May 2, 2022, 2:57 PM IST
ವಿಜಯಪುರದಲ್ಲಿ (Vijayapura) ಬೇಸಿಗೆ ಬಂದ್ರೆ ಸಾಕು ಕುಡಿಯೋ ನೀರಿಗೆ (Water) ಹಾಹಾಕಾರ ಶುರುವಾಗುತ್ತೆ. ಮನೆಗೆ ಬಂದೋವ್ರಿಗೆ ಊಟ ಕೊಡ್ತೀವಿ ಆದ್ರೆ ನೀರು ಕೊಡೋದು ಕಷ್ಟ ಅನ್ನೋ ಮಾತಿದೆ. ಆದ್ರೆ ಇಲ್ಲೊಂದು ಜೈನ ಸಂಸ್ಥೆ ತಿಂಗಳಿಗೆ 1 ವರೆ ಲಕ್ಷ ರೂಪಾಯಿ ಖರ್ಚು ಮಾಡಿ ಬೇಸಿಗೆ ಕಾಲದಲ್ಲಿ ಉಚಿತವಾಗಿ ತಂಪಾದ ನೀರು ವಿತರಿಸುವ ಮೂಲಕ ಜಲಸೇವೆ ಮಾಡ್ತಿದೆ..!
ಉಚಿತವಾಗಿ ಮೂರು ತಿಂಗಳ ಕಾಲ ವಿಜಯಪುರ ನಗರದ ಆಯಕಟ್ಟಿನ ಜಾಗಗಳಲ್ಲಿ ವಾಹನ ನಿಲ್ಲಿಸಿ ನೀರು ವಿತರಣೆ ಮಾಡ್ತಿದೆ. ಸಿದ್ದೇಶ್ವರ ದೇವಸ್ಥಾನ, ಗಾಂಧಿ ಚೌಕ, ಬಿಎಲ್ಡಿ ರಸ್ತೆ, ಶಿವಾಜಿ ಚೌಕ ಸೇರಿ ಜನರು, ವ್ಯಾಪಾರಸ್ಥರು ಸೇರುವ ಸ್ಥಳಗಳಲ್ಲಿ ಜಲಸೇವೆ ಮಾಡ್ತಿದೆ. ಹೀಗಾಗಿ ಸಾರ್ವಜನಿಕರು ಜೈನ ಸಮುದಾಯದ ಜಲಸೇವೆ ಕಾರ್ಯ ಕಂಡು ಶ್ಲಾಘಿಸುತ್ತಿದ್ದಾರೆ.
ಇನ್ನು ವಿಜಯಪುರದ ಸ್ವಾಮಿತ್ವ ಸಂಸ್ಥೆ ಕಳೆದ 2ವರ್ಷಗಳಿಂದ ಬೇಸಿಗೆ ಕಾಲದಲ್ಲಿ ಶೀತ ಜಲ ಸೇವೆ ಮಾಡ್ತಿದೆ. ಪ್ರತಿ ದಿನಕ್ಕೆ 5 ಸಾವಿರದಂತೆ ತಿಂಗಳಿಗೆ 1 ವರೆ ಲಕ್ಷ ರೂಪಾಯಿಯನ್ನ ವ್ಯಯಿಸುವ ಮೂಲಕ ಸದ್ದಿಲ್ಲದೇ ಜಲ ಕಾಯಕ ಮಾಡ್ತಿದೆ ಈ ಸಂಸ್ಥೆ. ಜೈನ ಸಮುದಾಯದ ಉಧ್ಯಮಿಗಳು, ವ್ಯಾಪಾರಸ್ಥರು, ಕಂಪನಿಗಳ ಕೆಲಸಗಾರರು ಈ ಸಂಸ್ಥೆಯಲ್ಲಿದ್ದಾರೆ. ಆದ್ರೆ ಪ್ರಚಾರ ಬಯಸದ ಇವರು ತಮ್ಮ ಹೆಸರು ಹೇಳಿಕೊಳ್ಳದೆ ಕೇವಲ ಸಂಸ್ಥೆಯ ಹೆಸರಲ್ಲಿ ಜಲಸೇವೆ ಮಾಡ್ತಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿ ಪಂಚ ನದಿ ಹರಿದಿದ್ರೂ ಕುಡಿಯೋ ನೀರಿಗಾಗಿ ತತ್ವಾರ ಇರುತ್ತೆ. ವಿಜಯಪುರ ಜಿಲ್ಲೆಯಲ್ಲಿ ಈ ವರ್ಷ ಬೇಸಿಗೆ ಬಿಸಿಲಿನ ತಾಪ ಹೆಚ್ಚಿದೆ. 10 ಗಂಟೆಗೆ ಹೊರಗಡೆ ಕಾಲಿಡೋದಕ್ಕೂ ಜನ ಹೆದರುತ್ತಿದ್ದಾರೆ. ಮಧ್ಯಾಹ್ನ ಬೇರೆ ಬೇರೆ ಕೆಲಸಕ್ಕಾಗಿ ಮನೆಯಿಂದ ಹೊರಗಡೆ ಬರುವ ಜನರು ಬಾಯಾರಿಕೆ ಆಗಿ ನೀರು ಸಿಕ್ಕರೆ ಸಾಕು ಅಂತಿರ್ತಾರೆ. ತಂಪಾದ ನೀರು ಕುಡಿಯೋದ್ರೊಂದಿಗೆ ಬಾಟಲಿಯಲ್ಲಿ ನೀರು ತುಂಬಿಕೊಂಡು ಹೋಗ್ತಾರೆ. ಶಾಲಾ ಕಾಲೇಜು ವಿದ್ಯಾರ್ಥಿಗಳು, ಕರ್ತವ್ಯ ನಿರತ ಪೊಲೀಸರು, ವೃದ್ಧರು ಮಕ್ಕಳು ತಂಪಾದ ನೀರು ಸೇವಿಸಿ ಖುಷ್ ಆಗಿ ಸ್ವಾಮಿತ್ವ ಸಂಸ್ಥೆ ಜಲ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸ್ತಾರೆ.