ಎದೆಹಾಲುಣಿಸುವ ಕಷ್ಟ ಸುಖ;ಬ್ರೆಸ್ಟ್‌ ಫೀಡಿಂಗ್‌ ಅಂದ್ರೆ ಸುಮ್ಮನೆ ಅಲ್ಲ!

By Kannadaprabha News  |  First Published Aug 13, 2020, 10:58 AM IST

ನೀವೊಬ್ಬ ಅಮ್ಮ ಆದಿರಿ ಅಂದರೆ ಕಷ್ಟಮತ್ತು ಸುಖಗಳ ಜೋಕಾಲಿಯಲ್ಲಿ ಸದಾ ಜೀಕುವ ಸೌಭಾಗ್ಯ. ಮಗು ಬಂದಮೇಲೆ ಸ್ವಾತಂತ್ರ್ಯದ ಸೊಲ್ಲೆತ್ತುವ ಹಾಗಿಲ್ಲ. ಹಾಗಂತ ಎಳೆಯ ಬೊಮ್ಮಟೆಯೊಂದಿಗಿನ ಬಂಧನದಲ್ಲಿ ಬೇಜಾರೂ ಇಲ್ಲ. ಎದೆಹಾಲುಣಿಸುವ ಮೂಲಕ ಗಟ್ಟಿಯಾಗುತ್ತಾ ಹೋಗುವ ಅಮ್ಮ, ಮಗುವಿನ ಸಾಂಗತ್ಯದ ಜೊತೆಗೆ ಬ್ರೆಸ್ಟ್‌ ಫೀಡಿಂಗ್‌ ಸಮಯದ ಸಮಸ್ಯೆ, ಪರಿಹಾರ, ನಂಬಿಕೆಗಳ ಸುತ್ತ ಈ ಬರಹ.


ಆಗಸ್ಟ್‌ 1ರಿಂದ 7- ವಿಶ್ವ ಸ್ತನ್ಯಪಾನ ಸಪ್ತಾಹ

1. ಅಪರಾತ್ರಿಯ ಗಾಬರಿ!

Tap to resize

Latest Videos

ಹಿಂದಿನ ದಿನ ಸಂಜೆ ಹೆರಿಗೆ ನೋವು ಶುರುವಾಗಿತ್ತು. ಸೂರ್ಯ ಹುಟ್ಟೋ ಸ್ವಲ್ಪ ಹೊತ್ತಿಗೆ ಮೊದಲು ನನ್ನ ಹೊಟ್ಟೆಯ ಜಗತ್ತಿನಿಂದ ಹೊರಜಗತ್ತಿಗೆ ಬಂದುಬಿದ್ದಳು. ಅದೇನು ಕಿರಿಕಿರಿಯೋ ಎಷ್ಟೊತ್ತಾದರೂ ಅಳೋದನ್ನು ನಿಲ್ಲಿಸಲೇ ಇಲ್ಲ. ಕೊನೆಗೆ ನರ್ಸ್‌ ಅವಳನ್ನು ಎತ್ತಿಕೊಂಡು ಹೋಗಿ ಅದ್ಯಾವುದೋ ಪೌಡರ್‌ಅನ್ನು ಬಿಸಿ ನೀರಲ್ಲಿ ಮಿಕ್ಸ್‌ ಮಾಡಿ ಸ್ವಲ್ಪ ಸ್ವಲ್ಪವೇ ಕುಡಿಸಿದ್ರು. ಹೊಟ್ಟೆತುಂಬಿದ ಮೇಲೆ ಅವಳು ಬೆಳ್ಳನೆಯ ಕಾಟನ್‌ ಬಟ್ಟೆಯಲ್ಲಿ ಸುತ್ತಿಸಿಕೊಂಡು ನಿದ್ದೆ ಹೋದಳು. ನನಗೆ ಒಳಗೊಳಗೇ ಭಯ. ನರ್ಸ್‌ ಅವಳಿಗೆ ಏನನ್ನು ಕುಡಿಸಿರಬಹುದು, ನನಗೆ ಎದೆ ಹಾಲಿಲ್ವಾ? ಹಾಗಿದ್ರೆ ಪಾಪುಗಿನ್ನು ಇದೇ ಪೌಡರ್‌ ಗತಿಯಾ? ಆ ನರ್ಸ್‌ ಬಳಿಯೇ ನನ್ನ ಆತಂಕ ತೋಡಿಕೊಂಡೆ. ಆಕೆ ಹೇಳಿದ್ದಿಷ್ಟು​-

ಈ ವಿಚಾರ ಗೊತ್ತಿರಲಿ: ಮಗು ಹುಟ್ಟಿದ ಕೂಡಲೇ ಹೆಚ್ಚಿನವರಿಗೆ ಎದೆಹಾಲು ಬರೋದಿಲ್ಲ. ಆಗ ಹಸಿವಲ್ಲಿ ಮಗು ಅಳುತ್ತದೆ. ಅದಕ್ಕೆ ಅನಿವಾರ್ಯವಾಗಿ ಲ್ಯಾಕ್ಟೋಜನ್‌ ಕುಡಿಸಬೇಕಾಗುತ್ತದೆ. ಇದು ತೀರಾ ಸಾಮಾನ್ಯ. ಕೆಲವೊಮ್ಮೆ ಸ್ವಲ್ಪ ಹಾಲಿದ್ದರೂ ಅದು ಮಗುವಿನ ಹೊಟ್ಟೆತುಂಬಿಸುವಷ್ಟಿರುವುದಿಲ್ಲ. ಮೂರು ದಿನಗಳಿಗೆಲ್ಲ ಹಾಲು ತುಂಬಿಕೊಳ್ಳುತ್ತದೆ. ಮಗು ಹೊಟ್ಟೆತುಂಬ ಹಾಲು ಕುಡಿದು ನಿದ್ರಿಸುತ್ತದೆ.

ಇನ್ನೊಂದು ಚಾಲೆಂಜ್‌: ನರ್ಸ್‌ ಹೇಳಿದಂತೆ ಮೂರು ದಿನಕ್ಕೆಲ್ಲ ಎದೆಹಾಲೇನೋ ಬಂತು. ಆದರೆ ಮಗುವಿಗೆ ಹಾಲುಣಿಸುವುದೂ ಒಂದು ಸ್ಕಿಲ್‌. ಅಲ್ಲೀವರೆಗೆ ಅಷ್ಟುಚಿಕ್ಕ ಮಗುವನ್ನು ಹತ್ತಿರದಿಂದ ನೋಡಿಯೂ ಗೊತ್ತಿಲ್ಲದ ಈ ಕಾಲದ ಹೆಣ್ಣಿಗೆ ಹಾಲುಣಿಸೋದು ದೊಡ್ಡ ಸರ್ಕಸ್ಸು. ನರ್ಸ್‌ಗಳು ಬಂದು ಎದೆಹಾಲುಣಿಸುವ ಟೆಕ್ನಿಕ್‌ ಹೇಳಿಕೊಟ್ಟರೂ ಇನ್ನೊಂದು ಸಲ ಹಾಲುಣಿಸುವಾಗ ಮತ್ತೆ ಅವರ ಕೈಯಲ್ಲಿ ಬೈಸಿಕೊಳ್ಳಬೇಕು. ಎದೆ ನೋವಾಗುವುದು, ಈ ನೋವನ್ನು ಹೇಳಿಕೊಂಡರೆ ಅವರದನ್ನು ಉಡಾಫೆ ಮಾಡೋದೇ ಹೆಚ್ಚು. ಎಲ್ಲರ ಗಮನ ಹೊಸ ಎಂಟ್ರಿ ಕೊಟ್ಟಮಗುವಿನೆಡೆಗೆ. ಕ್ರಮೇಣ ನೀವೆಂಥಾ ದಡ್ಡಿಯಾಗಿದ್ರೂ ಎದೆ ಹಾಲೂಡಿಸೋದು ಅಭ್ಯಾಸ ಆಗುತ್ತೆ.

ಸಾರ್ವಜನಿಕ ಸ್ತನಪಾನ ಕುರಿತ ಕಳಂಕ ತೊಡೆಯಲು ಫೋಟೋ ಅಭಿಯಾನ

ಹೀಗಿರಲಿ ಎದೆಹಾಲುಣಿಸುವ ಭಂಗಿ: ಮಗುವಿನ ದೇಹ ನೇರವಾಗಿರಲಿ. ಅದೇ ಭಂಗಿಯಲ್ಲಿ ತಾಯಿಯ ದೇಹದ ಹತ್ತಿರಕ್ಕೆ ತರಬೇಕು. ಹೆಚ್ಚಿನವರು ಮಗುವಿನ ಕತ್ತು ಮತ್ತು ಭುಜದ ಭಾಗವನ್ನೆತ್ತಿ ಹಾಲುಣಿಸಲು ಟ್ರೈ ಮಾಡುತ್ತಾರೆ. ಇದು ಸರಿಯಾದ ಭಂಗಿಯಲ್ಲ. ಇಡೀ ಮಗುವಿನ ದೇಹವನ್ನು ಆಧರಿಸಿ ಹಿಡಿಯಬೇಕು. ಆಗ ಹಾಲುಣಿಸುವುದು ಸುಲಭವಿರುತ್ತದೆ.

2. ನಿದ್ದೆಯೆಂಬ ಕನಸುಗುದುರೆ

ಗರ್ಭಿಣಿಯಾಗಿದ್ದಾಗ ಅಮ್ಮ, ಅತ್ತೆಯರು ಪದೇ ಪದೇ ಹೇಳುತ್ತಿದ್ದ ಮಾತು- ಈಗ ಎಷ್ಟುನಿದ್ದೆ ಮಾಡ್ತಿಯೋ ಮಾಡು, ಆಮೇಲೆ ಆಗಲ್ಲ. ಹಾಗಂತ ನಿದ್ದೆ ಮಾಡು ಅಂದ್ರೆ ನಿದ್ದೆ ಬರಬೇಕಲ್ಲಾ. ಆದರೆ ಒಮ್ಮೆ ಮಗಳು ಹುಟ್ಟಿದಳೋ ಅತೀ ಹೆಚ್ಚು ಆಸೆಯಾಗೋದು ಒಂದಿಡೀ ರಾತ್ರಿ ಸಂಪೂರ್ಣ ಕತ್ತಲಲ್ಲಿ ಗಾಢ ನಿದ್ದೆ ಮಾಡಬೇಕು ಅನ್ನೋದು. ಇವೆರಡೂ ಸಾಧ್ಯವಾಗಲು ಕನಿಷ್ಠ ಮೂರ್ನಾಲ್ಕು ತಿಂಗಳು, ಗರಿಷ್ಠ ಒಂದೂವರೆ ವರ್ಷ ಬೇಕು. ಮಗುವಿಗೆ ರಾತ್ರಿ, ಹಗಲುಗಳೆಲ್ಲ ಒಂದೇ. ರಾತ್ರಿ ಇನ್ನೇನು ತಾಯಿಗೆ ನಿದ್ರೆ ಹತ್ತಿತು ಅನ್ನುವಾಗ ಉಚ್ಚೆ ಮಾಡಿ ಎದ್ದು ಅತ್ತು ಎದೆಹಾಲೂಡಿಸಿಕೊಂಡು ಆಟ ಆಡುತ್ತಾ ಇದ್ದು ಬಿಡುತ್ತದೆ. ತಾಯಿ ಕಣ್ಣು ಮುಚ್ಚಿದರೆ ಮತ್ತೆ ಅಳು. ಆ ಹೊತ್ತಿಗೆ ಮಗು ಪರಮಶತ್ರುವಿನ ಹಾಗೆ ಕಾಣೋದಿದೆ. ಕೆಲವು ಮಕ್ಕಳು ಮಾತ್ರ ನಿದ್ದೆಯಲ್ಲೇ ಒಮ್ಮೆ ಕೊಸ ಕೊಸ ಮಾಡಿ ಅಮ್ಮನನ್ನು ಎಬ್ಬಿಸಿ ಹಾಲು ಕುಡಿದು ಮತ್ತೆ ನಿದ್ದೆಗೆ ಶರಣಾಗುತ್ತವೆ. ತೀರಾ ಕೆಲವರಷ್ಟೇ ಇಂಥಾ ಭಾಗ್ಯವಂತರು.

ಈ ಪ್ರಯೋಗ ಮಾಡಬಹುದು: ಮಗುವಿಗೆ ರಾತ್ರಿ ಹೊಟ್ಟೆತುಂಬ ಹಾಲು ಕುಡಿಸಿ ಬೆಚ್ಚನೆಯ ಹೊದಿಕೆ ಹೊದೆಸಿ ಸಂಪೂರ್ಣ ಕಂಫರ್ಟ್‌ ವಾತಾವರಣ ನಿರ್ಮಿಸಿ ಮಲಗಿಸಿದರೆ ಮಗು ಹೆಚ್ಚು ಕಿರಿ ಕಿರಿ ಮಾಡಲ್ಲ. ಕೆಲವು ಮಕ್ಕಳು ಹಗಲಿಡೀ ಮಲಗಿ ರಾತ್ರಿಯಿಡೀ ಎಚ್ಚರಿರುತ್ತವೆ. ಇದಕ್ಕೆ ಕೆಲವರು ಹಗಲು ಕತ್ತಲೆ ಮಾಡುತ್ತಾರೆ. ರಾತ್ರಿ ಫುಲ್‌ ಲೈಟ್‌ ಹಾಕಿ ಬೆಳಗಿನ ಭ್ರಮೆ ಹುಟ್ಟಿಸುತ್ತಾರೆ. ಕೆಲವೊಮ್ಮೆ ಈ ಟ್ರಿಕ್‌ಗಳು ವರ್ಕೌಟ್‌ ಆಗುತ್ತವೆ. ಏನೇ ಮಾಡಿದರೂ ಎರಡು ಮೂರು ಗಂಟೆಗೊಮ್ಮೆ ಎದ್ದು ಹಾಲೂಡಿಸುವುದು ತಪ್ಪೋದಿಲ್ಲ. ತೀರಾ ಸುಸ್ತಾದಾಗ ಎದೆಹಾಲನ್ನು ಪಂಪ್‌ ಮಾಡಿ ಸ್ಟೋರ್‌ ಮಾಡಿಟ್ಟು ಗಂಡನಿಗೆ ಮಗುವಿನ ಜವಾಬ್ದಾರಿ ಹೊರಿಸಿ ಈಕೆ ಕೆಲವೊಂದು ರಾತ್ರಿಯಾದರೂ ನಿದ್ದೆ ಮಾಡೋ ಟ್ರೆಂಡ್‌ ಈಗ ಶುರುವಾಗಿದೆ.

ಮಕ್ಕಳು ಎದೆಹಾಲು ಕುಡಿಯುವುದನ್ನು ಬಿಡುತ್ತಿಲ್ವಾ? ಹಾಗಾದ್ರೆ ಹೀಗ್ಮಾಡಿ! 

3. ಎದೆಹಾಲಿನ ಸಮಸ್ಯೆ

ಎದೆಹಾಲು ಹೆಚ್ಚಾದರೆ ಬಟ್ಟೆಯಿಂದಾಚೆ ಹರಿದು ಬಂದು ಕಿರಿಕಿರಿಯಾಗೋದಿದೆ. ಮಗುವು ಹೊಟ್ಟೆತುಂಬ ಹಾಲು ಕುಡಿದ ಮೇಲೆ ಎದೆಯಲ್ಲಿ ಸಾಕಷ್ಟುಹಾಲು ಮಿಗುತ್ತದೆ. ಆ ಹಾಲು ಹೊರ ಚಿಮ್ಮಿ ಹರಿದುಹೋಗಿ ಬಟ್ಟೆಎಲ್ಲಾ ಒದ್ದೆ ಆಗೋದಿದೆ. ಉದ್ಯೋಗಿಗಳಿಗೆ ಹೀಗಾದರೆ ತೀರ ಇರಿಸು ಮುರಿಸು. ಮನೆಯಲ್ಲಿರುವವರಿಗೂ ಎಲ್ಲರೆದುರು ಮುಜುಗರ. ಆದರೆ ಇದು ಒಳ್ಳೆಯದು. ಬದಲಾಗಿ ಹೆಚ್ಚಾದ ಹಾಲು ಎದೆಯಲ್ಲೇ ಹೆಪ್ಪುಗಟ್ಟಿಕೆಲವರಿಗೆ ಕೀವಾಗೋದೂ ಇದೆ. ಹೀಗಾದರೆ ಕ್ರಮೇಣ ಎದೆ ಹಾಲು ಬತ್ತಿ ಮಗುವಿಗೆ ಹಾಲಿಲ್ಲದೇ ಹೋಗಬಹುದು. ಕೆಲವರಿಗೆ ಸಹಜವಾಗಿಯೇ ಎದೆ ಹಾಲು ಕಡಿಮೆ ಇರುತ್ತದೆ.

ಎದೆಹಾಲು ಕಡಿಮೆಯಾಗಿರೋದರ ಸೂಚನೆ ಇದು: ತನಗೆ ಸಾಕಷ್ಟುಹಾಲು ಸಿಗದೇ ಮಗುವಿಗೆ ಕಿರಿಕಿರಿಯಾಗಿ ಅದು ಇಡೀ ದಿನ ಅಳುತ್ತಾ ಇರಬಹುದು. ತಾಯಿಗೆ ಎದೆನೋವು ಬರೋದು, ಎದೆ ಹಾಲುಣಿಸುವಾಗ ಕಿರಿಕಿರಿಯಾಗಬಹುದು. ಪಾಪು ಆಗಾಗ ಹಾಲಿಗಾಗಿ ಅಳಬಹುದು. ಕೆಲವೊಮ್ಮೆ ಅಮ್ಮನಿಗೆ ಎದೆ ಖಾಲಿಯಾದಂಥಾ ಅನುಭವವೂ ಆಗುತ್ತೆ.

ಎದೆ ಹಾಲು ಹೆಚ್ಚಿಸೋ ಆಹಾರಗಳು: ದಿನದಲ್ಲಿ ಹೆಚ್ಚೆಚ್ಚು ಹಾಲು, ನೀರು ಕುಡಿಯುತ್ತಾ ಇರಬೇಕು. ಹಣ್ಣುಗಳ ಜ್ಯೂಸ್‌ ಕುಡಿಯೋದೂ ಬೆಸ್ಟ್‌. ನೀರಿನಂಶ ಹೇರಳವಾಗಿರುವ ಹಣ್ಣುಗಳನ್ನು ಹೆಚ್ಚೆಚ್ಚು ಸೇವಿಸಬಹುದು. ಸಬ್ಬಸ್ಸಿಗೆ ಸೊಪ್ಪಿನ ತಂಬುಳಿ ಮಾಡಿ ತಿನ್ನೋದು ಎದೆಹಾಲು ಹೆಚ್ಚಲು ಬೆಸ್ಟ್‌ ಅಂತಾರೆ ಹಿರಿಯರು. ಮೆಂತ್ಯ ಬಳಸಿದರೆ, ಸೋಂಪಿನ ಸೇವನೆ ಮಾಡಿದರೆ, ಹೆಚ್ಚೆಚ್ಚು ಸೊಪ್ಪುಗಳ ಸೇವನೆ, ಕ್ಯಾರೆಟ್‌ ಜ್ಯೂಸ್‌ ಇತ್ಯಾದಿಗಳ ಸೇವನೆಯಿಂದ ಎದೆಹಾಲು ಹೆಚ್ಚುತ್ತದೆ ಎನ್ನುತ್ತಾರೆ. ಆದರೆ ಇವುಗಳನ್ನು ತಿಂದರೂ ಬೇರೆ ಕಾರಣಕ್ಕೆ ಎದೆಹಾಲು ಹೆಚ್ಚದೇ ಹೋಗಬಹುದು. ಆಗ ಮಗುವಿಗೆ ಹೊರಗಿನ ಆಹಾರ ನೀಡೋದು ಅನಿವಾರ್ಯವಾಗುತ್ತದೆ.

ಸಾರ್ವಜನಿಕ ಸ್ಥಳದಲ್ಲಿ ಹಾಲುಣಿಸಿ ಭೇಷ್ ಎಂದೆನಿಸಿಕೊಂಡ ತಾಯಂದಿರು! 

4. ಎದೆನೋವು, ಹಿಂಸೆ

ಹೆಚ್ಚಿನವರು ಈ ನೋವುಗಳನ್ನು ಹೇಳಿಕೊಳ್ಳಲ್ಲ. ಮಗು ದಿನವಿಡೀ ಹಾಲು ಕುಡಿದು ಎದೆತೊಟ್ಟಿನ ಭಾಗದಲ್ಲಿ ಗಾಯವಾಗಿರುತ್ತೆ. ಇದಕ್ಕಾಗಿ ಮಗುವಿಗೆ ಹಾಲುಣಿಸುವಾಗ ಎದೆತೊಟ್ಟಿನ ಭಾಗಕ್ಕೆ ಹಾಕುವ ನಿಪ್ಪಲ್‌ ಗಳು ಸಿಗುತ್ತವೆ. ಅದನ್ನು ಹಾಕಿದರೆ ಮಗುವಿಗೆ ಕಿರಿಕಿರಿಯಾಗಿ ಅದು ಹಾಲು ಕುಡಿಯದೇ ಹಠ ಮಾಡೋದು ಇದೆ. ಮಗುವಿಗೆ ಹಲ್ಲುಗಳು ಬರಲಾರಂಭಿಸಿದ ಮೇಲಂತೂ ಅದರ ಹಲ್ಲು ತಾಗಿ ಸ್ತನಗಳಲ್ಲಿ ಗಾಯವಾಗುತ್ತೆ. ಈ ಬಗೆಯ ನೋವುಗಳಿಗೆ ಮುಲಾಮು ಹಚ್ಚೋ ಹಾಗಿಲ್ಲ. ಅದನ್ನು ನಿವಾರಿಸುವ ಕೆಲವು ಕ್ರಮಗಳಿವೆ.

ಹೀಗೂ ಮಾಡಬಹುದು- ಮಗು ಹಾಲು ಕುಡಿದ ಬಳಿಕ ಎದೆಭಾಗವನ್ನು ಹದವಾದ ಬಿಸಿ ನೀರಲ್ಲಿ ತೊಳೆದು, ಪಸೆ ಉಳಿಯದ ಹಾಗೆ ಒರೆಸೋದು. ಬಳಿಕ ತುಪ್ಪ ಅಥವಾ ರುಬ್ಬಿದ ಕಾಳುಮೆಣಸಿನ ಪೇಸ್ಟ್‌ ಹಚ್ಚಿ ಒಣಗಲು ಬಿಡುವುದು. ಮತ್ತೆ ಚೆನ್ನಾಗಿ ಹದ ಬಿಸಿನೀರಲ್ಲಿ ತೊಳೆದು ಪಸೆ ಉಳಿದ ಹಾಗೆ ಒರೆಸೋದು. ಈ ಕ್ರಮ ಹಾಲೂಡುವಾಗ ಆಗುವ ಎದೆನೋವನ್ನು ಕಡಿಮೆ ಮಾಡುತ್ತೆ.

click me!