ವಿದೇಶದಿಂದ ಆಮದಿಗೆ ಹಣ ಇಲ್ಲ, ಲಂಕಾಕ್ಕೆ ಆರ್ಥಿಕ ತುರ್ತು ಪರಿಸ್ಥಿತಿ!

Sep 2, 2021, 2:51 PM IST

ಕೊಲಂಬೋ(ಸೆ.02): ಕೋವಿಡ್‌ ನೀಡಿದ ಆರ್ಥಿಕ ಶಾಕ್‌ನಿಂದ ಇನ್ನೂ ಚೇತರಿಸಿಕೊಳ್ಳದ ನೆರೆಯ ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಇದೀಗ ಆಹಾರ ವಸ್ತುಗಳ ಬೆಲೆ ಗಗನಕ್ಕೇರಿದೆ. ಹೀಗಾಗಿ ಬೇರೆ ದಾರಿ ಕಾಣದ ಸರ್ಕಾರ, ಜನಸಾಮಾನ್ಯರನ್ನು ರಕ್ಷಿಸುವ ಸಲುವಾಗಿ ಆರ್ಥಿಕ ತುರ್ತು ಪರಿಸ್ಥಿತಿ ಘೋಷಿಸಿದೆ. ಹೀಗಾಗಿ ಅಕ್ಕಿ, ಸಕ್ಕರೆ ಸೇರಿದಂತೆ ಜೀವನಾವಶ್ಯಕ ವಸ್ತುಗಳನ್ನು ಸರ್ಕಾರವೇ ಪಡಿತರ ವ್ಯವಸ್ಥೆಯ ಮೂಲಕ ಅಗ್ಗದ ದರದಲ್ಲಿ ಮಾರಾಟ ಮಾಡಲಿದೆ.

ಒಂದು ವೇಳೆ ಈ ವಸ್ತುಗಳನ್ನು ಯಾರಾದರೂ ಅಕ್ರಮವಾಗಿ ಸಂಗ್ರಹಿಸಿದ್ದು ಕಂಡುಬಂದಲ್ಲಿ ಅದನ್ನು ವಶಪಡಿಸಿಕೊಂಡು ಅವರನ್ನು ಬಂಧಿಸುವ ಅಧಿಕಾರವನ್ನು ಸೇನೆಗೆ ನೀಡಲಾಗಿದೆ. ಹೀಗಾಗಿ ಕಳೆದ ಹಲವು ತಿಂಗಳಿನಿಂದ ಅಗತ್ಯ ವಸ್ತುಗಳ ದರ ಗಗನಕ್ಕೇರಿ ಜೀವನವೇ ದುಸ್ತರವಾಗಿದ್ದ ದೇಶದ ಜನತೆ ತುಸು ನಿಟ್ಟುಸಿರು ಬಿಡುವಂತಾಗಿದೆ.