UP Elections: 'ನನ್ನ ಪ್ರಚಾರ ಸಭೆಗೆ ಬುಲ್ಡೋಜರ್‌ಗಳು ಕೂಡಾ ಬಂದಿವೆ' ಎಂದ ಯೋಗಿ

Feb 27, 2022, 12:51 PM IST

ಲಕ್ನೋ(ಫೆ.27): ಉತ್ತರ ಪ್ರದೇಶ ಚುನಾವಣಾ ಅಖಾಡದಲ್ಲಿ ಮತ್ತೆ ಬುಲ್ಡೋಜರ್‌ಗಳು ಸದ್ದುಮಾಡಿವೆ.  ಏನಿದು ಚುನಾವಣೆಯಲ್ಲಿ ಬುಲ್ಡೋಜರ್‌ಗಳ ಆರ್ಭಟ ಎಂದು ಭಾವಿಸಿದ್ರಾ? ಯಾವ ಪಕ್ಷದ ಚಿಹ್ನೆ ಬುಲ್ಡೋಜರ್‌ ಅಂತಾ ಯೋಚ್ನೆ ಮಾಡ್ತಿದ್ದೀರಾ? ಡೋಂಟ್ ವರಿ ಹಾಗೇನಿಲ್ಲ.  'ನನ್ನ ಪ್ರಚಾರ ಸಭೆಗೆ  ಬುಲ್ಡೋಜರ್‌ಗಳು ಕೂಡಾ ಬಂದಿವೆ,' ಎಂದು ಯೋಗಿ ಆದಿತ್ಯನಾಥ್ ಕ್ಯಾಮೆರಾಮ್ಯಾನ್‌ಗೆ ತೋರಿಸುವ ಸುಲ್ತಾನ್‌ಪುರ ಪ್ರಚಾರ ವಿಡಿಯೋವೊಂದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಉತ್ತರ ಪ್ರದೇಶದಲ್ಲಿ ಬುಲ್ಡೋಜರ್‌  ಈ ಬಾರಿ 'ಅಭಿವೃದ್ಧಿ' ಹಾಗೂ 'ಶೋಷಣೆ'ಯ ರೂಪಕವಾಗಿ ಬಳಕೆಯಾಗುತ್ತಿದೆ.  ಏನಿದು ಬುಲ್ಡೋಜರ್ ರಹಸ್ಯ ನೋಡೋಣ ಬನ್ನಿ. ಉತ್ತರ ಪ್ರದೇಶದಲ್ಲಿ ಅಧಿಕಾರ ಗಿಟ್ಟಿಸಿದ ಬಳಿಕಯೋಗಿ ಆದಿತ್ಯನಾಥ್ ಸರ್ಕಾರ ಅಕ್ರಮ ಕಟ್ಟಡಗಳೆಂದು ಬಹಳಷ್ಟು ಕಟ್ಟಡಗಳನ್ನು ಕೆಡವಿತ್ತು.  ಯೋಗಿ ಈ ತೆರವು ಕ್ರಮಗಳನ್ನು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಟೀಕಿಸಿ 'ಬುಲ್ಡೋಜರ್ ಬಾಬಾ' ಎಂದು ವ್ಯಂಗ್ಯವಾಡಿದ್ದರು.

ಆ ಬಳಿಕ ತೆಲಂಗಾಣದ ಬಿಜೆಪಿ ಶಾಸಕ ಉತ್ತರ ಪ್ರದೇಶದ ಪ್ರಚಾರಸಭೆಯೊಂದರಲ್ಲಿ, ಯೋಗಿ ಆದಿತ್ಯನಾಥ್‌ಗೆ ಮತ ನೀಡದಿದ್ದರೆ ಬುಲ್ಡೋಜರ್ ಹರಿಸುವ ಬೆದರಿಕೆ ಹಾಕಿದ್ದಾರೆನ್ನಲಾದ ವಿಡಿಯೋ ವೈರಲ್ ಆಗಿತ್ತು. ಅದು ಕೂಡಾ ಭಾರೀ ಚರ್ಚೆಯನ್ನು ಹುಟ್ಟು ಹಾಕಿತ್ತು. ಆದರೆ ಯೋಗಿ ಆದಿತ್ಯನಾಥ್ ಹಾಗೂ ಬಿಜೆಪಿ ಪಾಲಿಗೆ ಬುಲ್ಡೋಜರ್‌ ಅಭಿವೃದ್ಧಿ ಹಾಗೂ ಶಕ್ತಿಯ ಸಂಕೇತವಾಗಿದೆ.  ಅನಧಿಕೃತ, ಅಕ್ರಮ ಕಟ್ಟಡಗಳನ್ನು ಕೆಡವುವ ಮೂಲಕ ಭೂಮಾಫಿಯಾಗೆ ಬಿಸಿ ಮುಟ್ಟಿಸುವ ಹಾಗೂ ಎಕ್ಸ್‌ಪ್ರೆಸ್‌ ಹೈವೇಗಳನ್ನು ಕಟ್ಟುವ ಸಾಧನವಾಗಿ ಅದನ್ನು ಬಿಂಬಿಸಲಾಗುತ್ತಿದೆ.

ಅದಕ್ಕಾಗಿಯೇ, ಶುಕ್ರವಾರ ಸುಲ್ತಾನ್‌ಪುರ ಚುನಾವಣಾ ಪ್ರಚಾರಸಭೆಯಲ್ಲಿ ಯೋಗಿ ಆದಿತ್ಯನಾಥ್ ಬುಲ್ಡೋಜರ್‌ಗಳನ್ನು ಉಲ್ಲೇಖಿಸಿದ್ದಾರೆ. ಸದ್ಯ ಯೋಗಿ ಆದಿತ್ಯನಾಥ್ ಬುಲ್ಡೋಜರ್‌ಗಳನ್ನು ನೋಡಿ ಖುಷಿಪಡುವ ವಿಡಿಯೋ ವೈರಲ್ ಆಗಿದೆ.