ಲಡಾಖ್ ಅಮೃತ ಯಾತ್ರೆ–2022 ಭಾಗ-4: ಥ್ಯಾಂಕ್ಯೂ ಬ್ರೋ ಥ್ಯಾಂಕ್ಯೂ!

ಮನಾಲಿಯಿಂದ ಹೊರಟ ತಕ್ಷಣ ನಮಗೆ ಸಿಕ್ಕಿದ್ದು ನಮ್ಮ ಆಗುಂಬೆಯಂಥ ಘಾಟ್ ರಸ್ತೆ. ಏನಿಲ್ಲವೆಂದರೂ 10-12 ಹೇರ್ ಪಿನ್ ತಿರುವುಗಳು. ಅವುಗಳಲ್ಲಿ ಬೈಕ್ ಹೊಡೆಯುವ ಮೋಜು ಅನುಭವಿಸುತ್ತ ಮುಂದೆ ಸಾಗಿದೆವು. ಸುಮಾರು 35 ಕಿ.ಮೀ. ಏರಿರಬಹುದು. ಧುತ್ತನೆ ಎದುರಾಯಿತು ಅಟಲ್ ಟನಲ್. ಅದೊಂದು ಎಂಜಿನಿಯರಿಂಗ್ ಮಾರ್ವೆಲ್. ಸುಮಾರು 9 ಕಿ.ಮೀ. ಉದ್ದದ ಸುರಂಗ ಮಾರ್ಗ. ಬೆಟ್ಟದ ಹೊಟ್ಟೆಯನ್ನು ಕೊರೆದು ಮಾಡಿದ ಚತುಷ್ಪಥ ಹೆದ್ದಾರಿ. 

ladakh amrita yatra 2022 part 4 Thank You Bro Thank You san

- ರವಿಶಂಕರ್ ಭಟ್

ಮೊದಲ ದಿನದ ಆತಂಕ ಮಾಯ. 2ನೇ ದಿನ ವರುಣ, ಭೂದೇವಿ ಸಂಪೂರ್ಣ ಕೃಪೆ ನಮ್ಮ ಮೇಲೆ. ಪ್ರಯಾಣ ಕೇವಲ 115 ಕಿ.ಮೀ. ಆದರೆ, ಅನುಭವ ಮಾತ್ರ ಮೈನವಿರೇಳಿಸುವಂತಹುದು. ನಗ್ಗರ್, ಮನಾಲಿ, ರೋಹ್ತಂಗ್, ಸಿಸ್ಸು, ಟಾಂಡಿ, ಕೀಲಾಂಗ್ ದಾಟಿ ಬಂದ ಹಾದಿ ಇದೆಯಲ್ಲ ಒಂದಕ್ಕಿಂತ ಒಂದು ರಮಣೀಯ. ಮೊದಲು ಹರಿದ್ವರ್ಣದ ಬೆಟ್ಟ, ಗುಡ್ಡಗಳ ನಡುವೆ ಸಪಾಟಾದ ಹೆದ್ದಾರಿ. ನಂತರ ಹೆದ್ದಾರಿ ಸಪಾಟೇ. ಆದರೆ, ಸುತ್ತಲಿನ ಬೆಟ್ಟ-ಗುಡ್ಡಗಳು ಮತ್ತಷ್ಟು ಎತ್ತರ. ಪರ್ವತಸದೃಶ. ಆದರೆ, ಮರ-ಗಿಡಗಳಿಲ್ಲ. ಅದರ ಬದಲು ಬಂಡೆ, ನೀರ್ಗಲ್ಲು. ಕತ್ತೆತ್ತಿ ನೋಡಿದರೂ ಮುಗಿಯದಷ್ಟು ಎತ್ತರದ ಪರ್ವತಗಳು. ಮಧ್ಯದಲ್ಲೊಂದು ಬೆಟ್ಟ ಕೊರೆದು ಮಾಡಿದ ಸುರಂಗ ಮಾರ್ಗ. ವಾವ್ ಎನಿಸುವಂಥ ಅನುಭವ. ಎಲ್ಲಕ್ಕಿಂತ ವಿಶೇಷ ಎಂದರೆ ಸಮುದ್ರ ಮಟ್ಟದಿಂದ ಸುಮಾರು 6000 ಅಡಿ ಎತ್ತರದ ಮನಾಲಿಯಿಂದ 11000 ಅಡಿ ಎತ್ತರದ ಜಿಸ್ಪಾ ತಲುಪಿದ್ದು. ಇದು ಲಡಾಖ್ ಅಮೃತಯಾತ್ರಾ – 2022ರ ಎರಡನೇ ದಿನದ ಯಾನದ ಮುಖ್ಯಾಂಶಗಳು. ವಿವರ ಮುಂದೆ ಓದಿ...

ಸೇಬು ಉಂಡೂ ಹೋದ, ಕೊಂಡೂ ಹೋದ!
ಮೊದಲ ದಿನ ಬಂದು ತಂಗುವಾಗ ರಾತ್ರಿಯಾಗಿದ್ದ ಕಾರಣ ದೋಭಿಯ ಹೋಮ್ ಸ್ಟೇ ಸುತ್ತಲಿನ ಪರಿಸರ ಹೇಗಿರಬಹುದು ಎಂಬ ಕಲ್ಪನೆಯೇ ನಮಗೆ ಇರಲಿಲ್ಲ. ಆದರೆ, ಬೆಳಗ್ಗೆ ಏಳಕ್ಕೆ ಎದ್ದು ಕಿಟಕಿಯ ಪರದೆ ಸರಿಸಿದರೆ ಆಕಾಶ ಶುಭ್ರ. ಸೂರ್ಯ ಪ್ರಖರ. ಸುತ್ತಲೂ ಸೇಬಿನ ತೋಟ. ಅವುಗಳ ನಡುವೆ ಮನೆಗಳ ರಾಶಿ. ಬಹುತೇಕ ಎಲ್ಲವೂ ಪ್ರವಾಸಿಗರನ್ನೂ ಉಳಿಸಿಕೊಂಡು ಆದಾಯ ತೆಗೆಯುವಂಥವು. ನಾವಿದ್ದ ಹೋಮ್ ಸ್ಟೇಯಿಂದ ಅನತಿ ದೂರದಲ್ಲಿ ಹರಿಯುತ್ತಿದ್ದ ಬಿಯಾಸ್ ನದಿ. ಅದರಿಂದಾಚೆ ಹಸಿರು ಬೆಟ್ಟ. ಅದಕ್ಕಿಂತಲೂ ದೂರದಲ್ಲಿ ಪರ್ವತ ಶಿಖರಗಳ ದರ್ಶನ. ನಾವು ಸುಮಾರು 10-10.30 ಗಂಟೆಗೆ ಎರಡನೇ ದಿನದ ಪ್ರಯಾಣ ಆರಂಭಿಸುವುದು ಅಂದುಕೊಂಡಿದ್ದೆವು. ಅಂದುಕೊಂಡ ಹಾಗಾಗುವುದಿಲ್ಲವಲ್ಲ? ನಾವು ಉಳಿದುಕೊಂಡಿದ್ದ ಹೋಮ್ ಸ್ಟೇ ಮಾಲಿಕ ನೀರಜ್ ಸೇಬಿನ ತೋಟದ ಮಾಲಿಕನೂ ಹೌದು. ದಿಲೀಪನಿಗೆ ಹಳೆ ಪರಿಚಯ. ‘ಭಟ್ ಬ್ರೋ, ಆಪ್ ಲೋಗೋಂ ಕೋ ಸೇಬ್ ಲಾತಾ ಹೂಂ. ಏಸಾ ಮತ್ ಜಾವೋ’ ಅಂದಿದ್ದ. ಆತ ಅಷ್ಟು ಪ್ರೀತಿಯಿಂದ ಹೇಳುವಾಗ ಇಲ್ಲ, ನಮಗೆ ಲೇಟಾಗುತ್ತೆ, ಹೊರಡ್ತೀವಿ ಅನ್ನುವುದಾದರೂ ಹೇಗೆ? ಹಾಗೆ ಆತ ಬರುವಾಗ ಮಧ್ಯಾಹ್ನ 1.30. ಫ್ರೆಶ್ ಸೇಬು ತಂದ ಮೇಲೆ ತಿನ್ನದಿರಲಾದೀತೇ? ರಸಭರಿತವಾಗಿತ್ತು ಅದು. ಮೊದಲೇ ಪರಾಟ ತಿಂದಿದ್ದ ನಮಗೆ ಒಂದು ಸೇಬು ತಿನ್ನುವಷ್ಟರಲ್ಲಿ ಹೊಟ್ಟೆ ಖಚಾಖಚ್ ಭರ್ತಿ ಆಗಿತ್ತು. ಆಮೇಲೆ ಬ್ಯಾಗ್ ತುಂಬಾ ಸೇಬು ಹಾಗೂ ಅದಕ್ಕಿಂತ ಹೆಚ್ಚು ನೀರಜ್ ಪ್ರೀತಿಯನ್ನು ತುಂಬಿಕೊಂಡು ಅಂತೂ ಹೊರಟಾಗ ಹೊತ್ತು ಹತ್ತಿರ ಹತ್ತಿರ 2 ಆಗಿತ್ತು.

ವಸಿಷ್ಠ ಮಂದಿರವೂ, ಮನಾಲಿ ಎಂಬ ಪ್ರವಾಸಿಗರ ಸ್ವರ್ಗವೂ
ಈ ಮಧ್ಯೆ, ಜೀಪು ಪಂಚರ್ ಆಗಿತ್ತು. ನಮ್ಮ ಬೈಕುಗಳಿಗೆ ಸಣ್ಣಪುಟ್ಟ ವಸ್ತುಗಳು ಬೇಕಿದ್ದವು. ಅದನ್ನೆಲ್ಲ ಸರಿಪಡಿಸಿಕೊಂಡು ಸುಪ್ರಸಿದ್ಧ ಪ್ರವಾಸಿ ತಾಣ ಮನಾಲಿಯತ್ತ ಪ್ರಯಾಣ ಬೆಳೆಸಿದೆವು. ಅಲ್ಲಿ ಮಹರ್ಷಿ ವಸಿಷ್ಠ ಮಂದಿರವಿದೆ. ಅದರ ಪಕ್ಕದಲ್ಲೇ ಬಿಸಿನೀರ ಕೊಳವಿದೆ. ವಸಿಷ್ಠರು ಆ ಕೊಳದಲ್ಲಿ ಸ್ನಾನ ಮಾಡಿ ಪಕ್ಕದಲ್ಲಿರುವ ಮಂದಿರದಲ್ಲಿ ಧ್ಯಾನಸ್ಥರಾಗುತ್ತಾರೆಂದು ಪ್ರತೀತಿ. ಅದಕ್ಕಿಂತ ಅನತಿ ಎತ್ತರದಲ್ಲಿ ಶ್ರೀರಾಮ ಮಂದಿರವಿದೆ. ನಾವು ಹೋದ ಸಮಯ ಎರಡೂ ದೇಗುಲ ಮುಚ್ಚಿತ್ತು. ಹೊರಗಿನಿಂದಲೇ ಕೈಮುಗಿದು ಪ್ರಯಾಣ ಮುಂದುವರಿಸಿದೆವು. ಮನಾಲಿ ಹೇಳಿ ಕೇಳಿ ಪ್ರವಾಸಿಗರ ನೆಚ್ಚಿನ ತಾಣ. ಇದು ಸೀಸನ್ ಬೇರೆ. ಇಡೀ ನಗರ ಗಿಜಿಗುಡುತ್ತಿತ್ತು. ಅದೊಂಥರ ಏನುಂಟು, ಏನಿಲ್ಲವೆಂಬಂಥ ಜಾಗ. ಎಲ್ಲಿ ನೋಡಿದರೂ ರಾಯಲ್ ಎನ್ ಫೀಲ್ಡ್ ಹಿಮಾಲಯನ್ ಬೈಕುಗಳು. ಲಡಾಖ್ ಅಥವಾ ಅದರ ಸಮೀಪದ ಪರ್ವತಗಳಿಗೆ ಬೈಕ್ ರೈಡ್ ಮಾಡುವವರಿಗೆ ಇಲ್ಲಿಂದ ಬಾಡಿಗೆಗೆ ದೊರೆಯುತ್ತವೆ. ನೂರಾರು ಏಜೆನ್ಸಿಗಳಿವೆ. ಬೈಕುಗಳೇನು, ಪರ್ವತ ಪ್ರದೇಶಕ್ಕೆ ಬೇಕಾದ ಯಾವುದೇ ವಸ್ತು ಇಲ್ಲಿ ಸಿಗುತ್ತದೆ. ಬೈಕು ಬಿಡಿ, ಸಾಕಷ್ಟು ಸಾಹಸ ಕ್ರೀಡೆಗಳೂ ಇಲ್ಲಿ ಲಭ್ಯ. ಕ್ವಾಡ್ ಬೈಕು ಸವಾರಿ, ಜಿಪ್ ಲೈನರ್ ನಲ್ಲಿ ಜಾರುವ ಅನುಭವ, ಕೇಬಲ್ ಕಾರು, ಕುದುರೆ ಸವಾರಿ... ಹೀಗೆ ಹತ್ತು ಹಲವು ಸಾಹಸ ಕ್ರೀಡೆಗಳು ಮನಾಲಿ ಸುತ್ತಮುತ್ತ ಹೇರಳವಾಗಿ ಲಭ್ಯ. ಜೇಬು ಗಟ್ಟಿ ಇರಬೇಕು ಅಷ್ಟೆ.

ರೋಹ್ತಂಗ್ ಪಾಸ್ ತಪ್ಪಿಸುವ ಅಟಲ್ ಟನಲ್ ಎಂಬ ವಂಡರ್!
ಇದನ್ನೆಲ್ಲ ಕಣ್ಣಲ್ಲೇ ತುಂಬಿಕೊಳ್ಳುತ್ತ, ಅಲ್ಲಲ್ಲಿ ಕ್ಯಾಮರಾ ಕಣ್ಣಿಗೂ ಉಣಬಡಿಸುತ್ತ, ಅದೇನೋ ಹೇಳುತ್ತಾರಲ್ಲ ಹೇಮಮಾಲಿನಿಯ ಕೆನ್ನೆಯ ಹಾಗೆ ಅಂತ? ಅಷ್ಟು ನುಣುಪಾದ ಮನಾಲಿ-ಲೇಹ್ ಹೆದ್ದಾರಿಯಲ್ಲಿ ಬೆಟ್ಟಗಳನ್ನು ಒಂದೊಂದಾಗಿ ಏರುತ್ತಲೇ ಸಾಗಿದೆವು. ಬೆಟ್ಟ ಅಂದರೆ ಹಸಿರು ಕೂಡಿದ ಪ್ರದೇಶ. ಕಣ್ಣು ನೆಟ್ಟರೆ ಮತ್ತೆ ರಸ್ತೆ ಕಡೆ ಕಣ್ಣು ಹಾಯಿಸಲು ಮನಸ್ಸು ಬರದಂಥ ಸೌಂದರ್ಯ. ಆದರೆ, ಮನಾಲಿಯಿಂದ ಹೊರಟ ತಕ್ಷಣ ನಮಗೆ ಸಿಕ್ಕಿದ್ದು ನಮ್ಮ ಆಗುಂಬೆಯಂಥ ಘಾಟ್ ರಸ್ತೆ. ಏನಿಲ್ಲವೆಂದರೂ 10-12 ಹೇರ್ ಪಿನ್ ತಿರುವುಗಳು. ಅವುಗಳಲ್ಲಿ ಬೈಕ್ ಹೊಡೆಯುವ ಮೋಜು ಅನುಭವಿಸುತ್ತ ಮುಂದೆ ಸಾಗಿದೆವು. ಸುಮಾರು 35 ಕಿ.ಮೀ. ಏರಿರಬಹುದು. ಧುತ್ತನೆ ಎದುರಾಯಿತು ಅಟಲ್ ಟನಲ್. ಅದೊಂದು ಎಂಜಿನಿಯರಿಂಗ್ ಮಾರ್ವೆಲ್. ಸುಮಾರು 9 ಕಿ.ಮೀ. ಉದ್ದದ ಸುರಂಗ ಮಾರ್ಗ. ಬೆಟ್ಟದ ಹೊಟ್ಟೆಯನ್ನು ಕೊರೆದು ಮಾಡಿದ ಚತುಷ್ಪಥ ಹೆದ್ದಾರಿ. ರೋಹ್ತಂಗ್ ಪಾಸ್ ಎಂಬ ದುರ್ಗಮ ಹಾದಿಯನ್ನು ತಪ್ಪಿಸಲು ಹಾಗೂ ಸುಮಾರು 60-70 ಕಿ.ಮೀ. ಮತ್ತೂ ಹತ್ತಿ ಸುತ್ತುವುದನ್ನು ಉಳಿಸಲು, ಅದಕ್ಕಿಂತಲೂ ಹೆಚ್ಚಾಗಿ 7-8 ತಾಸಿನ ಸಮಯ ವ್ಯರ್ಥವಾಗುವುದನ್ನು ತಪ್ಪಿಸಲು ಮಾಡಿದ ಹೈಕ್ಲಾಸ್ ಸುರಂಗ ಮಾರ್ಗವದು. ಅದನ್ನು ಪ್ರವೇಶಿಸುವ ಮುನ್ನ ಪೊಲೀಸರು ಏನು ಮಾಡಬೇಕು, ಏನು ಮಾಡಬಾರದು ಎಂದು ಹೇಳುತ್ತಾರೆ. ನಿಷೇಧಿತ ವಸ್ತುಗಳೇನಾದರೂ ಇದೆಯಾ ಅಂತ ಪ್ರತಿ ವಾಹನವನ್ನೂ ಪರಿಶೀಲಿಸಿ ಮುಂದೆ ಬಿಡುತ್ತಾರೆ. ಇನ್ನೂ ವಿಶೇಷ ಏನು ಗೊತ್ತಾ? ಸುರಂಗ ಮಾರ್ಗದಲ್ಲಿ ವಾಹನಗಳನ್ನು ಓವರ್ ಟೇಕ್ ಮಾಡುವಂತಿಲ್ಲ. ಫಲಕಗಳಲ್ಲಿ ಹಾಕಿರುವ ವೇಗದ ಮೀತಿ ಮೀರುವಂತಿಲ್ಲ. ಕೆಲವು ಕಡೆ 40 ಕಿ.ಮೀ., ಇನ್ನು ಕೆಲವು ಕಡೆ 60 ಕಿ.ಮೀ. ಗರಿಷ್ಠ ವೇಗ ಮಿತಿ. If you ride at will, you will land up in Manali Jail ಎಂಬ ಎಚ್ಚರಿಕೆ ಫಲಕ ಬೇರೆ ನಮ್ಮನ್ನು ಹೆದರಿಸಿತ್ತು. ಹಾಗಾಗಿ, ನಾವು ಸೂಚಿಸಿದ ವೇಗದಲ್ಲೇ ಸಾಗಿದವು. ಒಂದೆರಡು ಕಾರುಗಳು, ಟೆಂಪೋ ರೊಂಯ್ಯನೆ ನಮ್ಮನ್ನು ಓವರ್ ಟೇಕ್ ಮಾಡಿ ಹೋದವು ಬಿಡಿ. ಹಾಗೆ ಅಟಲ್ ಟನಲ್ ಮೂಲಕ ಸಾಗಿ ಹೊರಬಂದಾಗ ಮನಾಲಿಯೊಂದಿಗಿನ ನಮ್ಮ ನಂಟು ಮುಗಿದಿತ್ತು. ಅಲ್ಲಿಂದ ಲಾಹೋಲಿ ಜಿಲ್ಲೆ ಆರಂಭ. ಆ ಜಾಗ ಭಾರೀ ಫೋಟೋ ಸ್ಪಾಟ್. ಎಲ್ಲರೂ ಅಲ್ಲಿ ನಿಂತು ವಿವಿಧ ಭಂಗಿಗಳಲ್ಲಿ ಫೋಟೋ, ವಿಡಿಯೋ ತೆಗೆಸಿಕೊಳ್ಳುತ್ತಿದ್ದರು. ನಾವೇನು ಕಮ್ಮಿ? ನಾವೂ ಸಾಕಷ್ಟು ಫೋಟೋ ಶೂಟ್ ಮಾಡಿಕೊಂಡೆವು.

ಸೈಕಲಿನಲ್ಲಿ ನಾಲ್ಕು ದೇಶ ಸುತ್ತಲು ಹೊರಟ ಇರ್ಫಾನ್!
ಆಗ ನಮ್ಮ ಕಣ್ಣಿಗೆ ಬಿದ್ದದ್ದು ಇರ್ಶಾದ್. ಕೇರಳದ ಕಲ್ಲಿಕೋಟೆಯವ. ಬಿಎ ಮುಗಿಸಿ ದೇಶ ಪರ್ಯಟನೆಗೆ ಹೊರಟಿದ್ದಾನೆ, ಅದೂ ಬೈಸಿಕಲ್ಲಿನಲ್ಲಿ. ನಾಲ್ಕು ದೇಶ ಸುತ್ತುವ ಗುರಿಯಂತೆ. ಈಗಾಗಲೇ ಕೇರಳ, ತಮಿಳುನಾಡು, ಆಂಧ್ರ ಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳ, ಅಸ್ಸಾಂ, ನೇಪಾಳ, ಉತ್ತರ ಪ್ರದೇಶ, ದೆಹಲಿ ಮೂಲಕ ಸಾಗಿ ಇದೀಗ ಹಿಮಾಚಲ ಪ್ರದೇಶ ತಲುಪಿದ್ದಾನೆ. ಆಗಲೇ 445 ದಿನಗಳು ಕಳೆದಿವೆ. ಬೈಸಿಕಲ್ಲಿನಲ್ಲಿ ಟೆಂಟ್ ಕಟ್ಟಿಕೊಂಡು ತಿರುಗುತ್ತಿದ್ದಾನೆ. ಕತ್ತಲಾದಾಗ ಅದನ್ನು ಬಿಚ್ಚಿ ಮಲಗುವುದು. ಬೆಳಗ್ಗೆ ಎದ್ದು ಎಲ್ಲ ಪ್ಯಾಕ್ ಮಾಡಿ ಮತ್ತೆ ಪ್ರಯಾಣ ಮುಂದುವರಿಸುವುದು ಈತನ ನಿತ್ಯದ ಕಾಯಕ. ಮುಂದೆ ಪರ್ವತಗಳನ್ನು ಹತ್ತಿ ಲಡಾಖಿನ ಲೇಹ್, ಕಾರ್ಗಿಲ್ ಮೂಲಕ ಜಮ್ಮು-ಕಾಶ್ಮೀರದ ಶ್ರೀನಗರ ಮಾರ್ಗವಾಗಿ ಪಂಜಾಬ್ ತಲುಪುವುದು ಈತನ ಸದ್ಯದ ಗುರಿ. ಮತ್ತೆ ಊರಿಗೆ ಹೋಗ್ತೀಯಾ ಅಂದರೆ ಏನೂ ಪ್ಲಾನ್ ಮಾಡಿಲ್ಲ ಅಂತಾನೆ. ನಮ್ಮದೇ ದೊಡ್ಡ ಸಾಹಸಯಾತ್ರೆ ಅಂದುಕೊಂಡರೆ, ಈತನದು ಕಲ್ಪಿಸಿಕೊಳ್ಳಲೂ ಕಷ್ಟಸಾಧ್ಯವಾದ ಪ್ರಯಾಣ.

ಲಡಾಖ್ ಅಮೃತ ಯಾತ್ರೆ–2022 ಭಾಗ-3: ಹೆದ್ದಾರಿ ಬಂದ್, 200ಕ್ಕೂ ಹೆಚ್ಚು ಭೂಕುಸಿತ !

ಪಕ್ಕಾ ಹಿಮಾಲಯನ್ ಪರ್ವತಗಳ ದರ್ಶನ
ಲಹೋಲಿ ಜಿಲ್ಲೆ ಪ್ರವೇಶಿಸಿದ ನಮಗೆ ಸುತ್ತಲಿನ ಪರಿಸರ ಸಂಪೂರ್ಣ ಬದಲಾದ ಅನುಭವ ಬಂತು. ಬೆಟ್ಟ-ಗುಡ್ಡಗಳಲ್ಲಿದ್ದ ಹರಿದ್ವರ್ಣ ಮಾಯವಾಯಿತು. ಆ ಜಾಗಕ್ಕೆ ಆಕಾಶದೆತ್ತರಕ್ಕೆ ಬೆಳೆದು ನಿಂತ ಪರ್ವತಗಳು ಬಂದವು. ಸಂಪೂರ್ಣ ಬಂಡೆ, ಕಲ್ಲುಗಳಿಂದ ಕೂಡಿದ ಬೆಟ್ಟಗಳವು. ಅಲ್ಲೊಂದಿಷ್ಟು ಶಿಖರಗಳಲ್ಲಿ ನೀರ್ಗಲ್ಲುಗಳು. ಅವು ಸೂರ್ಯನ ಶಾಖಕ್ಕೆ ಕರಗಿ ಅಲ್ಲಿಂದ ಧುಮುಕುವ ಜಲಪಾತಗಳು. ಅವುಗಳನ್ನು ನೋಡುತ್ತ ನಿಲ್ಲಬೇಕೆಂಬಾಸೆ. ಆದರೆ, ಸಮಯವಿಲ್ಲ. ಜಿಸ್ಪಾ ತಲುಪಿಯೇ ಊಟ ಮಾಡೋಣ ಅಂತಿದ್ದವರಿಗೆ ಆಗಲೇ ಸಂಜೆ 5.30 ಆಗಿದ್ದರಿಂದ ಸಿಸ್ಸುವಿನಲ್ಲಿ ದೀದಿಯ ದಾಭಾದಲ್ಲಿ ದಾಲ್-ಚಾವಲ್ ಸಿಕ್ಕಿತು. ಅದನ್ನು ಹೊಟ್ಟೆಗಿಳಿಸಿಕೊಂಡು ಹೆದ್ದಾರಿಯಲ್ಲಿ ಸಾಗುತ್ತಾ ಹೋದೆವು. ಒಂದೆರಡು ಕಡೆ ನೀರ್ಗಲ್ಲು ಕರಗಿ ರಸ್ತೆಯಲ್ಲೇ ಬಿರುಸಾದ ನೀರು ಹರಿದ ಜಾಗವನ್ನು ದಾಟಬೇಕಾಯಿತು. ಕಲ್ಲುಗಳಿಂದ ಕೂಡಿದ ವಾಟರ್ ಕ್ರಾಸಿಂಗ್ ಅದು. ನೀರಲ್ಲಿ ಕಾಲೂರಿಯೇ ಬೈಕುಗಳನ್ನು ದಾಟಿಸಬೇಕಿತ್ತು. ಪುಣ್ಯಕ್ಕೆ ಬೂಟಿನೊಳಗೆ ನೀರು ಸೇರಲಿಲ್ಲ. ಬಂದಿದ್ದರೆ ಕಾಲಿಗೆ ಐಸ್ ಪ್ಯಾಕ್ ಇಟ್ಟಂತಾಗುತ್ತಿತ್ತು. ಅದೆಲ್ಲ ಆಗಿ ಹೆಬ್ಬಾವಿನಂತೆ ಬಳುಕುವ ಹೆದ್ದಾರಿಯಲ್ಲಿ ಏರಿಳಿಯುತ್ತ ಸಾಗಿದರೆ ಟಾಂಡಿ ಎಂಬ ಊರು ಬಂತು. ಅಲ್ಲೊಂದು ಇಂಡಿಯನ್ ಆಯಿಲ್ ಬಂಕ್ ಇತ್ತು. ಲೇಹ್ ವರೆಗೆ ಇದು ಕಡೆಯ ಬಂಕ್ ಅಂತ ದಿಲೀಪ ಅಂದ. ನಾವೆಲ್ಲ ಬೈಕು, ಜೀಪಿನ ಹೊಟ್ಟೆ ತುಂಬಿಸಿದೆವು. ಮುಂದೆ ಸಾಗಿದರೆ ಕೀಲಾಂಗ್ ಬಂತು. ಅಲ್ಲೂ ಎಚ್ ಪಿ ಪೆಟ್ರೋಲ್ ಬಂಕ್ ಇತ್ತು. ಹೊಸದಾಗಿ ಆದದ್ದಂತೆ ಅದು. ನೇರವಾಗಿ ಲೇಹ್ ಕಡೆ ಸಾಗುವವರಿಗೆ ಅದು ಕಡೆಯ ಪೆಟ್ರೋಲ್ ಬಂಕ್ ಅಂತೆ. ಹಿಂದೆಲ್ಲ ಮನಾಲಿಯಿಂದ ಹೊರಟು ಕೀಲಾಂಗ್ ತಲುಪಲು 10-12 ತಾಸು ಬೇಕಾಗುತ್ತಿತ್ತಂತೆ. ಈಗ ಹೆದ್ದಾರಿ ಎಷ್ಟು ಚೆನ್ನಾಗಿದೆ ಎಂದರೆ, ಎಲ್ಲೂ ನಿಲ್ಲಿಸದೆ ಪ್ರಯಾಣಿಸಿದರೆ ಕೇವಲ ಎರಡೂವರೆ ತಾಸಲ್ಲಿ ಮನಾಲಿಯಿಂದ ಕೀಲಾಂಗ್ ಅಲ್ಲ, ಅದಕ್ಕಿಂತ 22 ಕಿ.ಮೀ. ಮುಂದೆ ಇರುವ ಜಿಸ್ಪಾವರೆಗೂ ಸಲೀಸಾಗಿ ಬರಬಹುದು. ನಾವು ಅಲ್ಲಲ್ಲಿ ನಿಲ್ಲಿಸಿಕೊಂಡು ಬಂದ ಕಾರಣ 115 ಕಿ.ಮೀ. ಕ್ರಮಿಸಲು 5 ತಾಸು ತೆಗೆದುಕೊಂಡೆವು. ಜಿಸ್ಪಾ ತಲುಪಿದಾಗ ಸುಮಾರು 8 ಗಂಟೆ ಆಗತೊಡಗಿತ್ತು. ಸೂರ್ಯ ಆಗಷ್ಟೇ ಅಸ್ತಮಾನನಾಗುತ್ತಿದ್ದ.

ಲಡಾಖ್ ಅಮೃತ ಯಾತ್ರೆ - 2022 ಭಾಗ-2: ಮೂರು ವಾಹನ, ಆರು ಜನ, ಹದಿಮೂರು ದಿನ

ಅಂದ ಹಾಗೆ, ಈ ಹೆದ್ದಾರಿ, ಆ ಅಟಲ್ ಟನೆಲ್, ಪರ್ವತಗಳಿಂದ ಪರ್ವತಗಳಿಗೆ ದಾಟಲು ಮಾಡಿದ ಸದೃಢ ಕಬ್ಬಿಣ ಹಾಗೂ ಸಿಮೆಂಟ್ ಸೇತುವೆಗಳ ನಿರ್ಮಾಣದ ಹಿಂದೆ ಇರುವುದು ನಮ್ಮ ದೇಶದ ಹೆಮ್ಮೆಯ ಬ್ರೋ. ಬಾರ್ಡರ್ ರೋಡ್ಸ್ ಆರ್ಗನೈಸೇಷನ್ (BRO – ಬ್ರೋ) ಅದರ ಹೊಣೆ ಹೊತ್ತ ಸಂಸ್ಥೆಯ ಹೆಸರು. ಇದು ರಕ್ಷಣಾ ಇಲಾಖೆಯ ಅಧೀನದ ಸಂಸ್ಥೆ. ಇಂಥಾ ಪ್ರತಿಕೂಲ ಹವಾಮಾನ, ಪ್ರದೇಶ ಹಾಗೂ ಪರಿಸ್ಥಿತಿಯಲ್ಲಿ ಸೂಪರ್ರೋ ಸೂಪರ್ರು ಎಂದು ಹೇಳಬಹುದಾದಂತಹ ಹೆದ್ದಾರಿ ನಿರ್ಮಿಸಿ ಪ್ರವಾಸಿಗರಿಗೆ ಒಂಚೂರೂ ಕಷ್ಟವಾಗದಂತೆ ಮಾಡಿದ ಆ ಸಂಸ್ಥೆ ಹಾಗೂ ಅದರ ಸಿಬ್ಬಂದಿಗೆ ಥ್ಯಾಂಕ್ಯೂ ಬ್ರೋ ಥ್ಯಾಂಕ್ಯೂ!

ಮುಂದಿನ ಕಂತಿನಲ್ಲಿ: ಹಿಮಾಚಲ ಪ್ರದೇಶದ ಗಡಿ ಮುಕ್ತಾಯ. ಕೇಂದ್ರಾಡಳಿತ ಪ್ರದೇಶ ಲಡಾಖ್ ಪ್ರಾಂತ್ಯ ಪ್ರವೇಶ. ಹೆದ್ದಾರಿ ಬಿಟ್ಟು ಕಚ್ಚಾ ರಸ್ತೆ ಕಡೆ ತಿರುವು. ಹಿಂದಿನ ಕಾಲದ ಮಹಾ ಸಂಸ್ಥಾನಗಳಲ್ಲಿ ಒಂದಾದ ಜನ್ಸ್ಕಾರ್ ಎಂಬ ಪ್ರದೇಶಕ್ಕೆ ಪ್ರವೇಶ. ವರುಣ ದೇವ ಹಾಗೂ ಭೂಮಿ ತಾಯಿ ಮುನಿಸಿಕೊಳ್ಳದಿದ್ದರೆ ಒಂದು ರೋಚಕ ಹಿಮಾಲಯನ್ ಸಾಹಸ ಪ್ರಯಾಣ ನಮ್ಮದು. ನೆಟ್ ವರ್ಕ್ ಸಿಕ್ಕರೆ ಅದರ ಅನುಭವ ನಾಳೆ. ಇಲ್ಲದಿದ್ದರೆ, ನೆಟ್ ವರ್ಕ್ ಸಿಗುವ ಪ್ರದೇಶಕ್ಕೆ ಬರುವವರೆಗೆ ಲೇಖನ ಸರಣಿಗೆ ಬ್ರೇಕ್.

Latest Videos
Follow Us:
Download App:
  • android
  • ios