98.5 ಪರ್ಸೆಂಟ್ ಅಂಕ ಗಳಿಸಿದ ವಿದ್ಯಾರ್ಥಿನಿ ಸೌಂದರ್ಯ ಗೇಲಿ ಮಾಡಿದ ನೆಟ್ಟಿಗರು! ಇದೆಂಥ ಕೊಳಕು ಮನಸ್ಸಿನ ಜನರಿವರು?

By Suvarna NewsFirst Published Apr 22, 2024, 4:05 PM IST
Highlights

ಮಹಿಳೆಯರು ಎಷ್ಟೇ ಸಾಧನೆ ಮಾಡಲಿ ಅವರ ಸಾಧನೆಗಿಂತ ಸೌಂದರ್ಯ ನೋಡ್ತಾರೆ. ಇದು ಹಿಂದಿನಿಂದಲೂ ನಡೆದು ಬಂದಿದ್ದು ಈಗ್ಲೂ ಮುಂದುವರೆದಿದೆ. ಪರೀಕ್ಷೆಯಲ್ಲಿ ಉತ್ತಮ ಅಂಕಪಡೆದು ಟಾಪರ್ ಆದ ಹುಡುಗಿ ಜೊತೆ ಟ್ರೋಲರ್ಸ್ ಅಸಹ್ಯವಾಗಿ ನಡೆದುಕೊಂಡಿದ್ದಾರೆ.
 

ಈಗಿನ ಬಹುತೇಕ ಮಕ್ಕಳು ಓದೋದ್ರಲ್ಲಿ ಬಲು ಚುರುಕು. ಎಲ್ಲ ಸಬ್ಜೆಕ್ಟ್ ಗೆ ಔಟ್ ಆಫ್ ಔಟ್ ತೆಗೆದುಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆ ಸಾಕಷ್ಟಿದೆ. ಪಬ್ಲಿಕ್ ಪರೀಕ್ಷೆಯಲ್ಲಿ ಸ್ಪರ್ಧೆ ಹೆಚ್ಚಿರುವ ಕಾರಣ ವರ್ಷವಿಡಿ ಓದಿ, ಉತ್ತಮ ಅಂಕ ಪಡೆದು ಪಾಲಕರು, ಶಿಕ್ಷಕರು, ಸ್ಥಳೀಯರು ಹೆಮ್ಮೆ ಪಡುವಂತೆ ಮಾಡ್ತಾರೆ. ಹತ್ತು, 12ನೇ ತರಗತಿ ಸೇರಿದಂತೆ ಎಲ್ಲ ತರಗತಿ ಪರೀಕ್ಷೆ ಮುಗಿದಿದ್ದು, ಫಲಿತಾಂಶ  ಕೂಡ ಹೊರ ಬರ್ತಿದೆ. ಉತ್ತರ ಪ್ರದೇಶ ಮಾಧ್ಯಮಿಕ ಶಿಕ್ಷಣ ಮಂಡಳಿ ಕೂಡ 10 ಮತ್ತು 12 ನೇ ತರಗತಿಯ ಪರೀಕ್ಷಾ ಫಲಿತಾಂಶವನ್ನು ಬಿಡುಗಡೆ ಮಾಡಿದೆ. ಫಲಿತಾಂಶ ಬಿಡುಗಡೆ ಆಗ್ತಿದ್ದಂತೆ ಯಾರು ಅತ್ಯಧಿಕ ಅಂಕ ಪಡೆದು ಮೊದಲ ಸ್ಥಾನದಲ್ಲಿದ್ದಾರೆ ಎಂಬುದನ್ನು ತಿಳಿಯುವ ಕುತೂಹಲ ಸಾಮಾನ್ಯವಾಗಿ ಎಲ್ಲರಿಗೂ ಇರುತ್ತದೆ. ಬೋರ್ಡ್ ಯಾವುದೇ ಆಗಿರಲಿ, ಹೆಚ್ಚು ಅಂಕ ತೆಗೆದುಕೊಂಡ ವಿದ್ಯಾರ್ಥಿಗಳು ಯಾರು, ಅವರು ಹೇಗೆ ಸ್ಟಡಿ ಮಾಡ್ತಿದ್ದರು ಎಂಬುದನ್ನು ವಿದ್ಯಾರ್ಥಿಗಳು, ಪಾಲಕರು ತಿಳಿಯಲು ಇಷ್ಟಪಡ್ತಾರೆ. 

ಉತ್ತರ ಪ್ರದೇಶ (Uttar Pradesh)  ಮಾಧ್ಯಮಿಕ ಶಿಕ್ಷಣ (Education) ಮಂಡಳಿ ನೀಡಿದ 10ನೇ ತರಗತಿ ಫಲಿತಾಂಶದಲ್ಲಿ ಸೀತಾಪುರದ ಪ್ರಾಚಿ ನಿಗಮ್ (Prachi Nigam) ಇಡೀ ರಾಜ್ಯಕ್ಕೆ ಅಗ್ರಸ್ಥಾನ ಪಡೆದಿದ್ದಾರೆ.  ಪ್ರಾಚಿ ನಿಗಮ್ ಅವರು 600 ಅಂಕಗಳಿಗೆ 591 ಅಂಕಗಳನ್ನು ಪಡೆದಿದ್ದಾರೆ. ಅಂದ್ರೆ ಶೇಕಡಾ 98.50 ರಷ್ಟು ಅಂಕ ಪಡೆದು ಉತ್ತೀರ್ಣರಾಗಿದ್ದಾರೆ. 

ಪ್ರೀತಿ ಅಂತ ಹೆಂಡ್ತಿಗೆ ಪದೆ ಪದೇ ಮೆಸೇಜ್ ಕಳುಹಿಸಿದ್ರೆ ಉಸಿರುಗಟ್ಟಬಹುದು ಎಚ್ಚರ!

ಅತ್ಯುತ್ತಮ ಅಂಕ ಪಡೆದವರು ಸುಂದರವಾಗಿರಬೇಕು ಎಂದೇನಿಲ್ಲ. ಜನರು ಅಂಕಕ್ಕಿಂತ ಸೌಂದರ್ಯಕ್ಕೆ ಹೆಚ್ಚು ಮಹತ್ವ ನೀಡಿದಂತಿದೆ. ಪ್ರಾಚಿ ನಿಗಮ್ ಹೆಚ್ಚು ಅಂಕ ಪಡೆದಿದ್ದಾಳೆ ಎಂಬ ವಿಷ್ಯವನ್ನು ಸಂಭ್ರಮಿಸುವ ಬದಲು ಅವಳ ಸೌಂದರ್ಯ ಆನ್‌ಲೈನ್ ನಲ್ಲಿ ಅಪಹಾಸ್ಯಕ್ಕೆ ಗುರಿಯಾಗಿದೆ. ಅಂತಹ ಕಾಮೆಂಟ್‌ಗಳು ಆತ್ಮವಿಶ್ವಾಸ ಮತ್ತು ಸ್ವಾಭಿಮಾನಕ್ಕೆ ಧಕ್ಕೆ ಆಗುತ್ತೆ ಎಂಬ ಜ್ಞಾನ ಜನರಿಗೆ ಇಲ್ಲ.

ಹೆಣ್ಮಕ್ಕಳನ್ನು ಯಾವಾಗ್ಲೂ ಅವರ ಸೌಂದರ್ಯದಿಂದ ಅಳೆಯಲಾಗುತ್ತೆ ಎಂಬುದು ಮತ್ತೊಮ್ಮೆ ಸಾಭೀತಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಪ್ರಾಚಿಗೆ ಬೆನ್ನು ತಟ್ಟುವ ಬದಲು ಅನೇಕರು ಕೆಟ್ಟ ಕಮೆಂಟ್ ಮಾಡಿದ್ದಾರೆ. ಮೊದಲು ಶೇವ್ ಮಾಡು ಎಂದು ಒಬ್ಬರು ಹೇಳಿದ್ರೆ, ತನ್ನ ಸೌಂದರ್ಯದ ಬಗ್ಗೆ ಈಕೆ ಗಮನ ಹರಿಸಬೇಕು, ಹತ್ತನೇ ತರಗತಿಯಲ್ಲಿ ರ್ಯಾಂಕ್ ಬಂದ್ಮೇಲೂ ಈಕೆಗೆ ಸೌಂದರ್ಯದ ಬಗ್ಗೆ ಪ್ರಜ್ಞೆ ಇಲ್ಲ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. 

ಜನರ ಈ ಕೆಟ್ಟ ಕಮೆಂಟ್ ನೋಡಿದ ಕೆಲವರು ಪ್ರಾಚಿ ಪರ ನಿಂತಿದ್ದಾರೆ. ಆಕೆ ಇನ್ನೂ ಹತ್ತನೇ ತರಗತಿ ಹುಡುಗಿಯಾಗಿದ್ದು, ವಿದ್ಯಾಭ್ಯಾಸಕ್ಕೆ ಹೆಚ್ಚು ಮಹತ್ವ ನೀಡಿದ್ದಾಳೆ. ಆಕೆಗೆ ಸೌಂದರ್ಯ ಮುಖ್ಯವಾಗ್ಲಿಲ್ಲ. ಗಡ್ಡ, ಮೀಸೆಯನ್ನು ಹಾಗೆಯೇ ಬಿಟ್ಟ ಅನೇಕ ಮಹಿಳೆಯರು ನಮ್ಮಲ್ಲಿದ್ದಾರೆ. ಅದು ವಿಶೇಷವೇನಲ್ಲ. ಎಂಟನೇ ತರಗತಿ ಹುಡುಗನಿಗೆ ಗಡ್ಡ ಬಂದಿಲ್ಲ, ಧ್ವನಿ ಬದಲಾಗಿಲ್ಲ ಎಂದಾಗ ಮಹಿಳೆಯರು ಗೇಲಿ ಮಾಡೋದಿಲ್ಲ ಎಂದು ಅನೇಕರು ಪ್ರಾಚಿ ಪರ ಬ್ಯಾಟ್ ಬೀಸಿದ್ದಾರೆ. ಇಂಥ ಕಮೆಂಟ್ ಬಗ್ಗೆ ತಲೆಕೆಡಿಸಿಕೊಳ್ಳದೆ ಸಾಧಿಸಿ ತೋರಿಸುವಂತೆ ಅನೇಕ ಬಳಕೆದಾರರು ಪ್ರಾಚಿಗೆ ಧೈರ್ಯ ಹೇಳಿದ್ದಾರೆ. 

ಪ್ರಾಚಿ ನಿಗಮ್ ಯಾರು? : 10 ನೇ ತರಗತಿಯನ್ನು ಬಾಲ ವಿದ್ಯಾ ಇಂಟರ್ ಕಾಲೇಜ್ ಮಹ್ಮದಾಬಾದ್ ಸೀತಾಪುರದಲ್ಲಿ ಓದಿದ್ದಾರೆ. ಪ್ರಾಚಿ ಭವಿಷ್ಯದಲ್ಲಿ ಇಂಜಿನಿಯರ್ ಆಗುವ ಆಸೆ ಇದೆ. ಇವರ ತಂದೆ ಚಂದ್ರಪ್ರಕಾಶ್ ನಿಗಮ್ ಅವರು ಪುರಸಭೆಯಲ್ಲಿ ಕಟ್ಟಡ ಕಾಮಗಾರಿ ಗುತ್ತಿಗೆ ಪಡೆದಿದ್ದಾರೆ. ಅವರ ತಾಯಿ ಗೃಹಿಣಿ.

ಉತ್ತಮ ಅಂಕ ಪಡೆಯೋದು ಹೇಗೆ? : ವಿದ್ಯಾರ್ಥಿಗಳಿಗೆ ಯಶಸ್ಸಿನ ಮಂತ್ರ ಹೇಳಿದ ಪ್ರಾಚಿ : ಉತ್ತಮ ಅಂಕ ಪಡೆದು ಇಡೀ ರಾಜ್ಯಕ್ಕೆ ಹೆಮ್ಮೆ ತಂದಿರುವ ಪ್ರಾಚಿ ತಮ್ಮ ಯಶಸ್ಸಿಗೆ ಕಾರಣವೇನು ಎಂಬುದನ್ನು ಹೇಳಿದ್ದಾರೆ. ಉತ್ತಮ ಅಂಕಪಡೆಯಲು ಏನು ಮಾಡ್ಬೇಕು ಎಂಬ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. ಪ್ರಾಚಿ ಪ್ರಕಾರ, ಓದುವ ಜೊತೆಗೆ ರಿವಿಜನ್ ಬಹಳ ಮುಖ್ಯ. ನೀವು ಏನೇ ಓದಿದ್ರೂ ಅದನ್ನು ರಿವಿಜನ್ ಮಾಡಿ ಎನ್ನುತ್ತಾರೆ ಪ್ರಾಚಿ.

ಇಷ್ಟೇ ಅಲ್ಲ ಅಧ್ಯಯನದ ಸಮಯದಲ್ಲಿ ಶಿಕ್ಷಕರು ಪ್ರಮುಖ ಪಾತ್ರವಹಿಸುತ್ತಾರೆ ಎನ್ನುತ್ತಾರೆ ಪ್ರಾಚಿ. ಶಿಕ್ಷಕರು ಉತ್ತಮ ಮಾರ್ಗದರ್ಶಕರು. ಹಾಗಾಗಿ ಅವರು ಹೇಳಿದ ನಿಯಮಗಳನ್ನು ಪಾಲಿಸಬೇಕು ಎನ್ನುವುದು ಪ್ರಾಚಿ ಅಭಿಪ್ರಾಯ. ಶಿಕ್ಷಕರು ಹೇಳಿದಂತೆ ನೀವು ನಡೆದುಕೊಂಡಲ್ಲಿ ಉತ್ತಮ ಅಂಕವನ್ನು ಸುಲಭವಾಗಿ ಪಡೆಯಬಹುದು. 

ನೋಡೋಕೆ ಮಾಡ್ರನ್ ಅಪ್ಸರೆ; ಮೈಮೇಲಿನ ಡ್ರೆಸ್, ಕಾಸ್ಟ್ಯೂಮ್ ಮಾತ್ರ ಕೇವಲ 900 ರೂಪಾಯಿ

ಪರೀಕ್ಷೆ ಹತ್ತಿರ ಬರ್ತಿದೆ ಎಂದಾಗ ಒತ್ತಡದಲ್ಲಿ ಓದುವುದು ಸರಿಯಲ್ಲ ಎಂಬುದು ಪ್ರಾಚಿ ಅಭಿಪ್ರಾಯ. ಆರಂಭದಿಂದಲೇ ನಿಯಮಿತವಾಗಿ ವಿದ್ಯಾಭ್ಯಾಸ ಮಾಡ್ಬೇಕು. ಹಾಗಾದಲ್ಲಿ ಒತ್ತಡ ನಮ್ಮನ್ನು ಕಾಡುವುದಿಲ್ಲ. ನಿಯಮಿತವಾಗಿ ನೀವು ಅಧ್ಯಯನ ಮಾಡ್ತಾ ಬಂದಲ್ಲಿ ನಿಮಗೆ ರಿವಿಜನ್ ಗೆ ಅವಕಾಶ ಸಿಗುತ್ತದೆ. ಇದ್ರಿಂದ ಎಲ್ಲ ವಿಷ್ಯಗಳು ಸುಲಭವಾಗಿ ಮನಸ್ಸಿನಲ್ಲಿ ಉಳಿಯುತ್ತವೆ. ಪರೀಕ್ಷೆ ಬರೆಯೋದು ಆರಾಮವಾಗುತ್ತದೆ ಎಂದು ಪ್ರಾಚಿ ಹೇಳಿದ್ದಾರೆ.  

click me!