Mar 19, 2022, 12:43 PM IST
ಕೋಲಾರ(ಮಾ.19): ಅದೊಂದು ಪರ್ವತ ಶ್ರೇಣಿಯಲ್ಲಿ ಸಾವಿರಾರು ಜೀವ ಸಂಕುಲಗಳು ಬದುಕುತ್ತಿವೆ, ಸಾವಿರಾರು ಸಸ್ಯರಾಶಿಗಳು ಬೆಳೆದು ನಿಂತಿವೆ ಇಂಥಹ ಪರ್ವತ ಶ್ರೇಣಿ ಬೇಸಿಗೆ ಬಂತೆಂದರೆ ಸಾಕು ವಿಕೃತ ಮನಸ್ಸಿನ ಕಿಡಿಗೇಡಿಗಳಿಗೆ ಸಿಕ್ಕಿ ಪ್ರತಿ ವರ್ಷ ಸಾವಿರಾರು ಜೀವ ಸಂಕುಲಗಳು ಸುಟ್ಟು ಭಸ್ಮವಾಗುತ್ತಿವೆ.
ಕೋಲಾರ ನಗರಕ್ಕೆ ಹೊಂದಿಕೊಂಡಿರುವ ಈ ಅಂತರಗಂಗೆ ಬೆಟ್ಟ ಜಿಲ್ಲೆಯ ಪ್ರಮುಖ ಪ್ರವಾಸಿತಾಣಗಳಲ್ಲಿ ಒಂದು, ಇಲ್ಲಿನ ಕಾಶಿವಿಶ್ವೇಶ್ವರ ಸ್ವಾಮಿ ದೇವಾಲಯ ಹಾಗೂ ಬಸವನಬಾಯಲ್ಲಿ ಬರುವ ನೀರು ಜನರ ಆಧ್ಮಾತ್ಮಿಕ ಆಕರ್ಷಣೆಯ ಕೇಂದ್ರ. ಈ ದೇವಾಲಯಕ್ಕೆ ಹೊಂದಿಕೊಂಡಂತೆ ಬೃಹತ್ ಬೆಟ್ಟದ ಸಾಲು ಹಾಗೂ ಬೆಟ್ಟದ ತಪ್ಪಲು ಪ್ರದೇಶ ಇದೆ, ಈ ಬೆಟ್ಟವನ್ನು ಶತಶೃಂಗ ಪರ್ವತ ಎಂದು ಕರೆಯುತ್ತಾರೆ. ವಿಶೇಷವಾಗಿ ಜಿಂಕೆ, ನವಿಲು, ಚಿರತೆ, ಮೊಲ, ಕಾಡುಪಾಪ, ಕರಡಿ ಸೇರಿದಂತೆ ಹತ್ತಾರು ಬಗೆಯ ಪ್ರಾಣಿಗಳು ಹಾಗೂ ಔಷಧೀಯ ಸಸ್ಯಗಳು ಈ ಬೆಟ್ಟದಲ್ಲಿವೆ. ಇಂಥ ಬೆಟ್ಟದಲ್ಲಿ ಬೇಸಿಗೆ ಬಂತೆಂದರೆ ಸಾಕು, ಕಾಳ್ಗಿಚ್ಚು ಇಡೀ ಬೆಟ್ಟವನ್ನು ಸುಟ್ಟು ಭಸ್ಮ ಮಾಡವುದರ ಜೊತೆಗೆ ಅಪರೂಪದ ಸಸ್ಯರಾಶಿ ಹಾಗೂ ಪ್ರಾಣಿಸಂಕುಲ ಬೆಂಕಿಯ ಕೆನ್ನಾಲಿಗೆಗೆ ಸಿಕ್ಕಿ ಭಸ್ಮವಾಗುತ್ತಿವೆ.
Tumakuru: 3 ಲಕ್ಷ ಮೌಲ್ಯದ ಅಕ್ರಮ ಮದ್ಯ ನಾಶ
ಇನ್ನು ಅಂತರಗಂಗೆ ಬೆಟ್ಟದ ಪ್ರದೇಶದ ನಿರ್ವಹಣೆ ಹಾಗೂ ಜವಾಬ್ದಾರಿ ಅರಣ್ಯ ಇಲಾಖೆಗೆ ಸಂಬಂಧ ಪಟ್ಟಿದೆ. ಆದರೆ ಅರಣ್ಯ ಇಲಾಖೆ ಮಾತ್ರ ಈ ಬಗ್ಗೆ ಯಾವುದೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳೋದಿಲ್ಲ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಕಾಡಿಗೆ ಬೆಂಕಿ ಬೀಳದಂತೆ ತಡೆಯಲು ಫೈರ್ ಲೈನ್ ಮಾಡಲಾಗುತ್ತದೆ. ಬೆಟ್ಟದಲ್ಲಿ ಓಡಾಡುವ ದನ ಮೇಯಿಸುವವರು, ಕುರಿ ಮೇಯಿಸುವವರು, ಅಥವಾ ಜಾಲಿ ಮಾಡಲು ಬರುವ ಕೆಲವರಿಂದ ಅರಣ್ಯಕ್ಕೆ ಬೆಂಕಿ ಬೀಳುವ ಸಾಧ್ಯತೆ ಇರುತ್ತದೆ. ಹಾಗಾಗಿ ಅವರಿಗೆ ಅರಿವು ಮೂಡಿಸಲು ಅರಣ್ಯ ಸಿಬ್ಬಂದಿಗಳನ್ನು ನೇಮಕ ಮಾಡಲಾಗುತ್ತದೆ. ಜೊತೆಗೆ ಉದ್ದೇಶ ಪೂರ್ವಕವಾಗಿ ಬೆಂಕಿ ಹಚ್ಚುವ ಕಿಡಿಗೇಡಿಗಳನ್ನು ನಿಗಾವಹಿಸಲು ಸಾಕಷ್ಟು ಹಣ ಖರ್ಚು ಮಾಡುತ್ತದೆ. ಆದರೆ ಈ ಬಾರಿ ಅರಣ್ಯ ಇಲಾಖೆ ಇದ್ಯಾವುದೇ ಕ್ರಮ ಕೈಗೊಂಡಿಲ್ಲ, ಅದಕ್ಕಾಗಿ ಈ ರೀತಿ ಪ್ರತಿವರ್ಷ ಅಂತರಗಂಗೆ ಬೆಟ್ಟಕ್ಕೆ ಬೆಂಕಿ ಬಿದ್ದು ಪ್ರಕೃತಿ ಸಂಪತ್ತು, ಕಾಡು ಪ್ರಾಣಿಗಳು ನಾಶವಾಗುತ್ತಿವೆ ಅನ್ನೋದು ಸ್ಥಳೀಯರ ಆರೋಪ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು, ಪ್ರತಿ ವರ್ಷ ಕೂಡಾ ನಾವು ಅರಣ್ಯ ಪ್ರದೇಶದ ಸುತ್ತಮುತ್ತಲ ಪ್ರದೇಶದಲ್ಲಿ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಸೇರಿದಂತೆ ಬೆಂಕಿ ಬೀಳದಂತೆ ಮುಂಜಾಗ್ರತಾ ಕ್ರಮಗಳನ್ನು ವಹಿಸುತ್ತೇವೆ ಎನ್ನುತ್ತಿದ್ದಾರೆ.
ಒಟ್ಟಾರೆ ಬರದ ನಾಡು ಕೋಲಾರದಲ್ಲಿ ಅದ್ಬುತ ಪ್ರಕೃತಿ ಸೌಂದರ್ಯ ಹೊಂದಿರುವ ಅಂತರಗಂಗೆ ಬೆಟ್ಟದಲ್ಲಿ ಬೇಸಿಗೆಯಲ್ಲಿ ಕಿಡಿಗೇಡಿಗಳ ಅಟ್ಟಹಾಸ ಮೆರೆಯುತ್ತಿದ್ದು, ಕೂಡಲೇ ಸಂಬಂಧಪಟ್ಟ ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸೂಕ್ತ ಕ್ರಮಕೈಗೊಂಡು ಬೇಸಿಗೆಯ ಕಾಳ್ಗಿಚ್ಚಿಗೆ ಕಡಿವಾಣ ಹಾಕಬೇಕಿದೆ.