
ಮುಂಬೈ (ಜೂ.5) : ಮಹಿಳಾ ಸಹೋದ್ಯೋಗಿಗಳಿಗೆ ‘ನೀನು ಒಳ್ಳೆಯ ಫಿಗರ್, ಉತ್ತಮವಾಗಿ ಫಿಗರ್ ಮೇಂಟೇನ್ ಮಾಡಿದ್ದೀಯಾ, ನಮ್ಮೊಂದಿಗೆ ಆಚೆ ಬರುತ್ತೀಯಾ?’ ಎಂದು ಕೇಳುವುದು ಕೂಡ ಲೈಂಗಿಕ ಕಿರುಕುಳಕ್ಕೆ ಸಮ ಎಂದು ಮುಂಬೈ ಸೆಷನ್ಸ್ ಕೋರ್ಟ್ ಹೇಳಿದೆ.
30 ವರ್ಷದ ಮಹಿಳಾ ಸಹೋದ್ಯೋಗಿಯೊಬ್ಬರಿಗೆ ಇದೇ ರೀತಿ ಹೇಳಿದ್ದ ರಿಯಲ್ ಎಸ್ಟೇಟ್ ಸಂಸ್ಥೆಯೊಂದರ ಕಚೇರಿಯಲ್ಲಿ ಅಸಿಸ್ಟಂಟ್ ಮ್ಯಾನೇಜರ್ ಆಗಿರುವ 42 ವರ್ಷದ ಪುರುಷನೊಬ್ಬನಿಗೆ ಈ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದ ಕೋರ್ಟ್ ಹೀಗೆ ಅಭಿಪ್ರಾಯ ಪಟ್ಟಿದೆ. ಅಲ್ಲದೇ ಆರೋಪಿಯನ್ನು ನಿರೀಕ್ಷಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಲು ಇದು ಸೂಕ್ತ ಪ್ರಕರಣವಲ್ಲ. ಇದು ಗಂಭೀರ ಪ್ರಕರಣವಾಗಿದ್ದು ಆರೋಪಿಯ ವಿಚಾರಣೆ ಅಗತ್ಯವಿದೆ ಎಂದಿದೆ.
Bengaluru Crime: ಪತ್ನಿಗೆ ಎಸ್‌ಐನಿಂದ ಜಾತಿ ನಿಂದನೆ, ಕಿರುಕುಳ ಆರೋಪ: ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ
ಏ.24 ರಂದು ಮ್ಯಾನೇಜರ್ ವಿರುದ್ಧ ಮಹಿಳಾ ಉದ್ಯೋಗಿ ದೂರು ದಾಖಲಿಸಿದ್ದರು. ಮಾ.1 ರಿಂದ ಏ.14ರ ವರೆಗೆ ಆರೋಪಿಯು ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಸಾಕ್ಷಿಗಳು ಹಾಗೂ ದಾಖಲೆಗಳನ್ನು ಸಲ್ಲಿಸಲಾಗಿದೆ.
ಕೌಟುಂಬಿಕ ಕಿರುಕುಳ; ಶಾಲಾ ಶಿಕ್ಷಕಿ ನೇಣಿಗೆ ಶರಣು
ಅಣ್ಣಿಗೇರಿ : ಪತಿ, ಅತ್ತೆ-ಮಾವ ಹಾಗೂ ಮೈದುನನ ಕಿರುಕುಳ ತಾಳಲಾರದೇ ಶಿಕ್ಷಕಿಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಮಜ್ಜಿಗುಡ್ಡದಲ್ಲಿ ಜರುಗಿದೆ. ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮಜ್ಜಿಗುಡ್ಡ ಗ್ರಾಮದ ಶೋಭಾ ರಮೇಶ ಗುಡ್ಡದ(39) ಮೃತ ದುರ್ದೈವಿ. ಇವರು ಅಣ್ಣಿಗೇರಿಯಲ್ಲಿರುವ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಶೋಭಾಗೆ ಮಕ್ಕಳಾಗಿರಲಿಲ್ಲ. ಇದನ್ನೆ ನೆಪವಾಗಿಟ್ಟುಕೊಂಡು ಮಜ್ಜಿಗುಡ್ಡದ ನಿವಾಸಿಯಾದ ಪತಿ ರಮೇಶ ಗುಡ್ಡದ, ಮಾವ ಜಯಪ್ಪ ಗುಡ್ಡದ, ಅತ್ತೆ ತಂಗೆವ್ವ ಗುಡ್ಡದ ಹಾಗೂ ಮೈದುನ ಈಶ್ವರ ಗುಡ್ಡದ ಪದೇ ಪದೇ ಕಿರುಕುಳ ನೀಡುತ್ತಿದ್ದರು.
ಕಳೆದ ಮೇ 29ರಂದು ಶಾಲೆಗೆ ಹೋಗುತ್ತಿದ್ದ ವೇಳೆ ಪತಿ ಹಾಗೂ ಅತ್ತೆ-ಮಾವ ಇವಳ ಮೇಲೆ ಹಲ್ಲೆ ಮಾಡಿದ್ದರಿಂದ ಮನನೊಂದು ಮನೆಯಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಕೂಡಲೇ ಅವಳನ್ನು ಪಟ್ಟಣದ ಪ್ರಾಥಮಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು. ಆದರೆ, ಚಿಕಿತ್ಸೆ ಫಲಿಸದೇ ಶುಕ್ರವಾರ ಸಂಜೆ ಮೃತಪಟ್ಟಿದ್ದಾಳೆ. ಈ ಕುರಿತು ಮೃತಳ ಮನೆಯವರು ಪ್ರಕರಣ ದಾಖಲಿಸಿದ್ದು, ಸ್ಥಳೀಯ ಅರಕ್ಷಕ ಠಾಣಾಧಿಕಾರಿ ಬಸನಗೌಡ ಬಿ.ಎಂ. ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.