
ನಿರ್ಮಲ್ (ತೆಲಂಗಾಣ) (ಮೇ.06): ಮೀಸಲಾತಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಮೇಲೆ ಪ್ರಹಾರ ಮುಂದುವರಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮೀಸಲಾತಿ ಮೇಲಿನ ಶೇ.50 ಮಿತಿಯನ್ನು ತೆಗೆದುಹಾಕುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸವಾಲು ಹಾಕಿದ್ದಾರೆ ಮತ್ತು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಒಟ್ಟಾರೆ ಕೋಟಾವನ್ನು ಶೇ.50ಕ್ಕಿಂತ ಹೆಚ್ಚಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಆದಿಲಾಬಾದ್ ಲೋಕಸಭಾ ಕ್ಷೇತ್ರದ ನಿರ್ಮಲ್‌ನಲ್ಲಿ ಕಾಂಗ್ರೆಸ್ ಚುನಾವಣಾ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ‘ಪ್ರಧಾನಿ ಮೋದಿ ಮೀಸಲಾತಿಗೆ ವಿರುದ್ಧವಾಗಿದ್ದಾರೆ ಮತ್ತು ಅದನ್ನು ಕಿತ್ತುಕೊಳ್ಳಲು ಬಯಸುತ್ತಿದ್ದಾರೆ. ಅವರು ಮೀಸಲು ಪರವೇ ಆಗಿದ್ದರೆ ಶೇ.50ರ ಮೀಸಲು ಮಿತಿ ತೆಗೆದುಹಾಕುತ್ತೇನೆ ಎಂದು ದೇಶಕ್ಕೆ ಭರವಸೆ ನೀಡಬೇಕು. ಏಕೆಂದರೆ ಕಾಂಗ್ರೆಸ್ ಮಾಡಲು ಹೊರಟಿರುವುದು ಇದನ್ನೇ. ಮೋದಿ ಅವರು ಇದುವರೆಗೆ ಯಾವುದೇ ಭಾಷಣದಲ್ಲಿ ಮೀಸಲಾತಿಗೆ ಇರುವ ಶೇ 50ರ ತಡೆಯನ್ನು ತೆಗೆದುಹಾಕುವುದಾಗಿ ಹೇಳಿಲ್ಲ’ ಎಂದು ಚಾಟಿ ಬೀಸಿದರು.
‘ದೇಶದ ಮುಂದಿರುವ ದೊಡ್ಡ ಸಮಸ್ಯೆ ಎಂದರೆ ಮೀಸಲು ಮಿತಿಯನ್ನು ಶೇ.50ಕ್ಕಿಂತ ಹೆಚ್ಚಿಸುವುದು. ಹೀಗಾಗಿ ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಒಬಿಸಿಗಳು, ದಲಿತರು ಮತ್ತು ಬುಡಕಟ್ಟು ಜನಾಂಗದವರಿಗೆ ನ್ಯಾಯ ಒದಗಿಸಲು ಅದನ್ನು ತೆಗೆದುಹಾಕುವುದಾಗಿ ಭರವಸೆ ನೀಡಿದೆ’ ಎಂದರು. ‘ಈ ಚುನಾವಣೆ ಎರಡು ಸಿದ್ಧಾಂತಗಳ ನಡುವಿನದ್ದು. ಒಂದೆಡೆ ಕಾಂಗ್ರೆಸ್ ಸಂವಿಧಾನವನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದರೆ ‘ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಂವಿಧಾನವನ್ನು ಮುಗಿಸಲು ಮತ್ತು ಮೀಸಲಾತಿಯನ್ನು ಕಸಿದುಕೊಳ್ಳಲು ಬಯಸುತ್ತಿವೆ’ ಎಂದು ಅವರು ಸಂವಿಧಾನದ ಪಾಕೆಟ್ ಗಾತ್ರದ ಪ್ರತಿಯನ್ನು ಪ್ರದರ್ಶಿಸಿದರು.
ಪ್ರಜ್ವಲ್ ರೇವಣ್ಣ ಸಂತ್ರಸ್ತರಿಗೆ ನೆರವಾಗಿ: ಸಿಎಂ ಸಿದ್ದರಾಮಯ್ಯಗೆ ರಾಹುಲ್ ಗಾಂಧಿ ಪತ್ರ
‘ಬಿಜೆಪಿ ಗೆದ್ದರೆ ಸಂವಿಧಾನ ಬದಲಿಸುತ್ತೇವೆ ಎಂದು ಬಿಜೆಪಿ ನಾಯಕರೇ ಹೇಳಿದ್ದಾರೆ. ಸಂವಿಧಾನ ಬದಲಾದರೆ ಮೀಸಲಾತಿಯೂ ಕೊನೆಯಾಗಲಿದೆ’ ಎಂದ ಅವರು, ಹಿಂದುಳಿದವರು, ದಲಿತರು, ಆದಿವಾಸಿಗಳ ಉನ್ನತಿ ಬಿಜೆಪಿಗೆ ಬೇಕಾಗಿಲ್ಲ ಎಂದು ಆರೋಪಿಸಿದರು. ‘ಸಾರ್ವಜನಿಕ ವಲಯದ ಖಾಸಗೀಕರಣ, ಅಗ್ನಿವೀರ್ ಯೋಜನೆ, ಗುತ್ತಿಗೆ ಉದ್ಯೋಗ ಇವೆಲ್ಲವೂ ಮೀಸಲಾತಿಯನ್ನು ಕಸಿದುಕೊಳ್ಳುವ ಗುರಿ ಹೊಂದಿವೆ ಎಂದು ಆರೋಪಿಸಿದ ಅವರು, ಕಾಂಗ್ರೆಸ್ ಗುತ್ತಿಗೆ ಪದ್ಧತಿ ತೊಲಗಿಸಿ ಕಾಯಂ ಉದ್ಯೋಗ ನೀಡಲಿದೆ’ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ