
ಈಗೀಗ 30 ದಾಟಿದ ಬಹುತೇಕರಿಗೆ ಸ್ವಲ್ಪ ಹೊತ್ತು ಕುಳಿತಲ್ಲೇ ಕಾಲು ಮಡಚಿ ಕುಳಿತರೆ ಕಾಲನ್ನು ನೆಟ್ಟಗೆ ಮಾಡಲು ಇನ್ಯಾರೋ ಬರಬೇಕು. ಅಷ್ಟು ಬೇಗ ಕೈ ಕಾಲುಗಳಲ್ಲಿ ರಕ್ತ ಚಲನೆ ಕಡಿಮೆಯಾಗಿ ಜುಮುಗುಡಲು ಶುರುವಾಗುತ್ತದೆ. ಅಯ್ಯೋ ಅಮ್ಮ ಅಂತ ನರಳುತ್ತಾ ಎದ್ದು ಕುಳಿತುಕೊಳ್ಳಬೇಕಾಗುತ್ತದೆ. ನಗರಗಳಲ್ಲಿ ವಾಸ ಮಾಡುವ, ಪ್ರತಿನಿತ್ಯ ಸರಿಯಾದ ವ್ಯಾಯಾಮ ಅಥವಾ ದೈಹಿಕ ಚಟುವಟಿಕೆ ಇಲ್ಲದ ಬಹುತೇಕ ಯುವ ಸಮುದಾಯದ ಸ್ಥಿತಿ ಹೀಗಿದೆ? ಹೀಗಿರುವಾಗ 84 ವರ್ಷದ ವೃದ್ಧೆಯೊಬ್ಬರು ನೀರಿನಲ್ಲಿ ನವ ತರುಣಿಯಂತೆ ಸಮ್ಮರ್ ಸಾಲ್ಟ್ ಮಾಡಿದರೆ ಹೇಗಿರುತ್ತೆ? ನಿಜಕ್ಕೂ ಅಚ್ಚರಿಯಾಗುತ್ತೆ ಅಲ್ಲವೇ? ಅಂತಹ ವೀಡಿಯೋವೊಂದು ಈಗ ವೈರಲ್ ಆಗಿದ್ದು, ವೀಡಿಯೋ ನೋಡಿದ ಅನೇಕರು 84 ವರ್ಷದ ಅಜ್ಜಿಯ ಜೀವನೋತ್ಸಾಹಕ್ಕೆ ಹಾಗೂ ಅವರ ಶಕ್ತಿ ಸಾರ್ಮಥ್ಯಕ್ಕೆ ಭೇಷ್ ಎಂದಿದ್ದಾರೆ.
ಇನ್ಸ್ಟಾಗ್ರಾಮ್‌ನಲ್ಲಿ ಈ ವೀಡಿಯೋವನ್ನು ಲುಸಿನಿಯಾ ಬ್ರಿಡ್ಜ್ ಎಂಬುವವರು ಪೋಸ್ಟ್ ಮಾಡಿದ್ದು, ಅದರಲ್ಲಿ ಅಜ್ಜಿಯೊಬ್ಬರು ಈಜುಕೊಳದಲ್ಲಿ ಉಲ್ಟಾ ಧುಮುಕಿ ಸಮ್ಮರ್ ಸಾಲ್ಟ್ ಸಾಹಸ ಮಾಡಿದ್ದು, ಅವರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಅನೇಕರು ಅಜ್ಜಿಯ ಸಾಮರ್ಥಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಅಜ್ಜಿ ಜೀವನವನ್ನು ಆನಂದಿಸಲು ಅಥವಾ ತನ್ನ ಇಷ್ಟವಾದ ಕೆಲಸ ಅಥವಾ ಚಟುವಟಿಕೆಯನ್ನು ಮುಂದುವರಿಸಲು ವಯಸ್ಸು ಎಂದಿಗೂ ಅಡ್ಡಿಯಾಗದು ಎಂಬುದನ್ನು ಸಾಧಿಸಿ ತೋರಿಸಿದ್ದಾರೆ. ಒಬ್ಬ ವ್ಯಕ್ತಿಯು ತನ್ನ ಒಳಗಿನ ಮಗು ಮನಸ್ಥಿತಿಯನ್ನು ವಯಸ್ಸಾದಂತೆ ಜೀವಂತವಾಗಿರಿಸಿಕೊಳ್ಳಬೇಕು. ಈ ಮನಸ್ಥಿತಿಯನ್ನು ಅಳವಡಿಸಿಕೊಂಡ ಅಜ್ಜಿ ಇಳಿವಯಸ್ಸು ತನ್ನ ಜೀವನೋತ್ಸವದ ಮುಂದೆ ಕೇವಲ ಸಂಖ್ಯೆಯಷ್ಟೇ ಎಂಬುದನ್ನು ಸಾಬೀತುಪಡಿಸಿದ್ದಾರೆ.
ವೈರಲ್ ವೀಡಿಯೋದಲ್ಲೇನಿದೆ?
ಈ ಅಜ್ಜಿಯ ವೀಡಿಯೋ ಶೇರ್ ಮಾಡಿದ ಲುಸಿನಿಯಾ ಬ್ರಿಡ್ಜ್, ನನಗೆ ತುಂಬಾ ಅಸೂಯೆಯಾಗುತ್ತಿದೆ, ಅವಳನ್ನು ನೋಡಿ , 84 ವರ್ಷ ಮತ್ತು ಜೀವನ ಸಂಪೂರ್ಣ ತುಂಬಿದೆ. ಅವಳಿಗೆ ಒಳ್ಳೆಯದಾಗಲಿ ಎಂದು ಬರೆದು ವೀಡಿಯೋ ಪೋಸ್ಟ್ ಮಾಡಿದ್ದಾರೆ. ಆ ವೀಡಿಯೋದಲ್ಲಿ , ವಯಸ್ಸಾದ ಮಹಿಳೆ ಈಜುಕೊಳದ ಅಂಚಿನಲ್ಲಿ ಆತ್ಮವಿಶ್ವಾಸದಿಂದ ನಿಂತಿದ್ದಾರೆ. ಕೆಲವೇ ಕ್ಷಣಗಳಲ್ಲಿ, ಅವರು ಸಲೀಸಾಗಿ ಪಲ್ಟಿ ಹೊಡೆದು ನೀರಿಗೆ ಧುಮುಕುತ್ತಾರೆ. ಇದನ್ನು ನೋಡಿ ವೀಡಿಯೊವನ್ನು ರೆಕಾರ್ಡ್ ಮಾಡುವ ವ್ಯಕ್ತಿ ಕೂಡ, ಅವರ ಸುತ್ತಲಿನ ಇತರರೊಂದಿಗೆ ಸೇರಿ ಅಜ್ಜಿಯ ಅದ್ಭುತವಾದ ಡೈವ್ ಅನ್ನು ಮೆಚ್ಚುತ್ತಾ ಜೋರಾಗಿ ಹುರಿದುಂಬಿಸುತ್ತಾರೆ. ಈ ವೀಡಿಯೊದ ಮೇಲೆ 'ಅವಳು ಕೊಳದಲ್ಲಿ ಜಿಗಿಯಲು ಬಯಸಲಿಲ್ಲ, ಅವಳು ಪಲ್ಟಿ ಹೊಡೆಯಲು ಬಯಸಿದ್ದಳು. ಆದರೆ ಆಕೆಗೆ ನೀನು ಜಿಗಿಯಬಹುದು, ಆದರೆ ಪಲ್ಟಿ ಹೊಡೆಯಲಾಗದು ಎಂದಿದ್ದರು ಆದರೆ ಆಕೆ ಪಲ್ಟಿ ಹೊಡೆದು ತೋರಿಸಿದಳು' ಎಂದು ಬರೆಯಲಾಗಿದೆ.
ಅಜ್ಜಿ ಮನೆಗೆ ಪುಟ್ಟ ಮಕ್ಕಳನ್ನು ಪೋಸ್ಟ್‌ನಲ್ಲಿ ಕಳುಹಿಸುವ ಕಾಲವೊಂದಿತ್ತು ಗೊತ್ತ?
ನೆಟ್ಟಿಗರಿಂದ ಭಾರಿ ಮೆಚ್ಚುಗೆ
ಈಗ ವೀಡಿಯೋ ವೈರಲ್ ಆಗಿದ್ದು, ಈ ಜನರೇಷನ್‌ನ ಜನರು ವೀಡಿಯೋ ನೋಡಿ ಹಲವು ಕಾಮೆಂಟ್ ಮಾಡುತ್ತಿದ್ದಾರೆ. ಆಕೆಯ ಕಾಲುಗಳೇ ಹೇಳುತ್ತಿವೆ ಆಕೆ ಎಷ್ಟು ಸಧೃಡವಾಗಿದ್ದಾಳೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ನನಗೀಗ ಕೇವಲ 2 ವರ್ಷ ಈಗಲೇ ಕಾಲು ಗಂಟು ನೋಯಲು ಶುರುವಾಗಿದೆ ಎಂದು ಈ ಜನರೇಷನ್‌ಗಿರುವ ಆರೋಗ್ಯ ಸಮಸ್ಯೆಯ ಬಗ್ಗೆ ಹೇಳಿದ್ದಾರೆ. ನನಗೀಗ 39 ವರ್ಷ ಈಗಲೇ ನನಗೆ ನನ್ನ ಬೆನ್ನು ಮುರಿದಿದೆ ಎಂದು ಅನಿಸುತ್ತದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಅಜ್ಜಿಯ ಈ ವೀಡಿಯೋ ಆಕೆ ಹಾಗೂ ಆ ಜನರೇಷನ್‌ನ ಜನರು ಎಷ್ಟು ಆರೋಗ್ಯವಾಗಿದ್ದರು. ಎಷ್ಟು ಜೀವನೋತ್ಸಾಹ ಅವರಲ್ಲಿತ್ತು ಎಂಬುದನ್ನು ತೋರಿಸುತ್ತಿದೆ. ಅದೇನೆ ಇರಲಿ ಈ ಅಜ್ಜಿಯ ಸಮ್ಮರ್ ಸಾಲ್ಟ್ ಬಗ್ಗೆ ನಿಮಗೇನನಿಸಿತು ಕಾಮೆಂಟ್ ಮಾಡಿ.
ಮೆಕ್ಲೆರೆನ್ ಒಕೆ ಮಗಾ ಎಂದ ಅಜ್ಜಿ, ಮರುದಿನ ₹12 ಕೋಟಿ ಕೊಟ್ಟು ಕಾರು ಮನೆಗೆ ತಂದ ಮೊಮ್ಮಗ!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.