BIG3 :ಬಾಯ್ತೆರದು ಕಾಯುತ್ತಿದೆ ನಡಿಮನೆ ಕಿರುಸೇತುವೆ: ಕ್ಯಾರೆ ಅಂತಿಲ್ಲ ಅಧಿಕಾರಿಗಳು ..!

Mar 14, 2023, 3:20 PM IST

ಉತ್ತರಕನ್ನಡ ಜಿಲ್ಲೆ ಸಿದ್ಧಾಪುರ ತಾಲೂಕಿನ ಅಣಲೆಬೈಲ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಇಲ್ಲಿನ ಜನರು ನಿತ್ಯ ಜೀವ ಕೈಯಲ್ಲಿಡಿದು ಬದುಕುತ್ತಿದ್ದಾರೆ. ನಡಿಮನೆ ಕಿರುಸೇತುವೆ ಗೋಳಿಮಕ್ಕಿಯಿಂದ ನೆಬ್ಬೂರು ರಸ್ತೆ ಸಂಪರ್ಕ ಕಲ್ಪಿಸುವ ಸೇತುವೆ ಇದಾಗಿದ್ದು,ಈಗ ಆಗ ಕುಸಿದು ಬೀಳುವ ಸ್ಥಿತಿಯಲ್ಲಿದ್ದು ಇಲ್ಲಿನ ಜನರು ಬದುಕೋದಕ್ಕೂ ಭಯಪಡುವಂತಾಗಿದೆ.  ಸೇತುವೆಯನ್ನೇ ನಂಬಿಕೊಂಡು ಅಂಬೆಗಾರು, ಕ್ಯಾತನಮನೆ, ನಡಿಮನೆ, ನೆಬ್ಬೂರು, ಸೇರಿದಂತೆ ಹಲವು ಪ್ರದೇಶದ ಸುಮಾರು 80 ಕುಟುಂಬಗಳ 400ಕ್ಕೂ ಹೆಚ್ಚು ಜನರು ಜೀವನ ಸಾಗಿಸುತ್ತಿದ್ದು, ದಿನಗೂಲಿ, ಆಸ್ಪತ್ರೆ, ಕೋರ್ಟ್,  ಕಚೇರಿ, ಶಾಲಾ- ಕಾಲೇಜುಗಳಿಗೆ ಸಾಗಲು ಇದೇ ಪ್ರಮುಖ ಸೇತುವೆ. ಒಂದು ವೇಳೆ ಈ ಸೇತುವೆ ಕುಸಿದು ಬಿದ್ದಲ್ಲಿ ನೂರಾರು ಜನರ ಬದುಕು ಅತಂತ್ರವಾಗಲಿದ್ದು, ನಗರದ ಸಂಪರ್ಕವನ್ನೇ ಕಳೆದುಕೊಳ್ಳುವ ಭೀತಿ ಎದುರಾಗಿದೆ. 2005ರವರೆಗೂ ಜನರು ಅಡಿಕೆ ಮರದ ಸಂಕ ಮಾಡಿಕೊಂಡು ದಾಟುತ್ತಿದ್ದರು. ನಂತರ‌ ಜನರೇ ಸೇರಿಕೊಂಡು ಹಗ್ಗ ಕಟ್ಟಿ ತೂಗು ಸೇತುವೆ ನಿರ್ಮಾಣ ಮಾಡಿದ್ದರು. ಆದರೆ, ಅದು ಭಾರೀ ನೆರೆಗೆ ಕೊಚ್ಚಿಕೊಂಡು ಹೋಗಿತ್ತು. ನಂತರ ಶಾಸಕರ ಅನುದಾನದ 5 ಲಕ್ಷ ರೂಪಾಯಿಯಲ್ಲಿ ಹಾಗೂ ಜಿಲ್ಲಾ ಪಂಚಾಯತ್‌ನ 2 ಲಕ್ಷ ರೂ. ಸೇರಿ ಒಟ್ಟು 7 ಲಕ್ಷ ರೂಪಾಯಿ ಅನುದಾನದಲ್ಲಿ 80 ಮೀಟರ್ ಉದ್ದದ ಸೇತುವೆ ನಿರ್ಮಾಣವಾಗಿ 2008ರಲ್ಲಿ ಉದ್ಘಾಟನೆಗೊಂಡಿತ್ತು. ಆದರೆ, 2016-17 ಸಾಲಿನಲ್ಲಿ ಕಾಣಿಸಿಕೊಂಡಿದ್ದ ನೆರೆಯಿಂದ ಈ ಸೇತುವೆಗೆ  ಹಾನಿಯಾಗಿದ್ದು ಕಳಚಿ ಬೀಳುವ ಸ್ಥಿತಿಯಲ್ಲಿದೆ.