Lok Sabha Elections 2024: ಮುಸ್ಲಿಂ ಮೀಸಲಾತಿ ರದ್ದಿಲ್ಲ: ಬಿಜೆಪಿ ಮಿತ್ರಪಕ್ಷ ಟಿಡಿಪಿ

By Kannadaprabha NewsFirst Published May 6, 2024, 4:49 AM IST
Highlights

ರಾಜ್ಯದಲ್ಲಿ ಮುಸ್ಲಿಮರಿಗೆ ನೀಡುತ್ತಿರುವ ಶೇ.4ರಷ್ಟು ಮೀಸಲು ಮುಂದುವರೆಸಲು ತಮ್ಮ ಪಕ್ಷದ ಬೆಂಬಲ ಇದೆ ಎಂದು ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಪುನರುಚ್ಚರಿಸಿದ್ದಾರೆ.

ಧರ್ಮಾವರಂ (ಮೇ.06): ರಾಜ್ಯದಲ್ಲಿ ಮುಸ್ಲಿಮರಿಗೆ ನೀಡುತ್ತಿರುವ ಶೇ.4ರಷ್ಟು ಮೀಸಲು ಮುಂದುವರೆಸಲು ತಮ್ಮ ಪಕ್ಷದ ಬೆಂಬಲ ಇದೆ ಎಂದು ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಪುನರುಚ್ಚರಿಸಿದ್ದಾರೆ. ಇಲ್ಲಿ ಪಕ್ಷದ ಪರ ಚುನಾವಣಾ ಪ್ರಚಾರ ಭಾಷಣ ಮಾಡಿದ ನಾಯ್ಡು, ‘ಆರಂಭದಿಂದಲೂ ನಾವು ಮುಸ್ಲಿಮರಿಗೆ ಶೇ.4ರಷ್ಟು ಮೀಸಲು ಬೆಂಬಲಿಸಿಕೊಂಡೇ ಬಂದಿದ್ದೇವೆ ಮತ್ತು ಅದು ಹಾಗೆಯೇ ಮುಂದುವರೆಯಲಿದೆ’ ಎಂದು ಹೇಳಿದ್ದಾರೆ. ಪ್ರಧಾನಿ ಮೋದಿ ಇತ್ತೀಚೆಗೆ ತೆಲಂಗಾಣದ ಜಹೀರಾಬಾದ್‌ನಲ್ಲಿ, ಒಬಿಸಿಗಳ ಮೀಸಲು ಕಸಿದು ಯಾವುದೇ ಕಾರಣಕ್ಕೂ ಅದನ್ನು ಮುಸ್ಲಿಮರಿಗೆ ನೀಡಲು ಬಿಡಲ್ಲ ಎಂದು ಗುಡುಗಿದ್ದರು. 

ಜೊತೆಗೆ ಕಳೆದ 15 ದಿನಗಳಿಂದ ಇದೇ ವಿಷಯವನ್ನು ದೇಶವ್ಯಾಪಿ ಹಲವು ರಾಜ್ಯಗಳಲ್ಲಿ ಪುನರುಚ್ಚರಿಸಿದ್ದಾರೆ. ಅದರ ಹೊರತಾಗಿಯೂ ನಾಯ್ಡು ಮುಸ್ಲಿಂ ಮೀಸಲು ಪರ ಬ್ಯಾಟಿಂಗ್‌ ಮಾಡಿದ್ದಾರೆ. ಆಂಧ್ರದಲ್ಲಿ ಟಿಡಿಪಿ-ಜನಸೇನಾ ಮತ್ತು ಬಿಜೆಪಿ ಮೈತ್ರಿಮಾಡಿಕೊಂಡು ವಿಧಾನಸಭೆ ಮತ್ತು ಲೋಕಸಭೆಗೆ ಸ್ಪರ್ಧಿಸುತ್ತಿವೆ. ಇತ್ತೀಚೆಗೆ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ ಭರ್ಜರಿ ಭರವಸೆ ಘೋಷಿಸಲಾಗಿತ್ತಾದರೂ ಅದರಲ್ಲಿ ಮುಸ್ಲಿಂ ಮೀಸಲು ವಿಚಾರ ಪ್ರಸ್ತಾಪ ಮಾಡಿರಲಿಲ್ಲ. ಮತ್ತೊಂದೆಡೆ ಬಿಜೆಪಿ ಇದು ಟಿಡಿಪಿ-ಜನಸೇನಾ ಪ್ರಣಾಳಿಕೆ. ನಮಗೂ ಇದಕ್ಕೂ ಸಂಬಂಧವಿಲ್ಲ ಎಂದು ಹೇಳಿತ್ತು.

ಭರ್ಜರಿ ಉಚಿತ ಪ್ರಣಾಳಿಕೆ: ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿರುವಂತೆಯೇ ಎನ್‌ಡಿಎ ಮೈತ್ರಿಕೂಟದ ಭಾಗವಾಗಿರುವ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಮತ್ತು ನಟ ಪವನ್‌ ಕಲ್ಯಾಣ್‌ ನೇತೃತ್ವದ ಜನಸೇನಾ ಪಕ್ಷಗಳು ಜಂಟಿಯಾಗಿ ಪ್ರಣಾಳಿಕೆ ಬಿಡುಗಡೆ ಮಾಡಿವೆ.

Lok Sabha Elections 2024: ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ ಶೇ.50 ಮೀಸಲು ಸವಾಲ್‌

ಪ್ರಣಾಳಿಕೆಯಲ್ಲಿ ಕರ್ನಾಟಕ ಮಾದರಿಯಲ್ಲಿ ಭರ್ಜರಿ ಉಚಿತ ಕೊಡುಗೆಗಳನ್ನು ಪ್ರಕಟಿಸಲಾಗಿದ್ದು, ಎಲ್ಲ ವಯೋಮಾನದವರಿಗೂ ಒಂದಿಲ್ಲೊಂದು ರೀತಿಯಲ್ಲಿ ಆರ್ಥಿಕ ಸಹಾಯವನ್ನು ಪ್ರಕಟಿಸಲಾಗಿದೆ. ಪ್ರಮುಖವಾಗಿ ತಲ್ಲಿಕಿ ವಂಡನಮ್‌ ಯೋಜನೆಯಲ್ಲಿ ದಾಖಲಾದ ಶಾಲಾ ಮಕ್ಕಳಿಗೆ ವಾರ್ಷಿಕ 15 ಸಾವಿರ ರು., ಉದ್ಯೋಗ ಸಿಗುವವರೆಗೆ ನಿರುದ್ಯೋಗಿ ಭತ್ಯೆಯಾಗಿ ಮಾಸಿಕ 3 ಸಾವಿರ ರು., ರೈತರಿಗೆ ವಾರ್ಷಿಕ 20 ಸಾವಿರ ರು., 18 ವರ್ಷ ಮೇಲ್ಪಟ್ಟ ಎಲ್ಲ ಮಹಿಳೆಯರಿಗೆ ಮಾಸಿಕ 1,500 ರು. ಹಾಗೂ ಮೀನುಗಾರರಿಗೆ ತಮ್ಮ ವಿರಾಮದ ಅವಧಿಯಲ್ಲಿ 20 ಸಾವಿರ ರು., ಆರ್ಥಿಕ ಸಹಾಯ ನೀಡುವುದಾಗಿ ಘೋಷಿಸಿದೆ.

click me!