
ಪ್ರತಿ ವರ್ಷ ಏಪ್ರಿಲ್ 18ರಂದು ವಿಶ್ವ ಪಾರಂಪರಿಕ ದಿನ (World Heritage Day) ಅಥವಾ ವಿಶ್ವ ಪರಂಪರೆ ದಿನ ಎಂದು ಆಚರಿಸಲಾಗುತ್ತದೆ. ಸ್ಮಾರಕಗಳ ಇತಿಹಾಸ, ವೈವಿಧ್ಯತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ, ಪಾರಂಪರಿಕ ತಾಣಗಳನ್ನು ರಕ್ಷಣೆ ಮಾಡುವ ಅಗತ್ಯದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ವರ್ಲ್ಡ್ ಹೆರಿಟೇಜ್ ಡೇಯನ್ನು ಆಚರಿಸಲು ನಿರ್ಧರಿಸಲಾಯಿತು. ನಮ್ಮ ಪರಂಪರೆಯನ್ನು ಮುಂದುವರಿಸಲು ಮತ್ತು ನಮ್ಮ ಸಂಸ್ಕೃತಿಯನ್ನು ರಕ್ಷಿಸಲು ಯುವ ಪೀಳಿಗೆಗೆ ಮಹತ್ವದ ಸಂದೇಶವನ್ನು ತಿಳಿಸಲು ಈ ದಿನವನ್ನು ಆಚರಿಸಲಾಗುತ್ತದೆ.
ವಾಸ್ತುಶಿಲ್ಪಿಗಳು, ಎಂಜಿನಿಯರ್‌ಗಳು, ಭೂಗೋಳಶಾಸ್ತ್ರಜ್ಞರು, ಸಿವಿಲ್ ಇಂಜಿನಿಯರ್‌ಗಳು, ಕಲಾವಿದರು ಮತ್ತು ಪುರಾತತ್ತ್ವ ಶಾಸ್ತ್ರಜ್ಞರು, ಪರಂಪರೆಯನ್ನು ಸಂರಕ್ಷಿಸಲು ಕೊಡುಗೆ ನೀಡುವ ಎಲ್ಲಾ ಜನರ ಪ್ರಯತ್ನಗಳನ್ನು ಈ ದಿನದಂದು ಗುರುತಿಸಲಾಗುತ್ತದೆ. ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೋ) 167 ದೇಶಗಳಲ್ಲಿ ಒಟ್ಟು 1155 ಸ್ಮಾರಕಗಳನ್ನು ವಿಶ್ವ ಪರಂಪರೆಯ ತಾಣಗಳಾಗಿ ಗೊತ್ತುಪಡಿಸಿದೆ. ಹಾಗಾದರೆ ಈ ದಿನದ ಉದ್ದೇಶವೇನು, ಇದರ ಮಹತ್ವವೇನು ಎಂಬುದನ್ನು ತಿಳಿದುಕೊಳ್ಳೋಣ.
Travel Tips : ಈ ದೇಶಕ್ಕೆ ಹೋಗಲು ವಿಮಾನ ನಿಲ್ದಾಣವೇ ಇಲ್ಲ..!
ವಿಶ್ವ ಪಾರಂಪರಿಕ ದಿನ 2022ರ ಥೀಮ್
ಪ್ರತಿ ವರ್ಷವು ವಿಶ್ವ ಪಾರಂಪರಿಕ ದಿನದ ಥೀಮ್ (Theme) ಬೇರೆ ಬೇರೆಯೇ ಆಗಿರುತ್ತದೆ. 2020ರಲ್ಲಿ ವಿಶ್ವ ಪಾರಂಪರಿಕ ದಿನದ ಥೀಮ್ ಪರಸ್ಪರ ಸಂಸ್ಕೃತಿ ಹಂಚಿಕೊಳ್ಳಿ, ಪರಂಪರೆ ಹಂಚಿಕೊಳ್ಳಿ, ಜವಾಬ್ದಾರಿ ಹಂಚಿಕೊಳ್ಳಿ ಎಂಬುದಾಗಿತ್ತು. 2022ರ ಥೀಮ್ ಮುಕ್ತ, ರಚನಾತ್ಮಕ ಮತ್ತು ಇಂಟರ್ ನ್ಯಾಷನಲ್ ಸಂವಾದಗಳ ಮೂಲಕ ಪರಂಪರೆ ಮತ್ತು ಹವಾಮಾನ ಎಂಬುದಾಗಿದೆ. ವಿಶ್ವ ಪಾರಂಪರಿಕ ದಿನದಂದು ಭಾರತದ ಐದು ಪ್ರಮುಖ ಪಾರಂಪರಿಕ ತಾಣಗಳ ಬಗ್ಗೆ ವಿವರ ತಿಳಿದುಕೊಳ್ಳೋಣ.
ಭಾರತದ ಐದು ಪ್ರಮುಖ ಪಾರಂಪರಿಕ ತಾಣಗಳ ಬಗ್ಗೆ ವಿವರ
ತಾಜ್ ಮಹಲ್, ಉತ್ತರ ಪ್ರದೇಶ: ಪರ್ಷಿಯನ್, ಭಾರತೀಯ ಮತ್ತು ಮುಸ್ಲಿಂ ವಾಸ್ತುಶೈಲಿಗಳ ಸಮ್ಮಿಶ್ರಣವಾದ ಮೊಘಲ್ ವಾಸ್ತುಶೈಲಿಗೆ ತಾಜ್ ಮಹಲ್ (Tajmahal) ಅತ್ಯುತ್ತಮ ಉದಾಹರಣೆಯೆಂದು ಪರಿಗಣಿಸಲಾಗಿದೆ. ವಿಶ್ವದ ಏಳು ಅದ್ಭುತಗಳಲ್ಲಿ ಒಂದಾಗಿರುವ ತಾಜ್ ಮಹಲ್ ವಿಶ್ವ ಪಾರಂಪರಿಕ ತಾಣಗಳಲ್ಲಿ ಒಂದಾಗಿದೆ. ಶಹಜಹಾನ್ ಈ ಸ್ಮಾರಕವನ್ನು ತನ್ನ ಮೂರನೇ ಪತ್ನಿ ಮುಮ್ತಾಜ್ ಬೇಗಂ ಸಮಾಧಿಯಾಗಿ ಕಟ್ಟಿಸಿದ. ಇದು ಯುನೆಸ್ಕೋದ 1983ರ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿತ್ತು.
ಅಜಂತಾ ಗುಹೆಗಳು, ಮಹಾರಾಷ್ಟ್ರ:ಭಾರತದ ಸ್ವಾತಂತ್ರ್ಯ ಪೂರ್ವ ಕಾಲದಲ್ಲಿ ಹೈದರಾಬಾದ್ ನ ನಿಜಾಮರ ಕಾಲದಲ್ಲಿ ಹೈದರಾಬಾದ್ ಪ್ರಾಂತ್ಯದಲ್ಲಿದ್ದ ಅಜಂತಾ ಈಗ ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿದೆ. ಇಲ್ಲಿಯ ಬೌಧ್ಧ ಚೈತ್ಯಗಳಿಗೆ ಮತ್ತು ಇಲ್ಲಿನ ಗೋಡೆಗಳಲ್ಲಿನ ಭಿತ್ತಿಚಿತ್ರಗಳಿಗಾಗಿ ಇದು ಅತ್ಯಂತ ಪ್ರಸಿಧ್ಧಿಯಾಗಿದೆ. ಅಲ್ಲಿ ಸುಮಾರು 30ರಷ್ಟು ಬೌದ್ಧ ಗುಹಾಂತರ ಸ್ಮಾರಕಗಳು ಇವೆ. ಈ ಗುಹಾಂತರ ದೇವಾಲಯಗಳ ಬಗ್ಗೆ ಅಂದಿನ ಚೀನಾದ ಬೌದ್ಧ ಪ್ರಯಾಣಿಕರು ಕೂಡ ಉಲ್ಲೇಖಿಸಿದ್ದಾರೆ.
Khajuraho ಅಂದರೆ ಲೈಂಗಿಕ ಶಿಲ್ಪ ಅಷ್ಟೇ ಅಲ್ಲ! ಇವೂ ನಿಮಗೆ ಗೊತ್ತಿರಲಿ
ಕಾಜಿರಂಗಾ ರಾಷ್ಟ್ರೀಯ ಉದ್ಯಾನವನ, ಅಸ್ಸಾಂ: ವಿಶ್ವದ ಮೂರರಲ್ಲಿ ಎರಡರಷ್ಟು ಭಾಗ ಒಂದು ಕೋಡಿನ ರೈನೋಸಾರಸ್ಗಳು ಕಾಜಿರಂಗಾ ನೇಷನಲ್ ಪಾರ್ಕ್ನಲ್ಲಿ ಇದೆ. ಕಾಜಿರಂಗಾ ರಾಷ್ಟ್ರೀಯ ಉದ್ಯಾನವನದ ಬಿಗ್ ಫೈವ್ ಎಂಬ ಪಟ್ಟಿಯಲ್ಲಿ ಒಂದು ಕೋಡಿನ ರೈನೋಸಾರಸ್, ರಾಯಲ್ ಬೆಂಗಾಲ್ ಟೈಗರ್, ಏಷಿಯನ್ ಆನೆ, ಕಾಡು ನೀರೆಮ್ಮೆ ಹಾಗೂ ಜಿಂಕೆ ಇದೆ. ಈ ಪ್ರದೇಶವು ಎತ್ತರದ ಹುಲ್ಲುಗಾವಲು, ದಟ್ಟ ಅರಣ್ಯ, ಬ್ರಹ್ಮಪುತ್ರ ಸಹಿತ ನಾಲ್ಕು ಮುಖ್ಯ ನದಿಗಳು ಇರುವ ಪ್ರದೇಶವಾಗಿದೆ.
ಕೋನಾರ್ಕ್ ಸೂರ್ಯ ದೇವಾಲಯ, ಒಡಿಸ್ಸಾ:ಕೊನಾರ್ಕ್ (Konark) ಒಡಿಶಾ ರಾಜ್ಯದ ಕರಾವಳಿಲ್ಲಿರುವ ದೇವಾಲಯ ಶಿಲ್ಪಕಲೆಗೆ ಪ್ರಸಿದ್ಧವಾದ ಕ್ಷೇತ್ರ. ಇಲ್ಲಿರುವ ಸೂರ್ಯ ದೇವಾಲಯ ಯುನೆಸ್ಕೋ ದಿ೦ದ ವಿಶ್ವ ಪರಂಪರೆಯ ತಾಣ ಎಂದು ಮಾನ್ಯತೆ ಪಡೆದಿದೆ. ಕೋನಾರ್ಕ ದೇವಾಲಯವು ವಾಸ್ತವವಾಗಿ ಒಂದು ಕಲ್ಲಿನ ರಥ. ಇಪ್ಪತ್ನಾಲ್ಕು ಚಕ್ರಗಳ ರಥದೊಳಗೆ ವಿರಾಜಮಾನನಾದ ಸೂರ್ಯದೇವನ ಈ ಗುಡಿಯನ್ನು ಗಂಗ ವಂಶದ ದೊರೆ ಒಂದನೇ ನರಸಿಂಹನ ಆಳ್ವಿಕೆಯ ಕಾಲದಲ್ಲಿ ಕಟ್ಟಲಾಗಿದೆ. ಕೊನಾರ್ಕ್ ಸೂರ್ಯ ದೇವಾಲಯ 13ನೇ ಶತಮಾನದ ದೇಗುಲವಾಗಿದೆ. ಮಹಾನದಿ ತಟದ, ಬಂಗಾಳ ಕೊಲ್ಲಿಯ ಪೂರ್ವ ತೀರದಲ್ಲಿ ಈ ದೇವಾಲಯ ನಿರ್ಮಾಣ ಮಾಡಲಾಗಿದೆ.
ಸಂಚಿ ಸ್ತೂಪ, ಮಧ್ಯಪ್ರದೇಶ: ಸಂಚಿಯ ಬೌದ್ಧ ಸ್ತೂಪ ಕ್ರಿಸ್ತಪೂರ್ವ 200 ರಿಂದ ಕ್ರಿಸ್ತಪೂರ್ವ 100ನೇ ಶತಮಾನದವರೆಗೆ ನಿರ್ಮಾಣವಾದ ಬೌದ್ಧ ಸ್ಮಾರಕಗಳಾಗಿವೆ. ಇದು ಮಧ್ಯಪ್ರದೇಶದ ಭೋಪಾಲ್ನಿಂದ ಸುಮಾರು 45 ಕಿಲೋಮೀಟರ್ನಷ್ಟು ವ್ಯಾಪ್ತಿಯಲ್ಲಿದೆ. ಜನವರಿ 24, 1989 ರಲ್ಲಿ ಯುನೆಸ್ಕೊ ಇದನ್ನು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರ್ಪಡೆ ಮಾಡಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.