ರಸ್ತೆ ಮೇಲೆ ಪೊಂಗಲ್​ ಮಾಡಿದ ಸುಧಾಮೂರ್ತಿ.. ಸರಳತೆಯೇ ಶಕ್ತಿ, ಸೇವೆಯೇ ಭಕ್ತಿ

By Shobha MCFirst Published Mar 9, 2023, 12:41 PM IST
Highlights

ಈಕೆ ಜಗತ್ತಿನ ಪ್ರತಿಷ್ಠಿತ ಐಟಿ ಕಂಪನಿ ಇನ್ಫೋಸಿಸ್​ ಪ್ರತಿಷ್ಠಾನದ ಅಧ್ಯಕ್ಷೆ. ಐಟಿ ದಿಗ್ಗದ ನಾರಾಯಣಮೂರ್ತಿ ಪತ್ನಿ, ಬ್ರಿಟನ್​ ಅಳಿಯ  ರಿಷಿ ಸುನಕ್​ಗೆ ಹೆಣ್ಣು ಕೊಟ್ಟ ಅತ್ತೆ. ಇಷ್ಟು ಹೇಳಿಬಿಟ್ರೆ ಗೊತ್ತೇ ಆಗಿಬಿಡುತ್ತೆ, ಸರಳತೆಯ ಸಾಕಾರಮೂರ್ತಿ ನಮ್ಮ ಸುಧಾಮೂರ್ತಿ.

ಬೆಳ್ಳಿಯಂಥ ಬಿಳಿ ಕೂದಲು, ಹಣೆ ಮೇಲೆ ಅರ್ಧ ಚಂದ್ರನ ಬೊಟ್ಟು, ಕಿವಿಯೋಲೆ, ಒಂದೆಳೆ ಕರಿಮಣಿ, ಸಾದಾಸೀದಾ ಕಾಟನ್ ಸೀರೆ. ತಲೆಯಲ್ಲಿ ಸದಾ ಅರಳಿರುವ ಮಲ್ಲಿಗೆ ಹೂವು, ಎಲ್ಲಕ್ಕೂ ಕಳಶವಿಟ್ಟಂತೆ ಮುಖದ ತುಂಬಾ ನಗು..ಹಮ್ಮು, ಬಿಮ್ಮು, ಸೊಕ್ಕು, ಸಿಡುಕು.. ಹುಂ, ಅದ್ಯಾವುದನ್ನೂ ಹತ್ತಿರಕ್ಕೂ ಬಿಟ್ಟುಕೊಳ್ಳದ ಸುಧಾಮೂರ್ತಿಯವರ ಸರಳತೆಗೆ ಮತ್ತೊಂದು ಸಾಕ್ಷಿ ಸಿಕ್ಕಿದೆ ನೋಡಿ. ಮಂಗಳವಾರ ಕೇರಳದ ತಿರುವನಂತಪುರಂನಲ್ಲಿ ನಡೆದ ಆಟ್ಟುಕುಳ ದೇವಿ ಹಬ್ಬದಲ್ಲಿ ಪಾಲ್ಗೊಂಡಿದ್ದ ಸುಧಾಮೂರ್ತಿ, ಸ್ಥಳೀಯ ಹೆಣ್ಣುಮಕ್ಕಳ ಜತೆಗೂಡಿ ಪೊಂಗಲ್​ ತಯಾರಿಸಿ, ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ನೆತ್ತಿ ಸುಡುವ ಬಿಸಿಲನ್ನೂ ಲೆಕ್ಕಿಸದೇ ಸ್ಥಳೀಯ ಹೆಣ್ಣುಮಕ್ಕ ಜತೆಗೂಡಿ ಪೊಂಗಲ್ ತಯಾರಿಸುತ್ತಿರುವ ಸುಧಾಮೂರ್ತಿ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ. 

ಬೆಳಗ್ಗೆಯೇ ತಿರುವಂತನಂಪುರಂ ಆಟ್ಟುಕುಳ ದೇವಿ ಉತ್ಸವಕ್ಕೆ ಬಂದ ಸುಧಾಮೂರ್ತಿ ತೊಟ್ಟಿದ್ದು ಸದಾಸೀದ ಬಿಳಿಯ ಸೀರೆ (Saree), ಕಪ್ಪು ಬ್ಲೌಸ್​​. ಅಲ್ಲಿಯ ಹೆಣ್ಣು ಮಕ್ಕಳು (Girls) ಹಬ್ಬಕ್ಕೆ ಪೊಂಗಲ್ ತಯಾರಿಸುತ್ತಿರುವುದನ್ನು ನೋಡಿದ್ದೇ ತಡ, ಸುಧಾಮೂರ್ತಿ ಸಹ ತಾವೂ ಪೊಂಗಲ್​ ಸಿದ್ಧಪಡಿಸಲು ಮುಂದಾಗಿಬಿಟ್ರು. ಆಯೋಜಕರಿಗೋ ಗಾಬರಿ. ಪ್ರತಿಷ್ಠಿತ ಇನ್ಫೋಸಿಸ್​ ಪ್ರತಿಷ್ಠಾನದ ಅಧ್ಯಕ್ಷೆ ಹೀಗೆ, ರಸ್ತೆ ಬದಿ ಕುಳಿತು ಪೊಂಗಲ್ ತಯಾರಿಸುವುದು ಎಂದರೇನು ? ಎಂದು ಕ್ಷಣ ಕಂಗಾಲಾದ್ರು.

ಮಹಿಳೆಯರೇ ಸೇರಿ ಆಚರಿಸುವ Attukal Pongala 2023.. ಏನೀ ಆಚರಣೆಯ ಹಿನ್ನೆಲೆ?

ಆದ್ರೆ, ಇದಾವುದಕ್ಕೂ ತಲೆಕೆಡಿಸಿಕೊಳ್ಳದ ಸುಧಾಮೂರ್ತಿ, ನೋಡನೋಡುತ್ತಿದ್ದಂತೆ, ಇಟ್ಟಿಗೆಯಿಂದ ಮಾಡಿದ್ದ ಒಲೆ ಮೇಲೆ ಮಡಕೆ ಇಟ್ಟು, ಪೊಂಗಲ್​ ಮಾಡಲು ಆರಂಭಿಸಿದ್ರು. ಸುಡು,ಸುಡು ಬಿಸಿಲು, ಒಲೆಯಿಂದ ಅಡರುತ್ತಿದ್ದ ಹೊಗೆ.. ಯಾವುದಕ್ಕೂ ತಲೆಕೆಡಿಸಿಕೊಳ್ಳದ ಸುಧಾಮೂರ್ತಿ, ಅಕ್ಕಿ, ಬೆಲ್ಲ, ತುಪ್ಪ, ತೆಂಗಿನತುರಿ, ಒಣಹಣ್ಣುಗಳನ್ನು ಹಾಕಿ ಕೇರಳ ಸ್ಟೈಲ್​ನಲ್ಲಿ ರುಚಿಯಾದ ಪೊಂಗಲ್ ಮಾಡಿಯೇ ಬಿಟ್ರು. 

ತಿರುವನಂತಪುರಂನ ನಾನಾ ಭಾಗಗಳಿಂದ ಆಗಮಿಸಿದ್ದ ನೂರಾರು ಮಹಿಳೆಯರ (Women) ಜತೆಗೂಡಿದ ಸುಧಾಮೂರ್ತಿ, ಅಕ್ಕಪಕ್ಕದಲ್ಲಿ ಪೊಂಗಲ್ ತಯಾರಿಸುತ್ತಿದ್ದ ಮಹಿಳೆಯರಿಗೂ ನೆರವಾಗುತ್ತಿದ್ರು. ಒಬ್ಬರಿಗೆ ಅಕ್ಕಿ (Rice) ಕೊಡುವುದು, ಮತ್ತೊಬ್ಬರಿಗೆ ಬೆಲ್ಲ, ತೆಂಗಿನಕಾಯಿ, ಏಲಕ್ಕಿ.. ಹೀಗೆ ಪೊಂಗಲ್ ಬೇಕಾದ ವಸ್ತುಗಳನ್ನು ಮಹಿಳೆಯೊಂದಿಗೆ ಹಂಚಿಕೊಳ್ಳುತ್ತಾ, ಗಲಗಲನೆ ನಗುತ್ತಾ, ಹಬ್ಬವನ್ನು (Festival) ಸಂಭ್ರಮಿಸಿದ್ರು. 

ಇದೊಂದು ಅಪರೂಪದ ಅನುಭವ ಎಂದ ಸುಧಾಮೂರ್ತಿ, ಧರ್ಮ, ಜಾತಿ ಬಡವ, ಶ್ರೀಮಂತ ಎಲ್ಲವನ್ನೂ ಮೀರಿದ್ದು ನಾರಿ ಶಕ್ತಿ ಎಂದು ಬಣ್ಣಿಸಿದ್ರು. ಪತಿ ನಾರಾಯಣಮೂರ್ತಿ ವಿದೇಶದಲ್ಲಿದ್ರೆ, ಅವರ ಪತ್ನಿ ಸುಧಾಮೂರ್ತಿ, ತಿರುವನಂತಪುರಂನಲ್ಲಿ ಕುಳಿತು ತಯಾರಿಸಿದ ಪೊಂಗಲ್​ ಅನ್ನು ಟಿಫನ್​ ಬಾಕ್ಸ್​​ನಲ್ಲಿ ಹಾಕಿಕೊಂಡು,  ಕೊಚ್ಚಿಯಲ್ಲಿರುವ ಮಗ ರೋಹನ್, ಸೊಸೆ ಅಪರ್ಣಗೆ ತಲುಪಿಸಿದ್ರು.

ಅತ್ತೆಯನ್ನು ಮಗಳು ಅಮ್ಮನೆಂದಾಗ ಶಾಕ್ ಆಗಿತ್ತು! ಸಂಬಂಧ ನಿಭಾಯಿಸೋದು ಹೇಗೆ ಹೇಳ್ತಾರೆ ಸುಧಾಮೂರ್ತಿ!

ತಿರುವನಂತಪುರಂನಲ್ಲಿ ನಡೆಯುವ ಈ ಅಪರೂಪದ ಹಬ್ಬದ ಬಗ್ಗೆ ತಮ್ಮ ಸೆಕ್ರೆಟರಿ ಕೇರಳದ ಲೀನಾ ಗೋಪುಕುಮಾರ್​ರಿಂದ ಹಬ್ಬದ ಮಾಹಿತಿ ತಿಳಿದಿದ್ದ ಸುಧಾಮೂರ್ತಿ, ಕೊರೊನಾ ಕಾರಣಕ್ಕೆ ಕಳೆದ ಬಾರಿಯೂ ಹಬ್ಬದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ. ಈ ವರ್ಷ ಮಿಸ್ ಮಾಡಿಕೊಳ್ಳದೇ ತಿರುವನಂತಪುರಂಗೆ ಬಂದು ಸಾವಿರಾರು ಮಹಿಳೆಯರ ಜತೆ ಸೇರಿ ಪೊಂಗಲ್ ಮಾಡಿ, ಸಂಭ್ರಮಿಸಿದ್ರು.

ಸುಧಾಮೂರ್ತಿ ಎಂದ್ರೆ ಹಾಗೇ, ಒಮ್ಮೆ ತಿರುಪತಿಯಲ್ಲಿ ಮಹಿಳೆಯರ ಜತೆಗೂಡಿ ಹೂವು ಕಟ್ಟುತ್ತಾರೆ, ಮಂತ್ರಾಲಯ ಮಠದಲ್ಲಿ ಭಕ್ತರ ಅಡುಗೆಗೆ ತರಕಾರಿ ಹೆಚ್ಚಿಕೊಡುತ್ತಾರೆ, ದೇಶದ ಯಾವುದೋ ಮೂಲೆಯಲ್ಲಿ ಸಂಭವಿಸಿದ ಭೂಕಂಪದಿಂದ ತತ್ತರಿಸಿದವರ ನೆರವಿಗೆ ನಿಂತಿರುತ್ತಾರೆ, ಕೊರೊನಾದಿಂದ ಬೀದಿಗೆ ಬಿದ್ದವರಿಗೆ ಕೈಚಾಚುತ್ತಾರೆ... ಸರಳತೆಯೇ ದೇವರೆನ್ನುತ್ತಾರೆ, ಸೇವೆಯೇ ಮಾನವ ಧರ್ಮ ಎನ್ನುತ್ತಾರೆ..ಅದಕ್ಕೆ ಅವರನ್ನು ಸರಳತೆಯ ಸಾಕಾರಮೂರ್ತಿ ಎನ್ನುತ್ತಾರೆ.

click me!