May 24, 2022, 12:00 PM IST
ಕಾರವಾರ(ಮೇ.24): ಆ ಗ್ರಾಮಕ್ಕೆ ಐದು ವರ್ಷದ ಹಿಂದೆ ಮಂಜೂರಾದ ಸೇತುವೆ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲೇನೋ ನಿರ್ಮಾಣವಾಗಿದೆ. ಆದ್ರೆ, ಈ ಸೇತುವೆ ಮೇಲೆ ಸಾಗಬೇಕಂದ್ರೆ ಸಂಪರ್ಕ ರಸ್ತೆಯೇ ಇಲ್ಲ. ಆಳೆತ್ತರವಿರುವ ಈ ಸೇತುವೆಗೆ ಕಳೆದ ಎರಡು ವರ್ಷಗಳಿಂದ ಜನರು ಅಡಕೆ ಮರದ ಸಂಕ ಹಾಕಿ ಸಂಚರಿಸುತ್ತಿದ್ದಾರೆ. ಜನರು ತಮ್ಮ ಸಮಸ್ಯೆಗಳ ಪರಿಹಾರಕ್ಕೆ ಜನಪ್ರತಿನಿಧಿಗಳ ಬಳಿ ಕೇಳಿದ್ರೂ, ಜನಪ್ರತಿನಿಧಿಗಳು ಮಾತ್ರ ಓಟ್ ಬ್ಯಾಂಕ್‌ಗಾಗಿ ಜನರ ಮುಂಗೈಗೆ ಬೆಲ್ಲ ಹಚ್ಚಿ ಬಿಟ್ಟಿದ್ದಾರೆ. ಅಷ್ಟಕ್ಕೂ ಈ ಸಮಸ್ಯೆ ಇರೋದಾದ್ರೂ ಎಲ್ಲಿ ಅಂತೀರಾ..? ಈ ಸ್ಟೋರಿ ನೋಡಿ..
ಒಂದೆಡೆ ಕಾಮಗಾರಿ ಮುಗಿದು ಉದ್ಘಾಟನೆಗೆ ಸಿದ್ಧವಾಗಿ ನಿಂತಿರುವ 17 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಸೇತುವೆ. ಮತ್ತೊಂದೆಡೆ ಅದೇ ಸೇತುವೆಗೆ ಸುಮಾರು 20 ಅಡಿಗೂ ಹೆಚ್ಚು ಎತ್ತರಕ್ಕೆ ಅಡಿಕೆ ಸಂಕದಿಂದ ನಿರ್ಮಾಣ ಮಾಡಿ ಸಂಚರಿಸುತ್ತಿರುವ ಗ್ರಾಮದ ಜನರು. ಮತ್ತೊಂದೆಡೆ ಈ ಬಾರಿಯಾದ್ರೂ ತಮ್ಮ ಸಮಸ್ಯೆಗೆ ಮುಕ್ತಿ ದೊರಕಬಹುದೇ ಎಂದು ಚಾತಕ ಪಕ್ಷಿಯಂತೆ ಕಾಯುತ್ತಿರುವ ಗ್ರಾಮಸ್ಥರು. ಈ ಎಲ್ಲಾ ದೃಶ್ಯಗಳು ಕಂಡುಬಂದದ್ದು ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಅಘನಾಶಿನಿ ನದಿಗೆ ನಿರ್ಮಿಸಲಾಗಿರುವ ಐಗಳಕುರ್ವೆ ಸೇತುವೆ ವ್ಯಾಪ್ತಿಯಲ್ಲಿ. ಹೌದು, ಐಗಳಕುರ್ವೆ ವ್ಯಾಪ್ತಿಯಲ್ಲಿ ಉತ್ತಮ ಸೇತುವೆಯ ಬೇಡಿಕೆಯನ್ನು ಈ ಹಿಂದೆ ಗ್ರಾಮಸ್ಥರು ಸಲ್ಲಿಸಿದ್ದ ಹಿನ್ನೆಲೆ ಐದು ವರ್ಷದ ಹಿಂದೆ 17 ಕೋಟಿ ರೂ. ವೆಚ್ಚದಲ್ಲಿ ಮಂಜೂರಾಗಿದ್ದ ಸೇತುವೆ ಎರಡು ವರ್ಷಗಳ ಹಿಂದೆ ಕಾಮಗಾರಿ ಪೂರ್ಣಗೊಂಡು ಬಳಕೆಗೆ ಸಿದ್ಧವಾಗಿತ್ತು. ಆದರೆ, ಈ ಸೇತುವೆಯ ಎಂಡ್ ಪಾಯಿಂಟ್‌ಗಳು ನೆಲಮಟ್ಟದಿಂದ ಸುಮಾರು 20 ಅಡಿಗೂ ಹೆಚ್ಚು ಎತ್ತರವಿದ್ದು, ಇದಕ್ಕೆ ಸಂಪರ್ಕ ರಸ್ತೆ ಕಲ್ಪಿಸದ ಕಾರಣ ಗ್ರಾಮಸ್ಥರು ಬಹಳಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಕಲ್ಲಬ್ಬೆ, ಅಳಕೋಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೊಗರಿಬೈಲ್– ಉಪ್ಪಿನಪಟ್ಟಣ ಧಕ್ಕೆ ಮತ್ತು ಕೊಡಕಣಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಐಗಳಕುರ್ವೆಗೆ ಈ ಸೇತುವೆಯು ಸಂಪರ್ಕ ಕಲ್ಪಿಸುತ್ತದೆ. ಕಳೆದ ಬಾರಿ ಕಾಂಗ್ರೆಸ್ ನೇತೃತ್ವದ ಸರ್ಕಾರದ ಅವಧಿಯಲ್ಲಿ ಈ ಕಾಮಗಾರಿಗೆ ಶಿಲಾನ್ಯಾಸ ಮಾಡಲಾಗಿತ್ತು.
ಪರಿಷತ್ ಚುನಾವಣೆ: ಇನ್ನೂ ಅಭ್ಯರ್ಥಿ ಘೋಷಿಸದ ಜೆಡಿಎಸ್, ಈ ನಾಯಕನ ಹೆಸರು ಪಕ್ಕಾ?
ಎರಡು ವರ್ಷಗಳಲ್ಲಿ ಸಂಪೂರ್ಣ ಕಾಮಗಾರಿ ಮುಗಿದು ಜನರ ಓಡಾಟಕ್ಕೆ ಬಿಟ್ಟುಕೊಡಬೇಕಿತ್ತು. ಆದರೆ, ಕ್ರಮೇಣ ಕಾಮಗಾರಿಯೇನೋ ಮುಕ್ತಾಯವಾಗಿದ್ರೂ, ಪ್ರಸ್ತುತ ಸೇತುವೆಗೆ ಸುಣ್ಣ ಬಳಿದು ಹಾಗೇ ಬಿಡಲಾಗಿದೆ. ಈ ಸೇತುವೆಯ ಸಂಪರ್ಕ ರಸ್ತೆ ನಿರ್ಮಾಣಕ್ಕಾಗಿ ಭೂಮಿ ಕಳೆದುಕೊಂಡ ಬೊಗರಿಬೈಲ ಹಾಗೂ ಉಪ್ಪಿನಪಟ್ಟಣ ಧಕ್ಕೆಯ ಗ್ರಾಮಸ್ಥರಿಗೆ ಸರ್ಕಾರವು ಪರಿಹಾರವನ್ನೂ ವಿತರಿಸಿದ್ರೂ, ಸೇತುವೆಗೆ ಸಂಪರ್ಕ ರಸ್ತೆ ನಿರ್ಮಾಣ ಮಾತ್ರ ಹಾಗೇ ಬಾಕಿಯಾಗಿದೆ. ಈ ಕಾರಣದಿಂದ ನೆಲಮಟ್ಟದಿಂದ ಸೇತುವೆ ಮೇಲೆ ಹತ್ತಲು ಬೊಗರಿಬೈಲ ಗ್ರಾಮಸ್ಥರೇ ಸೇರಿ ಕಳೆದೆರಡು ವರ್ಷಗಳಿಂದ ಸುಮಾರು 25 ಸಾವಿರ ರೂ. ವೆಚ್ಚದಲ್ಲಿ ಕಾಲು ಸಂಕ ನಿರ್ಮಾಣ ತಾವೇ ಸಂಪರ್ಕ ಕೊಂಡಿಯನ್ನು ಕಲ್ಪಿಸುತ್ತಿದ್ದಾರೆ. ಆದರೆ, ಮಳೆಗಾಲ ಬಂತೆಂದರೆ ಸಾಕು ಅಘನಾಶಿನಿ ನದಿಯ ಪ್ರವಾಹಕ್ಕೆ ಈ ಕಾಲು ಸಂಕದ ರ್ಯಾಂಪ್ ಕೊಚ್ಚಿಹೋಗಿ ಸಂಪರ್ಕವೇ ಕಡಿದುಹೋಗುತ್ತದೆ.
ಸಾಕಷ್ಟು ಸಮಯಗಳಿಂದ ಇಲ್ಲಿನ ಜನರು ಸಂಕಷ್ಟ ಎದುರಿಸುತ್ತಿದ್ದು, ಈ ವರ್ಷವಾದ್ರೂ ಪರಿಹಾರ ದೊರಕಬಹುದು ಎಂದು ಚಾತಕ ಪಕ್ಷಿಯಂತೆ ಕಾದು ಕುಳಿತಿದ್ರೂ ಜನರ ನಿರೀಕ್ಷೆ ಮಾತ್ರ ಹುಸಿಯಾಗಿದೆ. ಈ ಸೇತುವೆ ಬಳಕೆಯಿಂದ ಇತರ ಗ್ರಾಮಗಳಿಗೆ ಸುಲಭದಲ್ಲಿ ಸಂಪರ್ಕಿಸಬಹುದಾಗಿದ್ರೂ, ಕಾಮಗಾರಿ ಅಪೂರ್ಣದಿಂದಾಗಿ ಜನರು 20ರಿಂದ 25 ಕಿ.ಮೀ. ದೂರ ಸುತ್ತುವರಿದೇ ಹೋಗಬೇಕಾದ ಅನಿವಾರ್ಯತೆ ಇಲ್ಲಿದೆ. ಪ್ರಸ್ತುತ, ಜನರು ಸೇತುವೆಯವರೆಗೆ ವಾಹನವನ್ನು ತಂದು ಅಲ್ಲಿಯೇ ಬಳಿಯಲ್ಲಿ ಇಟ್ಟು ಅಡಿಕೆ ಮರದ ಸಂಕದ ಮೇಲೆ ಹತ್ತಿ ಮತ್ತೊಂದು ಭಾಗಕ್ಕೆ ಹೋಗಿ ಬರುತ್ತಾರೆ. ಇನ್ನು ಮಳೆಗಾಲದಲ್ಲಿ ಅಡಿಕೆ ಮರದ ಸಂಕದ ವ್ಯಾಪ್ತಿಯಲ್ಲೆಲ್ಲಾ ನೀರು ತುಂಬುವುದರಿಂದ ಜನರು ದೋಣಿಯಲ್ಲೇ ಸಂಚರಿಸಬೇಕಾದ ಪರಿಸ್ಥಿತಿಯಿದೆ.
ತಮ್ಮೂರಿನ ಸೇತುವೆ ಸಂಪರ್ಕಕ್ಕಾಗಿ ಇಲ್ಲಿನ ಜನರು ಶಾಸಕರ ಮನೆಗೆ ತಿರುಗಿಯಾಗಿದೆ, ಪ್ರತಿಭಟನೆ, ಮನವಿ ಎಲ್ಲವೂ ಮಾಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಆದಷ್ಟು ಬೇಗ ಸಂಪರ್ಕ ದಾರಿಯನ್ನು ಕಲ್ಪಿಸಬೇಕೆನ್ನುವುದು ಜನರ ಆಗ್ರಹ. ಇನ್ನು ಕಳೆದ ವರ್ಷ ಶಾಸಕ ದಿನಕರ ಶೆಟ್ಟಿ ತನ್ನ ಕ್ಷೇತ್ರದಲ್ಲೇ ನಡೆದ ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ತನ್ನ ಕ್ಷೇತ್ರದಲ್ಲಿ ಶೇ. 75ರಷ್ಟು ಮಾತ್ರ ಕಾಮಗಾರಿ ನಡೆಸಿ ಶೇ. 25ರಷ್ಟು ಹಾಗೆಯೇ ಉಳಿಸಿ ಬಿಡ್ತೇನೆ. ಪೂರ್ಣ ಅಭಿವೃದ್ಧಿ ಮಾಡಿದ್ರೆ ಜನ ನಮಗೆ ಓಟು ಹಾಕೋಲ್ಲ ಎಂದಿದ್ರು. ಇದೇ ಕಾರಣಕ್ಕೆ ಈ ಸೇತುವೆಯ ಸಂಪರ್ಕ ರಸ್ತೆ ಕಾಮಗಾರಿ ಕೂಡಾ ಶಾಸಕರು ಮಾಡಿಸಿಕೊಡ್ತಿಲ್ವೇನೋ ಎಂದು ಗ್ರಾಮಸ್ಥರು ಆಡಿಕೊಳ್ಳುತ್ತಿದ್ದಾರೆ.
ಒಟ್ಟಿನಲ್ಲಿ ಸಾಕಷ್ಟು ಸಮಯಗಳಿಂದ ಈ ಗ್ರಾಮದ ಜನರು ಎದುರಿಸುತ್ತಿರುವ ಸಮಸ್ಯೆಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕೂಡಲೇ ಸ್ಪಂದಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕಿದೆ. ಈ ಮೂಲಕ ಇಷ್ಟು ವರ್ಷಗಳ ಕಾಲ ಜನರು ಎದುರಿಸುತ್ತಿದ್ದ ಸಂಕಷ್ಟಕ್ಕೆ ಮುಕ್ತಿ ಒದಗಿಸಬೇಕಿದೆ.