ಬೆಂಗಳೂರು(ಮೇ 04): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ವತಿಯಿಂದ ಆಯೋಜಿಸಿರುವ ಕರ್ನಾಟಕದ ಏಳು ಅದ್ಭುತಗಳು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಅಭಿಯಾನದ ಲಾಂಛನ ಬಿಡುಗಡೆ ಹಾಗೂ ವೆಬ್ ಸೈಟ್ ಉದ್ಘಾಟಿಸಿದರು.
ಕನ್ನಡ ಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ, ನಟ ಹಾಗೂ ಅಭಿಯಾನದ ರಾಯಭಾರಿಗಳಾದ ರಮೇಶ್ ಅರವಿಂದ್, ಏಷ್ಯಾನೆಟ್ ನ್ಯೂಸ್ ನೆಟ್‍ವರ್ಕ್‍ನ ಕಾರ್ಯನಿರ್ವಾಹಕ ಅಧ್ಯಕ್ಷ ರಾಜೇಶ್ ಕಾಲ್ರಾ, ಸಿಇಒ ನೀರಜ್ ಕೊಹ್ಲಿ, ಬ್ಯುಸಿನೆಸ್ ಹೆಡ್ ಅಪ್ಪಚ್ಚು, ಜಾಹೀರಾತು ವಿಭಾಗದ ಉಪಾಧ್ಯಕ್ಷ ಅನಿಲ್ ಸುರೇಂದ್ರ, ಕನ್ನಡಪ್ರಭ ಪುರವಣಿ ಸಂಪಾದಕ ಜೋಗಿ, ಪ್ರವಾಸೋದ್ಯಮ ಇಲಾಖೆ ವ್ಯವಸ್ಥಾಪಕ ನಿರ್ದೇಶಕ ಜಗದೀಶ್ ಹಾಗೂ ಜಂಟಿ ಆಯುಕ್ತೆ ಶ್ವೇತಾ ಉಪಸ್ಥಿತರಿದ್ದರು.
ಕರ್ನಾಟಕ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದೆ: ರಾಜೇಶ್ ಕಾಲ್ರಾ
ಕರ್ನಾಟಕದ ಪ್ರತಿ ಜಿಲ್ಲೆಗಳಲ್ಲಿ ಅದ್ಭುತ ತಾಣಗಳಿವೆ. ಆದರೆ ಅದನ್ನು ಬ್ರ್ಯಾಂಡ್ ಮಾಡುವಲ್ಲಿ ನಾವು ಹಿಂದೆ ಬಿದ್ದಿದ್ದೇವೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಇತಿಹಾಸವನ್ನು ಉಳಿಸುವಂತೆ, ಐತಿಹಾಸಿಕ ತಾಣಗಳು, ಪರಂಪರೆಗಳನ್ನು ಉಳಿಸುವ ಪ್ರಚಾರ ಪಡಿಸುವ ಕಾರ್ಯಕ್ಕೆ ಈ ಅಭಿಯಾನ ನೆರವಾಗಲಿದೆ. ಗುಲ್ಬರ್ಗಾದಲ್ಲಿನ ಕೋಟೆಗಳನ್ನು ಶುಚಿತ್ವಗೊಳಿಸಿ ಪ್ರವಾಸೋದ್ಯಮಕ್ಕೆ ಮತ್ತಷ್ಚು ಪುಷ್ಠಿ ನೀಡುವ ಕೆಲಸ ಸರ್ಕಾರ ಮಾಡುತ್ತಿದೆ. ಹಂಪಿ ಸರ್ಕಿಟ್, ಮೈಸೂರು ಸರ್ಕಿಟ್ ಮಾಡಿದ್ದೇವೆ. ಕರ್ನಾಟದಲ್ಲಿನ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಕಾರ್ಯ ಮಾಡಲಾಗಿದೆ. ವಿಶೇಷವಾಗಿ ಈ ಬಾರಿಯ ಬಜೆಟ್‌ನಲ್ಲಿ ಪ್ರವಾಸೋದ್ಯಮಕ್ಕೆ ಬಜೆಟ್ ಮೀಸಲಿಟ್ಟಿದ್ದೇವೆ. ನಂದಿ ಹಿಲ್ಸ್, ಉತ್ತರ ಪ್ರದೇಶದ ಯಾಣ ಸೇರಿದಂತೆ ಕೆಲ ಪ್ರದೇಶಗಳಿಗೆ ರೋಪ್ ವೇ ಅನುಮೋದನೆಯಾಗಿದೆ. ಹೀಗಾಗಿ ಕನ್ನಡ ಪ್ರಭ ಹಾಗೂ ಏಷ್ಯಾನೆಟ್ ಸುವರ್ಣನ್ಯೂಸ್ ಅಭಿಯಾನ ಕರ್ನಾಟಕ ಮತ್ತಷ್ಟು ತಾಣಗಳು ವಿಶ್ವ ಮಟ್ಟಕ್ಕೆ ಪಸರಿಸುವಂತಾಗಲಿ ಎಂದು ಬೊಮ್ಮಾಯಿ ಹೇಳಿದ್ದಾರೆ.
ಕರ್ನಾಟಕದ ಏಳು ಅದ್ಭುತಗಳು ಅಭಿಯಾನಕ್ಕೆ ಸಿಎಂ ಬೊಮ್ಮಾಯಿ ಚಾಲನೆ
ಕನ್ನಡ ಪ್ರಭ ಹಾಗೂ ಸುವರ್ಣನ್ಯೂಸ್ ವಿಶೇಷ ಅಭಿಯಾನವನ್ನು ನಟ ರಮೇಶ್ ಅರವಿಂದ್ ಶ್ಲಾಘಿಸಿದ್ದಾರೆ. ಈ ಅಭಿಯಾನದ ರಾಯಭಾರಿಯಾಗಿರುವ ರಮೇಶ್ ಅರವಿಂದ್, ಶೂಟಿಂಗ್ ವೇಳೆ ಬಹುತೇಕ ಕರ್ನಾಟಕದ ಅದ್ಭುತಕ್ಕೆ ಭೇಟಿ ನೀಡಿದ್ದೇನೆ. ಶೂಟಿಂಗ್ ವೇಳೆ ನೋಡುವ ಅದ್ಭುತ ತಾಣಗಳನ್ನು ನನ್ನ ಕುಟುಂಬ ಸದಸ್ಯರಿಗೂ ತೋರಿಸಬೇಕು ಎಂದ ಅನಿಸುವುದು ಸಹಜ. ಕೆಲ ತಾಣಗಳಿಗೆ ಕುಟುಂಬ ಸಮೇತ ಹೋಗಿ ಆನಂಧಿಸಿದ್ದೇನೆ. ಒಂದು ಉತ್ತಮ ತಾಣವನ್ನು ನೋಡಿದಾಗ ನಮ್ಮ ಆಪ್ತರ ಜೊತೆ ಹಂಚಿಕೊಳ್ಳಬೇಕು, ತೋರಿಸಬೇಕು ಅನ್ನೋ ಭಾವನೆ ಸಹಜವಾಗಿದೆ. ಇದೀಗ ಅದೇ ಅದ್ಭುತ ತಾಣಗಳನ್ನು ಇಡೀ ಕರ್ನಾಟಕ ಜನತೆಗೆ ತೋರಿಸಲು ಕನ್ನಡಪ್ರಭ ಹಾಗೂ ಏಷ್ಯಾನೆಟ್ ಸುವರ್ಣನ್ಯೂಸ್ ವಿಶೇಷ ಅಭಿಯಾನ ನಡೆಸುತ್ತಿದೆ. ಹಲವರಿಗೆ ತಿಳಿಯದೇ ಇರುವ, ಪ್ರಪಂಚಕ್ಕೆ ಗೊತ್ತಿಲ್ಲದಿರುವ ತಾಣಗಳನ್ನು ಈ ಅಭಿಯಾನದ ಮೂಲಕ ಹೊರಗೆ ತಂದು ಪ್ರಚುರ ಪಡಿಸಬೇಕು. ಆ ತಾಣಗಳ ಸವಿಯನ್ನು ಎಲ್ಲರೂ ಆನಂದಿಸಬೇಕು ಎಂದು ರಮೇಶ್ ಅರವಿಂದ್ ಹೇಳಿದ್ದಾರೆ.