ಧೈರ್ಯ, ಆತ್ಮವಿಶ್ವಾಸ, ಹೋರಾಡುವ ಛಲವಿದ್ದರೆ ಎಂಥ ಕಷ್ಟಬಂದರೂ ಅದನ್ನು ಎದುರಿಸಬಹುದು. ಪತಿ, ಕುಟುಂಬ ಕೈಬಿಟ್ಟರೂ ಬುದ್ಧಿವಂತಿಕೆ, ತಾಳ್ಮೆಯಿಂದ ಎಲ್ಲವನ್ನೂ ಜಯಿಸಬಹುದು. ಇದಕ್ಕೆ ಅನೇಕರು ಉದಾಹರಣೆಯಾಗಿ ಸಿಗ್ತಾರೆ. ಅದ್ರಲ್ಲಿ ಪೆಟ್ರೀಷಿಯಾ ನಾರಾಯಣ್ ಕೂಡ ಒಬ್ಬರು.
ಈ ಜೀವನವೇ ಸಾಕು ಎನ್ನುವ ಸ್ಥಿತಿ ಕೆಲವೊಮ್ಮೆ ನಿರ್ಮಾಣವಾಗುತ್ತದೆ. ಈ ಸಂದರ್ಭದಲ್ಲಿ ಜನರು ಧೈರ್ಯ ಕಳೆದುಕೊಳ್ತಾರೆ. ಮುಂದಿನ ದಿನಗಳ ಬಗ್ಗೆ ಆಲೋಚನೆ ಮಾಡಿ, ಈ ದಿನದ ಹೋರಾಟವನ್ನು ಮುಕ್ತಾಯ ಮಾಡ್ತಾರೆ. ಆದ್ರೆ ಎಲ್ಲರೂ ಹಾಗಿರೋದಿಲ್ಲ. ಪೆಟ್ರೀಷಿಯಾ ನಾರಾಯಣ್ ಅವರಂತಹ ಕೆಲವು ಜನರು, ಜೀವನದಲ್ಲಿ ಎಷ್ಟೇ ಕಷ್ಟಬಂದ್ರೂ ಎದೆಗುಂದೋದಿಲ್ಲ. ಹೋರಾಟವನ್ನು ಧೈರ್ಯದಿಂದ ಮುನ್ನಡೆಸಿ, ಯಶಸ್ಸು ಕಾಣ್ತಾರೆ.
ದೃಢತೆ, ಧೈರ್ಯ ಮತ್ತು ಶುದ್ಧ ಇಚ್ಛಾಶಕ್ತಿಯಿಂದ ಪೆಟ್ರೀಷಿಯಾ ನಾರಾಯಣ್ (Patricia Narayan) ಕಷ್ಟವನ್ನು ಎದುರಿಸಿದ್ದಾರೆ. ಮೂರು ದಶಕಗಳ ವೃತ್ತಿಜೀವನ (Career) ದಲ್ಲಿ ಸಾಕಷ್ಟು ಏರಿಳಿತವನ್ನು ಪೆಟ್ರೀಷಿಯಾ ನಾರಾಯಣ್ ಕಂಡಿದ್ದಾರೆ. ಕೌಟುಂಬಿಕ ಸಮಸ್ಯೆ, ಎರಡು ಮಕ್ಕಳನ್ನು ಒಂಟಿಯಾಗಿ ಸಾಕುವ ಜವಾಬ್ದಾರಿ ಮಧ್ಯೆಯೂ ಪೆಟ್ರೀಷಿಯಾ ನಾರಾಯಣ್ ರೆಸ್ಟೋರೆಂಟ್ (Restaurant) ಶುರು ಮಾಡಿ ಈಗ ಈ ರೆಸ್ಟೋರೆಂಟ್ ಸರಪಳಿಯ ಮುಖ್ಯಸ್ಥೆಯಾಗಿದ್ದಾರೆ.
ಟಾಟಾ ಕುಟುಂಬದ ಈ ಸೊಸೆ ಬಹುಕೋಟಿ ಕಿರ್ಲೋಸ್ಕರ್ ಸಮೂಹ ಸಂಸ್ಥೆ ಉತ್ತರಾಧಿಕಾರಿ
ಯಾರು ಪೆಟ್ರೀಷಿಯಾ ನಾರಾಯಣ್? : ಪೆಟ್ರೀಷಿಯಾ ನಾರಾಯಣ್, ಸಂದೀಪ ಚೈನ್ ಆಫ್ ರೆಸ್ಟೋರೆಂಟ್‌ಗಳ ನಿರ್ದೇಶಕಿ. 2010 ರಲ್ಲಿ FICCI ಮಹಿಳಾ ಉದ್ಯಮಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಪೆಟ್ರೀಷಿಯಾ ನಾರಾಯಣ್ ಸಮರ್ಪಣೆ, ಉತ್ಸಾಹ ಮತ್ತು ಕಠಿಣ ಪರಿಶ್ರಮದಿಂದ ಈ ಸಾಧನೆ ಮಾಡಿದ್ದಾರೆ. ಪೆಟ್ರೀಷಿಯಾ ನಾರಾಯಣ್ ಒಂದು ಕಾಲದಲ್ಲಿ ಬೀದಿ ಬದಿಯ ವ್ಯಾಪಾರಿಯಾಗಿದ್ದರು. ಇಬ್ಬರ ಜೊತೆ ಕೆಲಸ ಶುರು ಮಾಡಿದ ಪೆಟ್ರೀಷಿಯಾ ನಾರಾಯಣ್ ಈಗ 200 ಸಿಬ್ಬಂದಿ ಹೊಂದಿದ್ದಾರೆ. 50 ಪೈಸೆಯಿಂದ ಕೆಲಸ ಶುರು ಮಾಡಿದ ಪೆಟ್ರೀಷಿಯಾ ನಾರಾಯಣ್ ಈಗ ದಿನಕ್ಕೆ 2 ಲಕ್ಷ ವಹಿವಾಟು ನಡೆಸುತ್ತಾರೆ.
ಪೆಟ್ರೀಷಿಯಾ ನಾರಾಯಣ್ ಆರಂಭಿಕ ಜೀವನ : ಪೆಟ್ರೀಷಿಯಾ ತಮಿಳುನಾಡಿನ ನಾಗರ್‌ಕೋಯಿಲ್‌ನಲ್ಲಿ ಸಾಂಪ್ರದಾಯಿಕ ಕ್ರಿಶ್ಚಿಯನ್ ಕುಟುಂಬದಲ್ಲಿ ಜನಿಸಿದರು. ತನ್ನ ಕುಟುಂಬದ ಆಸೆಗಳನ್ನು ವಿರೋಧಿಸಿ, ಅವಳು 17 ವರ್ಷದವರಿದ್ದಾಗ ಬೇರೆ ಧರ್ಮದ ನಾರಾಯಣ್ ರನ್ನು ಮದುವೆಯಾದರು. ಆದ್ರೆ ಕೆಲವೇ ದಿನಗಳಲ್ಲಿ ತಾನು ಮಾಡಿದ್ದು ತಪ್ಪು ಎಂಬುದು ಪೆಟ್ರೀಷಿಯಾ ಅರಿವಿಗೆ ಬಂದಿತ್ತು. ಯಾಕೆಂದ್ರೆ ನಾರಾಯಣ್, ಮಾದಕ ವ್ಯಸನಿಯಾಗಿದ್ದ. ಆತ ಪತ್ನಿಗೆ ಹಿಂಸೆ ನೀಡುತ್ತಿದ್ದ. ಪತ್ನಿ ಹಾಗೂ ಮಕ್ಕಳಿಗೆ ಆದ್ಯತೆ ನೀಡ್ತಿರಲಿಲ್ಲ. ಪತಿಯ ಹಿಂಸೆ ತಾಳಲಾರದೆ ವಿಚ್ಛೇದನಕ್ಕೆ ಪೆಟ್ರೀಷಿಯಾ ನಿರ್ಧಾರ ತೆಗೆದುಕೊಂಡರು. ಆದ್ರೆ ಎರಡು ಮಕ್ಕಳ ಜೊತೆ ಎಲ್ಲಿಗೆ ಹೋಗೋದು ಎನ್ನುವ ಪ್ರಶ್ನೆ ಎದ್ದಿತ್ತು. ಅದೃಷ್ಟವಶಾತ್ ಮಗಳನ್ನು ಮತ್ತೆ ಮನೆಗೆ ಕರೆಯಲು ತಂದೆ ಸಿದ್ಧವಿದ್ದರು. ಆದ್ರೆ ಆದಷ್ಟು ಬೇಗ ತಂದೆ ಸಹಾಯದಿಂದ ಮುಕ್ತಿ ಹೊಂದಬೇಕೆಂದು ಪೆಟ್ರೀಷಿಯಾ ನಿರ್ಧರಿಸಿದ್ದರು.
ದುಡ್ಡು ಮಾಡೋದು ಹೇಗೆ? ಮಹಿಳೆಯರಿಗೆ ಇಲ್ಲಿವೆ ದುಡಿಯೋ ಟಿಪ್ಸ್
ಶುರುವಾಯ್ತು ಬೀದಿ ಬದಿ ವ್ಯವಹಾರ : ಪೆಟ್ರೀಷಿಯಾರಿಗೆ ಅಡುಗೆಯಲ್ಲಿ ಆಸಕ್ತಿಯಿತ್ತು. ಹೊಸ ಹೊಸ ಅಡುಗೆ ಮಾಡುವುದು ಅವರ ಇಷ್ಟದ ಕೆಲಸಗಳಲ್ಲಿ ಒಂದಾಗಿತ್ತು. ಪೆಟ್ರೀಷಿಯಾ ತಾಯಿಯಿಂದ ಹಣ ಪಡೆದು ಉಪ್ಪಿನಕಾಯಿ ಹಾಗೂ ಜಾಮ್ ತಯಾರಿಸಿದ್ದರು. ಅದನ್ನು ತಾಯಿಯ ಸಹೋದ್ಯೋಗಿಗಳು ಖರೀದಿ ಮಾಡಿದ್ದರು. ನಂತ್ರ ಪೆಟ್ರೀಷಿಯಾ ತನ್ನ ಮಾರಾಟವನ್ನು ಹೆಚ್ಚಿಸಲು ನಿರ್ಧರಿಸಿದ್ರು. ಚೆನ್ನೈನ ಅತಿದೊಡ್ಡ ಸಾರ್ವಜನಿಕ ಪ್ರದೇಶಗಳಲ್ಲಿ ಒಂದಾದ ಮರೀನಾ ಬೀಚ್‌ನಲ್ಲಿ ಸಣ್ಣ ಶಾಪ್ ತೆಗೆದ್ರು. ಮೊದಲ ದಿನ ಬರೀ 50 ಪೈಸೆ ವ್ಯವಹಾರವಾಗಿತ್ತು. ಆದ್ರೆ ಪೆಟ್ರೀಷಿಯಾ ನಿರಾಸೆಗೊಳಗಾಗಲಿಲ್ಲ. ನಿಧಾನವಾಗಿ ಗಳಿಕೆ ಶುರುವಾಗ್ತಿದ್ದಂತೆ ಟೀ ಜೊತೆ ತಿಂಡಿ, ತಾಜಾ ಜ್ಯೂಸ್, ಕಾಫಿ ಮಾರಾಟ ಮಾಡಲು ಶುರು ಮಾಡಿದ್ರು. ಇಬ್ಬರು ಅಂಗವಿಕಲರನ್ನು ಸಹಾಯಕ್ಕೆ ನೇಮಿಸಿಕೊಂಡರು. ಸ್ಲಂ ಕ್ಲಿಯರಿಂಗ್ ಬೋರ್ಡ್ ಅಧ್ಯಕ್ಷರು ಪೆಟ್ರೀಷಿಯಾ ಊಟಕ್ಕೆ ಮನಸೋತಿದ್ದರು, ಅವರು ಕಚೇರಿಯಲ್ಲಿ ಕ್ಯಾಂಟೀನ್ ನಿರ್ವಹಿಸುವ ಅವಕಾಶ ನೀಡಿದ್ರು. ನಂತರ ಪೆಟ್ರೀಷಿಯಾ ಚೆನ್ನೈನ ಎಲ್ಲಾ ಕಚೇರಿಗಳಲ್ಲಿ ಹೆಚ್ಚುವರಿ ಶಾಖೆಗಳನ್ನು ತೆರೆಯಲು ನಿರ್ಧರಿಸಿದ್ರು. 1998 ರಲ್ಲಿ ಸಂಗೀತಾ ರೆಸ್ಟೋರೆಂಟ್ ಗ್ರೂಪ್ ಪಾಲುದಾರರಾದರು.
ಯಶಸ್ಸಿನ ಮಧ್ಯೆ ಪೆಟ್ರೀಷಿಯಾ, ರಸ್ತೆ ಅಪಘಾತದಲ್ಲಿ ಮಗಳು ಹಾಗೂ ಅಳಿಯನ್ನು ಕಳೆದುಕೊಂಡರು. ಈ ದುಃಖದಿಂದ ಹೊರಬರಲು ಮಗ ನೆರವಾದ. ಪೆಟ್ರೀಷಿಯಾ ಮತ್ತು ಮಗ ಸೇರಿ 2006 ರಲ್ಲಿ ತಮ್ಮ ಮೊದಲ ರೆಸ್ಟೋರೆಂಟ್ ಸಂದೀಪಾವನ್ನು ತೆರೆದರು. ಅವರ ಬ್ರ್ಯಾಂಡ್ ಕೆಲ ರೆಸ್ಟೋರೆಂಟ್‌ಗಳ ಜೊತೆಗೆ ಹಲವಾರು ದೊಡ್ಡ ಕಾರ್ಪೊರೇಟ್ ಫುಡ್ ಕೋರ್ಟ್‌ಗಳಿಗೆ ಆಹಾರ ಒದಗಿಸುತ್ತದೆ. ಪೆಟ್ರೀಷಿಯಾ ಅವರು ಆಚರಪಕ್ಕಂ ಪಟ್ಟಣದಲ್ಲಿ ಆಂಬ್ಯುಲೆನ್ಸ್ ಸೇವೆಯನ್ನು ನಿರ್ವಹಿಸುತ್ತಿದ್ದಾರೆ.