News Hour: ಕೈ-ಕಮಲ ಮಧ್ಯೆ ‘ಸಿಎಂ ಬದಲಾವಣೆ’ ಸಂಘರ್ಷ: 2ನೇ ದಿನವೂ ಕಾಂಗ್ರೆಸ್ ಸರಣಿ ಟ್ವೀಟಾಸ್ತ್ರ

Aug 10, 2022, 11:23 PM IST

ಬೆಂಗಳೂರು (ಆ. 10): ಬಿಜೆಪಿ-ಕಾಂಗ್ರೆಸ್ ಮಧ್ಯೆ ‘ಸಿಎಂ ಬದಲಾವಣೆ’ ಯುದ್ಧ ನಿಗಿನಿಗಿ ಕೆಂಡವಾಗಿದೆ. ‘3ನೇ ಸಿಎಂ ಸನ್ನಿಹಿತ’ ಎಂದು ನಿನ್ನೆ ಸರಣಿ ಪ್ರಕಾರ ಬೊಮ್ಮಾಯಿ ಬದಲಾವಣೆ ಎಂದು ಟ್ವಿಟರ್‌ನಲ್ಲೇ ಗುಲ್ಲೆಬ್ಬಿಸಿದ್ದ ಕಾಂಗ್ರೆಸ್ಸಿಗೆ ಬಿಜೆಪಿ ನಾಯಕರು ನೇರಾನೇರ ಚಾಟಿ ಬೀಸಿದ್ದರು. ಹಿಗ್ಗಾಮುಗ್ಗಾ ಜಾಡಿಸಿದ್ದರು. ಇಷ್ಟಾದರೂ ಸಿಎಂ ಬದಲಾವಣೆ ಹೇಳಿಕೆ ಕೈಬಿಟ್ಟಿಲ್ಲ. ಎರಡನೇ ದಿನವೂ ಕಾಂಗ್ರೆಸ್ ಸರಣಿ ಟ್ವೀಟ್‌ಗಳ ಮೂಲಕ ಕೆರಳಿದ ಬಿಜೆಪಿಯನ್ನು ಕೆಣಕೋ ಸಾಹಸಕ್ಕೆ ಕೈಹಾಕಿದೆ.

ಕರ್ನಾಟಕ ಕಾಂಗ್ರೆಸ್ ಟ್ವೀಟ್‌ 1: ಬಿಜೆಪಿ ಹೈಕಮಾಂಡಿಗೆ ಕರ್ನಾಟಕದ ಸಿಎಂಗಳೆಂದರೆ #PuppetCM ಇದ್ದಹಾಗೆ, ಅಡಿಸಿಯೂ ನೋಡುತ್ತಾರೆ, ಬೀಳಿಸಿಯೂ ನೋಡುತ್ತಾರೆ!  @BSYBJP  ಅವರಂತಹ ನಾಯಕರನ್ನೇ ಹೇಳದೆ ಕೇಳದೆ ಮನೆಗೆ ಕಳಿಸಿರುವಾಗ ಬೊಂಬೆ  @BSBommai ಅವರು ಯಾವ ಲೆಕ್ಕ! 'ಸಂತೋಷ ಕೂಟ'ಕ್ಕೆ ಸಂತೋಷಪಡಿಸುವ ಬೊಮ್ಮಾಯಿಯವರ ಪ್ರಯತ್ನ ವಿಫಲವಾಗಿದೆ. ಹಗರಣ & ವೈಫಲ್ಯಗಳ ಕೊಡ ತುಂಬಿದೆ ಎಂದು 

ಕರ್ನಾಟಕ ಕಾಂಗ್ರೆಸ್ ಟ್ವೀಟ್‌ 2: @BSYBJP ಅವರನ್ನು ಸರ್ಕಾರದ ಎರಡನೇ ವರ್ಷದ ವಾರ್ಷಿಕೋತ್ಸವದ ಸಂಭ್ರಮದ ಸಂದರ್ಭದಲ್ಲೇ ಕಣ್ಣೀರು ಹಾಕಿಸಿ ಕಳಿಸಲಾಗಿತ್ತು. ಈಗ @BSBommai  ಅವರನ್ನು 1ನೇ ವಾರ್ಷಿಕೋತ್ಸವದ ಹೊತ್ತಲ್ಲಿ ಕೆಳಗಿಳಿಸುವ ವೇದಿಕೆ ಸಜ್ಜಾಗುತ್ತಿದೆ. 1 ವರ್ಷದಲ್ಲಿ 12 ಬಾರಿ ದೆಹಲಿ ಪ್ರವಾಸ ಕೈಗೊಂಡರೂ #PuppetCM ಗೆ ಸಂಪುಟ ಸಂಕಟ ಬಗೆಹರಿಸಲಾಗದ್ದೇ ಇದಕ್ಕೆ ಸಾಕ್ಷಿ!

ಹೀಗೆ ಸಾಲು ಸಾಲು ಟ್ವೀಟ್ಗಳ ಮೂಲಕ ಸಿಎಂ ಬದಲಾವಣೆ ಸನ್ನಿಹಿತ ಎಂದು ಕಾಂಗ್ರೆಸ್ ಡಂಗುರ ಬಾರಿಸುತ್ತಿದೆ.  ನಿನ್ನೆಯಿಂದಲೂ ಸಿಎಂ ಬದಲಾವಣೆ ಸನ್ನಿಹಿತ ಎನ್ನುವ ಕಾಂಗ್ರೆಸ್ ಗಾನಬಜಾನಕ್ಕೆ ಬಿಜೆಪಿ ನಾಯಕರು ಕೆಂಡಾಮಂಡಲರಾಗಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್, ಮಾಜಿ ಸಿಎಂ ಯಡಿಯೂರಪ್ಪರಂತ ರಾಜ್ಯ ಬಿಜೆಪಿ ದಿಗ್ಗಜರೇ  ನೂರಕ್ಕೆ ನೂರರಷ್ಟು ಸಿಎಂ ಬದಲಾವಣೆ ಸುಳ್ಳು. ಸಿಎಂ ಬದಲಾವಣೆ ಇಲ್ಲ ಎಂದು ಹೈಕಮಾಂಡ್ ಸ್ಪಷ್ಟ ಸಂದೇಶ ನೀಡಿದೆ, ಬೊಮ್ಮಾಯಿ ನೇತೃತ್ವದಲ್ಲೇ ಮುಂದಿನ ಚುನಾವಣೆ ನಡೆಯುತ್ತೆ. ಕಾಂಗ್ರೆಸ್ ಆಂತರಿಕ ಗೊಂದಲ ಮುಚ್ಚಿಕೊಳ್ಳಲು ಇಂಥ ಸುಳ್ಳು ಸುದ್ದಿ ಹರಿಬಿಡ್ತಿದೆ ಎಂದು ಗುಡುಗಿದ್ದಾರೆ.

ನನ್ನ ಸರ್ಕಾರ ಬೀಳಿಸಲು ಏನೇನ್ ಮಾಡಿದೆ ನನಗೆ ಗೊತ್ತು, ಅಶ್ವತ್ಥ್ ನಾರಾಯಣ ವಿರುದ್ಧ ಎಚ್‌ಡಿಕೆ ಬಾಂಬ್

ಸಿದ್ದರಾಮೋತ್ಸವದಿಂದ ಕಾಂಗ್ರೆಸ್ ಒಳಬೇಗುದಿ ಜಾಸ್ತಿಯಾಗಿದೆ. ತನ್ನ ಗೊಂದಲ ‌ಮುಚ್ಚಿಕೊಳ್ಳಲು ಕಾಂಗ್ರೆಸ್ ನಾಯಕರು ಬಿಜೆಪಿಯಲ್ಲಿ ಬದಲಾವಣೆ ಎಂಬ ದಾಳ ಉರುಳಿಸಿದ್ದಾರೆ ಅನ್ನೋದು ಬಿಜೆಪಿ ನಾಯಕರ ಆರೋಪ. ಆದ್ರೆ,  ಕೆಪಿಸಿಸಿ ಅಧ್ಯಕ್ಷರು ಮಾತ್ರ ಸಿಎಂ ಬದಲಾವಣೆ ಸುದ್ದಿ ಮೂಲವೇ ಬಿಜೆಪಿ. ಬಿಜೆಪಿ ಮೂಲದಿಂದಲೇ ಈ ಸುದ್ದಿ ಸಿಕ್ಕಿದೆ ಎನ್ನುವ ಮೂಲಕ ಬಿಜೆಪಿ ಮಾಜಿ ಶಾಸಕ ಸುರೇಶ್ ಗೌಡರತ್ತ ಬೊಟ್ಟು ಮಾಡುತ್ತಿದ್ದಾರೆ. ಆದ್ರೆ, ಸುರೇಶ್ ಗೌಡ ಮಾತ್ರ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎನ್ನುತ್ತಿದ್ದಾರೆ. ಇನ್ನು ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಬಿಜೆಪಿಯಲ್ಲಿನ ಸಿಎಂ ಬದಲಾವಣೆ ಬಗ್ಗೆ ಟ್ವೀಟ್ ಮಾಡಿದವರನ್ನೇ ಕೇಳಿ ಎಂದು ಜಾರಿಕೊಂಡಿದ್ದಾರೆ.. 

ಅಮಿತ್ ಶಾ ರಾಜ್ಯಕ್ಕೆ ಬಂದು ಹೋದ ಮೇಲೆ ಎದ್ದಿರುವ ‘ಸಿಎಂ ಬದವಲಾವಣೆ’ ಗುಮ್ಮ ಸಹಜವಾಗೇ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಆದ್ರೆ, ಅಮಿತ್ ಶಾ ಭೇಟಿ ವೇಳೆ ಸಿಎಂ ಬದಲಾವಣೆ ವಿಷಯ ಚರ್ಚೆಗೇ ಬಂದಿಲ್ಲ. ಈ ಹೇಳಿಕೆ ಇಲ್ಲಿಗೆ ನಿಲ್ಲಬೇಕು ಎಂದು ಮಾಜಿ ಸಿಎಂ ಯಡಿಯೂರಪ್ಪ ಖಡಕ್ಕಾಗೇ ತಾಕೀತು ಮಾಡಿದ್ದಾರೆ.