Mandya: ಪ್ಲಾಸ್ಟಿಕ್‌ಗೆ ಗುಡ್‌ ಬೈ, ಸಗಣಿಯಿಂದಲೇ ಮೂರ್ತಿ-ಅಲಂಕಾರಿಕ ಉತ್ಪನ್ನ ತಯಾರಿಸಿದ ರೈತ

Jun 16, 2022, 3:11 PM IST

ಮಂಡ್ಯ (ಜೂ.16): ಭಾರತೀಯ ಸಂಸ್ಕೃತಿಯಲ್ಲಿ ಗೋವುಗಳಿಗೆ ಪೂಜ್ಯ ಸ್ಥಾನ ನೀಡಲಾಗಿದೆ. ಮನುಷ್ಯ ಗೋವುಗಳಿಂದ ಹಲವು ಉಪಯೋಗಗಳನ್ನು ಪಡೆಯುತ್ತಾನೆ. ಹಾಲು ಮಾತ್ರವಲ್ಲದೆ ಹಸುವಿನ ಸಗಣಿ ಕೂಡ ಉಪಯುಕ್ತ ಎಂಬುದು ತಿಳಿದ ವಿಚಾರ. ಆದರೆ ಆ ಸರಣಿಯಿಂದ ಹತ್ತಾರು ಉತ್ಪನ್ನಗಳನ್ನು ತಯಾರಿಸಬಹುದು ಎಂಬುದನ್ನ ಮಂಡ್ಯದ ಯುವಕನೋರ್ವ ತೋರಿಸಿಕೊಟ್ಟಿದ್ದಾನೆ. ಪರಿಸರ ಸ್ನೇಹಿ ಚಿಂತನೆಗೆ ಉತ್ತಮ ಸ್ಪಂದನೆ ಕೂಡ ಸಿಗುತ್ತಿದೆ. ಶ್ರೀ ಕೃಷ್ಣ, ಗಣೇಶ, ಸ್ವಾಮಿ ವಿವೇಕಾನಂದರು, ಸಿದ್ದಗಂಗಾ ಶ್ರೀಗಳು ಹೀಗೆ ಹತ್ತಾರು ಮೂರ್ತಿಗಳು. ಇವೆಲ್ಲವೂ ನೋಡಲು ಮಣ್ಣಿನಿಂದ ತಯಾರಾಗಿದೆ ಎನಿಸಿದರೂ ಈ ಉತ್ಪನ್ನಗಳು ಸಿದ್ದವಾಗಿರುವುದು ಮಾತ್ರ ಶುದ್ಧ ಸಗಣಿಯಲ್ಲಿ. 

ಸಗಣಿಯಲ್ಲಿ ಇಷ್ಟೆಲ್ಲಾ ಮಾಡಲು ಸಾಧ್ಯಾನ ಅಂತ ಕೇಳಬಹುದು. ಹೌದು! ಇದೆಲ್ಲಾ ಸಾಧ್ಯ ಅಂತ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಪ್ರತಾಪ್ ತೋರಿಸಿಕೊಟ್ಟಿದ್ದಾರೆ. ಮಳವಳ್ಳಿ ತಾಲೂಕಿನ ನೆಲ್ಲಿಗೆರೆ ಗ್ರಾಮದ ಪ್ರತಾಪ್ ಕಳೆದ 4-5 ವರ್ಷಗಳಿಂದ ಕೃಷಿ ಮಾಡ್ತಿದ್ದಾರೆ. ಕೃಷಿ ಜೊತೆ ಜೊತೆಗೆ ಮೌಲ್ಯವರ್ಧನೆ ಕುರಿತು ಯೋಚಿಸಿದ ಪ್ರತಾಪ್, ಗೋವಿನ ಸಗಣಿಯಲ್ಲಿ ಹಲವು ಉತ್ಪನ್ನಗಳನ್ನು ತಯಾರಿಸಿ ಸೈ ಎನಿಸಿಕೊಂಡಿದ್ದಾರೆ. ಮನೆ ಅಲಂಕಾರಿಕ ವಸ್ತುಗಳನ್ನು ಸಗಣಿಯಲ್ಲೇ ತಯಾರು ಮಾಡುವ ಮೂಲಕ ಪರಿಸರ ಸ್ನೇಹಿ ಪ್ಲಾಸ್ಟಿಕ್ ಮುಕ್ತ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ. ತೋರಣ, ದೇವರ ವಿಗ್ರಹ, ಗಣ್ಯರ ಮೂರ್ತಿ, ವೆಲ್‌ಕಮ್ ಬೋರ್ಡ್, ಕೀ ಚೈನ್, ದೂಪ, ಅಗರಬತ್ತಿ ಹೀಗೆ 50ಕ್ಕೂ ಹೆಚ್ಚು ಉತ್ಪನ್ನಗಳನ್ನ ಸಗಣಿಯಲ್ಲೇ ತಯಾರಿಸಿ ಪ್ಲಾಸ್ಟಿಕ್ ಪ್ರಾಡಕ್ಟ್‌ಗಳಿಗೆ ಗುಡ್ ಬೈ ಹೇಳಿದ್ದಾರೆ. 

ಯುವಕನ ಮೇಲೆ ಹಲ್ಲೆ ಆರೋಪ: ಪೊಲೀಸ್ ಠಾಣೆಗೆ ಜೈಜಗದೀಶ್, ರಾಜಿ ಸಂಧಾನದ ಮೂಲಕ ಕೇಸ್ ಇತ್ಯರ್ಥ

ಕೃಷಿ ಜೊತೆಗೆ ಕಡಲೇಕಾಯಿ ಎಣ್ಣೆ ತಯಾರು ಮಾಡಿ ಮಾರಾಟ ಮಾಡುವ ಪ್ರತಾಪ್ ಹೈನುಗಾರಿಕೆಯನ್ನು ಮಾಡ್ತಿದ್ದಾರೆ. ಹಳ್ಳಿಕಾರ್, ಮಲೆನಾಡಗಿಡ್ಡ ತಳಿಗಳ 12 ಗೋವುಗಳನ್ನ ಸಾಕಿದ್ದಾರೆ. ಹಸುಗಳಿಂದ ಕೇವಲ ಹಾಲಿನ ಮಾರಾಟಕ್ಕಷ್ಟೇ ಸೀಮಿತವಾಗದೆ, ಗೋವಿನ ಸಗಣಿಯಿಂದಲೂ ಉತ್ಪನ್ನ ತಯಾರಿಸಿ ಮಾರಾಟ ಮಾಡ್ತಿದ್ದಾರೆ. ಸಗಣಿಯಿಂದ ತಯಾರಾದ ಉತ್ಪನ್ನಗಳು ಬೇಡವಾದರೆ ಅಥವಾ ಮುರಿದರೆ ಗಿಡಗಳಿಗೆ ಗೊಬ್ಬರವಾಗಿಯೂ ಬಳಸಬಹುದಾಗಿದ್ದು. ಈ ಉತ್ಪನ್ನಗಳು ಸಂಪೂರ್ಣ ಪರಿಸರ ಸ್ನೇಹಿಯಾಗಿವೆ. ಸದ್ಯ ಸಾಮಾಜಿಕ ಜಾಲತಾಣಗಳ ಮೂಲಕ ಸಗಣಿ ಉತ್ಪನ್ನಗಳು ಮಾರಾಟವಾಗುತ್ತಿದ್ದು. ಜನರಿಂದಲೂ ಉತ್ತಮ ಸ್ಪಂದನೆ ಸಿಗ್ತಿಸೆ. ಒಟ್ಟಾರೆ ಸಗಣಿಯಿಂದಲೂ ಹಲವು ಉತ್ಪನ್ನಗಳನ್ನ ತಯಾರಿಸಬಹುದು ಎಂಬುದನ್ನು ಪ್ರತಾಪ್ ತೋರಿಸಿಕೊಟ್ಟಿದ್ದಾರೆ. ಕ್ರಿಯಾಶೀಲ ಯುವಕನ ಪರಿಸರ ಸ್ನೇಹಿ ಆಲೋಚನೆಗೆ ಉತ್ತಮ ಮಾರುಕಟ್ಟೆ ಸಿಗಲಿ ಎಂಬುದು ನಮ್ಮ ಆಶಯ.