
ಬೆಂಗಳೂರು(ಮಾ.09): ಮಹಿಳೆಯರ ಸುರಕ್ಷತೆಗಾಗಿ ರಾಜಧಾನಿ ಬೆಂಗಳೂರಿನಲ್ಲಿ ಜಾರಿಗೊಳಿಸಿರುವ ‘ಸುರಕ್ಷಿತ ನಗರ ಯೋಜನೆ’ಯನ್ನು ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಮಹಾನಗರ ಪಾಲಿಕೆಗಳು, ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಿಗೂ ವಿಸ್ತರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ನಗರದ ಕನ್ನಡ ಭವನದಲ್ಲಿ ಬುಧವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟನಾ ಸಮಾರಂಭದಲ್ಲಿ ಹಲವು ಮಹಿಳಾ ಸಾಧಕರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಮಹಿಳಾ ಸುರಕ್ಷತೆಗೆ ನಮ್ಮ ಸರ್ಕಾರ ಹೆಚ್ಚು ಒತ್ತು ನೀಡುತ್ತಿದ್ದು ಬೆಂಗಳೂರಿನಲ್ಲಿ ‘ಸುರಕ್ಷಿತ ನಗರ ಯೋಜನೆ’ಗೆ ಚಾಲನೆ ನೀಡಲಾಗಿದೆ. ಏಳು ಸಾವಿರ ಸಿಸಿ ಕ್ಯಾಮೆರಾ ಅಳವಡಿಸಿ ಕಮಾಂಡ್ ಸೆಂಟರ್ ಸ್ಥಾಪಿಸಲಾಗಿದೆ. ಜತೆಗೆ 400 ವಾಹನಗಳನ್ನು ಒದಗಿಸಲಾಗಿದೆ. ಎಲ್ಲಾ ಹಂತಗಳಲ್ಲಿ ಮಹಿಳಾ ಸುರಕ್ಷತೆ ಅತ್ಯಂತ ಮುಖ್ಯವಾಗಿದೆ. ಹಾಗಾಗಿ ಈ ಯೋಜನೆಯನ್ನು ಎಲ್ಲಾ ಮಹಾನಗರ ಪಾಲಿಕೆಗಳು, ಜಿಲ್ಲೆ ಮತ್ತು ತಾಲ್ಲೂಕು ಕೇಂದ್ರಗಳಿಗೂ ವಿಸ್ತರಣೆ ಮಾಡಲಾಗುವುದು ಎಂದರು.
ಸಿದ್ದರಾಮಯ್ಯ ಲೋಕಾಯುಕ್ತ ಹಲ್ಲು ಕಿತ್ತಿದ್ದರು: ಸಿಎಂ ಬೊಮ್ಮಾಯಿ
ಮಹಿಳೆಯರಿಂದ ನಮ್ಮ ಆರ್ಥಿಕತೆ ಸದೃಢ:
‘ಗ್ರಾಮೀಣ ಆರ್ಥಿಕತೆಗೆ ಮಹಿಳೆಯರ ಪಾಲು ದೊಡ್ಡದಿದೆ. ಮಹಿಳೆಯರು ಹಣ ಉಳಿತಾಯ ಮಾಡುವ ಪ್ರವೃತ್ತಿಯಿಂದ ನಮ್ಮ ಆರ್ಥಿಕತೆ ಇನ್ನೂ ಸದೃಢವಾಗಿದೆ. ಅಮೆರಿಕದ ಬ್ಯಾಂಕುಗಳು ದಿವಾಳಿಯಾದರೂ ನಮ್ಮ ಮಹಿಳೆಯರ ಉಳಿತಾಯ ಸಂಸ್ಕೃತಿ ಆರ್ಥಿಕತೆಗೆ ಕೊಡುಗೆ ನೀಡಿದೆ’ ಎಂದು ಮುಖ್ಯಮಂತ್ರಿ ಅವರು ಬಣ್ಣಿಸಿದರು.
ಸ್ತ್ರೀಯರಲ್ಲಿ ಸ್ವ ಉದ್ಯೋಗಕ್ಕೆ ಉತ್ತೇಜನ ನೀಡಲು ಸ್ತ್ರೀ ಸಾಮರ್ಥ್ಯ ಯೋಜನೆ ಅಡಿ 5 ಲಕ್ಷ ರು. ನೀಡಲಾಗುತ್ತಿದೆ. ಈ ವರ್ಷ ಬಜೆಟ್‌ನಲ್ಲಿ ಹೊಲದಲ್ಲಿ ಕೆಲಸ ಮಾಡುವ ಎಲ್ಲ ಮಹಿಳೆಯರಿಗೆ ಪ್ರತಿ ತಿಂಗಳು ಒಂದು ಸಾವಿರ ರು. ನೀಡಲು ತೀರ್ಮಾನಿಸಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಕಳೆದ ವರ್ಷ 1000 ರು., ಈ ವರ್ಷ ಮತ್ತೆ ಒಂದು ಸಾವಿರ ರು. ಗೌರವಧನ ಹೆಚ್ಚಳ ಮಾಡಲಾಗಿದೆ. ಉದ್ಯೋಗ, ಶಿಕ್ಷಣ ಮತ್ತು ಸಬಲೀಕರಣ ಎಂಬ ಮೂರು ಮಂತ್ರ ಅಳವಡಿಸಿಕೊಂಡು ಶಿಕ್ಷಣದ ಮೇಲೆ ಬಂಡವಾಳ ಹೂಡಿಕೆ ಮಾಡಲಾಗಿದೆ. ಅದಕ್ಕಾಗಿ ಎಲ್ಲ ಹೆಣ್ಣುಮಕ್ಕಳಿಗೆ ಉಚಿತ ಶಿಕ್ಷಣ ಕೊಡಲು ತೀರ್ಮಾನಿಸಲಾಗಿದೆ. ಸ್ತ್ರೀ ಶಕ್ತಿ ಯಿಂದ ರಾಜ್ಯದ ಅಭಿವೃದ್ಧಿ ಸಾಧ್ಯ ಎಂಬ ನಂಬಿಕೆ ನಮ್ಮ ಸರ್ಕಾರದ್ದು. ರಾಜ್ಯದಲ್ಲಿ ಆರೂವರೆ ಕೋಟಿ ಜನಸಂಖ್ಯೆ ಇದೆ. ಎಲ್ಲರೂ ದುಡಿದರೆ ಹೆಚ್ಚು ಅಭಿವೃದ್ದಿ ಸಾಧ್ಯ ಎಂದರು.
ಹೆಣ್ಣು ಅಥವಾ ಮಹಿಳೆಯಿಂದ ಮನುಕುಲದ ಮುಂದುವರಿಯುತ್ತಿದೆ. ನಮ್ಮೆಲ್ಲರಿಗೂ ತಾಯಿಯೊಂದಿಗಿನ ಜನ್ಮಪೂರ್ವದ ಒಂದು ಪವಿತ್ರ ಸಂಬಂಧವಿದೆ. ತಾಯಿ, ಪತ್ನಿ, ಹೆಣ್ಣು ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ಗಂಡು ಮಕ್ಕಳಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ. ನಮ್ಮದು ಪುರುಷ ಪ್ರಧಾನ ಸಮಾಜವಾದರೂ ಪುರಾಣಕಾಲದಿಂದ ಇದುವರೆಗೂ ವಿವಿಧ ಕ್ಷೇತ್ರಗಳಲ್ಲಿ ಮಹಿಳೆ ಸಾಕಷ್ಟುಸಾಧನೆ ಮಾಡಿರುವ ನಿದರ್ಶನಗಳಿವೆ. ಸ್ವಾತಂತ್ರ್ಯ ಹೋರಾಟದಲ್ಲಿ ಕಿತ್ತೂರು ಚೆನ್ನಮ್ಮ ಸೇರಿದಂತೆ ಅನೇಕ ದಿಟ್ಟಹೋರಾಟಗಾರ್ತಿಯರು ಬ್ರಿಟಿಷರ ವಿರುದ್ಧ ಹೋರಾಡಿ ತಮ್ಮ ಪ್ರಾಣವನ್ನು ಅರ್ಪಿಸಿದರು. ಅವರ ಹೋರಾಟ, ಜೀವನ ಮತ್ತು ಆದರ್ಶಗಳು ನಮ್ಮೆಲ್ಲರಿಗೂ ಸದಾ ಸ್ಫೂರ್ತಿ ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್, ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು, ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷ ರಾಜಣ್ಣಗೌಡ, ಡಿ.ಆರ್.ಡಿ.ಓ ಸಂಸ್ಥೆಯ ಆಶು ಭಾಟಿಯಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕಿ ಡಾ.ಅನುರಾಧಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಮಂಜುಳಾ ಉಪಸ್ಥಿತರಿದ್ದರು.
ನೂರನೇ ಜನೌಷಧಿ ಕೇಂದ್ರಕ್ಕೆ ಸಿಎಂ ಚಾಲನೆ: ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ ಭಾಗಿ
18 ಮಹಿಳೆಯರು, 8 ಸಂಸ್ಥೆಗಳಿಗೆ ಚನ್ನಮ್ಮ ಪ್ರಶಸ್ತಿ
ಬೆಂಗಳೂರು: ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ, ಡಿಆರ್‌ಡಿಒ ವಿಜ್ಞಾನಿ ಆಶಾ ಭಾಟಿಯಾ, ಬಿಎಂಟಿಸಿ ಬಸ್‌ನ ಮಹಿಳಾ ಚಾಲಕಿ ಪ್ರೇಮಾ ರಾಮಪ್ಪ ನಡಪಟ್ಟಿಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ, ಸೇವೆ ಮಾಡಿರುವ 18 ಮಂದಿ ಮಹಿಳಾ ಸಾಧಕರು ಮತ್ತು ಮಹಿಳಾ ಸುರಕ್ಷತೆ, ಅಭಿವೃದ್ಧಿಗಾಗಿ ಶ್ರಮಿಸಿರುವ ಆರು ಸಂಸ್ಥೆಗಳ ಪ್ರತಿನಿಧಿಗಳಿಗೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ನೀಡಿ ಸನ್ಮಾನಿಸಿದರು.
ಏನಿದು ಸೇಫ್ ಸಿಟಿ ಯೋಜನೆ?
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜಂಟಿ ಯೋಜನೆ. 60:40 ಅನುಪಾತದಲ್ಲಿ ನಿರ್ಭಯಾ ನಿಧಿಯಿಂದ .667 ಕೋಟಿ ರು. ವೆಚ್ಚದಲ್ಲಿ ಯೋಜನೆ ಜಾರಿಗೆ ತರಲಾಗಿದೆ. ಸ್ತ್ರೀಯರ ಸುರಕ್ಷತೆಗೆ ಹಾಗೂ ದೌರ್ಜನ್ಯಕ್ಕೊಳಗಾದ ಮಹಿಳೆ ಮತ್ತು ಮಕ್ಕಳ ಸಂರಕ್ಷಣೆಗೆ ಬೇಕಾದ ಅಗತ್ಯ ಪೊಲೀಸ್, ವೈದ್ಯಕೀಯ ಹಾಗೂ ಕಾನೂನು ನೆರವುಗಳನ್ನು ಇದರಡಿ ಒದಗಿಸಲಾಗುತ್ತದೆ. ತಾಂತ್ರಿಕ ವಿಧಾನಗಳನ್ನು ಬಳಸಿಕೊಂಡು ಶೀಘ್ರ ಮತ್ತು ಸುಧಾರಿತ ಪರಿಹಾರ ಒದಗಿಸಲಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.