ಜಗತ್ತಿನ ಏಳು ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್ ಶತಮಾನಗಳಷ್ಟು ಹಳೆಯದಾಗಿದ್ದರೂ ಇಂದಿಗೂ ಅದರ ಸೌಂದರ್ಯವನ್ನು ಹಾಗೆಯೇ ಉಳಿಸಿಕೊಂಡಿದೆ. ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುವ ತಾಜ್ ಮಹಲ್ ಅನ್ನು ಹಗಲು ಅಥವಾ ಚಂದ್ರನ ಬೆಳಕಿನಲ್ಲಿ ನೋಡಲು ಎರಡು ಕಣ್ಣು ಸಾಲದು. ಆದರೂ ಹಲವರು ಇದನ್ನು ಮುಂಜಾನೆ ನೋಡುವುದು ಜಗತ್ತಿನ ಅತ್ಯಂತ ಅದ್ಭುತ ದೃಶ್ಯ ಎಂದು ಹೇಳುತ್ತಾರೆ.
ಇತ್ತೀಚೆಗೆ ತಾಜ್ ನೋಡಿ ಆಕರ್ಷಿತರಾದವರಲ್ಲಿ ಯುವ ಬ್ರಿಟಿಷ್ ಪ್ರವಾಸಿ ಮತ್ತು ಇನ್‌ಸ್ಟಾಗ್ರಾಮರ್ ಕ್ರಿಸ್ಟಾ ಜರ್ಮನ್ ಕೂಡ ಒಬ್ಬರು. ಅವರು ಪ್ರಸ್ತುತ ಭಾರತದಲ್ಲಿ ಪ್ರಯಾಣಿಸುತ್ತಿದ್ದಾರೆ. ಭಾರತವನ್ನು ತನ್ನ ತಾತ್ಕಾಲಿಕ ನೆಲೆಯನ್ನಾಗಿ ಮಾಡಿಕೊಂಡ ನಂತರ, ಕ್ರಿಸ್ಟಾ ಇಲ್ಲಿನ ಸಾಂಸ್ಕೃತಿಕ ರತ್ನಗಳನ್ನು ಅನ್ವೇಷಿಸುತ್ತಿದ್ದಾರೆ ಮತ್ತು ತಾಜ್ ಮಹಲ್ ಅನ್ನು ಬೆಳಗಿನ ಜಾವ ನೋಡಿ ಕುಣಿದು ಕುಪ್ಪಳಸಿ, ಇದಕ್ಕಿಂತ ಮತ್ತೊಂದು ಅದ್ಭುತ ಇಲ್ಲವೇ ಇಲ್ಲ ಎಂದಿದ್ದಾರೆ.
ಬೆಳಗ್ಗೆ 5 ಗಂಟೆಗೆ ಮೊದಲು ಅಂದರೆ ಬೆಳಗ್ಗೆ 4:45 ಕ್ಕೆ ತಾಜ್ ಮಹಲ್ ನ ಪೂರ್ವ ದ್ವಾರಕ್ಕೆ ಬಂದ ಕ್ರಿಸ್ಟಾ, ತನ್ನ ಮಾರ್ಗದರ್ಶಕ ಡಾನ್ ಅವರ ಸಲಹೆಯನ್ನು ಅನುಸರಿಸಿ ಜನಸಂದಣಿ ಶುರುವಾಗುವ ಮೊದಲು ಸ್ಮಾರಕ ಇರುವ ಜಾಗಕ್ಕೆ ತಲುಪಿದರು. ಅವರ ಉತ್ಸಾಹ ಮತ್ತು ಸಮಯಪಾಲನೆಯಿಂದ ಆ ದಿನ ಗೇಟಿನೊಳಗೆ ಕಾಲಿಟ್ಟ ಮೊದಲ ಪ್ರವಾಸಿ ಆದರು. ಆ ಕ್ಷಣವನ್ನು "ನಿಜವಾಗಿಯೂ ಮಾಂತ್ರಿಕ" ಎಂದು ಬಣ್ಣಿಸಿದ ಕ್ರಿಸ್ಟಾ, ತಾಜ್ ಮಹಲ್ ಮುಂಜಾನೆಯ ಮಸುಕಾದ ಬೆಳಕಿನಲ್ಲಿ ಮಿರುಗುತ್ತಿದ್ದನ್ನು ನೋಡಿ ತನ್ನ ಅನುಭವವನ್ನು ಹಂಚಿಕೊಂಡರು. ಬೆಳಗಿನ ಮೃದು ಬಣ್ಣಗಳು, ಬಹುತೇಕ ಖಾಲಿಯಾಗಿದ್ದ ಕ್ಯಾಂಪಸ್‌ನ ಮೌನ ಎಲ್ಲ ಸೇರಿ ಆಳವಾದ ಪ್ರಭಾವ ಬೀರಿತು.
ಅವರು ತಮ್ಮ ಮಾರ್ಗದರ್ಶಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿದರು ಮತ್ತು ಅನೇಕ ಫೋಟೋಗಳು ಮತ್ತು ವಿಡಿಯೋಗಳನ್ನು ತೆಗೆದುಕೊಳ್ಳುತ್ತಾ ತಮ್ಮ ಪ್ರಯಾಣದ ಬಗ್ಗೆ ವಿವರಿಸಿದರು. ಕ್ರಿಸ್ಟಾ ಅವರ ವಿಡಿಯೋ ನೆಟ್ಟಿಗರ ಹೃದಯ ಗೆದ್ದಿದೆ. ಜೊತೆಗೆ 2.3 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಅನೇಕ ಸಂದರ್ಶಕರು ಈ ಕಾರ್ಯಕ್ರಮವನ್ನು ಶ್ಲಾಘಿಸಿದರು, ಭಾರತೀಯರಾಗಿದ್ದರೂ, ಇಷ್ಟೊಂದು ಶಾಂತ ಸಮಯದಲ್ಲಿ ತಾಜ್ ಅನ್ನು ಎಂದಿಗೂ ನೋಡಿರಲಿಲ್ಲ ಎಂದು ಹೇಳಿದರು. ಕ್ರಿಸ್ಟಾ ಅವರ ವಿಡಿಯೋ ನೋಡಿದ ಮತ್ತೋರ್ವ ಬಳಕೆದಾರರು ಬೆಳಗಿನ ಪ್ರಯಾಣದ ಬಗ್ಗೆ ನೆನಪನ್ನು ಹಂಚಿಕೊಂಡಿದ್ದಾರೆ.
ಸೂರ್ಯೋದಯದ ಸಮಯದಲ್ಲಿ ಕ್ರಿಸ್ಟಾ ಅವರ ತಾಜ್ ಮಹಲ್ ಪ್ರವಾಸವು ಅವರ ವೈಯಕ್ತಿಕ ಕನಸನ್ನು ನನಸಾಗಿಸಿತು ಮಾತ್ರವಲ್ಲದೆ, ಪ್ರಪಂಚದಾದ್ಯಂತದ ಸಾವಿರಾರು ಜನರಿಗೆ ಸ್ಫೂರ್ತಿ ನೀಡಿತು. ಪ್ರಪಂಚದಲ್ಲಿರುವ ಯಾವುದೇ ಸ್ಥಳ ಸ್ಮಾರಕವಾಗಲಿ ನಾವು ಅವುಗಳನ್ನು ವಿಭಿನ್ನವಾಗಿ ನೋಡಲು ಆಯ್ಕೆ ಮಾಡಿಕೊಂಡಾಗ ಶಾಂತ, ಸುವರ್ಣ ಕ್ಷಣಗಳನ್ನು ನೆನಪು ಮಾಡಿಕೊಡುತ್ತವೆ.
ವೈರಲ್ ಆಗುತ್ತಿದೆ ವಿಡಿಯೋ
ಮೇ 7 ರಂದು ತಮ್ಮ ಇನ್ಸ್ಟಾಗ್ರಾಂ ಪೇಜ್ ನಲ್ಲಿ ಕ್ರಿಸ್ಟಾ ತಮ್ಮ ಭೇಟಿಯ ವಿಡಿಯೋವನ್ನು "ಕನಸುಗಳು ನಿಜವಾಗಿಯೂ ನನಸಾದಾಗ... ಇದು ನನ್ನ ಜೀವನದ ಅತ್ಯಂತ ಮಾಂತ್ರಿಕ ಅನುಭವಗಳಲ್ಲಿ ಒಂದು. ಬೆಳಗ್ಗೆ 5 ಗಂಟೆಗೆ ರಾಜಕುಮಾರಿಯಂತೆ ತಾಜ್ ಮಹಲ್ ಸುತ್ತಲೂ ಓಡುವುದು" ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಕ್ರಿಸ್ಟಾ ಆ ಕ್ಷಣವನ್ನು ಅತಿವಾಸ್ತವಿಕವಾದದ್ದು ಎಂದು ಬಣ್ಣಿಸಿದ್ದಾರೆ.ಈ ಮೊದಲೇ ಹೇಳಿದ ಹಾಗೆ ಈಗಾಗಲೇ ವಿಡಿಯೋ 2.3 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ ಮತ್ತು ಅನೇಕ ಜನರು ಕಾಮೆಂಟ್ ಮಾಡುವ ಮೂಲಕ ತಮ್ಮ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಬಹುತೇಕ ಬಳಕೆದಾರರು ಭಾರತದವರೇ ಆದರೂ ಇಷ್ಟು ಬೇಗ ತಾಜ್ ಮಹಲ್‌ಗೆ ಭೇಟಿ ನೀಡಿರಲಿಲ್ಲ. ಈ ನೋಟ ತುಂಬಾ ಸುಂದರವಾಗಿ ಕಾಣುತ್ತದೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.