
ಬೆಂಗಳೂರು (ಫೆ.13): ವಾರಾಂತ್ಯ ಬಂತೆಂದರೆ ಸಾಕು ಬೆಂಗಳೂರಿಗರು ನಗರದ ಗದ್ದಲದಿಂದ ದೂರ ಎಲ್ಲಾದರೂ ಒಂದು ದಿನದ ಪ್ರವಾಸಕ್ಕೆ ಹೋಗಲು ಪ್ಲಾನ್ ಮಾಡುತ್ತಾರೆ. ಅಂತಹ ಪ್ರವಾಸ ಪ್ರಿಯರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಸಿಹಿ ಸುದ್ದಿಯೊಂದನ್ನು ನೀಡಿದೆ. ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಅತ್ಯಂತ ಕಡಿಮೆ ದರದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ವಿಶೇಷ 'ಪ್ಯಾಕೇಜ್ ಟೂರ್' ಸೇವೆಗಳನ್ನು ಪರಿಚಯಿಸಲಾಗಿದೆ.
ಈ ಪ್ಯಾಕೇಜ್ ಟೂರ್‌ಗಳು ಪ್ರತಿ ಶನಿವಾರ ಮತ್ತು ಭಾನುವಾರಗಳಂದು ಕಾರ್ಯಾಚರಣೆ ನಡೆಸಲಿದ್ದು, ನಗರದ ನಿವಾಸಿಗಳಿಗೆ ಒಂದು ದಿನದ ಪ್ರವಾಸವನ್ನು ಅತ್ಯಂತ ಸುಲಭವಾಗಿ ಮತ್ತು ಸುರಕ್ಷಿತವಾಗಿ ಪೂರೈಸಲು ಸಹಾಯವಾಗಲಿದೆ. ನಿಗಮವು ಇದಕ್ಕಾಗಿ 'ರಾಜಹಂಸ' ಮತ್ತು 'ಅಶ್ವಮೇಧ ಕ್ಲಾಸಿಕ್' ಬಸ್‌ಗಳನ್ನು ನಿಯೋಜಿಸಿದೆ.
ಈ ಪ್ರವಾಸದಲ್ಲಿ ಬೆಂಗಳೂರಿನಿಂದ ಹೊರಟು ಸೋಮನಾಥಪುರ, ತಲಕಾಡು, ಮಧ್ಯರಂಗ, ಭರಚುಕ್ಕಿ ಮತ್ತು ಗಗನಚುಕ್ಕಿ ಜಲಪಾತಗಳನ್ನು ವೀಕ್ಷಿಸಬಹುದು. ಒಟ್ಟು 340 ಕಿ.ಮೀ ಪ್ರಯಾಣ ಇದಾಗಿದೆ. ರಾಜಹಂಸ ಬಸ್‌ನಲ್ಲಿ ವಯಸ್ಕರಿಗೆ 750 ರೂ. ಹಾಗೂ ಮಕ್ಕಳಿಗೆ 600 ರೂ. ದರ ನಿಗದಿಪಡಿಸಲಾಗಿದೆ. ಅಶ್ವಮೇಧ ಕ್ಲಾಸಿಕ್ ಬಸ್‌ನಲ್ಲಿ ಪ್ರಯಾಣಿಸಿದರೆ ವಯಸ್ಕರಿಗೆ 600 ರೂ. ಮತ್ತು ಮಕ್ಕಳಿಗೆ 450 ರೂ. ಟಿಕೆಟ್ ದರವಿರುತ್ತದೆ.
ಧಾರ್ಮಿಕ ಆಸಕ್ತಿ ಹೊಂದಿರುವವರಿಗಾಗಿ ಕೋಲಾರ ಜಿಲ್ಲೆಯ ಪ್ರಮುಖ ತಾಣಗಳನ್ನು ಒಳಗೊಂಡ ಈ ಪ್ಯಾಕೇಜ್ ಸೂಕ್ತವಾಗಿದೆ. ಬೆಂಗಳೂರಿನಿಂದ ಹೊರಟು ಚಿಕ್ಕತಿರುಪತಿ, ಕೋಟಿಲಿಂಗೇಶ್ವರ, ಬಂಗಾರುತಿರುಪತಿ, ಆವಣಿ, ಮುಳಬಾಗಿಲು, ಕುರುಡುಮಲೆ ಮತ್ತು ಕೋಲಾರಕ್ಕೆ ಭೇಟಿ ನೀಡಲಾಗುತ್ತದೆ. ಅಶ್ವಮೇಧ ಕ್ಲಾಸಿಕ್ ಬಸ್‌ನಲ್ಲಿ 270 ಕಿ.ಮೀ ಪ್ರಯಾಣಕ್ಕೆ ವಯಸ್ಕರಿಗೆ 600 ರೂ. ಮತ್ತು ಮಕ್ಕಳಿಗೆ 450 ರೂ. ದರವಿದೆ.
ಐತಿಹಾಸಿಕ ಹಾಗೂ ಸಾಂಸ್ಕೃತಿಕ ಪರಂಪರೆಯ ವೀಕ್ಷಣೆಗಾಗಿ ಈ ಪ್ಯಾಕೇಜ್ ಸಿದ್ಧಪಡಿಸಲಾಗಿದೆ. ಇದು ಬೆಂಗಳೂರು, ಶ್ರೀರಂಗಪಟ್ಟಣ, ಕಲ್ಲಹಳ್ಳಿ ಮತ್ತು ಮೇಲುಕೋಟೆ ತಾಣಗಳನ್ನು ಒಳಗೊಂಡಿದೆ. 350 ಕಿ.ಮೀ ದೂರದ ಈ ಪ್ರವಾಸಕ್ಕೆ ಅಶ್ವಮೇಧ ಕ್ಲಾಸಿಕ್ ಬಸ್‌ನಲ್ಲಿ ವಯಸ್ಕರಿಗೆ 670 ರೂ. ಹಾಗೂ ಮಕ್ಕಳಿಗೆ 500 ರೂ. ದರ ನಿಗದಿಪಡಿಸಲಾಗಿದೆ.
ಈ ಟಿಕೆಟ್ ದರವು ಕೇವಲ ಬಸ್ ಪ್ರಯಾಣಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಪ್ರೇಕ್ಷಣೀಯ ಸ್ಥಳಗಳ ಪ್ರವೇಶ ಶುಲ್ಕ, ಉಪಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟದ ವೆಚ್ಚವನ್ನು ಪ್ರಯಾಣಿಕರೇ ಪ್ರತ್ಯೇಕವಾಗಿ ಭರಿಸಬೇಕಾಗುತ್ತದೆ. ಈಗಾಗಲೇ ಈ ಪ್ಯಾಕೇಜ್‌ಗಳಿಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದು ಸಾರಿಗೆ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.
ಆಸಕ್ತರು ಕೆಎಸ್‌ಆರ್‌ಟಿಸಿಯ ಅಧಿಕೃತ ವೆಬ್‌ಸೈಟ್ https://ksrtc.in/ ಅಥವಾ www.ksrtc.karnataka.gov.in ಮೂಲಕ ಮುಂಗಡ ಟಿಕೆಟ್ ಕಾಯ್ದಿರಿಸಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು: 080-26252625, 7760990100 / 7760990560 / 7760990287. ಕಡಿಮೆ ಖರ್ಚಿನಲ್ಲಿ ವಾರಾಂತ್ಯವನ್ನು ಅರ್ಥಪೂರ್ಣವಾಗಿ ಕಳೆಯಲು ಬಯಸುವವರಿಗೆ ಕೆಎಸ್‌ಆರ್‌ಟಿಸಿಯ ಈ ಪ್ಯಾಕೇಜ್‌ಗಳು ಅತ್ಯುತ್ತಮ ಆಯ್ಕೆಯಾಗಿವೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.