ಅಂಡಾಶಯದಲ್ಲಿ ಮೈಕ್ರೋಪ್ಲಾಸ್ಟಿಕ್ ಪತ್ತೆ: ತಾಯಿಯಾಗುವ ಕನಸಿಗೆ ಅಡ್ಡಿಯಾಗಲಿದೆಯೇ ಈ ಮಾಲಿನ್ಯ?

Published : Apr 10, 2026, 05:10 PM IST
pregnant ladies

ಸಾರಾಂಶ

Microplastic pollution Kannada: ನಾವು ಬಳಸುವ ಪ್ಲಾಸ್ಟಿಕ್ ಕೇವಲ ಪರಿಸರವನ್ನು ಮಾತ್ರವಲ್ಲ, ಈಗ ನೇರವಾಗಿ ಮನುಷ್ಯನ ದೇಹದ ಅತಿ ಸೂಕ್ಷ್ಮ ಭಾಗಗಳನ್ನೂ ತಲುಪುತ್ತಿದೆ! ಇತ್ತೀಚಿನ ಆತಂಕಕಾರಿ ಸಂಶೋಧನೆಯ ಪ್ರಕಾರ, ಮಹಿಳೆಯರ ಅಂಡಾಶಯದಲ್ಲಿಯೂ ಮೈಕ್ರೋಪ್ಲಾಸ್ಟಿಕ್ ಕಣಗಳು ಪತ್ತೆಯಾಗಿವೆ.  

ಪ್ಲಾಸ್ಟಿಕ್ ಬಳಕೆ ನಮ್ಮ ಪರಿಸರಕ್ಕೆ ಎಷ್ಟು ಹಾನಿಕಾರಕ ಎಂಬುದು ನಮಗೆಲ್ಲರಿಗೂ ತಿಳಿದಿರುವ ವಿಷಯ. ಈ ಕುರಿತು ಪದೇ ಪದೇ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಆದರೆ ಈ ಪ್ಲಾಸ್ಟಿಕ್ ಅನ್ನುವ ವಿಷ ನಮ್ಮ ದೇಹದೊಳಗೂ ಪ್ರವೇಶಿಸುತ್ತದೆ ಎಂಬ ಕಹಿ ಸತ್ಯ ನಿಮಗೆ ತಿಳಿದಿದೆಯೇ?.

ಬೆಂಗಳೂರಿನ ಸೀನಿಯರ್ ಕನ್ಸಲ್ಟೆಂಟ್, ಕ್ಲಿನಿಕಲ್ ಲೀಡ್ - ಗೈನಾಕಾಲಜಿಕ್ ಆಂಕಾಲಜಿ ಡಾ. ರೋಹಿತ್ ರಘುನಾಥ್ ರಾನಡೆ ಈ ಕುರಿತು ಮಾಹಿತಿ ನೀಡಿದ್ದು, ಸಂಪೂರ್ಣ ಮಾಹಿತಿಗಾಗಿ ಮುಂದೆ ಓದಿ..

ಸಾಮಾನ್ಯವಾಗಿ ಗೈನಾಕಾಲಜಿಕಲ್ ರಿಪ್ರೊಡಕ್ಟಿವ್ ಹೆಲ್ತ್ (ಸಂತಾನೋತ್ಪತ್ತಿ ಆರೋಗ್ಯ) ವಿಚಾರಕ್ಕೆ ಬಂದಾಗ, ವಂಶವಾಹಿ ಅಂಶಗಳು, ಹಾರ್ಮೋನುಗಳ ಅಸಮತೋಲನ, ಆಹಾರ ಪದ್ಧತಿ ಮತ್ತು ನಿಯಮಿತ ವ್ಯಾಯಾಮದ ಕುರಿತು ಹೆಚ್ಚಿನ ಒತ್ತು ನೀಡಲಾಗುತ್ತದೆ. ಪಿಸಿಓಎಸ್ ಮತ್ತು ಎಂಡೊಮೆಟ್ರಿಯೊಸಿಸ್ ಎರಡೂ ಮುಟ್ಟಿನ ಸಮಯದಲ್ಲಿ ಹಾಗೂ ಲೈಂಗಿಕ ಕ್ರಿಯೆಯ ಸಮಯದಲ್ಲಿ ಅಥವಾ ನಂತರ ಮಹಿಳೆಯರಲ್ಲಿ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತವೆ ಎಂಬುದು ತಿಳಿದಿರುವ ವಿಷಯ. ಆದರೆ, ಈಗ ಮಹಿಳೆಯರ ಸಂತಾನೋತ್ಪತ್ತಿ ಅಂಗಗಳ ಆರೋಗ್ಯಕ್ಕೆ ಮೈಕ್ರೋಪ್ಲಾಸ್ಟಿಕ್ಸ್ ಮತ್ತು ನ್ಯಾನೋಪ್ಲಾಸ್ಟಿಕ್ಸ್ ರೂಪದಲ್ಲಿ ಮತ್ತೊಂದು ದೊಡ್ಡ ಭೀತಿ ಎದುರಾಗಿದೆ.

ಇಷ್ಟು ಹೇಳಿದಾಗ, ನಿಜವಾಗಲೂ ಮೈಕ್ರೋಪ್ಲಾಸ್ಟಿಕ್ಸ್ ಮತ್ತು ನ್ಯಾನೋಪ್ಲಾಸ್ಟಿಕ್ಸ್ ಅಂಡಾಶಯವನ್ನು ಪ್ರವೇಶಿಸಿ ಮಹಿಳೆಯರ ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯಕ್ಕೆ ಹೆಚ್ಚಿನ ಹಾನಿ ಉಂಟುಮಾಡಬಲ್ಲವೇ ಎಂಬ ಪ್ರಶ್ನೆ ನಿಮ್ಮ ಕಾಡಬಹುದು. ಇದರ ಉತ್ತರ 'ಹೌದು' ಎಂದೇ ಆಗಿದೆ. ಮೈಕ್ರೋಪ್ಲಾಸ್ಟಿಕ್ಸ್ ಮತ್ತು ನ್ಯಾನೋಪ್ಲಾಸ್ಟಿಕ್ಸ್ ನಿಜಕ್ಕೂ ಅಂಡಾಶಯದ ಅಂಗಾಂಶಗಳಲ್ಲಿ ಮತ್ತು ಫೋಲಿಕ್ಯುಲರ್ ದ್ರವದಲ್ಲಿ ಇರುವುದು ಈಗಾಗಲೇ ಪತ್ತೆಯಾಗಿವೆ.

ಈ ಅಗೋಚರ ನುಸುಳುಕೋರರ ಕುರಿತು ತಿಳಿಯೋಣ

ಈ ಸಮಸ್ಯೆಯ ಅಗಾಧತೆಯನ್ನು ಅರ್ಥಮಾಡಿಕೊಳ್ಳಲು, ಮೊದಲು ಈ ಕಣಗಳ ಬಗ್ಗೆ ತಿಳಿಯಬೇಕು. ಮೈಕ್ರೋಪ್ಲಾಸ್ಟಿಕ್ಸ್ ಎಂದರೆ ಐದು ಮಿಲಿಮೀಟರ್‌ ಗಿಂತ ಕಡಿಮೆ ಗಾತ್ರದ ಪ್ಲಾಸ್ಟಿಕ್‌ ನ ಸಣ್ಣ ತುಣುಕುಗಳು, ಮತ್ತು ನ್ಯಾನೋಪ್ಲಾಸ್ಟಿಕ್ಸ್ ಒಂದು ಮೈಕ್ರೋಮೀಟರ್‌ ಗಿಂತಲೂ ಕಡಿಮೆ ಗಾತ್ರದವು. ಇವು ಎಷ್ಟು ಚಿಕ್ಕವೆಂದರೆ ಬರಿಗಣ್ಣಿಗೆ ಕಾಣಿಸುವುದಿಲ್ಲ ಮತ್ತು ದೇಹದ ನೈಸರ್ಗಿಕ ಜೈವಿಕ ಅಡೆತಡೆಗಳನ್ನು ಸುಲಭವಾಗಿ ದಾಟಬಲ್ಲವು. ಇವುಗಳನ್ನು ಪಾಲಿಥಿಲೀನ್ (ಪಿಇ), ಪಾಲಿಪ್ರೊಪಿಲೀನ್ (ಪಿಪಿ), ಪಾಲಿಸ್ಟೈರೀನ್ (ಪಿಎಸ್) ಮತ್ತು ಪಾಲಿಥಿಲೀನ್ ಟೆರೆಫ್ತಲೇಟ್ (ಪಿಇಟಿ) ನಂತಹ ವಿವಿಧ ಪಾಲಿಮರ್‌ ಗಳೆಂದು ಗುರುತಿಸಬಹುದು, ಸಾಮಾನ್ಯವಾಗಿ ಇವುಗಳನ್ನು ಪ್ಯಾಕೇಜಿಂಗ್ ಮತ್ತು ಕೃಷಿ ಸಾಮಗ್ರಿಗಳಲ್ಲಿ ಬಳಸಲಾಗುತ್ತದೆ.

2024ರ 'ಸೈನ್ಸ್ ಆಫ್ ದಿ ಟೋಟಲ್ ಎನ್ವಿರಾನ್‌ ಮೆಂಟ್' ಅಧ್ಯಯನವು, Py-GC/MS ತಂತ್ರಜ್ಞಾನವನ್ನು ಬಳಸಿ ಮಾನವನ ಫೋಲಿಕ್ಯುಲರ್ ದ್ರವದಲ್ಲಿ ಪಾಲಿಥಿಲೀನ್ ಮತ್ತು ಪಿವಿಸಿಯಂತಹ ಪಾಲಿಮರ್‌ ಗಳು ಇರುವುದನ್ನು ಮೊದಲ ಬಾರಿಗೆ ದೃಢಪಡಿಸಿದೆ. ಈ ಸಂಶೋಧನೆಗೆ ಒಳಪಟ್ಟ 18 ಮಹಿಳೆಯರಲ್ಲಿ ಶೇ. 80 ಕ್ಕಿಂತ ಹೆಚ್ಚು ಮಹಿಳೆಯರ ಫೋಲಿಕ್ಯುಲರ್ ದ್ರವದಲ್ಲಿ ಮೈಕ್ರೋಪ್ಲಾಸ್ಟಿಕ್‌ ಗಳು ಕಂಡುಬಂದಿವೆ.

ಅಂಡಾಶಯಗಳನ್ನು ಈ ಹಿಂದೆ ಅತ್ಯಂತ ಸುರಕ್ಷಿತ ವಲಯವೆಂದು ಭಾವಿಸಲಾಗಿತ್ತು ಮತ್ತು ಸಂಕೀರ್ಣವಾದ ಫಿಲ್ಟರೇಷನ್ ವ್ಯವಸ್ಥೆಗಳು ಇವುಗಳನ್ನು ರಕ್ಷಿಸುತ್ತವೆ ಎಂದು ನಂಬಲಾಗಿತ್ತು. ಆದರೆ ಈಗ, ಈ ಕಣಗಳು ನಾವು ಸೇವಿಸುವ ಆಹಾರ, ನೀರು ಮತ್ತು ನಾವು ಉಸಿರಾಡುವ ಗಾಳಿಯ ಮೂಲಕವೂ ರಕ್ತಪ್ರವಾಹಕ್ಕೆ ಸೇರುತ್ತವೆ ಎಂಬುದು ಸಾಬೀತಾಗಿದೆ. ರಕ್ತಪ್ರವಾಹದ ಮೂಲಕ ಇವು ನೇರವಾಗಿ ಸಂತಾನೋತ್ಪತ್ತಿ ಅಂಗಗಳಿಗೂ ಸೋರಬಹುದು. ಪ್ಲಾಸ್ಟಿಕ್ ಬ್ಯಾಗ್‌ ಗಳಲ್ಲಿ ಕಂಡುಬರುವ ಪಾಲಿಥಿಲೀನ್ ಮತ್ತು ಪ್ಯಾಕೇಜಿಂಗ್‌ ನಲ್ಲಿ ಬಳಸುವ ಪಾಲಿಸ್ಟೈರೀನ್‌ ನಂತಹ ಸಾಮಾನ್ಯ ಪಾಲಿಮರ್‌ ಗಳು, ಇದೀಗ ಮಹಿಳೆಯರ ಅಂಡಾಣುಗಳ ಗುಣಮಟ್ಟ ಮತ್ತು ಸಾಮರ್ಥ್ಯವನ್ನು ನಿರ್ಧರಿಸುವ ದ್ರವದಲ್ಲಿಯೇ ಪತ್ತೆಯಾಗುತ್ತಿವೆ.

ಟ್ರೋಜನ್ ಹಾರ್ಸ್ ಎಫೆಕ್ಟ್: ಹಾನಿ ಹೇಗೆ ಸಂಭವಿಸುತ್ತದೆ?

ವೈದ್ಯಕೀಯ ದೃಷ್ಟಿಕೋನದಿಂದ ನೋಡುವುದಾದರೆ, ಕೇವಲ ಪ್ಲಾಸ್ಟಿಕ್ ಕಂಡುಬಂದಿರುವುದು ಮಾತ್ರ ಇಲ್ಲಿ ಆತಂಕಕಾರಿ ವಿಷಯವಲ್ಲ; ಬದಲಾಗಿ ಅದು ಉಂಟುಮಾಡುವ ‘ಟ್ರೋಜನ್ ಹಾರ್ಸ್ ಎಫೆಕ್ಟ್’ ಅತಿ ದೊಡ್ಡ ಸಮಸ್ಯೆಯಾಗಿದೆ. ಈ ಕಣಗಳು ಹೆಚ್ಚಾಗಿ ಎಂಡೋಕ್ರೈನ್ ಡಿಸ್ರಪ್ಟಿಂಗ್ ಕೆಮಿಕಲ್ಸ್ (ಇಡಿಸಿಗಳು) ಅಥವಾ ಹಾರ್ಮೋನ್ ವ್ಯತ್ಯಯ ಮಾಡುವ ರಾಸಾಯನಿಕಗಳನ್ನು ಹೊತ್ತು ತರುತ್ತವೆ. ಈ ಕಣಗಳು ಅಂಡಾಶಯದ ಅಂಗಾಂಶಗಳಲ್ಲಿ ನೆಲೆಸಿದಾಗ, ಅವು ಈ ಕೆಳಗಿನ ಹಲವಾರು ಹಾನಿಕಾರಕ ಪ್ರಕ್ರಿಯೆಗಳನ್ನು ಪ್ರಚೋದಿಸುತ್ತವೆ:

ಆಕ್ಸಿಡೇಟಿವ್ ಸ್ಟ್ರೆಸ್ ಮತ್ತು ಜೀವಕೋಶಗಳ ವಯಸ್ಸಾಗುವಿಕೆ
ಅಂಡಾಶಯದಲ್ಲಿ ಯಾವುದೇ ಹೊರಗಿನ ವಸ್ತು ಪತ್ತೆಯಾದಾಗ ಅದು ರಿಯಾಕ್ಟಿವ್ ಆಕ್ಸಿಜನ್ ಸ್ಪೀಷೀಸ್ (ಆಮ್ಲಜನಕದಿಂದ ಪಡೆದ ಅತಿ ಹೆಚ್ಚು ಪ್ರತಿಕ್ರಿಯಿಸುವ ಅಣುಗಳು) ಉತ್ಪಾದನೆಗೆ ಪ್ರಚೋದನೆ ನೀಡುತ್ತದೆ. ಇದು ಒಂದು ರೀತಿಯ ಜೀವಕೋಶದ ತುಕ್ಕು ಹಿಡಿಯುವಿಕೆಯಂತೆ. ಏಕೆಂದರೆ ಆಕ್ಸಿಡೇಟಿವ್ ಸ್ಟ್ರೆಸ್ ಅಂಡಾಣುಗಳ ಡಿಎನ್ಎ ಅನ್ನು ಹಾನಿಗೊಳಿಸುತ್ತದೆ. ಇದರಿಂದ ಅಂಡಾಣುಗಳು ಸರಿಯಾಗಿ ಪಕ್ವವಾಗುವುದಿಲ್ಲ ಮತ್ತು ಚಿಕ್ಕ ವಯಸ್ಸಿನಲ್ಲೇ ಅಂಡಾಣುವಿನ ಗುಣಮಟ್ಟ ಕ್ಷೀಣಿಸಲು ಕಾರಣವಾಗಬಹುದು.

ಹಾರ್ಮೋನುಗಳ ಅನುಕರಣೆ
ಹೆಚ್ಚಿನ ಪ್ಲಾಸ್ಟಿಕ್‌ ಗಳು ಈಸ್ಟ್ರೊಜೆನ್ ಹಾರ್ಮೋನ್ ಅನ್ನು ಹೋಲುವ ರಾಸಾಯನಿಕಗಳನ್ನು ಹೊಂದಿರುತ್ತವೆ. ಇವು ಫೋಲಿಕ್ಯುಲರ್ ಪರಿಸರವನ್ನು ಪ್ರವೇಶಿಸಿದಾಗ, ಪ್ರೊಜೆಸ್ಟರಾನ್ ಮತ್ತು ಈಸ್ಟ್ರೊಜೆನ್‌ ನ ನೈಸರ್ಗಿಕ ಸಂಕೇತಗಳನ್ನು ಅಡ್ಡಿಪಡಿಸುತ್ತವೆ. ಇದು ಅನಿಯಮಿತ ಮುಟ್ಟಿನ ಚಕ್ರಕ್ಕೆ ಕಾರಣವಾಗಬಹುದು ಮತ್ತು ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಓಎಸ್) ನಂತಹ ಸಮಸ್ಯೆಗಳಿಗೆ ಸಂಬಂಧಿಸಿರಬಹುದು.

ಮೈಟೊಕಾಂಡ್ರಿಯಲ್ ಡಿಸ್ ಫಂಕ್ಷನ್
ನ್ಯಾನೋಪ್ಲಾಸ್ಟಿಕ್‌ ಗಳು ಜೀವಕೋಶದ ಪೊರೆಗಳನ್ನು ಭೇದಿಸಬಲ್ಲ ಶಕ್ತಿ ಹೊಂದಿರುವುದರಿಂದ ಹೆಚ್ಚು ಅಪಾಯಕಾರಿ. ಒಮ್ಮೆ ಇವು ಜೀವಕೋಶದ ಒಳಗೆ ಪ್ರವೇಶಿಸಿದರೆ, ಜೀವಕೋಶದ ಶಕ್ತಿ ಕೇಂದ್ರಗಳೆಂದು ಕರೆಯಲ್ಪಡುವ ಮೈಟೊಕಾಂಡ್ರಿಯಕ್ಕೆ ಅಡ್ಡಿಪಡಿಸುತ್ತವೆ. ಅಂಡಾಣು ಅಭಿವೃದ್ಧಿ ಹೊಂದಲು ಮತ್ತು ಫಲೀಕರಣಗೊಳ್ಳಲು ಹೆಚ್ಚಿನ ಶಕ್ತಿಯ ಅವಶ್ಯಕತೆ ಇರುತ್ತದೆ; ಹೀಗಾಗಿ ಶಕ್ತಿ ಉತ್ಪಾದನೆಯಲ್ಲಿ ಯಾವುದೇ ಅಡಚಣೆಯು ಫಲವತ್ತತೆಯನ್ನು ಅಥವಾ ಫರ್ಟಿಲಿಟಿ ಶಕ್ತಿಯನ್ನು ಕುಗ್ಗಿಸಬಹುದು. ಅಲ್ಲದೆ, ಪ್ಲಾಸ್ಟಿಕ್ ಶಾಶ್ವತವಾದುದು; ಮಾನವ ದೇಹಕ್ಕೆ ಅದನ್ನು ಕರಗಿಸಿ ದೇಹದಿಂದ ಹೊರಹಾಕುವುದು ತುಂಬಾ ಕಷ್ಟಕರವಾದ ಕೆಲಸ.

ಪರಿಸರದಿಂದ ಅಂಡಾಣುವಿನವರೆಗೆ
ಮೈಕ್ರೋಪ್ಲಾಸ್ಟಿಕ್ ಹಾವಳಿಯು ಕಾಲಕ್ರಮೇಣ ಹೆಚ್ಚಾಗುವ ಸಮಸ್ಯೆ ಎಂಬುದನ್ನು ನಾವು ಗುರುತಿಸುವುದು ಮುಖ್ಯ. ಮನುಷ್ಯರು ಪ್ರತಿನಿತ್ಯ ಈ ಕೆಳಗಿನ ವಿವಿಧ ಹಾದಿಗಳ ಮೂಲಕ ಈ ಪ್ಲಾಸ್ಟಿಕ್ ಕಣಗಳಿಗೆ ಒಡ್ಡಿಕೊಳ್ಳುತ್ತಿದ್ದಾರೆ:

ಆಹಾರ ಮತ್ತು ಪಾನೀಯಗಳ ಸೇವನೆ
ಪ್ಲಾಸ್ಟಿಕ್ ವಾಟರ್ ಬಾಟಲಿಗಳು, ವಿಶೇಷವಾಗಿ ಬಿಸಿಯಾದಾಗ ಅವುಗಳಿಂದ ಮೈಕ್ರೋಪ್ಲಾಸ್ಟಿಕ್‌ ಗಳು ಬಿಡುಗಡೆಯಾಗುತ್ತವೆ. ಇವು ಅಲ್ಟ್ರಾ-ಪ್ರೊಸೆಸ್ಡ್ ಫುಡ್‌ ಗಳಲ್ಲಿ ಮತ್ತು ಕೆಲವು ಸಮುದ್ರಾಹಾರಗಳಲ್ಲಿಯೂ ಕಂಡುಬರುತ್ತವೆ. ನಾವು ಆಹಾರ ಮತ್ತು ನೀರನ್ನು ಸಂಗ್ರಹಿಸಲು ಪ್ಲಾಸ್ಟಿಕ್ ಕಂಟೈನರ್‌ ಗಳನ್ನು ಬಳಸುವುದನ್ನು ತಕ್ಷಣವೇ ನಿಲ್ಲಿಸಬೇಕು. ಗಾಜಿನ ಪಾತ್ರೆಗಳು ಮತ್ತು ತಾಮ್ರದ ಬಾಟಲಿಗಳ ಬಳಕೆಗೆ ಬದಲಾಗುವುದು ಪರಿಸರ ಮತ್ತು ದೇಹ ಎರಡಕ್ಕೂ ಪ್ರಯೋಜನಕಾರಿ. ಶಾಖವು ಪ್ಲಾಸ್ಟಿಕ್ ಕಣಗಳು ಆಹಾರ ಮತ್ತು ನೀರನ್ನು ಸೇರಲು ಮುಖ್ಯ ಪ್ರೇರಕವಾಗಿದೆ. ಗಾಜು, ಸೆರಾಮಿಕ್ ಅಥವಾ ಸ್ಟೇನ್‌ ಲೆಸ್ ಸ್ಟೀಲ್‌ ಗೆ ಬದಲಾಗುವುದು ಒಂದು ಪ್ರಮುಖ ಹೆಜ್ಜೆ; ಅಲ್ಲದೆ, ಉತ್ತಮ ಗುಣಮಟ್ಟದ ಕಾರ್ಬನ್ ಅಥವಾ ಆರ್‌ಒ ಫಿಲ್ಟರ್‌ ಗಳನ್ನು ಬಳಸುವುದರಿಂದ ಹೆಚ್ಚಿನ ಪ್ರಮಾಣದ ಮೈಕ್ರೋ-ಕಣಗಳನ್ನು ತಡೆಹಿಡಿಯಬಹುದು.

ಉಸಿರಾಟ: ನಗರ ಪ್ರದೇಶದ ವಾತಾವರಣದಲ್ಲಿ ಜನರು ಬಟ್ಟೆಗಳು ಮತ್ತು ಕಾರ್ಪೆಟ್‌ ಗಳಿಂದ ಹೊರಬರುವ ಸಿಂಥೆಟಿಕ್ ಫೈಬರ್‌ ಗಳನ್ನು (ಸಂಶ್ಲೇಷಿತ ಎಳೆಗಳು) ಉಸಿರಾಡುತ್ತಾರೆ. ಇಂದಿನ ಹೆಚ್ಚಿನ ಬಟ್ಟೆಗಳ ಪ್ರಮುಖ ಅಂಶವೆಂದರೆ ಪಾಲಿಯೆಸ್ಟರ್, ಅದರಲ್ಲೂ ವಿಶೇಷವಾಗಿ ಚರ್ಮದೊಂದಿಗೆ ನೇರ ಸಂಪರ್ಕಕ್ಕೆ ಬರುವ ಬ್ಲಾಂಕೆಟ್‌ ಗಳು ಮತ್ತು ಬೆಡ್ ಶೀಟ್‌ ಗಳಲ್ಲಿ ಇದು ಹೆಚ್ಚಾಗಿರುತ್ತದೆ. ಪಾಲಿಯೆಸ್ಟರ್ ನೇರವಾಗಿ ನಮ್ಮ ದೇಹವನ್ನು ಪ್ರವೇಶಿಸಿ ಅಪಾರ ಹಾನಿ ಉಂಟುಮಾಡಬಲ್ಲದು.

ಚರ್ಮದ ಸಂಪರ್ಕ: ಕೆಲವು ಪರ್ಸನಲ್ ಕೇರ್ ಪ್ರಾಡಕ್ಟ್‌ ಗಳು ಮೈಕ್ರೋಬೀಡ್‌ ಗಳು ಅಥವಾ ಪ್ಲಾಸ್ಟಿಕ್ ಆಧಾರಿತ ಥಿಕನರ್ ಗಳನ್ನು ಹೊಂದಿರುತ್ತವೆ, ಇವು ಚರ್ಮದ ಮೂಲಕ ದೇಹಕ್ಕೆ ಹೀರಲ್ಪಡುತ್ತವೆ. ಇದಕ್ಕಾಗಿ, ಉತ್ಪನ್ನಗಳನ್ನು ಖರೀದಿಸುವ ಮೊದಲು ನಾವು ಬಹಳ ಜಾಗರೂಕರಾಗಿರಬೇಕು; ಈಗ ನಾವು ಪ್ರಾಡಕ್ಟ್ ಲೇಬಲ್‌ ಗಳನ್ನು ಓದುವುದನ್ನು ರೂಢಿಸಿಕೊಳ್ಳಬೇಕು - ಉತ್ಪನ್ನವನ್ನು ಹಿಂದಕ್ಕೆ ತಿರುಗಿಸಿ ಅದರಲ್ಲಿರುವ ಪದಾರ್ಥಗಳ ಪಟ್ಟಿಯನ್ನು ಗಮನಿಸುವುದು ಇಂದಿನ ಅಗತ್ಯವಾಗಿದೆ.

ಇದು ಎಷ್ಟರ ಮಟ್ಟಿಗೆ ಹಾನಿಕಾರಕ?
ಅಂಡಾಶಯಗಳಲ್ಲಿ ಈ ಪ್ಲಾಸ್ಟಿಕ್‌ ಗಳು ಇವೆ ಎಂಬುದಕ್ಕೆ ಬಲವಾದ ಪುರಾವೆಗಳಿದ್ದರೂ, ಫಲವತ್ತತೆಯ ಮೇಲೆ ಇವು ದೀರ್ಘಕಾಲದವರೆಗೆ ಮತ್ತು ಒಟ್ಟಾರೆ ಜನಸಂಖ್ಯೆಯ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಸಂಶೋಧಕರು ಇನ್ನೂ ಅಧ್ಯಯನ ಮಾಡುತ್ತಿದ್ದಾರೆ. ಇದು ಗಾಬರಿಪಡಬೇಕಾದ ವಿಷಯವಲ್ಲ, ಬದಲಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಇರುವ ಎಚ್ಚರಿಕೆಯ ಕರೆ ಎಂದು ಭಾವಿಸಬೇಕು.

ಪ್ರೀ-ಕ್ಲಿನಿಕಲ್ ಮಾದರಿಗಳು ಹೆಚ್ಚಿನ ಮಟ್ಟದ ಮೈಕ್ರೋಪ್ಲಾಸ್ಟಿಕ್‌ ಗಳು ‘ಒವೇರಿಯನ್ ರಿಸರ್ವ್’ ಅನ್ನು ಕಡಿಮೆ ಮಾಡಬಲ್ಲವು ಎಂದು ಸೂಚಿಸುತ್ತಿವೆ. ‘ಒವೇರಿಯನ್ ರಿಸರ್ವ್’ ಎಂದರೆ ಪ್ರತಿ ವರ್ಷ ಕಳೆಯುತ್ತಿದ್ದಂತೆ ಉಳಿಯುವ ಆರೋಗ್ಯಕರ ಅಂಡಾಣುಗಳ ಸಂಖ್ಯೆ. ಕ್ಲಿನಿಕಲ್ ವ್ಯವಸ್ಥೆಗಳಲ್ಲಿ, ಉಳಿದೆಲ್ಲಾ ಆರೋಗ್ಯ ವರದಿಗಳು ಉತ್ತಮವಾಗಿದ್ದರೂ ಸಹ ಐವಿಎಫ್ ಚಿಕಿತ್ಸೆಗಳು ಕೆಲವು ಬಾರಿ ಏಕೆ ವಿಫಲವಾಗುತ್ತವೆ ಎಂಬುದಕ್ಕೂ ಈ ಕಣಗಳ ಉಪಸ್ಥಿತಿಯೇ ಕಾರಣವಾಗಿರಬಹುದೇ ಎಂದು ಸಂಶೋಧಕರು ಈಗ ಸಂಶೋಧಿಸಲು ಪ್ರಾರಂಭಿಸಿದ್ದಾರೆ. ಈ ಅಪಾಯವು 'ಡೋಸ್-ಡಿಪೆಂಡೆಂಟ್' ಆಗಿದೆ ಎಂದು ಪುರಾವೆಗಳು ಬೆಟ್ಟು ಮಾಡುತ್ತಿವೆ - ಅಂದರೆ, ಈಗಿನಿಂದಲೇ ನಾವು ಪ್ಲಾಸ್ಟಿಕ್‌ ಗೆ ಒಡ್ಡಿಕೊಳ್ಳುವುದನ್ನು ಕಡಿಮೆ ಮಾಡಿದರೆ, ಅದು ಮುಂದಿನ ದಿನಗಳಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯವನ್ನು ರಕ್ಷಿಸಬಹುದು.

ಮುಂದಿನ ಹಾದಿ
ಈ ವಿಷಯವು ಈಗ ಪರಿಸರ ವಿಜ್ಞಾನ ಮತ್ತು ಸ್ತ್ರೀರೋಗ ಶಾಸ್ತ್ರಕ್ಕೆ ಸಂಬಂಧಿಸಿದಂತೆ ಬಹಳ ನಿರ್ಣಾಯಕವಾಗಿದೆ. ಬಂಜೆತನವನ್ನು ಕೇವಲ ವೈದ್ಯಕೀಯ ಸಮಸ್ಯೆಯಾಗಿ ನೋಡುವ ಬದಲು, ಅದನ್ನು ಒಂದು ಪರಿಸರ ಸಂಬಂಧಿತ ಸಮಸ್ಯೆಯಾಗಿ ನೋಡಬೇಕಾಗಿದೆ. ಅಷ್ಟೇ ಅಲ್ಲದೆ, ಆಹಾರ ಮತ್ತು ಸೌಂದರ್ಯವರ್ಧಕ ಉದ್ಯಮಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಯಂತ್ರಿಸಲು ನೀತಿ-ಮಟ್ಟದ ಬದಲಾವಣೆಗಳ ಅಗತ್ಯವಿದೆ.

ಅಂಡಾಶಯದಲ್ಲಿ ಮೈಕ್ರೋಪ್ಲಾಸ್ಟಿಕ್‌ ಗಳು ಕಂಡು ಬಂದಿರುವುದು ಹೆಚ್ಚು ಆತಂಕಕಾರಿ ವಿಚಾರವಾಗಿದೆ. ಆದರೆ ಜಾಗೃತಿ ಮತ್ತು ಪ್ರಜ್ಞಾಪೂರ್ವಕ ಜೀವನಶೈಲಿಯ ಮೂಲಕ ಇದನ್ನು ಎದುರಿಸಬಹುದು. ಇಂದು ನಾವು ಮಾಡಿಕೊಳ್ಳುವ ಸಣ್ಣ ಬದಲಾವಣೆಗಳು ಕೇವಲ ನಮ್ಮ ಸ್ವಂತ ಆರೋಗ್ಯವನ್ನು ರಕ್ಷಿಸುವುದು ಮಾತ್ರವಲ್ಲದೆ, ಬರಲಿರುವ ಮುಂದಿನ ಪೀಳಿಗೆಯ ಬದುಕು ಮತ್ತು ಘನತೆಯನ್ನು ಕಾಪಾಡಲಿವೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕಡಿಮೆ ಖರ್ಚು, ಹೆಚ್ಚು ಮಸ್ತಿ! ಬೆಂಗಳೂರಿಗೆ ಸಮೀಪದಲ್ಲೇ ಇವೆ ಈ 3 ತಾಣಗಳು
ಹಳೆ ಕಾಲ ನೆನಪಿಸುವ ಖುರ್ಚಿ, ರುಚಿಯಾದ ಆಹಾರ – ಬೆಂಗಳೂರಿನಲ್ಲಿದೆ ಮೈಸೂರು ಡೈನಿಂಗ್ ಹಾಲ್