ಕನ್ನಡ ಉಳಿವಿಗೆ ಪಣ ತೊಟ್ಟಿರೋ ಅನು, ಸ್ವಂತ ಖರ್ಚಿನಲ್ಲಿ ಶಾಲೆ, ದೇವಸ್ಥಾನ ಸ್ವಚ್ಚತಾ ಕಾರ್ಯ

Sep 27, 2022, 12:03 PM IST

ಮೂಲತಃ ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಚಿಕ್ಕಬೆರಗಿ ಗ್ರಾಮದ ಅನು, ಮಸ್ಕಿ ಪಟ್ಟಣದ ಮುರಾರ್ಜಿ ವಸತಿ ಶಾಲೆಯಲ್ಲಿ 2014ರಲ್ಲಿ ಎಸ್ಎಸ್ಎಲ್ಸಿ ಮುಗಿಸಿ ಸಿಂಧನೂರಿನ ಸಂಕೇತ ಕಾಲೇಜಿಗೆ ಪಿಯುಸಿ ಸೇರಿದ್ದರು. ಮೊದಲಿನಿಂದಲ್ಲೂ ಹೋರಾಟದ ಮನೋಭಾವ ಹೊಂದಿರುವ ಅನು, ಎಲ್ಲಾ ಹೆಣ್ಣು ಮಕ್ಕಳಂತೆ ಇರದೇ ಹುಡುಗರ ಡ್ರೆಸ್ ಧರಿಸಲು ಶುರು ಮಾಡಿದರು. ಹೀಗೆ 2016ರಲ್ಲಿ ಪಿಯುಸಿ ಮುಗಿಸಿದ ಅನುಗೆ ಮನೆಯಲ್ಲಿ ಮದುವೆ ಮಾಡಲು ತೀರ್ಮಾನಿಸಿದರು. ಆಗ ಮನೆಯಲ್ಲಿ ಅಕ್ಕಂದಿರ ನೋವುಗಳನ್ನ ಕಂಡ ಅನು, 2018ರಲ್ಲಿ ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಬಂದರು. ಬೆಂಗಳೂರಿನ ಹಂಪಿ ನಗರಕ್ಕೆ ಬಂದ ಅನು, ಸ್ನೇಹಿತರ ಸಲಹೆ ಮತ್ತು ಸಹಾಯದಿಂದ ಪಿಜಿಯಲ್ಲಿ ಉಳಿದುಕೊಂಡು ಬೆಂಗಳೂರಿನ ಮಹಾರಾಣಿ ಕಾಲೇಜಿಗೆ 2018ರಲ್ಲಿ ಬಿಎ ಪದವಿಗೆ ಪ್ರವೇಶ ಪಡೆದು, ಈಗ ಬಿಎ ಅಂತಿಮ ವರ್ಷದಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. 

ಬಡ ರೈತ ಕುಟುಂಬದಲ್ಲಿ ಬೆಳೆದ ಅನು ತಂದೆ ತಾಯಿಗೆ ಮೂರನೇ ಮಗಳು..ಮನೆಯಲ್ಲಿ ನಡೆದ ಅಕ್ಕನ ಮತ್ತು ತಂಗಿಯ ಮದುವೆ ಅನು ಮನಸ್ಸಿಗೆ ಬಹಳ ನೋವು ತಂದಿತ್ತು. ಇದರಿಂದಾಗಿ ಅನು ಸರಕಾರಿ ಶಾಲೆಗಳಿಗೆ (Government school) ಕಾಯಕಲ್ಪ ನೀಡಬೇಕೆಂದು 2019ರಲ್ಲಿ ತುಮಕೂರು ಜಿಲ್ಲೆ ಕೊರಟಗೇರಿ ತಾಲೂಕಿನ ಲಿಂಗಾಪುರ ಗ್ರಾಮದ ಸರಕಾರಿ ಶಾಲೆಗೆ ಮೊದಲು ಸ್ವಂತ ಖರ್ಚಿನಲ್ಲಿ ಸುಣ್ಣ ಬಣ್ಣ ಬಳಿಯುವ ಮೂಲಕ ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆದರು.

ಪಡಿಕ್ಕಲ್ ಕನ್ನಡಾಭಿಮಾನ: ನಾವು ಕನ್ನಡಿಗರು, ಭಾರತಕ್ಕಾಗಿ ಆಡುವಾಗಲೂ ಕನ್ನಡದಲ್ಲೇ ಮಾತು!

ಅಲ್ಲಿಂದ ಈವರೆಗೆ ರಾಜ್ಯದ 19 ಜಿಲ್ಲೆಗಳಲ್ಲಿ ಸುತ್ತಾಟ ಮಾಡುತ್ತಾ 99 ಶಾಲೆಗಳಿಗೆ ಕಾಯಕಲ್ಪ ನೀಡಿ, ಮಂಡ್ಯ ಜಿಲ್ಲೆಯಲ್ಲಿ 100ನೇ ಸರಕಾರಿ ಶಾಲೆಗೆ ಕಾಯಕಲ್ಪ ನೀಡುವ ಯೋಜನೆಯನ್ನೂ ಅನು ಬಳಗ ಹಾಕಿಕೊಂಡಿದೆ. ಇಷ್ಟೇ ಅಲ್ಲದೆ ದೇವಸ್ಥಾನ (Temple), ಕಲ್ಯಾಣಿ, ಬಾವಿ, ಸ್ವಚ್ಛ ಭಾರತ ಅಭಿಯಾನ, ವೃದ್ಧಾಶ್ರಮ, ಕಾಡು ಬೆಳೆಸಿ ನಾಡು ಉಳಿಸಿ, ರುದ್ರಭೂಮಿ ಸ್ವಚ್ಛತೆ (Clean), ಧೂಳು ಮುಕ್ತ ಕರ್ನಾಟಕ ಸೇರಿ ನಾನಾ ಸಾಮಾಜಿಕ ಸೇವೆಯಲ್ಲಿ ನಿರತರಾಗಿದ್ದಾರೆ. ಅನು ಬಳಗದ ಕಾರ್ಯ ರಾಜ್ಯದ ಜನರಿಂದ ಬಾರೀ ಮೆಚ್ಚುಗೆ (Compliment) ಕೂಡ ವ್ಯಕ್ತವಾಗುತ್ತಿದೆ.

ಅನು ಕಾರ್ಯಕ್ಕೆ ಮೊದಲು ಹತ್ತಾರು ರೀತಿಯ ಅವಮಾನದ ಮಾತುಗಳು ಕೇಳಿಬರುತ್ತಿದ್ದವು. ಮನೆಯವರು ಸಹ ವಿರೋಧಿಸಿದ್ರು. ಆದ್ರೆ ಇತ್ತೀಚಿಗೆ ಫೇಸ್‌ಬುಕ್‌ ಪೇಜ್‌ನಲ್ಲಿ ಅನು ವಿಡಿಯೋ ನೋಡಿದ ಜನರು ಸಮಾಜ ಮುಖಿ ಕಾರ್ಯಕ್ಕೆ ಬೆಂಬಲ ಸೂಚಿಸುತ್ತಿದ್ದಾರೆ. ಅಲ್ಲದೆ ಅನು ಸಹ ತನ್ನ 12 ಜನರ ತಂಡ ಕಟ್ಟಿಕೊಂಡು ಯೋಧರಂತೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಕನ್ನಡ ಶಾಲೆಗಳನ್ನು ಉಳಿಸಿ, ಬೆಳೆಸಬೇಕು ಎಂಬುದೇ ನಮ್ಮ ಮುಖ್ಯ ಉದ್ದೇಶ. ಜೀವ ಇರೋ ತನಕ ಕನ್ನಡ ಶಾಲೆಗಳ (Kannada schools) ಉಳಿವಿಗೆ ನಾನು ಶ್ರಮಿಸುವೆ ಅಂತಾರೇ ಅನು

ಜಪಾನಿ ಜೋಡಿ ಬಾಯಲ್ಲಿ ಕನ್ನಡ ಹಾಡುಗಳು, ಜಬರ್‌ದಸ್ತ್ ಡ್ಯಾನ್ಸ್..!

ಒಟ್ಟಿನಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಹತ್ತಾರು ನೋವು ಅನುಭವಿಸಿದ ಅನು, ಈಗ ತನ್ನ ಸಮಾಜಮುಖಿ ಕೆಲಸಗಳಿಂದ ರಾಜ್ಯದ ಅಚ್ಚುಮೆಚ್ಚಿನ  ಅನು ಅಕ್ಕ ಆಗಿದ್ದಾರೆ. ಜೊತೆಗೆ  ಅನು ಹುಟ್ಟಿ ಬೆಳೆದ ಮನೆಯನ್ನು ಸಹ ಕರುನಾಡ ನಿಲಯ ಮಾಡಿ ರಾಷ್ಟ್ರಗೀತೆ ಸೇರಿದಂತೆ ಕನ್ನಡನಾಡಿನ ಕವಿಗಳ ಸಂದೇಶ ಬರೆಸಿ ಇತರೆ ಕನ್ನಡಿಗರಿಗೆ ಮಾದರಿ ಆಗಿದ್ದಾರೆ.