ಭೋಪಾಲ್ ನಲ್ಲಿರುವ ಈ ವಿಶೇಷ ದೇವಾಲಯವು ಹೂವು ಹಣ್ಣುಗಳ ಬದಲಾಗಿ ಸ್ಯಾನಿಟರಿ ಪ್ಯಾಡ್ ಗಳನ್ನು ದಾನದ ರೂಪದಲ್ಲಿ ಸ್ವೀಕರಿಸುತ್ತೆ. ಅಂತಹ ವಿಶೇಷ ಪದ್ಧತಿ ಇಲ್ಲಿ ಯಾಕಿದೆ? ಈ ದೇವಾಲಯ ಎಲ್ಲಿದೆ ನೋಡೋಣ.
ಭಾರತವು ದೇಗುಲಗಳ ತವರೂರಾಗಿದ್ದು, ಇಲ್ಲಿ ನೀವು ವಿವಿಧ ರೀತಿಯ ದೇಗುಲಗಳನ್ನು ಕಾಣಬಹುದು. ಭಾರತದ ತುತ್ತತುದಿ ಹಿಮಾಲಯದಿಂದ ಹಿಡಿದು, ದಕ್ಷಿಣದ ಕನ್ಯಾಕುಮಾರಿಯವರೆಗೂ ಒಂದೊಂದು ದೇವಸ್ಥಾನವೂ (temples of India) ಸಹ ಒಂದೊಂದು ಕಥೆಗಳನ್ನು ಹೇಳುತ್ತೆ. ಕೆಲವು ದೇಗುಲಗಳು ಅಚ್ಚರಿ ಮೂಡಿಸಿದರೆ, ಇನ್ನೂ ಕೆಲವು ದೇಗುಲಗಳು ವಿಚಿತ್ರ ಎನಿಸುತ್ತದೆ. ನೀವೇ ಕೇಳಿರಬಹುದು ಅಲ್ವಾ? ಒಂದು ದೇವಾಲಯದಲ್ಲಿ ದೇವರಿಗೆ ಆಲ್ಕೋಹಾಲ್ ಅರ್ಪಿಸಲಾಗುತ್ತೆ, ಮತ್ತೊಂದರಲ್ಲಿ ದೇವಿಗೆ ನೂಡಲ್ಸ್ ಅರ್ಪಣೆ ಮಾಡಲಾಗುತ್ತೆ, ಇನ್ನೊಂದೆಡೆ ದೇವಿಗೇ ಋತುಚಕ್ರ ಆಗುತ್ತೆ. ಅಂತಹ ವಿಶಿಷ್ಠ ದೇಗುಲಗಳನ್ನು ನೀವು ಭಾರತದಲ್ಲಿ ಕಾಣಬಹುದು.
Maha Shivratri 2025: ಈ ದೇವಾಲಯದಲ್ಲಿ ಶಿವನಿಗೆ ಪೊರಕೆಯೇ ಹರಕೆ!
ಇವತ್ತು ವಿಶೇಷವಾಗಿ ಸ್ಯಾನಿಟರಿ ಪ್ಯಾಡ್ಗಳನ್ನು (Sanitary Pads) ಸ್ವೀಕರಿಸುವ ಭಾರತದ ದೇವಾಲಯದ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ. ಸಾಂಪ್ರದಾಯಿಕ ದೇವಾಲಯಗಳಿಗಿಂತ ಭಿನ್ನವಾಗಿ, ಈ ವಿಶೇಷವಾದ ಅನ್ನಪೂರ್ಣ ದೇವಿ ದೇವಸ್ಥಾನದಲ್ಲಿ ದೇವಿಗೆ ಹೂವುಗಳು ಅಥವಾ ಹಾರಗಳ ಬದಲು ಸ್ಯಾನಿಟರಿ ಪ್ಯಾಡ್ಗಳನ್ನು ನೀಡಲಾಗುತ್ತದೆ. ಹೌದು ನೀವು ಕೇಳಿದ್ದು ಸರಿಯಾಗಿಯೇ ಇದೆ. ಇಲ್ಲಿ ಸ್ಯಾನಿಟರಿ ಪ್ಯಾಡ್ ಗಳನ್ನು ನೀಡಲಾಗುತ್ತೆ. ಅಷ್ಟಕ್ಕೂ ಈ ದೇಗುಲದಲ್ಲಿ ಹೂವುಗಳ ಬದಲಾಗಿ ಸ್ಯಾನಿಟರಿ ಪ್ಯಾಡ್ ಗಳನ್ನು ದೇವರಿಗೆ ಅರ್ಪಿಸೋದು ಯಾಕೆ ಎನ್ನುವ ಪ್ರಶ್ನೆ ನಿಮಗೂ ಮೂಡಬಹುದು ಅಲ್ವಾ? ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರೆ.
ಈ ದೇವಾಲಯದಲ್ಲಿ ಸ್ಯಾನಿಟರಿ ಪ್ಯಾಡ್ಗಳನ್ನು ದೇವರಿಗೆ ನೀಡುವ ಪರಿಕಲ್ಪನೆಯು ಅಸ್ಸಾಂನ ಗುವಾಹಟಿಯ ಕಾಮಾಕ್ಯ ದೇವಿ ದೇವಾಲಯದಿಂದ (Kamakhya Devi Temple Guwahati) ಬಂದಿದೆ. ಕಾಮಾಕ್ಯ ದೇವಿ ಮಂದಿರದ ಬಗ್ಗೆ ನಿಮಗೆ ಗೊತ್ತೇ ಇದೆ ಅಲ್ವಾ? ದೇವಿಯ ಯೋನಿಯನ್ನು ಇಲ್ಲಿ ಪೂಜಿಸಲಾಗುತ್ತೆ. ಇದು 51 ಶಕ್ತಿ ಪೀಠಗಳಲ್ಲಿ ಒಂದಾಗಿದೆ. ಇಲ್ಲಿ ವರ್ಷಕ್ಕೊಮ್ಮೆ ನಡೆಯುವ ಅಂಬುಬಾಚಿ ಉತ್ಸವವು ಮುಟ್ಟಿನ ಆರೋಗ್ಯ ಮತ್ತು ನೈರ್ಮಲ್ಯದ ಮೇಲೆ ಕೇಂದ್ರೀಕರಿಸುತ್ತದೆ. ಇಲ್ಲಿ ವರ್ಷಕ್ಕೊಮ್ಮೆ ದೇವಿ ಮುಟ್ಟಾಗುತ್ತಾಳೆ. ಆ ಬಟ್ಟೆಯನ್ನು ಪ್ರಸಾದದಂತೆ ಜನರಿಗೆ ಹಂಚಲಾಗುತ್ತದೆ.
ಭಕ್ತರೇ, ಎಂದೆಂದಿಗೂ ನೇರವಾಗಿ ದೇವರ ಕಣ್ಣಿಗೆ ಬೀಳಬೇಡಿ!
ಇದರಿಂದ ಪ್ರೇರಿತರಾದ ಭೋಪಾಲ್ ನ ಹೆಶೆಲ್ ಫೌಂಡೇಶನ್ನ (Heshel foundation) ನಿರ್ದೇಶಕ ದೀಪಾಂಜನ್ ಮುಖರ್ಜಿ ಅವರು ದುರ್ಗಾ ಬಾರಿಯಲ್ಲಿ ಇದೇ ರೀತಿಯ ಕಲ್ಪನೆಯನ್ನು ಜಾರಿಗೆ ತಂದರು. ಮುಟ್ಟಿನ ಆರೋಗ್ಯದ ಬಗ್ಗೆ ಗಮನ ಹರಿಸುವ ನಿಟ್ಟಿನಲ್ಲಿ ಇದನ್ನು ಆರಂಭಿಸಲಾಯಿತು. ಕೇವಲ ನಾಲ್ಕು ತಿಂಗಳಲ್ಲಿ ಅನ್ನಪೂರ್ಣ ದೇವಿ ದೇವಸ್ಥಾನದಲ್ಲಿ 11,000 ಕ್ಕೂ ಹೆಚ್ಚು ಸ್ಯಾನಿಟರಿ ಪ್ಯಾಡ್ಗಳನ್ನು ದಾನ ಮಾಡಲಾಗಿದೆ. ಕುಟುಂಬ ಯೋಜನಾ ಸಂಘದ ಸಹಾಯದಿಂದ, ಭಕ್ತರು ದಾನವಾಗಿ ನೀಡಿದ ಈ ಸ್ಯಾನಿಟರಿ ಪ್ಯಾಡ್ ಗಳನ್ನು ಭೋಪಾಲ್ನ ಕೊಳೆಗೇರಿ ಪ್ರದೇಶಗಳಲ್ಲಿ ಮತ್ತು ಬಾಲಕಿಯರ ಸರ್ಕಾರಿ ಶಾಲೆಗಳಲ್ಲಿ ವಿತರಿಸಲಾಗುತ್ತದೆ.
ಈ ದೇವಾಲಯದಲ್ಲಿ, (Annapoorna Devi Temple Bhopal) ಭಕ್ತರು ಮೂರು ರೀತಿಯಲ್ಲಿ ದಾನ ಮಾಡಬಹುದು: ಆಹಾರ ದಾನ, ಜ್ಞಾನ ದಾನ ಮತ್ತು ಆರೋಗ್ಯ ದಾನ (ಸ್ಯಾನಿಟರಿ ಪ್ಯಾಡ್ಗಳು ಮತ್ತು ಮುಟ್ಟಿನ ಕಪ್ಗಳು). ಇಲ್ಲಿಗೆ ಬಂದಂತಹ ಸ್ಯಾನಿಟರಿ ಪ್ಯಾಡ್ ಮತ್ತು ಕಪ್ ಗಳು ನಿರ್ಗತಿಕರಿಗೆ ಸಲ್ಲುತ್ತದೆ. ಭೋಪಾಲ್ನ ಅನ್ನಪೂರ್ಣ ದೇವಿ ದೇವಾಲಯವು ಮಹಿಳಾ ಸಬಲೀಕರಣದಲ್ಲಿ ಮಾಡಿದ ಕೆಲಸಕ್ಕಾಗಿ ಪ್ರಶಂಸೆಯನ್ನು ಗಳಿಸುತ್ತಿದೆ. ಇದು ಮಹಿಳೆಯರ ಆರೋಗ್ಯದ ರಕ್ಷಣೆಯ ಬಗ್ಗೆ, ಋತುಚಕ್ರದ ನೈರ್ಮಲ್ಯದ ಬಗ್ಗೆ ಗಮನ ಹರಿಸುವ ನಿಟ್ಟಿನಲ್ಲಿ ಆರಂಭಿಸಿರುವ ಈ ಯೋಜನೆಯನ್ನು ಜನ ಮೆಚ್ಚಿಕೊಂಡಿದ್ದಾರೆ.