ಉಡುಪಿಯಲ್ಲಿ ಸರಳ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

Aug 31, 2021, 4:55 PM IST

ಉಡುಪಿ(ಆ.31): ಕಡೆಗೋಲು ಕೃಷ್ಣನನ್ನು ಕಾಣುವ ಕಾತರ, ಉಪವಾಸವಿದ್ದು ಆರಾಧ್ಯಮೂರ್ತಿಯನ್ನು ಆರಾಧನೆ ಮಾಡುವ ತವಕ, ರಥಬೀದಿಯ ತುಂಬೆಲ್ಲಾ ಕೃಷ್ಣನದ್ದೇ ಜಪ, ಹೌದು ಈ ಬಾರಿ ಉಡುಪಿಯಲ್ಲಿ ಸರಳ ಅಷ್ಟಮಿಯ ಆಚರಣೆ ನಡೆಯುತ್ತಿದೆ. ಕೋವಿಡ್ ನಡುವೆ ಹೇಗಪ್ಪಾ ಹಬ್ಬ ಆಚರಿಸೋದು ಅಂತ ತಲೆಕೆಡಸಿಕೊಂಡಿದ್ದ ಜನತೆಗೆ ಕೊಂಚ ನೆಮ್ಮದಿ ಕೊಟ್ಟ ಹಬ್ಬ ಈ ಬಾರಿಯ ಅಷ್ಟಮಿ. ಸಂಪ್ರದಾಯಗಳಿಗೆ ಚ್ಯುತಿ ಬಾರದಂತೆ ಪರ್ಯಾಯ ಅದಮಾರು ಮಠದವರು ಅಷ್ಟಮಿ ಆಚರಣೆಗೆ ಒತ್ತು ನೀಡಿದ್ದಾರೆ. ಕೋವಿಡ್ ನಿಂದಾಗಿ ಕಳೆದ ವರ್ಷವೂ ಅಷ್ಟಮಿ ಆಚರಣೆ ನಡೆಯಲಿಲ್ಲ. ಆದರೆ ಈ ಬಾರಿ ಹಾಗಲ್ಲ, ದಿನವಿಡೀ ಕೃಷ್ಣ ದೇವರ ದರ್ಶನ ಮಾಡಲು ಮಠ ಅವಕಾಶ ಕಲ್ಪಿಸಿತ್ತು. ಹಾಗಾಗಿ ಯಾವುದೇ ಗೊಂದಲವಿಲ್ಲದೆ ಜನರು ಸಾವಧಾನವಾಗಿ ಬಂದು ಇಷ್ಟ ದೇವರನ್ನು ಕಣ್ತುಂಬಿಕೊಂಡರು. ಬಾಲಕೃಷ್ಣ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದ ಕಡಗೋಲು ಕೃಷ್ಣನಿಗೆ ಅದಮಾರು ಮಠದ ಈಶಪ್ರಿಯ ತೀರ್ಥರು ಲಕ್ಷ ತುಳಸಿಗಳಿಂದ ಅರ್ಚಿಸಿದರು. ಹಗಲಿಡೀ ಉಪವಾಸವಿದ್ದ ಭಕ್ತರು ಶೃದ್ಧಾಭಕ್ತಿಗಳಿಂದ ಭಗವಂತನ ಬಾಲರೂಪವನ್ನು ಕಂಡು ಕೃತಾರ್ಥರಾದರು.

ಅಷ್ಟಮಿ ಅಂದ್ರೆ ಉಡುಪಿ, ಉಡುಪಿ ಅಂದ್ರೆ ಅಷ್ಟಮಿ ಅನ್ನುವಷ್ಟರಮಟ್ಟಿಗೆ ಪ್ರತೀವರ್ಷ ಅದ್ದೂರಿಯಾಗಿ ಹಬ್ಬ ಆಚರಿಸಲಾಗುತ್ತೆ. ಆದರೆ ಕಳೆದ ವರ್ಷದಂತೆ ಈ ಬಾರಿಯೂ ಕೋವಿಡ್ ನಿಯಮಾವಳಿಗಳಿಂದಾಗಿ ಹಬ್ಬದ ಎನರ್ಜಿ ಕಡಿಮೆಯಾಗಿತ್ತು. ಯಾವುದೇ ವೇಷಧಾರಿಗಳಿಗೆ ಸೇವೆ ಸಲ್ಲಿಸಲು ಜಿಲ್ಲಾಡಳಿತ ಅವಕಾಶ ನೀಡಿಲ್ಲ, ಮಕ್ಕಳ ಮೇಲಿನ ಕಾಳಜಿಯಿಂದ ಮುದ್ದು ಕೃಷ್ಣ ಸ್ಪರ್ಧೆಯನ್ನು ಕೂಡಾ ಮಠ ಕೈಬಿಟ್ಟಿತ್ತು. ನಾಳೆ ನಡೆಯುವ ವಿಟ್ಲಪಿಂಡಿ ಉತ್ಸವದಲ್ಲೂ ಸಾರ್ವಜನಿಕರಿಗೆ ಭಾಗವಹಿಸಲು ಅವಕಾಶ ನೀಡಿಲ್ಲ. ಮಠದ ಸಿಬ್ಬಂದಿಗಳು, ವೈದಿಕರು ಹಾಗೂ ಸ್ವಾಮೀಜಿಗಳಿ ಮಾತ್ರ ಉತ್ಸವದಲ್ಲಿ ಭಾಗಿಯಾಗಲಿದ್ದು, ರಥಬೀದಿಯಲ್ಲಿ ಸಾಂಪ್ರದಾಯಿಕ ಮೊಸರುಕುಡಿಕೆಗೆ ಸಿದ್ದತೆ ನಡೆದಿದೆ. ಇಂದು ತಡರಾತ್ರಿ ನಡೆಯುವ ಅರ್ಘ್ಯ ಪ್ರಧಾನದಲ್ಲಿ ಭಾಗವಹಿಸಲು ಅವಕಾಶವಿದ್ದು, ಈ ವೇಳೆ ದೇವರಿಗೆ ಸಮರ್ಪಿಸಲು ಬೇಕಾದ ಉಂಡೆಯ ತಯಾರಿಯನ್ನು ಅಷ್ಟಮಠಾಧೀರೇ ಭಕ್ತರಡೊಗೂಡಿ ತಯಾರಿಸಿದ್ದು ವಿಶೇಷ ಆಕರ್ಷಣೆಯಾಗಿತ್ತು.

ಪಂಚಾಂಗ| ಮಂಗಳಗೌರಿಯ ಆರಾಧನೆಗೆ ಪ್ರಾಶಸ್ತ್ಯ ಕೊಡಿ!

ಭಕ್ತರ ಭಾವನೆಗಳಿಗೆ ಬೆಲೆಕೊಟ್ಟ ಪರ್ಯಾಯ ಅದಮಾರು ಮಠ ಈ ಬಾರಿ ಕೃಷ್ಣದ ದರ್ಶನಕ್ಕೆ ಅವಕಾಶ ನೀಡಿದೆ. ಇದು ಭಕ್ತರಲ್ಲಿ ಉಲ್ಲಾಸ ಮೂಡಿಸಿದೆ. ಇಷ್ಟದೇವರನ್ನು ಕಂಡುಬಂದು ಮನೆಯಲ್ಲೇ ಹಬ್ಬ ಆಚರಿಸುವ ಮೂಲಕ ಜನತೆ ಜಿಲ್ಲಾಡಳಿತದೊಂದಿಗೆ ಕೈಜೋಡಿಸಿದ್ದಾರೆ. ಕನಕನಿಗೊಲಿದ ಕೃಷ್ಣ ಇನ್ನಾದರೂ ಕೊರೋನಾದಿಂದ ಈ ಜಗತ್ತನ್ನು ಮುಕ್ತಗೊಳಿಸಲಿ ಎಂಬುದು ಲೋಕಕಲ್ಯಾಣಾರ್ಥ ನಮ್ಮ ಪ್ರಾರ್ಥನೆಯೂ ಹೌದು!