ವೈದ್ಯೆಯೊಬ್ಬರ ನಿರ್ಲಕ್ಷ್ಯದಿಂದ ಮಹಿಳೆಯ ಡೆಲವರಿ ಸಮಯದಲ್ಲಿ ಕತ್ತರಿಯೊಂದು ಹೊಟ್ಟೆಯಲ್ಲಿಯೇ ಉಳಿದ ಘಟನೆ ನಡೆದಿದೆ. 17 ವರ್ಷ ಆ ಮಹಿಳೆ ಅನುಭವಿಸಿದ ಯಾತನೆ ಬಳಿಕ ಇದೀಗ ಅದರ ಬಗ್ಗೆ ರಿವೀಲ್ ಆಗಿದೆ.
ಆಪರೇಷನ್ ಮಾಡುವ ಸಮಯದಲ್ಲಿ ವೈದ್ಯರ ನಿರ್ಲಕ್ಷ್ಯದಿಂದಾಗಿ ರೋಗಿಗಳು ಸಾವನ್ನಪ್ಪುವುದು ಒಂದೆಡೆಯಾದರೆ, ಯಾವುದಾದರೂ ವಸ್ತುಗಳನ್ನು ಹೊಟ್ಟೆಯಲ್ಲಿಯೇ ಬಿಟ್ಟು ಬೇಜವಾಬ್ದಾರಿಯಿಂದ ವರ್ತಿಸಿ ರೋಗಿಗಳ ಜೀವದ ಜೊತೆ ಚೆಲ್ಲಾಟ ಆಡುವ ಘಟನೆಗಳೂ ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಅಂಥದ್ದೇ ಒಂದು ಘಟನೆ ಇದೀಗ ನಡೆದಿದೆ. ಉತ್ತರ ಪ್ರದೇಶದ ಲಖನೌದಲ್ಲಿ ವೈದ್ಯಕೀಯ ನಿರ್ಲಕ್ಷ್ಯದ ಪ್ರಕರಣ ಬೆಳಕಿಗೆ ಬಂದಿದೆ. ಮಹಿಳೆಯೊಬ್ಬರ ಹೊಟ್ಟೆಯೊಳಗೆ ಆಪರೇಷನ್ ವೇಳೆ ಕತ್ತರಿಯನ್ನು ಉಳಿಸಲಾಗಿದ್ದು, 17 ವರ್ಷಗಳ ಬಳಿಕ ಅದನ್ನು ಹೊರತೆಗೆಯಲಾಗಿದೆ. ಸಿಸೇರಿಯನ್ ಶಸ್ತ್ರಚಿಕಿತ್ಸೆಗೆ ಒಳಗಾದ 17 ವರ್ಷಗಳ ನಂತರ ಕತ್ತರಿಯನ್ನು ಹೊರಕ್ಕೆ ತೆಗೆಯಲಾಗಿದೆ. ಆದರೆ ಈ 17 ವರ್ಷಗಳು ಮಹಿಳೆ ಅನುಭವಿಸಿದ ಯಾತನೆ ಮಾತ್ರ ಯಾರಿಗೂ ಬೇಡ.
ಸಂಧ್ಯಾ ಪಾಂಡೆ ಎಂಬ ರೋಗಿಯು ಫೆಬ್ರವರಿ 28, 2008 ರಂದು 'ಶಿ ಮೆಡಿಕಲ್ ಕೇರ್' ನರ್ಸಿಂಗ್ ಹೋಂನಲ್ಲಿ ಸಿ-ಸೆಕ್ಷನ್ ಮೂಲಕ ಮಗುವಿಗೆ ಜನ್ಮ ನೀಡಿದ್ದರು. ಆಕೆಯ ಪತಿ ಅರವಿಂದ್ ಕುಮಾರ್ ಪಾಂಡೆ ಸಲ್ಲಿಸಿದ ಪೊಲೀಸ್ ದೂರಿನ ಪ್ರಕಾರ, ಶಸ್ತ್ರಚಿಕಿತ್ಸೆಯ ನಂತರ ಅವರು ನಿರಂತರ ಹೊಟ್ಟೆ ನೋವು ಅನುಭವಿಸುತ್ತಿದ್ದರು. ವಿವಿಧ ವೈದ್ಯರೊಂದಿಗೆ ಹಲವಾರು ಸಮಾಲೋಚನೆಗಳ ಹೊರತಾಗಿಯೂ, ಅವರ ಸ್ಥಿತಿ ಸುಧಾರಿಸಲಿಲ್ಲ. 17 ವರ್ಷಗಳ ನರಕಯಾತನೆ ಅನುಭವಿಸಿದರು. ಕಂಡ ಕಂಡ ವೈದ್ಯರ ಚಿಕಿತ್ಸೆ ಮಾಡಿಸಿದರು. ಹಣ ಖರ್ಚಾಯಿತೇ ವಿನಾ ಹೊಟ್ಟೆ ನೋವಿನಿಂದ ಮುಕ್ತಿ ಸಿಗಲಿಲ್ಲ. ವೈದ್ಯಕೀಯ ಲೋಕ ಇಷ್ಟು ಮುಂದುವರೆದರೂ ಅವರ ಹೊಟ್ಟೆಯಲ್ಲಿ ಅಷ್ಟು ದೊಡ್ಡ ಕತ್ತರಿ ಇರುವುದು ವೈದ್ಯರಿಗೆ ತಿಳಿಯಲಿಲ್ಲ!
ವಾಸಿಯಾಗದ ಕೆಮ್ಮು- ಸ್ಕ್ಯಾನ್ನಲ್ಲಿ ಕಂಡದ್ದು ಗಡ್ಡೆ, ಆಪರೇಷನ್ ವೇಳೆ ಸಿಕ್ಕಿದ್ದೇ ಬೇರೆ: ವೈದ್ಯರೇ ಕಂಗಾಲು!
ಕೊನೆಗೆ ಸಂಧ್ಯಾ ಪಾಂಡೆ ಲಕನವ ವೈದ್ಯಕೀಯ ಕಾಲೇಜಿನಲ್ಲಿ ಎಕ್ಸ್-ರೇಗೆ ಒಳಗಾದಾಗ ಆಘಾತಕಾರಿ ವಿಷಯ ತಿಳಿಯಿತು. ಎಕ್ಸ್-ರೇ ಅವರ ಹೊಟ್ಟೆಯೊಳಗೆ ಕತ್ತರಿ ಇರುವುದನ್ನು ಬಹಿರಂಗಪಡಿಸಿತು. ನಂತರ, ಅವರನ್ನು ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯಕ್ಕೆ (ಕೆಜಿಎಂಯು) ದಾಖಲಿಸಲಾಯಿತು, ಅಲ್ಲಿ ಅವರು ಮಾರ್ಚ್ 26 ರಂದು ಶಸ್ತ್ರಚಿಕಿತ್ಸೆಗೆ ಒಳಗಾದರು, ಅಲ್ಲಿ ವಸ್ತುವನ್ನು ತೆಗೆದುಹಾಕಲು ಶಸ್ತ್ರಚಿಕಿತ್ಸೆ ಮಾಡಲಾಯಿತು. ಕೆಜಿಎಂಯು ವಕ್ತಾರ ಸುಧೀರ್ ಸಿಂಗ್ ಘಟನೆಯನ್ನು ದೃಢಪಡಿಸಿದ್ದು, ಸಂಕೀರ್ಣವಾದ ಶಸ್ತ್ರಚಿಕಿತ್ಸೆಯ ನಂತರ ಕತ್ತರಿಗಳನ್ನು ಯಶಸ್ವಿಯಾಗಿ ತೆಗೆದುಹಾಕಲಾಗಿದೆ ಮತ್ತು ರೋಗಿಯನ್ನು ಡಿಸ್ಚಾರ್ಜ್ ಮಾಡಿ ಮನೆಗೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.
ಆರಂಭಿಕ ಶಸ್ತ್ರಚಿಕಿತ್ಸೆ ಮಾಡಿದ ಡಾ. ಪುಷ್ಪಾ ಜೈಸ್ವಾಲ್ ಅವರ ನಿರ್ಲಕ್ಷ್ಯಕ್ಕೆ ಕಾರಣ ಎಂದು ಪತಿಯ ದೂರಿನಲ್ಲಿ ಉಲ್ಲೇಖಿಸಲಾಗಿದೆ ಮತ್ತು ಈ ವಿಷಯದ ಬಗ್ಗೆ ಹೆಚ್ಚಿನ ತನಿಖೆ ನಡೆಸಬೇಕೆಂದು ಕೋರಲಾಗಿದೆ. ನಿರ್ಲಕ್ಷ್ಯ ಮಾಡಿದ ವೈದ್ಯರಿಗೆ ಏನಾಗುತ್ತೋ ಬಿಡುತ್ತೋ, ಆದರೆ ಅಷ್ಟು ವರ್ಷಗಳವರೆಗೆ ಹಿಂಸೆ, ನೋವು ಅನುಭವಿಸಿದ ಮಹಿಳೆಯ ಆ ದಿನಗಳನ್ನು ತಂದುಕೊಡುವವರು ಯಾರು? ಅದೃಷ್ಟವಶಾತ್ ಈಗ ಮಹಿಳೆಯ ಪ್ರಾಣ ಉಳಿದಿದೆ. ಆದರೆ ಆಕೆಯ ಪ್ರಾಣಕ್ಕೆ ಕುತ್ತು ಬಂದಿದ್ದರೆ, ಆ ನಿರ್ಲಕ್ಷ್ಯದ ವೈದ್ಯೆ ಏನಾದರೂ ಪ್ರಾಣವನ್ನು ತಂದು ಕೊಡುತ್ತಿದ್ದಳೇ ಎಂದು ಜಾಲತಾಣದಲ್ಲಿ ಚರ್ಚೆ ಶುರುವಾಗಿದೆ.
ನಿಮ್ಮ ಕನಸಿನ ಮಗು ಹುಟ್ಟಿಸುವ ಹೊಸ ಆವಿಷ್ಕಾರವಿದು! ಮಕ್ಕಳಿಲ್ಲದವರಿಗೂ ಭರವಸೆ- ಏನಿದು ಸಂಶೋಧನೆ? ಮಾಹಿತಿ ಇಲ್ಲಿದೆ...