35 ವರ್ಷದ ಮಹಿಳೆಯೊಬ್ಬರು ಜಬುಜಾ ನದಿ ತೀರದಲ್ಲೇ ಅವಳಿಗಳಿಗೆ ಜನ್ಮ ನೀಡಿದ ವಿಸ್ಮಯ ಘಟನೆ ಉತ್ತರಾಖಂಡ್ ಜಿಲ್ಲೆಯ ಪಿತೋರ್‌ಗಢದಲ್ಲಿ ನಡೆದಿದೆ. ಆದರೆ ಅವಳಿಗಳಲ್ಲಿ ಒಂದು ಮಗು ಜನ್ಮ ನೀಡುವ ಸಮಯದಲ್ಲೇ ತೀರಿಕೊಂಡಿದೆ.
ಪಿತೋರ್‌ಗಢ: 35 ವರ್ಷದ ಮಹಿಳೆಯೊಬ್ಬರು ಜಬುಜಾ ನದಿ ತೀರದಲ್ಲೇ ಅವಳಿಗಳಿಗೆ ಜನ್ಮ ನೀಡಿದ ವಿಸ್ಮಯ ಘಟನೆ ಉತ್ತರಾಖಂಡ್ ಜಿಲ್ಲೆಯ ಪಿತೋರ್‌ಗಢದಲ್ಲಿ ನಡೆದಿದೆ. ಆದರೆ ಅವಳಿಗಳಲ್ಲಿ ಒಂದು ಮಗು ಜನ್ಮ ನೀಡುವ ಸಮಯದಲ್ಲೇ ತೀರಿಕೊಂಡಿದೆ. ಉಳಿದ ಮಗು ಹಾಗೂ ತಾಯಿ ಆರೋಗ್ಯವಾಗಿದ್ದಾರೆ ಎಂದು ಆಶಾ ಕಾರ್ಯಕರ್ತೆಯೊಬ್ಬರು ಮಾಹಿತಿ ನೀಡಿದ್ದಾರೆ. ಮಹಿಳೆ ವಾಸವಿದ್ದ ಮನೆಗೆ ಸಮೀಪದಲ್ಲೇ ಆಸ್ಪತ್ರೆ ಸೌಲಭ್ಯ ಇಲ್ಲದ ಕಾರಣ ಹಾಗೂ ಮನೆಯಿಂದ ಆಸ್ಪತ್ರೆಗೆ ತಲುಪಲು ವಾಹನ ಸಂಪರ್ಕವೂ ಸರಿಯಾಗಿ ಇಲ್ಲದ ಕಾರಣ ಈ ಘಟನೆ ನಡೆದಿದೆ.
ಈಗಾಗಲೇ ಹೆರಿಗೆ ನೋವು ಕಾಣಿಸಿಕೊಂಡ ತುಂಬು ಗರ್ಭಿಣಿ ಮಹಿಳೆಯನ್ನು ವಾಹನ ಬರುವಲ್ಲಿವರೆಗೆ ಗ್ರಾಮಸ್ಥರು ಹಾಗೂ ಮನೆಯವರು ಸೇರಿ ಡೋಲಿಯಲ್ಲಿ ಮಲಗಿಸಿ ಕರೆದುಕೊಂಡು ಹೋಗುತ್ತಿರಬೇಕಾದರೆ ಮಾರ್ಗಮಧ್ಯೆಯೇ ನದಿ ತೀರದಲ್ಲಿ ಮಹಿಳೆ ಅವಳಿಗಳಿಗೆ ಜನ್ಮ ನೀಡಿದರೆ ಅದರಲ್ಲಿ ಒಂದು ಮಗು ಹುಟ್ಟುವಾಗಲೇ ಸಾವನ್ನಪ್ಪಿದೆ. ಹೇಮಾ ದೇವಿ ಎಂಬುವವರೇ ನದಿ ತೀರದಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ. ರೈಸ್ಪತ ಗ್ರಾಮದವರಾದ ಹೇಮಾ ಅವರನ್ನು ಆಶಾ ಕಾರ್ಯಕರ್ತೆ ಹಾಗೂ ಗ್ರಾಮಸ್ಥರು ರಸ್ತೆ ಸಂಪರ್ಕ ಇರುವ ಪುಲಿಬೆಂಡ್ ಎಂಬ ಪ್ರದೇಶಕ್ಕೆ ಕರೆದುಕೊಂಡು ಬರಲು ಮುಂದಾಗಿದ್ದಾರೆ.
22 ದಿನಗಳ ಅಂತರದಲ್ಲಿ ಜನಿಸಿದ ಅವಳಿ, ಅಪರೂಪದಲ್ಲಿ ಅಪರೂಪದ ಪ್ರಕರಣವಿದು!
ಈ ರೈಸ್ಪತ ಗ್ರಾಮವೂ ದಟ್ಟ ಅರಣ್ಯದೊಳಗೆ ಇದ್ದು, ಅಲ್ಲಿಂದ ವಾಹನ ಸಂಚಾರವಿರುವ ಪುಲಿಬೆಂಡ್ ಎಂಬ ಸ್ಥಳಕ್ಕೆ ಬರಲು ಆರು ಕಿಲೋ ಮೀಟರ್ ಕಾಲ್ನಡಿಗೆಯಲ್ಲೇ ನಡೆಯಬೇಕು. ಅಲ್ಲಿಂದ ವಾಹನದಲ್ಲಿ ಗೌಚೇರ್ ಎಂಬ ಪ್ರದೇಶದಲ್ಲಿರುವ ಆಸ್ಪತ್ರೆಗೆ ವಾಹನದಲ್ಲಿ ಹೋಗುವುದಕ್ಕೆ ಕುಟುಂಬದವರು ಹಾಗೂ ಗ್ರಾಮಸ್ಥರು ಯೋಜನೆ ರೂಪಿಸಿದ್ದರು. ಅಲ್ಲಿ ಸ್ತ್ರೀರೋಗ ತಜ್ಞರು ಹಾಗೂ ಇತರ ವೈದ್ಯಕೀಯ ಸೌಲಭ್ಯವಿತ್ತು. ಆದರೆ ಮಾರ್ಗಮಧ್ಯದಲ್ಲೇ ಹೇಮಾ ದೇವಿ ಅವರಿಗೆ ಹೆರಿಗೆ ನೋವು ಜೋರಾಗಿದ್ದು, ಹೀಗಾಗಿ ಸಮೀಪದ ನದಿ ತೀರದಲ್ಲೇ ಅವರು ಮಗುವಿಗೆ ಜನ್ಮ ನೀಡಬೇಕಾಗಿ ಬಂದಿದೆ. ಆದರೆ ದುರಾದೃಷ್ಟವಶಾತ್ ಅವಳಿಗಳಲ್ಲಿ ಒಂದು ಮಗು ಸಾವನ್ನಪ್ಪಿದ್ದು, ಇನ್ನೊಂದು ಮಗು ಹಾಗೂ ತಾಯಿ ಆರೋಗ್ಯವಾಗಿದ್ದಾರೆ ಎಂದು ಹೆರಿಗೆಗೆ ಸಹಕರಿಸಿದ ಆಶಾ ಕಾರ್ತಕರ್ತೆ ಪುಷ್ಪಾದೇವಿ ಹೇಳಿದ್ದಾರೆ.
2009ರಿಂದಲೂ ಈ ಮಹಿಳೆ ವಾಸ ಮಾಡುವ ರೈಸ್ಪತ ಗ್ರಾಮದ ಜನ ತಮ್ಮ ಗ್ರಾಮಕ್ಕೆ ರಸ್ತೆಯೊಂದನ್ನು ಮಾಡಿಕೊಡುವಂತೆ ಕೇಳುತ್ತಲೇ ಬಂದಿದ್ದಾರೆ. ಆದರೆ ಇದುವರೆಗೂ ಈ ಗ್ರಾಮಕ್ಕೆ ರಸ್ತೆ ಸೌಕರ್ಯ ಆಗಿಲ್ಲ ಎಂದು ಗ್ರಾಮದ ನಿವಾಸಿ ಜೀವನ್ ಎಂಬುವವರು ಹೇಳಿದ್ದಾರೆ. ರಸ್ತೆ ಇಲ್ಲದಿದ್ದರೆ ಎಷ್ಟೊಂದು ಕಷ್ಟ ಎಂಬುದಕ್ಕೆ ಈ ಘಟನೆ ಸ್ಪಷ್ಟ ನಿದರ್ಶನವಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ವಿಜಯಪುರ ಜಿಲ್ಲಾಸ್ಪತ್ರೆ ವೈದ್ಯ ಸಿಬ್ಬಂದಿ ಯಡವಟ್ಟು, ನರಳಿ ನರಳಿ ಪ್ರಾಣಬಿಟ್ಟ ಬಾಣಂತಿ: ಅವಳಿ ಮಕ್ಕಳು ಅನಾಥ..!