Hubballi Riot: ಗಲಭೆಕೋರರ ಹೆಡೆಮುರಿ ಕಟ್ಟಲು ಸಾಕ್ಷಿಗಳಾದವಾ ಆ 3 ವಿಡಿಯೋಗಳು..?

Apr 20, 2022, 12:30 PM IST

ಬೆಂಗಳೂರು (ಏ. 20): ವಾಣಿಜ್ಯ ರಾಜಧಾನಿ ಹುಬ್ಬಳ್ಳಿಯಲ್ಲಿ ಸಂಭವಿಸಿದ ಗಲಭೆ  (Hubballi Riot) ವೇಳೆ ಉದ್ರಿಕ್ತ ಜನರ ಗುಂಪು ಪ್ರಚೋದನಾಕಾರಿ ಘೋಷಣೆ ಕೂಗಿರುವ ಮತ್ತೆರಡು ವಿಡಿಯೋ ಇದೀಗ ವೈರಲ್‌ (Viral video) ಆಗಿವೆ. ‘ತಪ್ಪಿತಸ್ಥನಿಗೆ ಶಿರಚ್ಛೇದವೊಂದೇ ಶಿಕ್ಷೆ’ ಎಂದು ಉದ್ರಿಕ್ತರು ಘೋಷಣೆ ಕೂಗುತ್ತಿರುವುದು ಒಂದು ವಿಡಿಯೋದಲ್ಲಿದ್ದರೆ, ‘ಆರ್‌ಎಸ್‌ಎಸ್‌ ಮುರ್ದಾಬಾದ್‌’ಎಂಬ ಕೂಗು ಮತ್ತೊಂದು ವಿಡಿಯೋದಲ್ಲಿದೆ. ಇದೇ ವಿಡಿಯೋದಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆಯಾದ ಐಎಸ್‌ಐ (ISI) ಪರವೂ ಕೂಗಿರುವ ಆರೋಪವಿದ್ದು, ಐಎಸ್‌ಐ ಕುರಿತ ಘೋಷಣೆ ಅಸ್ಪಷ್ಟವಾಗಿದೆ.

ಮೌಲ್ವಿಯನ್ನು(Moulvi) ಹೋಲುತ್ತಿದ್ದ ವ್ಯಕ್ತಿಯೊಬ್ಬ ಪೊಲೀಸ್‌ ಕಾರಿನ ಮೇಲೆ ಹತ್ತಿ ಪ್ರಚೋದನಾಕಾರಿಯಾಗಿ ಮಾತನಾಡುತ್ತಿದ್ದ ವಿಡಿಯೋ ವೈರಲ್‌ ಆಗಿತ್ತು. ಇದೀಗ ವೈರಲ್‌ ಆಗಿರುವ ಎರಡೂವರೆ ನಿಮಿಷದ ವಿಡಿಯೋದಲ್ಲಿರುವ ಕೋಪೋದ್ರಿಕ್ತಗೊಂಡಿದ್ದ ಯುವಜನರ ಗುಂಪು ‘ತಪ್ಪಿತಸ್ಥನಿಗೆ ಏನು ಶಿಕ್ಷೆ, ಏನು ಶಿಕ್ಷೆ’ ಎಂದು ಕೂಗುತ್ತಿದ್ದರೆ, ಮತ್ತೊಂದು ಗುಂಪು ‘ಶಿರಚ್ಛೇದ ಮಾಡುವುದೊಂದೇ ಶಿಕ್ಷೆ’ ಎಂದು ಜೋರಾಗಿ ಕೂಗುತ್ತಿತ್ತು. ಹಲವರು ತಿಳಿ ಹೇಳುವ ಪ್ರಯತ್ನ ಮಾಡಿದರೂ ಕೇಳದ ಈ ಗುಂಪು ಹಲವಾರು ಬಾರಿ ಜೋರಾಗಿ ಕೂಗಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವಂತೆ ಮಾಡಲು ಯತ್ನಿಸುತ್ತಿದ್ದುದು ವಿಡಿಯೋದಲ್ಲಿ ದಾಖಲಾಗಿದೆ. ಇದು ಇದೀಗ ಮತ್ತಷ್ಟುಚರ್ಚೆಗೆ ಗ್ರಾಸವನ್ನುಂಟು ಮಾಡಿದೆ.