ಪ್ರಜ್ವಲ್‌ ರೇವಣ್ಣ ಕೇಸ್‌ಗೂ ಪ್ರಧಾನಿ ಮೋದಿಗೂ ಏನು ಸಂಬಂಧ?: ಎಚ್‌.ಡಿ.ಕುಮಾರಸ್ವಾಮಿ

First Published May 5, 2024, 6:23 AM IST

ಹಾಸನದ ಪ್ರಕರಣವನ್ನು ಕಾಂಗ್ರೆಸ್ಸಿಗರು ಪ್ರಧಾನಿಗೆ ತಳಕು ಹಾಕುತ್ತಿದ್ದಾರೆ. ಈ ಪ್ರಕರಣಕ್ಕೂ ಪ್ರಧಾನಿಗೂ ಏನು ಸಂಬಂಧ? ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು. 

ಕಲಬುರಗಿ (ಮೇ.05): ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಂತ್ರಸ್ತೆಯೊಬ್ಬಳು ನ್ಯಾಯಾಧೀಶರ ಮುಂದೆ ನಾಲ್ಕು ಗೋಡೆಗಳಲ್ಲಿ ನೀಡಿದ ಹೇಳಿಕೆಯೂ ಸೋರಿಕೆಯಾಗುತ್ತಿದೆ. ಇದು ಹೇಗೆ ಸಾಧ್ಯ? ಪ್ರಜ್ವಲ್‌ ರೇವಣ್ಣ ಅವರ ವಿರುದ್ಧದ ತನಿಖೆ ದಾರಿ ತಪ್ಪುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು. 
 

ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಸರ್ಕಾರಕ್ಕೆ ಈ ಪ್ರಕರಣದಲ್ಲಿ ಸರಿಯಾದ ರೀತಿಯಲ್ಲಿ ತನಿಖೆ ಮಾಡುವುದಕ್ಕಿಂತ ತಾವು ಏನೆಲ್ಲ ಮಾಡುತ್ತಿದ್ದೇವೆಂದು ಟಾಂಟಾಂ ಮಾಡುವ ಉದ್ದೇಶವೇ ಹೆಚ್ಚಾಗಿದೆ ಅನ್ನಿಸುತ್ತಿದೆ ಎಂದರು. ಸಂತ್ರಸ್ತೆಯೊಬ್ಬಳ ಹೇಳಿಕೆಯನ್ನು ನ್ಯಾಯಾದೀಶರ ಮುಂದೆ ನಾಲ್ಕು ಗೋಡೆಗಳಲ್ಲಿ ಪಡೆಯಲಾಗುತ್ತದೆ, 

ಅದೆಲ್ಲವೂ ಹೇಗೆ ಬಹಿರಂಗವಾಯ್ತು? ಇಂತಹ ಸೂಕ್ಷ್ಮ ಪ್ರಕರಣಗಳಲ್ಲಿ ತನಿಖೆ ನಡೆಸುವವರೂ ವೃತ್ತಿಪರತೆಯಿಂದ ಕೆಲಸ ಮಾಡಬೇಕೇ ಹೊರತು ತನಿಖಾ ವಿವರಗಳನ್ನೆಲ್ಲ ಟಾಂಟಾಂ ಮಾಡಿದರೆ ಹೇಗೆ? ಇಂತಹ ವಿವರಗಳೆಲ್ಲವೂ ಸೋರಿಕೆ ಮಾಡುತ್ತಿರುವುದು ಯಾರು? ಗೃಹ ಸಚಿವರೇ ಉತ್ತರಿಸಲಿ ಎಂದರು. 
 

ಸಂತ್ರಸ್ತೆಯ ಹೇಳಿಕೆಯ ರಹಸ್ಯವನ್ನೇ ಕಾಪಾಡುತ್ತಿಲ್ಲವೆಂದ ಮೇಲೆ ಎಸ್‌ಐಟಿ ತನಿಖೆ ದಾರಿ ತಪ್ಪುತ್ತಿದೆ ಎಂದೇ ತಾನೆ ಅರ್ಥ? ತನಿಖೆಯ ಅನೇಕ ಸಂಗತಿಗಳು ಸೋರಿಕೆಯಾಗುತ್ತಿರೋದು ಹೇಗೆ? ಯಾರು ಈ ಕೆಲಸ ಮಾಡುತ್ತಿದ್ದಾರೆ? ಸರ್ಕಾರಕ್ಕೆ ತನಿಖೆ ನಡೆಸುವುದಕ್ಕಿಂತ ಜನತೆಗೆ ಬೇರೇನೋ ತೋರಿಸಬೇಕಾಗಿದೆ ಎಂದರು. 

ಹಾಸನದ ಪ್ರಕರಣವನ್ನು ಕಾಂಗ್ರೆಸ್ಸಿಗರು ಪ್ರಧಾನಿಗೆ ತಳಕು ಹಾಕುತ್ತಿದ್ದಾರೆ. ಈ ಪ್ರಕರಣಕ್ಕೂ ಪ್ರಧಾನಿಗೂ ಏನು ಸಂಬಂಧ? ಕಾಂಗ್ರೆಸ್ಸಿಗರು ಹೇಳಿಕೆ ನೀಡಿ ಇಡೀ ಪ್ರಕರಣದ ದಿಕ್ಕು ತಪ್ಪಿಸುತ್ತಿದ್ದಾರೆ. ಪ್ರಕರಣದ ಎಸ್‌ಐಟಿ ತನಿಖೆ ನಡೆಸುವುದು ಅಂದರೆ ಹೀಗೇನಾ ಗೃಹ ಸಚಿವರೇ ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ತನಿಖೆಯ ಅನೇಕ ಸೂಕ್ಷ್ಮ ವಿಷಯಗಳು ಹೇಗೆ ಸೋರಿಕೆಯಾಗುತ್ತಿವೆ? ಎಂಬುದಕ್ಕೆ ಗೃಹ ಸಚಿವರು ಉತ್ತರ ನೀಡಬೇಕು ಎಂದರು.

click me!