ಭಾರತದಲ್ಲಿ ಈಗ್ಲೂ ಕೆಲ ಅನಿಷ್ಠ ಪದ್ಧತಿ ಜಾರಿಯಲ್ಲಿವೆ. ಅದಲ್ಲಿ ದೇವದಾಸಿ ಕೂಡ ಒಂದು. ದೇವರ ಹೆಸರಿನಲ್ಲಿ ಹೆಣ್ಮಕ್ಕಳ ಬಾಳು ಹಾಳು ಮಾಡ್ತಿದ್ದಾರೆ ಪಾಲಕರು.
ಹಿಂದೂ ಧರ್ಮ (Hinduism)ದಲ್ಲಿ ಹಿಂದೆ ಪಾಲನೆ ಮಾಡಲಾಗ್ತಿದ್ದ ಕೆಲ ಮೂಢ ನಂಬಿಕೆಗಳಿಂದ ಜನರು ಈಗ ಹೊರಗೆ ಬರ್ತಿದ್ದಾರೆ. ಅನೇಕ ಪದ್ಧತಿಗಳಿಗೆ ಕಾನೂನಿನ ಕಡಿವಾಣ ಹಾಕಲಾಗಿದೆ. ಇಷ್ಟಾದ್ರೂ ಅನಕ್ಷರತೆ ಹಾಗೂ ಅಂಧವಿಶ್ವಾಸದಿಂದ ಅಲ್ಲಲ್ಲಿ ಕೆಲ ಪದ್ಧತಿಗಳು ಜಾರಿಯಲ್ಲಿವೆ. ಹಿಂದೂ ಧರ್ಮದಲ್ಲಿ ಹಿಂದಿನ ಕಾಲದಲ್ಲಿ ಪ್ರಚಲಿತವಿದ್ದ ಒಂದು ಪದ್ಧತಿ ದೇವದಾಸಿ (Devadasi). ದೇವರ ಹೆಸರಿನಲ್ಲಿ ಮಹಿಳೆಯರ ಮೇಲೆ ಆಗ್ತಿದ್ದ ಶೋಷಣೆ. ಕಾನೂನಿನ ಅಡಿಯಲ್ಲಿ ದೇವದಾಸಿ ಪದ್ಧತಿಯನ್ನು ನಿಷೇಧಿಸಲಾಗಿದೆಯಾದ್ರೂ ದಕ್ಷಿಣ ಭಾರತ (South India)ದ ಕೆಲ ಭಾಗಗಳಲ್ಲಿ ಈಗ್ಲೂ ಈ ಅನಿಷ್ಠ ಪದ್ಧತಿ ಜಾರಿಯಲ್ಲಿದೆ.
ಹೆಣ್ಣು ಮಕ್ಕಳ ಬದುಕು ಬೀದಿಗೆ : ದೇವದಾಸಿ ಪದ್ಧತಿಯಲ್ಲಿ ಹೆಣ್ಣು ಮಕ್ಕಳನ್ನು ಪಾಲಕರು ದೇವಸ್ಥಾನಕ್ಕೆ ದಾನವಾಗಿ ನೀಡ್ತಾರೆ. ಅಲ್ಲಿಯೇ ವಾಸ ಮಾಡುವ ಹುಡುಗಿಯರು ಪುರುಷರ ಷೋಷಣೆಗೆ ಬಲಿಯಾಗ್ತಾರೆ. ದಕ್ಷಿಣ ಭಾರತದ ಕೆಲ ಪ್ರದೇಶದಲ್ಲಿ ಈಗ್ಲೂ ಪಾಲಕರು ತಮ್ಮ ಮಕ್ಕಳನ್ನು ದಾನ ಮಾಡ್ತಿದ್ದಾರೆ. ಮಕ್ಕಳನ್ನು ದೇವದಾಸಿ ಪದ್ಧತಿಗೆ ತಳ್ಳುತ್ತಿದ್ದಾರೆ. ನಾಲ್ಕೈದು ಹೆಣ್ಣು ಮಕ್ಕಳನ್ನು ಹೊಂದಿರುವ ಪಾಲಕರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಮಕ್ಕಳನ್ನು ದೇವದಾಸಿಯನ್ನಾಗಿ ಮಾಡ್ತಿದ್ದಾರೆ. ಕದ್ದು ಮುಚ್ಚಿ ಈ ವ್ಯವಹಾರ ನಡೆಯುತ್ತಿದೆ. ಆದ್ರೆ ಇಲ್ಲಿ ದೇವದಾಸಿ ಪದ್ಧತಿಗಿಂತ ವೇಶ್ಯಾವಾಟಿಕೆ ಹೆಚ್ಚಾಗಿ ಕಂಡು ಬರ್ತಿದೆ. ದೇವದಾಸಿಯಾದ ಹುಡುಗಿಯರನ್ನು ಬೇರೆ ಬೇರೆ ರಾಜ್ಯಕ್ಕೆ ರವಾನೆ ಮಾಡಿ, ವೇಶ್ಯಾವಾಟಿಕೆಗೆ ತಳ್ಳಲಾಗ್ತಿದೆ.
ಶಿವನಮುಖ, ದೇವಕೆರೆ, ಹೂವಿನ ಬಳ್ಳಿ; ರಾಜ್ಯದ ಪ್ರಮುಖ ನಗರಗಳ ಹಿಂದಿನ ಹೆಸರು ಕೇಳಿದ್ರೆ ಖುಷಿ ಆಗುತ್ತೆ!
ಎಲ್ಲಿದೆ ದೇವದಾಸಿ ಪದ್ಧತಿ? : ತೆಲಂಗಾಣ (Telangana) ಪ್ರದೇಶದಲ್ಲಿ ಅನೇಕ ದಲಿತ ಕುಟುಂಬಸ್ಥರು, ದೇವಾನುದೇವತೆ ಹೆಸರಿನಲ್ಲಿ ತಮ್ಮ ಮಕ್ಕಳನ್ನು ದೇವಸ್ಥಾನದಲ್ಲಿ ಬಿಟ್ಟು ಹೋಗ್ತಿದ್ದಾರೆ. ಈಗ್ಲೂ ಕಾನೂನಿಗೆ ಮಣ್ಣೆರಚಿ ಜನರು ಈ ಪದ್ಧತಿ ಪಾಲನೆ ಮಾಡ್ತಿದ್ದಾರೆ.
ದೇವದಾಸಿಗಳು ಹೇಗೆ ಆಗ್ತಾರೆ? : ಅವಿವಾಹಿತ ಮಹಿಳೆಯರನ್ನು ಮೊದಲು ವಧುವಿನಂತೆ ಸಿಂಗಾರ ಮಾಡಲಾಗುತ್ತದೆ. ನಂತ್ರ ಅವರನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ, ದೇವರ ಜೊತೆ ಮದುವೆ ಮಾಡಿಸಲಾಗುತ್ತದೆ. ಭಗವಂತನ ಪತ್ನಿ ಆದ್ಮೇಲೆ ದೇವಸ್ಥಾನದ ಪೂಜಾರಿ, ಹುಡುಗಿ ಜೊತೆ ಶಾರೀರಿಕ ಸಂಬಂಧ ಬೆಳೆಸಬಹುದು. ಮರುದಿನ ಬೆಳಿಗ್ಗೆ ಹುಡುಗಿ ಮನೆಯವರು ಗ್ರಾಮಸ್ಥರಿಗೆ ಬಂಡಾರದ ಪ್ರಸಾದ ಬಡಿಸುತ್ತಾರೆ. ತಮ್ಮ ಮಗಳು ದೇವರ ಪತ್ನಿಯಾಗಿದ್ದಾಳೆ ಎನ್ನುವ ಕಾರಣಕ್ಕೆ ಕುಟುಂಬಸ್ಥರು ಹೀಗೆ ಮಾಡ್ತಾರೆ. ಅಷ್ಟೇ ಅಲ್ಲ, ಹುಡುಗಿ ಮನೆಯವರಿಗೆ ಪ್ರತಿ ತಿಂಗಳು ಸ್ವಲ್ಪ ಹಣ ಕೂಡ ಸಿಗುತ್ತದೆ. ದೇವದಾಸಿ ಆದ್ಮೇಲೆ ಆ ಹುಡುಗಿಯರು ಎಲ್ಲವನ್ನು ಸಹಿಸಿಕೊಳ್ಬೇಕಾಗಿದೆ. ಯಾವುದೇ ವ್ಯಕ್ತಿ ಶಾರೀರಿಕ ಸಂಬಂಧ ಬೆಳೆಸಲು ಬಂದ್ರೆ ಆತನನ್ನು ತಿರಸ್ಕರಿಸುವಂತಿಲ್ಲ. ಅವರು ಮದುವೆ ಆಗುವಂತಿಲ್ಲ. ಗರ್ಭಧರಿಸಿದ್ರೆ ಅವರನ್ನು ದೇವಸ್ಥಾನದಿಂದ ಹೊರಗೆ ಕಳುಹಿಸಲಾಗುತ್ತದೆ. ದೇವದಾಸಿಯಾಗಿದ್ದ ಅನೇಕ ಮಹಿಳೆಯರು ತಮ್ಮ ಮಕ್ಕಳ ಹೊಟ್ಟೆ ತುಂಬಿಸಲು ಅನಿವಾರ್ಯವಾಗಿ ವೇಶ್ಯಾವಾಟಿಕೆಗೆ ಇಳಿಯುತ್ತಾರೆ. ಅವರು ಯಾವುದೇ ಕಾರಣಕ್ಕೂ ವಾಪಸ್ ತಮ್ಮ ಮನೆಗೆ ಹೋಗುವಂತಿಲ್ಲ. ಅವರಿಗೆ ಜನಿಸುವ ಮಕ್ಕಳಿಗೆ ತಂದೆ ಹೆಸರನ್ನು ನೀಡೋದಿಲ್ಲ. ಚಿಕ್ಕ ವಯಸ್ಸಿನಲ್ಲಿಯೇ ಹುಡುಗಿಯರನ್ನು ದೇವದಾಸಿ ಪದ್ಧತಿಗೆ ತಳ್ಳಲಾಗುತ್ತದೆ. ಈಗಾಗಲೇ ಆ ನರಕ ಜೀವನ ಅನುಭವಿಸಿ ಬಂದ ಅನೇಕರು ತಮ್ಮ ನೋವುಗಳನ್ನು ಮಾಧ್ಯಮಗಳ ಮುಂದೆ ತೋಡಿಕೊಂಡಿದ್ದಾರೆ.
ಈ ದೇಗುಲದಲ್ಲಿ ದೇವಿಗೆ ಹೂವು, ಹಣ್ಣುಗಳ ಬದಲಾಗಿ ಸ್ಯಾನಿಟರಿ ಪ್ಯಾಡ್ ಗಳನ್ನ ಅರ್ಪಿಸ್ತಾರೆ
ಕರ್ನಾಟಕದಲ್ಲಿ ದೇವದಾಸಿ ಪದ್ಧತಿ : ಕರ್ನಾಟಕದಲ್ಲೂ ದೇವದಾಸಿ ಪದ್ಧತಿ ಜಾರಿಯಲ್ಲಿತ್ತು. 1982ರಲ್ಲಿ ಈ ಪದ್ಧತಿ ವಿರುದ್ಧ ಕಾನೂನು ಜಾರಿಗೆ ಬಂದಿದೆ. ಅಂದಿನಿಂದ ಕರ್ನಾಟಕದಲ್ಲಿ ದೇವದಾಸಿ ಪದ್ಧತಿ ಇಲ್ಲ ಎನ್ನಲಾಗ್ತಿದೆಯಾದ್ರೂ ಕದ್ದು ಮುಚ್ಚಿ ಕರ್ನಾಟಕದಲ್ಲೂ ಈ ಪದ್ಧತಿ ಜಾರಿಯಲ್ಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.