
ಭಾರತೀಯ ಸಂಸ್ಕೃತಿ(Culture)ಯಲ್ಲಿ ಸಂಬಂಧಗಳಿಗೆ ಹೆಚ್ಚು ಪ್ರಾಮುಖ್ಯತೆ(Importance)ಯಿದೆ. ಅಪ್ಪ-ಅಮ್ಮ, ಅಣ್ಣ-ತಂಗಿ, ಅಪ್ಪ-ಮಗಳು, ಅತ್ತೆ-ಸೊಸೆ ಹೀಗೆ ಎಲ್ಲಾ ಸಂಬಂಧಕ್ಕೂ ಅದರದ್ದೇ ಆದ ಮಹತ್ವವಿದೆ. ಭಾರತೀಯರ ಪ್ರಕಾರ, ಮದುವೆಯೆಂದರೆ ಕೇವಲ ಹುಡುಗ-ಹುಡುಗಿ ಇಬ್ಬರ ನಡುವಿನ ಸಂಬಂಧವಲ್ಲ. ಬದಲಾಗಿ ಒಂದು ಮದುವೆಯಲ್ಲಿ ಎರಡು ಕುಟುಂಬಗಳು ಒಂದಾಗುತ್ತವೆ. ಹಲವಾರು ಹೊಸ ಸಂಬಂಧಗಳು ಬೆಸೆದುಕೊಳ್ಳುತ್ತವೆ. ಅತ್ತೆ-ಮಾವ. ಮೈದುನ, ನಾದಿನಿ ಮೊದಲಾದ ಹೊಸ ಸಂಬಂಧಗಳು ಹುಡುಗ-ಹುಡುಗಿಯ ಜೀವನದಲ್ಲಿ ಸೇರ್ಪಡೆಯಾಗುತ್ತದೆ. ವೈವಾಹಿಕ ಜೀವನ(Life) ಉತ್ತಮವಾಗಿರಬೇಕೆಂದರೆ ಗಂಡನ ಮನೆಯಲ್ಲಿ ಎಲ್ಲರ ಜತೆಗೂ ಉತ್ತಮ ಸಂಬಂಧ ಇರಬೇಕಾದುದು ಮುಖ್ಯ. ಅದರಲ್ಲೂ ವೈವಾಹಿಕ ಜೀವನದಲ್ಲಿ ಅತ್ತೆ ಮತ್ತು ಮಾವನ ಸಂಬಂಧವು ಅವಿಭಾಜ್ಯ ಅಂಗದಂತೆಯೇ ಎಂದು ಹೇಳಬಹುದು.
ವೈವಾಹಿಕ ಜೀವನದಲ್ಲಿ ಎಲ್ಲವೂ ಸರಿಯಿದ್ದರೂ ಅದೆಷ್ಟೋ ಮನೆಗಳಲ್ಲಿ ಅತ್ತೆ(Mother in Law)-ಸೊಸೆ ನಡುವಿನ ಸಂಬಂಧವೇ ಸರಿ ಇರುವುದಿಲ್ಲ. ವಿನಾಕಾರಣ ಜಗಳ, ದೂರು, ಗಲಾಟೆಗಳು ನಡೆಯುತ್ತಲೇ ಇರುತ್ತವೆ. ಇಬ್ಬರ ನಡುವಿನ ಜಗಳ ಅಕ್ಕಪಕ್ಕದ ಮನೆಗಳಲ್ಲಿ, ಗಲ್ಲಿ ಗಲ್ಲಿಗಳಲ್ಲಿ ಸುದ್ದಿಯಾಗಿರುತ್ತದೆ. ಆ ಮನೆಯಲ್ಲಿ ಅತ್ತೆ-ಸೊಸೆಯದ್ದು ಎಣ್ಣೆ-ಸೀಗೇಕಾಯಿ ಸಂಬಂಧ, ಏನೇನೂ ಆಗಿ ಬರಲ್ಲ ಅಂತ ಮಾತನಾಡಿಕೊಳ್ಳುತ್ತಾರೆ.
ಅತ್ತೆ ಅರ್ಥವೇ ಮಾಡಿಕೊಳ್ಳುವುದಿಲ್ಲ ಎಂಬ ಸೊಸೆ, ಸೊಸೆಗೇ ಅಹಂಕಾರ ಎನ್ನುವ ಅತ್ತೆ. ಇಬ್ಬರ ನಡುವಿನ ಮುನಿಸು ಅದೆಷ್ಟೋ ವರ್ಷಗಳು ಮುಂದುವರೆಯುತ್ತದೆ. ಇದೇ ಕಾರಣಕ್ಕೆ ಅತ್ತೆ-ಸೊಸೆ ಅಂದರೆ ಒಬ್ಬರಿಗೊಬ್ಬರು ವಿರುದ್ಧ ಮನಸ್ಥಿತಿಯವರಾಗಿಯೇ ಉಳಿದು ಹೋಗುತ್ತಾರೆ. ಹಿರಿತನ ಸಾಧಿಸುವ ಅತ್ತೆ- ಒಗ್ಗಿಕೊಳ್ಳಲಾದ ಸೊಸೆಯ ನಡುವಿನ ಜಟಾಪಟಿಯಿಂದ ಮನೆಯ ನೆಮ್ಮದಿ, ಕುಟುಂಬದ ನಡುವಿನ ಖುಷಿಯೂ ಹಾಳಾಗುತ್ತದೆ. ಅತ್ತೆ-ಸೊಸೆಗೆ ಹೊಂದಾಣಿಕೆಯಿಲ್ಲ ಅನ್ನೋ ಕಾರಣಕ್ಕೇ ಅದೆಷ್ಟೋ ಗಂಡು ಮಕ್ಕಳು ಮದುವೆಯಾದ ಕೂಡಲೇ ಬೇರೆ ಮನೆ ಮಾಡಿಕೊಂಡು ಬಿಡುತ್ತಾರೆ. ಇನ್ನೂ ಕೆಲವೊಮ್ಮೆ ಸೊಸೆಯ ಕುರಿತಾದ ದೂರು ಅವಳ ಮನೆಗೂ ತಲುಪಿ ಅಲ್ಲಿಯೂ ಮಾತುಕತೆಯಾಗುವುದು ಉಂಟು. ಹೀಗಾಗಿಯೇ ಅತ್ತೆ-ಸೊಸೆ ಸಂಬಂಧ ಉತ್ತಮವಾಗಿಡುವುದು, ಸುಧಾರಿಸುವುದು ಹೇಗಪ್ಪಾ ಅನ್ನೋದು ಇಲ್ಲಿಯವರೆಗೂ ಹಲವರಿಗೆ ಉತ್ತರ ಸಿಗದ ಪ್ರಶ್ನೆ.
Indian SaaS and Italian bahu: ನೆಟ್ಟಿಗರ ಹೃದಯ ಗೆದ್ದ ಇಟಾಲಿಯನ್ ಸೊಸೆ ಮತ್ತು ಇಂಡಿಯನ್ ಅತ್ತೆ
ಅತ್ತೆಯನ್ನು ಅಮ್ಮನಂತೆ ನೋಡಿಕೊಳ್ಳುತ್ತೇನೆ ಎನ್ನುವ ಸೊಸೆ, ಸೊಸೆಯನ್ನು ಮಗಳಂತೆ ನೋಡಿಕೊಳ್ಳುತ್ತೇನೆ ಎನ್ನುವ ಅತ್ತೆ ಈ ಮಾತೆಲ್ಲವೂ ಮದುವೆಯಾದ ಒಂದೆರಡು ವಾರದಲ್ಲಿ ಠುಸ್ ಆಗಿ ಬಿಡುತ್ತದೆ. ಸಣ್ಣ ಪುಟ್ಟ ವಿಚಾರಗಳಿಗೇ ಇಬ್ಬರ ನಡುವೆ ಸಿಟ್ಟು, ಸಿಡುಕು ಶುರುವಾಗಿಬಿಡುತ್ತದೆ.
ಮದುವೆಯಾಗಿ ಹೊಸ ಮನೆ ಸೇರುವ ಸೊಸೆ ಸಹಜವಾಗಿಯೇ ಹೊಸ ಮನೆಯ ಬಗ್ಗೆ ಕನಸು(Dream)ಗಳನ್ನು ಕಟ್ಟಿಕೊಂಡು ಬರುತ್ತಾಳೆ. ಅತ್ತೆ ಸಹ ಹೊಸ ಸೊಸೆಯನ್ನು ಆದರದಿಂದ ಬರಮಾಡಿಕೊಳ್ಳಲು ಸಜ್ಜಾಗಿರುತ್ತಾರೆ. ಹೀಗಾಗಿ ಸೊಸೆ, ಅತ್ತೆಯ ಮನಸ್ಸು ಗೆಲ್ಲುವುದಷ್ಟೇ ಅಲ್ಲ, ಅತ್ತೆಯೂ ಸೊಸೆಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕು. ಇಬ್ಬರಲ್ಲೂ ಹೊಂದಾಣಿಕೆಯಿದ್ದಾಗ ಅತ್ತೆ-ಸೊಸೆ ಸಂಬಂಧದಲ್ಲಿ ಅಪಸ್ವರ ಬರಲು ಸಾಧ್ಯವೇ ಇಲ್ಲ. ಈ ಕೆಳಗೆ ಹೇಳಿರುವ ಕೆಲವು ವಿಚಾರಗಳನ್ನು ಅನುಸರಿಸುವುದರ ಮೂಲಕ ಅತ್ತೆ-ಸೊಸೆ ಸಂಬಂಧವನ್ನು ಉತ್ತಮವಾಗಿಸಲು ಯತ್ನಿಸಬಹುದು.
ಅತ್ತೆ-ಸೊಸೆ ಜತೆಯಾಗಿ ಅಡುಗೆ ಮಾಡುವುದು
ಅತ್ತೆಯೊಂದಿಗೆ ಅಡುಗೆ(Cooking) ಮನೆಯಲ್ಲಿ ಹೊಂದಾಣಿಕೆ ಮಾಡಿಕೊಂಡರೆ ಅರ್ಧ ಯುದ್ಧ ಗೆದ್ದಂತೆ ಎಂಬ ಮಾತೇ ಇದೆ. ಅಡುಗೆ ಮನೆಯಲ್ಲಿ ಅತ್ತೆ-ಸೊಸೆ ನಡುವೆ ಹೆಚ್ಚಾಗಿ ಭಿನ್ನಾಭಿಪ್ರಾಯ ಬರುತ್ತದೆ. ಯಾಕೆಂದರೆ ವರ್ಷಗಳ ಕಾಲ ಅತ್ತೆಯ ಸುಪರ್ದಿಯಲ್ಲಿದ್ದ ಅಡುಗೆ ಮನೆಯ ಜವಾಬ್ದಾರಿ(Responsibility) ಸೊಸೆಗೆ ಬರುತ್ತದೆ. ಹೀಗಾಗಿ ಭಿನ್ನಾಭಿಪ್ರಾಯಗಳು ಬರುವುದು ಸಹಜ. ಹೀಗಾಗಿ ಅತ್ತೆ-ಸೊಸೆ ಇಬ್ಬರೂ ಜತೆಗೆ ಸೇರಿ ಅಡುಗೆ ಮಾಡುವುದು ಉತ್ತಮ. ಇದರಿಂದ ಇಬ್ಬರ ನಡುವೆ ಆಹ್ಲಾದಕರ ಮಾತುಕತೆಯೂ ನಡೆಯುವುದರಿಂದ ಜಗಳಕ್ಕೆ ಆಸ್ಪದವೇ ಇರುವುದಿಲ್ಲ. ಅಡುಗೆ ಮನೆಯಲ್ಲಿ ಸೊಸೆ ಅತ್ತೆಗೆ ಇಷ್ಟವಾಗುವ ಅಡುಗೆಯನ್ನು ತಯಾರಿಸುವ ಮೂಲಕ ಅವರ ಮನಸ್ಸನ್ನು ಗೆಲ್ಲಲು ಯತ್ನಿಸಬಹುದು.
ಸೊಸೆ ಐಶ್ವರ್ಯಾ ರೈ ಕಂಡ್ರೆ ಅತ್ತೆ ಜಯಾಗ್ಯಾಕೆ ಆ ಪಾಟಿ ಇಷ್ಟ!
ಒಟ್ಟಿಗೇ ಶಾಪಿಂಗ್ ಮಾಡಿ
ಸಣ್ಣಪುಟ್ಟ ಶಾಪಿಂಗ್ ಆದರೂ ಸರಿ, ದೊಡ್ಡ ಮಟ್ಟದ ಶಾಪಿಂಗ್ ಆದರೂ ಸರಿ. ಅತ್ತೆಯನ್ನು ಜತೆಗೆ ಕರೆದೊಯ್ಯುವುದನ್ನು ಮರೆಯದಿರಿ. ಇದರಿಂದ ನೀವು ಆಕೆಯ ಹಿರಿತನಕ್ಕೆ ಮಹತ್ವ ನೀಡುತ್ತೀರಿ ಎಂಬ ವಿಚಾರ ಅವರಿಗೆ ಖುಷಿ ನೀಡುತ್ತದೆ. ಶಾಪಿಂಗ್(Shopping)ಮಾಡುವ ಸಂದರ್ಭದಲ್ಲಿ ಅವರಿಗೆ ಏನು ಬೇಕು ಎಂದು ಕೇಳಿ ಕೊಡಿಸಿ. ಖರೀದಿಯ ಸಂದರ್ಭ ಅವರ ಸಲಹೆ, ಅಭಿರುಚಿ, ಆಯ್ಕೆ(Selection)ಯನ್ನು ಕೇಳಿ ತಿಳಿದುಕೊಳ್ಳಿ.
ಜತೆಯಾಗಿ ಕುಳಿತು ಸಿನೆಮಾ(Movie) ನೋಡಿ
ಅತ್ತೆ-ಸೊಸೆ ಇಬ್ಬರೂ ಜತೆಯಾಗಿ ಕುಳಿತು ಸಿನೆಮಾ ನೋಡಿ. ಆ ಬಗ್ಗೆ ಚರ್ಚಿಸಿ. ಇದರಿಂದ ಇಬ್ಬರ ನಡುವೆ ಉತ್ತಮ ಮಾತುಕತೆಯಾಗುತ್ತದೆ. ಜತೆಯಾಗಿ ಮ್ಯಾಗಝೀನ್(Magazine)ಗಳನ್ನು ಓದುವುದು, ಲೋಡೋ, ಕೇರಂ ಬೋರ್ಡ್ ಮೊದಲಾದ ಸಮಯ ಕಳೆಯುವ ಆಟಗಳನ್ನು ಆಡುವುದನ್ನು ಮಾಡಿ. ಇದು ಇಬ್ಬರ ನಡುವಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ.
ಅಮ್ಮ ಅಷ್ಟು ಪ್ರೀತಿ ತೋರಿಸುತ್ತಿದ್ದವರು ಅತ್ತೆಯಾದ ಮೇಲೆ ಯಾಕೆ ಹೀಗಾಗಿದ್ದಾರೆ?
ಹವ್ಯಾಸಗಳನ್ನು ಪ್ರೋತ್ಸಾಹಿಸಿ
ಆಗೊಮ್ಮೆ ಈಗೊಮ್ಮೆ ಅತ್ತೆ ಸೊಸೆಯ ಹವ್ಯಾಸ(Hobbies)ಗಳನ್ನು, ಸೊಸೆ ಅತ್ತೆಯ ಹವ್ಯಾಸಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಅವರಲ್ಲಿರುವ ಹವ್ಯಾಸಗಳನ್ನು ಪ್ರೋತ್ಸಾಹಿಸಿ. ಅದೆಷ್ಟೋ ಅತ್ತೆಯಂದಿರು, ಸೊಸೆಯಂದಿರು ಮದುವೆಯ ಮೊದಲು ಹಾಡುವುದು, ಚಿತ್ರ ಬಿಡಿಸುವುದು, ಡ್ಯಾನ್ಸ್(Dance) ಮಾಡುವುದು ತಿಳಿದಿದ್ದರೂ ಮದುವೆಯ ನಂತರ ಇದೆಲ್ಲವನ್ನೂ ಸಂಪೂರ್ಣವಾಗಿ ಬಿಟ್ಟು ಬಿಡುತ್ತಾರೆ. ಇಂಥಹಾ ಹವ್ಯಾಸಕ್ಕೆ ಮತ್ತೆ ಜೀವ ನೀಡಿ ಅತ್ತೆ-ಸೊಸೆಯ ಸಂಬಂಧವನ್ನು ಉಲ್ಲಾಸದಾಯಕವಾಗಿಸಿಕೊಳ್ಳಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.