
ತೂಕ ಏರಿಕೆ ವಿಷ್ಯದಲ್ಲಿ ಸರಾಸರಿಯಾಗಿ ನೋಡಿದ್ರೆ ಮಹಿಳೆಯರೇ ಮುಂದಿದ್ದಾರೆ. ಒಂದು ವಯಸ್ಸಿನ ನಂತ್ರ ಮಹಿಳೆಯರ ತೂಕ ವೇಗವಾಗಿ ಏರುತ್ತೆ. ಪ್ರೌಢಾವಸ್ಥೆ ನಂತ್ರ ನಿಧಾನವಾಗಿ ಕೊಬ್ಬು ದೇಹದಲ್ಲಿ ಸಂಗ್ರಹವಾಗಲು ಶುರುವಾಗುತ್ತದೆ. ಮದುವೆ, ಹೆರಿಗೆ ನಂತ್ರ ಮತ್ತಷ್ಟು ಜಾಸ್ತಿಯಾಗುವ ತೂಕ, ಮುಟ್ಟು ನಿಲ್ಲುವ ಸಂದರ್ಭದಲ್ಲಿ ಮತ್ತೆ ಏರಿಕೆಯಾಗೋದನ್ನು ನೀವು ಕಾಣಬಹುದು.
ಮಹಿಳೆ ಇರಲಿ ಇಲ್ಲ ಪುರುಷನಿರಲಿ ತೂಕ (Weight) ಏರಿಕೆ ಆರೋಗ್ಯ (Health)ಕ್ಕೆ ಅಪಾಯಕಾರಿ. ಎತ್ತರಕ್ಕೆ ತಕ್ಕಂತೆ ಹಾಗೂ ವಯಸ್ಸಿಗೆ ತಕ್ಕಂತೆ ತೂಕವನ್ನು ಪ್ರತಿಯೊಬ್ಬರೂ ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ತೂಕ ನಮಗೆ ಅರಿವಿಲ್ಲದೆ ಏರಿಕೆಯಾಗುತ್ತದೆ. ಆದ್ರೆ ಆ ತೂಕವನ್ನು ಏರಿದಷ್ಟು ಸುಲಭವಾಗಿ ಇಳಿಸಲು ಸಾಧ್ಯವಿಲ್ಲ. ಮಹಿಳೆ ಹಾಗೂ ಪುರುಷ ಇಬ್ಬರೂ ತೂಕ ಇಳಿಕೆಗೆ ಸಾಕಷ್ಟು ಕಸರತ್ತು ಮಾಡ್ಬೇಕು. ಅದ್ರಲ್ಲೂ ಮಹಿಳೆ ಹೆಚ್ಚಿನ ಮಟ್ಟದಲ್ಲಿ ಪ್ರಯತ್ನ ಮಾಡ್ಬೇಕು ಎನ್ನುತ್ತಾರೆ ತಜ್ಞರು. ಪುರುಷರ ತೂಕ ಇಳಿದಷ್ಟು ಬೇಗ ಮಹಿಳೆ ತೂಕ ಇಳಿಯಲು ಸಾಧ್ಯವಿಲ್ಲ. ಅದಕ್ಕೆ ಕಾರಣವೇನು ಎಂಬುದು ಇಲ್ಲಿದೆ.
ಬ್ರೈನ್ ಟ್ಯೂಮರ್ ಚಿಕಿತ್ಸೆಗೆ ನೆರವಾಗಬಲ್ಲದು ಈ ಥೆರಪಿ.. ವೈದ್ಯಕೀಯ ಕ್ಷೇತ್ರದ ಭರವಸೆ
ಮಹಿಳೆಯರ ತೂಕ ನಿಧಾನವಾಗಿ ಇಳಿಯಲು ಇದು ಕಾರಣ :
ವೇಗವಾಗಿ ಏರುವ ತೂಕ : ನೀವು ಪುರುಷರಿಗೆ ಹೋಲಿಕೆ ಮಾಡಿ ನೋಡಿದ್ರೆ ಮಹಿಳೆಯರ ತೂಕ ಬಹಳ ವೇಗವಾಗಿ ಹೆಚ್ಚಾಗುತ್ತದೆ. ಪ್ರೌಢಾವಸ್ಥೆಯಲ್ಲಿ ಕೆಲ ಹುಡುಗಿಯರ ಹೊಟ್ಟೆ ದೊಡ್ಡದಾಗೋದು ಅಥವಾ ತೂಕ ಏರೋದನ್ನು ನೀವು ನೋಡಬಹುದು. ಆದ್ರೆ ಪುರುಷರ ತೂಕ ಆಗ ಕಡಿಮೆ ಇರುತ್ತದೆ. ಯೌವನದಲ್ಲಿ ಇಬ್ಬರಲ್ಲಿ ಸರಾಸರಿ ಕೊಬ್ಬಿನ ಅಂಶ ಶೇಕಡಾ 30 ರಿಂದ 40ರಷ್ಟಿರುತ್ತದೆ. ಆದ್ರೆ ನಂತ್ರ ಮಹಿಳೆಯರ ತೂಕ ವೇಗವಾಗಿ ಏರುತ್ತದೆ.
ಚಯಾಪಚಯ ನಿಧಾನ : ಪುರುಷರಿಗೆ ಹೋಲಿಕೆ ಮಾಡಿದ್ರೆ ಮಹಿಳೆಯರಲ್ಲಿ ಚಯಾಪಚಯ ಕ್ರಿಯೆ ನಿಧಾನವಾಗುತ್ತದೆ. ಪುರುಷರ ಸಮಾನವಾಗಿ ದೈಹಿಕ ಚಟುವಟಿಕೆ ಮಾಡಿದ್ರೂ ಪುರುಷರಿಗಿಂತ ಕಡಿಮೆ ಪ್ರಮಾಣದಲ್ಲಿ ಮಹಿಳೆಯರಿಗೆ ಕ್ಯಾಲೋರಿ ಬರ್ನ್ ಆಗುತ್ತದೆ. ಹಾಗಾಗಿ ಮಹಿಳೆಯರು ತೂಕ ಇಳಿಸಲು ಹೆಚ್ಚಿನ ಕಸರತ್ತು ಮಾಡ್ಬೇಕಾಗುತ್ತದೆ.
ಯಾರಪ್ಪ ಅಡುಗೆ ಮಾಡೋದು ಅಂತ ಆನ್ಲೈನ್‌ನಲ್ಲಿ ಆರ್ಡರ್ ಮಾಡಿದ್ರೆ ಆರೋಗ್ಯ ಅಷ್ಟೇ!
ಕೊಬ್ಬು ಶೇಖರಣೆ : ಪುರುಷರು ಮತ್ತು ಮಹಿಳೆಯರ ದೇಹದಲ್ಲಿ ಕೊಬ್ಬಿನ ವಿತರಣೆ ಮತ್ತು ಶೇಖರಣಾ ಸಾಮರ್ಥ್ಯ ವಿಭಿನ್ನವಾಗಿರುತ್ತದೆ. ಸಾಮಾನ್ಯವಾಗಿ ಪುರುಷರ ಹೊಟ್ಟೆಯ ಸುತ್ತಲಿನ ಪ್ರದೇಶಗಳಲ್ಲಿ ಕೊಬ್ಬು ಸಂಗ್ರಹವಾಗುತ್ತದೆ. ಆದರೆ ಮಹಿಳೆಯರಲ್ಲಿ ಸೊಂಟ ಮತ್ತು ತೊಡೆಯ ಭಾಗದಲ್ಲಿ ಕೊಬ್ಬು ಸಂಗ್ರಹವಾಗುತ್ತದೆ. ಹಾರ್ಮೋನ್ ಬದಲಾವಣೆಯನ್ನು ಇದಕ್ಕೆ ಕಾರಣ ಎನ್ನಲಾಗುತ್ತದೆ. ಮಹಿಳೆಯರ ಸೊಂಟ ಮತ್ತು ತೊಡೆಗಳಲ್ಲಿ ಸಂಗ್ರಹವಾಗುವ ಕೊಬ್ಬು ತುಂಬಾ ಮೊಂಡುತನದಿಂದ ಕೂಡಿರುತ್ತದೆ. ಅದನ್ನು ಬೇಗ ಕರಗಿಸಲು ಸಾಧ್ಯವಿಲ್ಲ. ಹಾಗಾಗಿಯೇ ಮಹಿಳೆಯರು ತೂಕ ಇಳಿಸಲು ಬಹಳ ಕಷ್ಟಪಡಬೇಕಾಗುತ್ತದೆ.
ಸ್ನಾಯು ಇದಕ್ಕೆ ಮುಖ್ಯ ಕಾರಣ : ಕೊಬ್ಬನ್ನು ಕರಗಿಸಿ ತೂಕ ಇಳಿಸುವಲ್ಲಿ ಸ್ನಾಯುಗಳ ಕೆಲಸ ಬಹಳ ಮಹತ್ವದ್ದು. ಈ ಸ್ನಾಯುಗಳ ಸಂಖ್ಯೆ ಮಹಿಳೆಯರಿಗೆ ಹೋಲಿಕೆ ಮಾಡಿದ್ರೆ ಪುರುಷರ ದೇಹದಲ್ಲಿ ಹೆಚ್ಚಿದೆ. ಇದೇ ಕಾರಣಕ್ಕೆ ಪುರುಷರು ಕೊಬ್ಬು ಕರಗಿಸಿದ ವೇಗದಲ್ಲಿ ಮಹಿಳೆಯರು ಕರಗಿಸಲು ಸಾಧ್ಯವಾಗೋದಿಲ್ಲ. ಇದ್ರಿಂದಾಗಿ ಅವರು ತೊಂದರೆ ಅನುಭವಿಸುತ್ತಾರೆ.
ಮಹಿಳೆಯರಿಗಿಂತ ಪುರುಷರ ಕೊಬ್ಬು ಹೆಚ್ಚು ಅಪಾಯಕಾರಿ : ಮೊದಲೇ ಹೇಳಿದಂತೆ ಪುರುಷರ ಹೊಟ್ಟೆಯ ಸುತ್ತ ಕೊಬ್ಬು ಸಂಗ್ರಹವಾಗಿರುತ್ತದೆ. ಅಲ್ಲದೆ ಕಿಬ್ಬೊಟ್ಟೆಯಲ್ಲಿ ಕೊಬ್ಬು ಸಂಗ್ರಹವಾಗುತ್ತದೆ. ಈ ಕೊಬ್ಬು ಮಹಿಳೆಯರ ಕೊಬ್ಬಿಗಿಂತ ಹೆಚ್ಚು ಅಪಾಯಕಾರಿ. ಇದು ಹೃದ್ರೋಗ ಮತ್ತು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ. ಸ್ಥೂಲಕಾಯತೆಯಿಂದ ಬಳಲುತ್ತಿರುವ ಪುರುಷರು ಮಹಿಳೆಯರಿಗಿಂತ ಅಧಿಕ ರಕ್ತದೊತ್ತಡ ಮತ್ತು ಅಧಿಕ ಕೊಲೆಸ್ಟ್ರಾಲ್ ಮಟ್ಟಗಳಂತಹ ಸಮಸ್ಯೆಗಳಿಗೆ ಹೆಚ್ಚು ಅಪಾಯವನ್ನು ಹೊಂದಿರುತ್ತಾರೆ. ಕೆಲವೊಮ್ಮೆ ಮಹಿಳೆಯರಲ್ಲಿ ಪುರುಷರಿಗೆ ಹೋಲುವ ಕೊಬ್ಬಿರುತ್ತದೆ.ಈ ಪರಿಸ್ಥಿತಿಯಲ್ಲಿ ಆ ಮಹಿಳೆಯರು ಸಹ ಈ ಆರೋಗ್ಯ ಸಮಸ್ಯೆಗಳ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.