉಗಾಂಡಾ ಮಂಗಳವಾರ ಒಪ್ಪಿಗೆ ನೀಡಿದೆ. ಅಮೆರಿಕ ಸರ್ಕಾರ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸುವವರೆಗೂ 3 ತಿಂಗಳು ಉಗಾಂಡಾ ನೆಲೆ ಕಲ್ಪಿಸಲಿದೆ. ಉಗಾಂಡಾ ಸದ್ಯ ದಕ್ಷಿಣ ಸೂಡಾನ್‌ನ 14 ಲಕ್ಷ ನಿರಾಶ್ರಿತರಿಗೆ ಆಶ್ರಯ ನೀಡಿದೆ.

ಅಲ್ಬೇನಿಯಾ ಮತ್ತು ಕೊಸೋವೋ

ಅಮೆರಿಕ ವೀಸಾದ ನಿರೀಕ್ಷೆಯಲ್ಲಿರುವ ಆಫ್ಘನ್‌ ನಿರಾಶ್ರಿತರಿಗೆ ಆಶ್ರಯ ನೀಡುವ ಅಮೆರಿಕ ಮನವಿಯನ್ನು ಅಲ್ಬೇನಿಯಾ ಮತ್ತು ಕೊಸೋವೋ ಎರಡೂ ದೇಶಗಳೂ ಒಪ್ಪಿಕೊಂಡಿವೆ.

ಟರ್ಕಿ

ಟರ್ಕಿಯ ವ್ಯಾನ್‌ ನಗರದ ಗಡಿಯಲ್ಲಿ ಭದ್ರತಾ ಪಡೆಗಳು ಶನಿವಾರ ಆಫ್ಘನ್‌ ನಿರಾಶ್ರಿತರನ್ನು ಬಂಧಿಸಿವೆ. ಈ ನಡುವೆ ಅಫ್ಘಾನಿಸ್ತಾನವನ್ನು ಸ್ಥಿರಗೊಳಿಸಲು ಪಾಕ್‌ ಸರ್ಕಾರದ ಜೊತೆ ಸೇರಿ ಕೆಲಸ ಮಾಡುವುದಾಗಿ ಟರ್ಕಿ ಅಧ್ಯಕ್ಷ ಘೋಷಿಸಿದ್ದಾರೆ. ಇತ್ತೀಚೆಗೆ ಇರಾನ್‌-ಟರ್ಕಿ ಗಡಿಯಲ್ಲಿ ಗೋಡೆ ನಿರ್ಮಿಸಲು ದೇಶ ಮುಂದಾಗಿದೆ.

click me!