ಲಡಾಖ್ ಅಮೃತ ಯಾತ್ರೆ–2022: ಭಾಗ-7, ಅದೊಂದು ಹಾದಿಯ ಸಾಹಸ ಯಾನ ಕೈಗೂಡಲೇ ಇಲ್ಲ!

By Suvarna News  |  First Published Sep 16, 2022, 3:06 PM IST

ಲಡಾಖ್‌ನಲ್ಲಿ ಸದ್ಯದ ಮಟ್ಟಿಗೆ ಅತ್ಯಂತ ದುರ್ಗಮ ಹಾದಿಗಳಲ್ಲೊಂದು ಎನಿಸಿಕೊಂಡಿರುವ ರಸ್ತೆಯಲ್ಲಿ ನಾವು ಸಾಗಬೇಕಿತ್ತು. 45-50° ಏರುಹಾದಿಗಳಿರುವ, ಕೆಲವೆಡೆ ಕೇವಲ 6-7 ಅಡಿ ಅಗಲ ಇರುವ, ಕಿಲೋಮೀಟರ್‌ಗಟ್ಟಲೆ ನರಪಿಳ್ಳೆಯೂ ಇರದ, ಹೆಚ್ಚುಕಮ್ಮಿ ಒಂದಿಡೀ ದಿನ ಸಂಚರಿಸಬೇಕಿದ್ದ ಆ ರಸ್ತೆಯಲ್ಲಿ ಸಾಹಸ ಯಾನ ಮಾಡುವ ಯೋಜನೆ ನಮ್ಮದಾಗಿತ್ತು. ಅದು ಯಾಕೆ ಕೈಗೂಡಲಿಲ್ಲ? ಅದಕ್ಕೆ ಏನು ಅಡ್ಡಿಯಾಯ್ತು? ಮತ್ತೆ ಯಾವ ದಾರಿ ಹಿಡಿದ್ವಿ? ಮುಂದೆ ಓದಿ.


-ರವಿಶಂಕರ್‌ ಭಟ್‌

ಪ್ರಾಚೀನ ಲಡಾಖಿನ ಪಶ್ಚಿಮ ಭಾಗದಲ್ಲಿರುವ ಪ್ರಾಂತ್ಯ ಜನ್ಸ್ ಖಾರ್. ಒಂದು ಕಾಲದಲ್ಲಿ ಇದಕ್ಕೆ ಪ್ರತ್ಯೇಕ ರಾಜಾಡಳಿತವಿತ್ತು. ಆದರೆ, ಈಗ ಇದು ಕಾರ್ಗಿಲ್ ಜಿಲ್ಲೆಯ ಒಂದು ತಹಸೀಲು. ಇದರ ರಾಜಧಾನಿ ಪದುಮ್. ಇಲ್ಲಿಂದ ಲೇಹ್‌ ಗೆ ತೆರಳಲು 2 ಮಾರ್ಗ. ಒಂದು ಲಿಂಗ್ ಶೆಡ್, ಲಮಾಯೂರು ಮಾರ್ಗ. ಇದು ಸುಮಾರು 240-250 ಕಿ.ಮೀ. ದೂರದ ದಾರಿ. ದಾರಿ ಅನ್ನುವುದಕ್ಕಿಂತ ಗುಡ್ಡಗಾಡು ಮಾರ್ಗ ಎನ್ನುವುದು ಲೇಸು. ಇನ್ನೊಂದು, ಪನಿಖಾರ್, ಸಂಕೂ, ಕಾರ್ಗಿಲ್, ಲಮಾಯೂರು ಮೂಲಕ ಸಾಗುವ ರಾಷ್ಟ್ರೀಯ ಹೆದ್ದಾರಿ ಮಾರ್ಗ. ಬಳಸು ಹಾದಿ ಇದು. ಹೀಗೆ ಹೋದರೆ 200 ಕಿ.ಮೀ. ಹೆಚ್ಚುವರಿಯಾಗಿ ಪ್ರಯಾಣಿಸಬೇಕು. ನಾವು ಮೊದಲು ಯೋಜಿಸಿದಂತೆ ಲಿಂಗ್ ಶೆಡ್ ಮೂಲಕ ಸಾಗಬೇಕಿತ್ತು. ಆದರೆ, ಹಿಂದಿನ ದಿನ ಸಂಜೆ ಲಿಂಗ್ ಶೆಡ್ ದಿಕ್ಕಿನ ಪರ್ವತ ಶ್ರೇಣಿಯಲ್ಲಿ ಭಾರೀ ಹಿಮಪಾತ, ಮಳೆ ಸುರಿಯಿತು. ನಾವು ತಂಗಿದ್ದ ಪದುಮ್ ನಲ್ಲಂತೂ ಮರಳುಮಿಶ್ರಿತ ಬಿರುಗಾಳಿಯ ಜೊತೆಗೆ ಮಳೆಯಾಯಿತು. ಇಡೀ ವರ್ಷದಲ್ಲಿ ಸರಾಸರಿ ಕೇವಲ 8 ಸೆಂ.ಮೀ. ಮಳೆ ಸುರಿಯುವ ಪ್ರದೇಶವದು. ಹೆಚ್ಚುಕಮ್ಮಿ ಅಷ್ಟೇ ಮಳೆ ಒಂದು ರಾತ್ರಿಯಲ್ಲಿ ಸುರಿಯಿತು. ಹವಾಮಾನ ವೈಪರೀತ್ಯ ಹಾಗೂ ಜಾಗತಿಕ ತಾಪಮಾನ ಏರಿಕೆಯ ಫಲ.

Tap to resize

Latest Videos

undefined

ಆ ಮಾರ್ಗದಲ್ಲಿ ಏನೂ ಆಗಬಹುದಿತ್ತು
ಹಾಗೆ ಸುರಿದ ಮಳೆ, ಲಿಂಗ್ ಶೆಡ್ ಮೂಲಕವಾಗಿ ಸಾಹಸ ಪ್ರಯಾಣ ಮುಂದುವರಿಸುವ ನಮ್ಮ ಯೋಜನೆಗೆ ಎಳ್ಳು ನೀರು ಬಿಟ್ಟಿತು. ಹತ್ತಾರು ಗುಡ್ಡಗಳನ್ನು ಏರಿ ಇಳಿಯಬೇಕಾದ, ಕೆಲವು ಕಡೆ 6-7 ಅಡಿಗಳಷ್ಟೇ ಅಗಲವಿರುವ, ಆಳದ ಕಣಿವೆಗಳಿಂದ ಕೂಡಿದ ದುರ್ಗಮ ಹಾದಿಯದು. ಕಲ್ಲು, ಮಣ್ಣಿನ ಕಡಿದಾದ ರಸ್ತೆಯಲ್ಲಿ ಅಲ್ಲಲ್ಲಿ ಭೂಕುಸಿತ ಸಂಭವಿಸುವ ಸಾಧ್ಯತೆ ಬೇರೆ. ಸುಮಾರು 120-130 ಕಿ.ಮೀ. ಉದ್ದಕ್ಕೂ ಮಾನವ ವಸತಿ ಇದ್ದುದು ಲಿಂಗ್ ಶೆಡ್ ನಲ್ಲಿ ಮಾತ್ರ. ಏನಾದರೂ ಅಡಚಣೆ ಉಂಟಾದರೆ ಅಲ್ಲೂ ವಾಸ್ತವ್ಯಕ್ಕೆ ಅವಕಾಶ ಸಿಕ್ಕೀತು ಎಂಬ ಖಾತ್ರಿ ಇಲ್ಲ. ನಾವೇ ಎಲ್ಲಾದರೂ ಟೆಂಟು ಹಾಕಿಕೊಳ್ಳೋಣ ಎಂದರೆ ನಮ್ಮ‌ ಬಳಿ ಅದೂ ಇಲ್ಲ. ಅಲ್ಲದೆ, ಮಾರ್ಗಮಧ್ಯೆ ಭೂಕುಸಿತ ಸಂಭವಿಸಿದರೆ ಮುಂದೆ ಹೋಗುವ ಹಾಗೂ ಇಲ್ಲ, ಹಿಂದೆ ಬರುವ ಹಾಗೂ ಇಲ್ಲ.

ಲಡಾಖ್ ಅಮೃತ ಯಾತ್ರೆ–2022 ಭಾಗ-4: ಥ್ಯಾಂಕ್ಯೂ ಬ್ರೋ ಥ್ಯಾಂಕ್ಯೂ!

ತಲೆ ಮೇಲೆ ಸೂರು ಇಲ್ಲದೆ, ರಾತ್ರಿ ಕಳೆಯಲು ಸಾಧ್ಯವೇ ಇಲ್ಲ. ರಾತ್ರಿ ಅಂಥಾ ಚಳಿ ಇರುವ ಪ್ರದೇಶ. ಮಳೆ ಆಗಿದ್ದ ಕಾರಣಕ್ಕೆ ಏರು-ಇಳಿಯುವ ರಸ್ತೆಯ ತೇವವಾದ ಮಣ್ಣಿನಲ್ಲಿ ಜಾರುವ ಸಾಧ್ಯತೆಯೂ ಹೆಚ್ಚು. ಬೈಕೇ ಆಗಲಿ, ಜೀಪೇ ಆಗಲಿ ಜಾರಿದರೆ ಏನು ಬೇಕಾದರೂ ಆಗಬಹುದೆಂಬ ಸ್ಥಿತಿ. ಅಲ್ಲದೆ, ಲಮಾಯೂರಿನಿಂದ ಲಿಂಗ್ ಶೆಡ್ ಮೂಲಕ ಅವತ್ತಷ್ಟೇ ಪದುಮ್ ಗೆ ಬೈಕಿನಲ್ಲಿ ಬಂದಿದ್ದ ಜರ್ಮನ್ ಜೋಡಿಯೊಂದು ಆ ಮಾರ್ಗ ಸರಳವಾಗಿಲ್ಲ ಎಂಬ ಎಚ್ಚರಿಕೆಯನ್ನೂ ನೀಡಿದರು. ಅಪಾಯಗಳನ್ನು ಮನಗಂಡ ದಿಲೀಪ ಆ ಮಾರ್ಗವಾಗಿ ಪ್ರಯಾಣಿಸುವ ಯೋಜನೆಯನ್ನು ಕೈಬಿಟ್ಟ. ಗುಡ್ಡಗಾಡು ಪ್ರದೇಶಗಳಲ್ಲಿ ಸಂಚರಿಸಿ ಅಗಾಧ ಅನುಭವ ಇರುವ ಆತನ ನಿರ್ಧಾರಕ್ಕೆ ನಾವೆಲ್ಲ ತಲೆದೂಗಿದೆವು.

ಸುತ್ತು ಬಳಸುವ ಹಾದಿಯಲ್ಲಿ ವಿಶಿಷ್ಟ ಹೈವೇ ಅನುಭವ
ಲೇಹ್ ತಲುಪಲು ನಮಗೆ ಇದ್ದ ಪರ್ಯಾಯ ಮಾರ್ಗವೆಂದರೆ ಎರಡು ರಾಷ್ಟ್ರೀಯ ಹೆದ್ದಾರಿಗಳ ಮೂಲಕ ಪ್ರಯಾಣಿಸುವುದು. ಪದುಮ್ ನಿಂದ ಕಾರ್ಗಿಲ್ ಗೆ ಹೋಗುವ ರಾಷ್ಟ್ರೀಯ ಹೆದ್ದಾರಿ 301. ಸುಮಾರು 230 ಕಿ.ಮೀ. ಪ್ರಯಾಣ. ಆ ಬಳಿಕ ಕಾರ್ಗಿಲ್ ನಿಂದ ಲೇಹ್ ಗೆ ಹೋಗುವ ರಾಷ್ಟ್ರೀಯ ಹೆದ್ದಾರಿ 1. ಅದು ಸುಮಾರು 220 ಕಿ.ಮೀ. ಪ್ರಯಾಣ. ನಾವು ತಂಗಿದ್ದ ನಾಸ್ ಹೋಮ್ ಸ್ಟೇ ಮಾಲಿಕನೂ 'ನ್ಯಾಷನಲ್ ಹೈವೇ ಹೈ. ಪಾಂಚ್-ಛೇ ಘಂಟೇ ಮೇ ಕಾರ್ಗಿಲ್ ಜಾ ಸಕ್ತೇ ಹೋ' ಅಂದು ಹುರಿದುಂಬಿಸಿದ. ರಾಷ್ಟ್ರೀಯ ಹೆದ್ದಾರಿ ಅಂದರೆ ಟಾರು ಹಾಕಿದ ನುಣುಪಾದ ರಸ್ತೆ ಎಂದುಕೊಂಡು ಪದುಮ್ ಹೊರವಲಯದ ಪೆಟ್ರೋಲ್ ಬಂಕ್ ಒಂದರಲ್ಲಿ ನಮ್ಮೆಲ್ಲಾ ವಾಹನಗಳ ಹೊಟ್ಟೆ ತುಂಬಿಸಿಕೊಂಡು ಹೊರಟವರಿಗೆ ಕೆಲವೇ ಕಿಲೋಮೀಟರು ಸಾಗುವಷ್ಟರಲ್ಲಿ ಅಚ್ಚರಿ ಎದುರಾಗಿತ್ತು.

ಹಿಂದಿನ ದಿನ ಹೋಗಿದ್ದ ಸಾನಿ ಗ್ರಾಮ ದಾಟುತ್ತಿದ್ದಂತೆ ದಿಢೀರನೆ ಟಾರು ರಸ್ತೆ ಕೊನೆಗೊಂಡಿತು. ಅಗಲವಾದ ಹೆದ್ದಾರಿ ಮುಂದುವರಿದರೂ ಇದ್ದುದು ಸಂಪೂರ್ಣ ಕಚ್ಚಾ ರಸ್ತೆ. ಬೆಟ್ಟಗಳ ಬುಡದಲ್ಲೇ ಸಾಗುವ ಹೆದ್ದಾರಿಯಲ್ಲಿ ಸಾಗಿದ್ದೇ ವಿಶಿಷ್ಟ ಅನುಭವ. ಸುಮಾರು 25-30 ಕಿ.ಮೀ.ಗೆ ಸಿಗುವ ಪುಟ್ಟ ಹಳ್ಳಿಗಳು. ಅಂದು ಆಗಸ್ಟ್ 15 ಆದುದರಿಂದ ಅಲ್ಲಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ ನಡೆದಿತ್ತು. ಮನೆಮನೆಗಳಲ್ಲಿ ತ್ರಿವರ್ಣ ಧ್ವಜ ಹಾರಾಡುತ್ತಿದ್ದವು. ಹರ್ ಘರ್ ತಿರಂಗಾ ಅಭಿಯಾನ ಅಲ್ಲಿನ ಕುಗ್ರಾಮಗಳಿಗೂ ತಲುಪಿತ್ತು. ಶಾಲಾ ವಿದ್ಯಾರ್ಥಿಗಳು, ರಸ್ತೆ ಕಾಮಗಾರಿ ತಂಡಗಳು, ಬೆರಳೆಣಿಕೆಯ ಸರ್ಕಾರಿ ಕಚೇರಿಗಳಲ್ಲೂ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಳೆಗಟ್ಟಿತ್ತು. ಅಲ್ಲಿನ ಬಹುತೇಕ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಆಗಿದ್ದ ಕಾರಣ ಅಲ್ಲಲ್ಲಿ ಮೊಬೈಲ್ ಟವರ್ ಗಳು ಎದ್ದು ನಿಂತಿದ್ದವು. ಜಿಯೋ, ಬಿಸ್ಸೆನ್ನೆಲ್ ಪೋಸ್ಟ್ ಪೇಡ್ ನೆಟ್ ವರ್ಕ್ ಸಿಗುತ್ತಿತ್ತು. ಮೊಬೈಲ್ ನೆಟ್ ವರ್ಕ್ ಸಿಕ್ಕಿತೆಂದು ಪ್ರಯಾಣ ನಿಲ್ಲಿಸಲಾದೀತೇ.

ಲಡಾಖ್ ಅಮೃತ ಯಾತ್ರೆ – 2022 ಭಾಗ-5: ಜನ್ಸ್ಕಾರ್ ರೈಡ್ - ಏಕಾಗ್ರತೆ, ಕೌಶಲ್ಯ, ಮನೋಬಲ, ಸಾಮರ್ಥ್ಯ ಪರೀಕ್ಷೆ!

ಡ್ರಾಂಗ್ ಡ್ರಂಗ್ ಎಂಬ ವಂಡರ್
ಸುಮಾರು 75 ಕಿ.ಮೀ. ಪ್ರಯಾಣಿಸುತ್ತಿದ್ದಂತೆ ಭಾರೀ ತಿರುವುಗಳುಳ್ಳ ಏರು ಹಾದಿ ಎದುರಾಯಿತು. ತಪ್ಪಲಿನಲ್ಲೇ ಸಾಗುತ್ತಿದ್ದ ನಾವು ಇದ್ದಕ್ಕಿದ್ದಂತೆ ಅದ್ಯಾವುದೋ ಬೆಟ್ಟ ಏರತೊಡಗಿದೆವು. ಏಳೆಂಟು ತಿರುವುಗಳನ್ನು ದಾಟಿ ಮೇಲಕ್ಕೆ ತಲುಪುತ್ತಿದ್ದಂತೆ, ಮುಂದೆ ಸಾಗುತ್ತಿದ್ದ ದಿಲೀಪ ರಸ್ತೆ ಮಧ್ಯದಲ್ಲೇ ಬೈಕ್ ನಿಲ್ಲಿಸಿದ. ಎರಡೂ ಕೈಗಳನ್ನು ಮೇಲೆತ್ತಿ ಸಂಭ್ರಮಿಸುತ್ತಿದ್ದ. ಹತ್ತಿರ ತಲುಪಿ ಏನಾಯ್ತು ಎಂದು ಕೇಳಿದೆ. ಅಲ್ಲಿ ಕಾಣುತ್ತಿದೆಯಲ್ಲ, ಅದುವೇ ವಿಶ್ವದಲ್ಲೇ ಅತ್ಯಪರೂಪವಾದ ಡ್ರಾಂಗ್ ಡ್ರಂಗ್ ನೀರ್ಗಲ್ಲು ಪ್ರದೇಶ. ಅಲ್ಲಿ ರಸ್ತೆಯಂತೆ ಕಾಣುವುದು ಹೆಪ್ಪುಗಟ್ಟಿದ ನದಿ. ಬರೋಬ್ಬರಿ 23 ಕಿ.ಮೀ. ಉದ್ದದ ಐಸ್ ನದಿ ಅದು. ಅಮೆರಿಕದ ಅಲಾಸ್ಕಾದಲ್ಲಿರುವಂತೆ ವರ್ಷವಿಡೀ ಹೆಪ್ಪುಗಟ್ಟಿಯೇ ಇರುವ ನದಿ ಇರುವ ಖ್ಯಾತಿ ಇದರದು.

ಸಿಯಾಚಿನ್ ಹೊರತುಪಡಿಸಿದರೆ ಲಡಾಖಿನ ಅತಿದೊಡ್ಡ ನೀರ್ಗಲ್ಲು ಪ್ರದೇಶ ಇದುವೇ. ಬೇಸಿಗೆಯ ಬಿಸಿಲಿಗೂ ಕರಗದ ಹಿಮನದಿ, ಒಂದು ವೇಳೆ ಎಂದಾದರೂ ಕರಗಿದರೆ ಪ್ರಳಯವೇ ಆದಂತೆ ಎಂದು ವರ್ಣಿಸಿದ. ಸಮುದ್ರ ಮಟ್ಟದಿಂದ ಸುಮಾರು 12000 ಅಡಿ ಎತ್ತರವಿರುವ ಪದುಮ್ ನಿಂದ ನಾವಾಗಲೇ 15000 ಅಡಿ ಎತ್ತರದ ಪ್ರದೇಶಕ್ಕೆ ತಲುಪಿದ್ದೆವು. ಮೋಡ ಕವಿದಿತ್ತು. ಸಣ್ಣಗೆ ಮಳೆ ಹನಿಯುತ್ತಿತ್ತು. ಚಳಿ ತನ್ನ ಅಸ್ತಿತ್ವ ಸಾರುತ್ತಿತ್ತು. ಅಂತಹ ಐತಿಹಾಸಿಕ ನೀರ್ಗಲ್ಲು ಪ್ರದೇಶವನ್ನು ಕಣ್ತುಂಬಿಕೊಳ್ಳುತ್ತಿದ್ದಂತೆ ಥಾರ್ ತಂಡ ನಮ್ಮನ್ನು ಕೂಡಿಕೊಂಡಿತು. ಅಲ್ಲೊಂದಿಷ್ಟು ಛಾಯಾಗ್ರಹಣ, ನಮ್ಮ ಕೈಲಾದ ರೀತಿಯಲ್ಲಿ ರಾಷ್ಟ್ರಧ್ವಜ ಅನಾವರಣ ಮಾಡಿಕೊಂಡು ಸಂಭ್ರಮಿಸಿದೆವು. ಲಿಂಗ್ ಶೆಡ್ ಮಾರ್ಗದಲ್ಲಿ ಹೋಗದ ಬೇಸರ ಡ್ರಾಂಗ್ ಡ್ರಂಗ್ ದರ್ಶನದೊಂದಿಗೆ ನೀಗಿತ್ತು.

ಕಾರ್ಗಿಲ್‌ಗೆ ಹೊರಟವರು ಅಲ್ಲೇಕೆ ಹೋಗಲಿಲ್ಲ?
ಆಗಲೇ ಮಧ್ಯಾಹ್ನ ದಾಟಿತ್ತು. ಕಾರ್ಗಿಲ್ ಇನ್ನೂ 140-150 ಕಿ.ಮೀ. ದೂರ ಇತ್ತು. ರಾಷ್ಟ್ರೀಯ ಹೆದ್ದಾರಿ ಎಂಬ ಹೆಗ್ಗಳಿಕೆ ಬಿಟ್ಟರೆ ರಸ್ತೆ ಅಷ್ಟು ಸುಲಭವಾಗಿ ಮುಗಿಯುತ್ತಲೇ ಇರಲಿಲ್ಲ. 20-25 ಕಿ.ಮೀ. ಸಾಗುತ್ತಿದ್ದಂತೆ ಸಿಕ್ಕ ಚಿಕ್ಕ ಹೋಟೆಲೊಂದರಲ್ಲಿ ಮ್ಯಾಗಿ ಹಾಗೂ ಚಹಾದೊಂದಿಗೆ ಉದರ ಸೇವೆ ಮುಗಿಸಿ ಪ್ರಯಾಣ ಮುಂದುವರಿಸಿದೆವು. 3 ಗಂಟೆ ದಾಟಿತ್ತು. ಇನ್ನೊಂದು 115-120 ಕಿ.ಮೀ. ದೂರ 3 ತಾಸಲ್ಲಿ ಹೋಗಬಹುದು ಅಂದುಕೊಂಡಿದ್ದವರ ನಿರೀಕ್ಷೆ ಸುಳ್ಳಾಯಿತು. ಜುಲಿಡೋಕ್ ಎಂಬಲ್ಲಿಗೆ ತಲುಪುತ್ತಿದ್ದಂತೆ, ಮುಂದೆ ಹೆದ್ದಾರಿಯಲ್ಲಿ ಭೂಕುಸಿತವಾಗಿದೆ, ಇನ್ನೊಂದು ಮಾರ್ಗವಿದೆ. ಅದರಲ್ಲಿ ಹೋಗಿ. ಅದು ಹತ್ತಿರದ ಮಾರ್ಗವೂ ಕೂಡ ಎಂದು ಸ್ಥಳೀಯ ವಾಹನ ಚಾಲಕನೊಬ್ಬ ಸಲಹೆ ನೀಡಿದ. ಆತನ ಸಲಹೆಯೇನೋ ಸರಿಯಿತ್ತು. ಆದರೆ, ದಾರಿ ಕಡಿದಾಗಿತ್ತು. ಹಾಗೂ ಹೀಗೂ 50 ಕಿ.ಮೀ. ಸಾಗುವಷ್ಟರಲ್ಲಿ ಬೆಟ್ಟದ ತಪ್ಪಲಿನಲ್ಲಿ ಹಚ್ಚ ಹಸುರಿನಿಂದ ಕೂಡಿದ ಸುಂದರ ಪಟ್ಟಣವೊಂದು ಕಾಣಿಸಿತು. ಕಣಿವೆ ಇಳಿದು ಆ ಪಟ್ಟಣ ತಲುಪುವಷ್ಟರಲ್ಲಿ ಟಾರು ರಸ್ತೆ ಆರಂಭವಾಗಿತ್ತು. ಇನ್ನೇನು 65 ಕಿ.ಮೀ. ಸಾಗಿದರೆ ಕಾರ್ಗಿಲ್ ಬಂದೇ ಬಿಡುತ್ತದೆ ಎಂಬ ಉತ್ಸಾಹದಲ್ಲಿ ನಾನು ಆ್ಯಕ್ಸಿಲರೇಟರ್ ತಿರುಗಿಸಿದೆ.

ಲಡಾಖ್ ಅಮೃತ ಯಾತ್ರೆ – 2022 ಭಾಗ-6. ಪುರ್ನೆಯಿಂದ 52 ಕಿ.ಮೀ. ಸಾಗಲು 4 ತಾಸು !

ಸುತ್ತ ಮರ-ಗಿಡಗಳು, ಜುಳು ಜುಳು ಹರಿಯುವ ತೊರೆಗಳು, ನಡುವೆ ಹಳೆ-ಹೊಸತರ ಸಮ್ಮಿಲನದಂತಿರುವ ಕಟ್ಟಡಗಳು, ಪುಟ್ಟ ಪಟ್ಟಣವನ್ನು ದಾಟಿ ಒಂದೆರಡು ಕಿ.ಮೀ. ಹೋಗುತ್ತಿದ್ದಂತೆ ಏನೋ ನೆನಪಾದವರಂತೆ ಗಕ್ಕನೆ ನಿಲ್ಲಿಸಿದೆ. ಕೆಲ ನಿಮಿಷಗಳಲ್ಲಿ ದಿಲೀಪ ಬೈಕಿನಲ್ಲಿ ಬಂದ. ಅವನ ಹಿಂದೆಯೇ ಅನಂತನ ಜೀಪು ಬಂತು. ಎಲ್ಲರಿಗೂ ಏಕಕಾಲಕ್ಕೆ ಅನಿಸಿದ್ದೇನೆಂದರೆ, ಕಾರ್ಗಿಲ್ ಎಂಬ ಜಿಲ್ಲಾ ಕೇಂದ್ರದ ಜನಜಂಗುಳಿಯಲ್ಲಿ ರಾತ್ರಿ ಕಳೆಯುವ ಬದಲು ಇದೇ ನಿಸರ್ಗ ರಮಣೀಯ ಹಳ್ಳಿಯಲ್ಲಿ ಏಕಿರಬಾರದು ಎಂದು. ಸಮಾನ ಮನಸ್ಥಿತಿ ಅಂದರೆ ಇದೇ ನೋಡಿ. 1 ಕಿ.ಮೀ. ಹಿಂದೆ ಬಂದು ಪಟ್ಟಣದಲ್ಲಿದ್ದ ಹೋಮ್ ಸ್ಟೇ ಒಂದರಲ್ಲಿ ತಂಗಲು ನಿರ್ಧರಿಸಿದೆವು. ಕಾಶ್ಮೀರಿ ಮುಸ್ಲಿಮರು ಬಹುಸಂಖ್ಯಾತರಾಗಿರುವ ಪನಿಖಾರ್ ಎಂಬ ಊರದು. ನಮಗೆ ಆತಿಥ್ಯ ನೀಡಿದ್ದೂ ಅಂಥದೇ ಒಂದು ಕುಟುಂಬ. ರೊಟ್ಟಿ, ಪಲ್ಯ, ಅನ್ನ, ದಾಲ್ ಮತ್ತಿತರೆ ಖಾದ್ಯಗಳಿಂದ ಕೂಡಿದ್ದ ಊಟ, ಬೆಳಗ್ಗೆ ತಿಂಡಿಗೆ ಆಲೂ ಪರೋಟ ಸೇರಿದಂತೆ ಶುದ್ಧ ಶಾಕಾಹಾರ ನೀಡಿ ಉಪಚರಿಸಿದರು ಅವರು. ಆ ದಿನ ಕಾರ್ಗಿಲ್ ವರೆಗೆ ಪ್ರಯಾಣಿಸದೆ ಇದ್ದುದು ಒಳ್ಳೆಯದೇ ಆಯಿತು ಎಂದು ಎಲ್ಲರಿಗೂ ಅನ್ನಿಸಿದ್ದರಲ್ಲಿ ಎರಡು ಮಾತಿಲ್ಲ. ಹರಿವ ನೀರಿನ ನಿನಾದ ಹೊರತುಪಡಿಸಿದರೆ ನಿಶ್ಶಬ್ದ ವಾತಾವರಣದಲ್ಲಿ ಸೊಂಪಾದ ನಿದ್ದೆ ಹೋದೆವು.

ಮುಂದಿನ ಕಂತಿನಲ್ಲಿ: ಅಫ್ಘಾನಿಸ್ತಾನದ ಬಮಿಯಾನ್ ಬುದ್ಧ ಗೊತ್ತು, ಕರ್ಸ್ತೇ ಖಾರ್ ನ ಮೈತ್ರೇಯಿ ಬುದ್ಧ ಗೊತ್ತಾ? ದೇಶದ ರಾಷ್ಟ್ರೀಯ ಹೆದ್ದಾರಿ ನಂ.1 ಸೌಂದರ್ಯ ಹೇಗಿದೆ? ಕಣ್ಣಿಗೆ ಕಾಣದ ಹಳ್ಳಿಯ ಕತೆ ಕೇಳಿದೀರಾ? ಲೇಹ್ ದಾರಿಯಲ್ಲಿ ಅದೆಷ್ಟು ಪಾಸ್‌ಗಳು? ಮ್ಯಾಗ್ನೆಟಿಕ್ ಹಿಲ್‌ನಲ್ಲಿ ವಾಹನಗಳಿಗೆ ಏನಾಗುತ್ತೆ?

click me!