ಛತ್ತೀಸ್‌ಗಢದ ಈ ಹಳ್ಳಿಗೆ ಹಳ್ಳಿಯೇ ಯೂಟ್ಯೂಬರ್‌ಗಳ ಗ್ರಾಮ ಎಂದೆನಿಸಿಕೊಂಡಿದೆ. ಇಲ್ಲಿನ ವಾಸಿಗಳೆಲ್ಲರೂ ಯೂಟ್ಯೂಬ್‌ನ್ನು ತಮ್ಮ ಸೃಜನಶೀಲ ಅಭಿವ್ಯಕ್ತಿಗೆ ಬಳಸಿಕೊಳ್ಳುತ್ತಿದ್ದಾರೆ. ಯೂಟ್ಯೂಬ್ ಈ ಊರಿನಲ್ಲಿ ಡಿಜಿಟಲ್ ಕ್ರಾಂತಿಯನ್ನೇ ಮಾಡಿದೆ.
ಇದು ಛತ್ತೀಸ್‌ಗಢದ ತುಳಸಿ ಎಂಬ ಹಳ್ಳಿ. ಎಲ್ಲದರಂತೆ ಸಾಮಾನ್ಯ ಹಳ್ಳಿಯಾಗಿದ್ದ ತುಳಸಿ ತನ್ನನ್ನು ತಾನು ಡಿಜಿಟಲ್ ಜಮಾನಕ್ಕೆ ಒಗ್ಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಂತೆಯೇ ಅಲ್ಲೊಂದು ಕ್ರಾಂತಿಯೇ ಆಗಿ ಹೋಗಿದೆ. ಈಗ ಇದು ತುಳಸಿ ಹಳ್ಳಿಯಷ್ಟೇ ಅಲ್ಲ, ಯೂಟ್ಯೂಬರ್‌ಗಳ ಹಳ್ಳಿ ಎಂದೇ ಖ್ಯಾತಿ ಪಡೆದಿದೆ. ಈ ಕಾರಣಕ್ಕಾಗಿ ಈ ಹಳ್ಳಿಗೆ ರಾಷ್ಟ್ರ ಪ್ರಶಸ್ತಿಯೂ ದೊರೆತಿದೆ.
ಹೌದು, ಒಂದು ಕಾಲದಲ್ಲಿ ಇಂಟರ್ನೆಟ್ ಎಂದರೆ ಏನೆಂದೇ ಗೊತ್ತಿರದ ಈ ಹಳ್ಳಿಯಲ್ಲಿ ಈಗ ಪ್ರತಿ ದಿನ ಕನಸುಗಳು ಟಿಸಿಲೊಡೆಯುತ್ತವೆ, ಕತೆಗಳು ತೆರೆದುಕೊಳ್ಳುತ್ತವೆ, ಅವು ಸೃಜನಶೀಲ ಆಯಾಮಕ್ಕೆ ತಮ್ಮನ್ನು ಒಡ್ಡಿಕೊಳ್ಳುತ್ತವೆ. ಅತ್ಯಾಧುನಿಕ ತಂತ್ರಜ್ಞಾನದಿಂದ ಮಾದರಿ ಹಳ್ಳಿಯಾಗಿ ಪರಿವರ್ತನೆಗೊಂಡಿದೆ. ಈ ಹಳ್ಳಿಯ ದಿಸೆಯನ್ನೇ ಬದಲಾಯಿಸಿದ್ದು ಯೂಟ್ಯೂಬ್.
1110 ಯೂಟ್ಯೂಬರ್‌ಗಳ ಹಳ್ಳಿ
ಹೌದು, ಯೂಟ್ಯೂಬನ್ನು ನಾವು ಕೆಲ ವಿಡಿಯೋಗಳನ್ನು ನೋಡಲು ಬಳಸುತ್ತೇವೆ. ನಮ್ಮಲ್ಲಿ ಕೆಲವರು ತಮ್ಮದೇ ಯೂಟ್ಯೂಬ್ ಚಾನೆಲನ್ನೂ ಹೊಂದಿರಬಹುದು. ಆದರೆ, ತುಳಸಿಯಲ್ಲಿ ಇಡೀ ಹಳ್ಳಿಗೆ ಹಳ್ಳಿಯೇ ಯೂಟ್ಯೂಬ್ ಪ್ರಪಂಚದಲ್ಲಿ ವಿಹರಿಸುತ್ತಿದೆ. ಎಲ್ಲರೂ ಪ್ರತಿ ದಿನ ಯೂಟ್ಯೂಬ್‌ಗೆ ಕಂಟೆಂಟ್ ಹಾಕುತ್ತಿದ್ದಾರೆ. 3000 ರೈತಾಪಿ ಜನರನ್ನೊಳಗೊಂಡ ಈ ಹಳ್ಳಿಯಲ್ಲಿ ಬರೋಬ್ಬರಿ 1100 ಯೂಟ್ಯೂಬರ್‌ಗಳಿದ್ದಾರೆ. ಅವರಲ್ಲಿ 15 ವರ್ಷದಿಂದ 85 ವರ್ಷದವರೆಗಿನವರೂ ತೊಡಗಿದ್ದಾರೆ ಎಂದರೆ ಇದು ಹೇಗಪ್ಪಾ ಸಾಧ್ಯ ಎನಿಸದಿರದು. ಮತ್ತು ಅವರೆಲ್ಲರೂ ಈ ಜಗತ್ತನ್ನು ರಂಜಿಸುವಂಥ ವಿಡಿಯೋಗಳ ತಯಾರಿಕೆಯಲ್ಲಿ ನಿತ್ಯ ತೊಡಗಿದ್ದಾರೆ.
ಸುಮಾರು 40ಕ್ಕೂ ಹೆಚ್ಚು ಪ್ರಮುಖ ಯೂಟ್ಯೂಬ್ ಚಾನೆಲ್‌ಗಳು ಈ ಹಳ್ಳಿಯವರಿಗೆ ಸೇರಿವೆ. ಶಿಕ್ಷಣ, ಸಂಗೀತ, ಡಿಐವೈ, ಹಾಸ್ಯ ಸೇರಿದಂತೆ ಅನೇಕ ಕ್ಷೇತ್ರಗಳ ವಿಷಯಗಳ ಬಗ್ಗೆ ಈ ಚಾನೆಲ್‌ಗಳು ಗಮನ ಹರಿಸುತ್ತಿವೆ. ಕೆಲವಕ್ಕೆ 1 ಲಕ್ಷದಷ್ಟು ಸಬ್‌ಸ್ಕ್ರೈಬರ್ಸ್ ಕೂಡಾ ಇದ್ದಾರೆ.
ಸ್ನೇಹಿತರಿಬ್ಬರ ಕನಸು
ಇವೆಲ್ಲ ಸಾಧ್ಯವಾಗಿದ್ದು ಜೈ ವರ್ಮಾ ಮತ್ತು ಜ್ಞಾನೇಂದ್ರ ಶುಕ್ಲಾ ಎಂಬ ಇಬ್ಬರು ಸ್ನೇಹಿತರಿಂದ. 31 ವರ್ಷ ವಯಸ್ಸಿನ ಜೈ ಶಿಕ್ಷಕರಿಂದ ಯೂಟ್ಯೂಬರ್ ಆಗಿ ಪರಿವರ್ತನೆಗೊಂಡವರು. 2014 ರವರೆಗೆ ಉತ್ತಮ ಕಂಪನಿಯಲ್ಲಿ ನೆಟ್‌ವರ್ಕ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಜ್ಞಾನೇಂದ್ರ ಜೈ ಕಂಟೆಂಟ್‌ಗಳಿಗೆ ತಾಂತ್ರಿಕ ಸಹಾಯ ಒದಗಿಸಿದವರು. ಗಮನಾರ್ಹ ಹೂಡಿಕೆಯ ಅಗತ್ಯವಿಲ್ಲದ ಕಾರಣ 2016ರಲ್ಲಿ ಈ ಇಬ್ಬರೂ ಸ್ನೇಹಿತರು ಸೇರಿ ಯೂಟ್ಯೂಬನ್ನು ಅನ್ವೇಷಿಸಲು ತೊಡಗಿದರು. ಜೈ ಸ್ವಂತಿಕೆಯ ಪ್ರಾಮುಖ್ಯತೆಯನ್ನು ಅರಿತುಕೊಂಡು ಸೃಜನಶೀಲ ಅಂಶಗಳನ್ನು ನಿರ್ವಹಿಸಲು ಪ್ರಾರಂಭಿಸಿದಾಗ, ಜ್ಞಾನೇಂದ್ರ ಕೆಲಸದ ತಾಂತ್ರಿಕ ಭಾಗದತ್ತ ಗಮನ ಹರಿಸಿದರು. ಜನವರಿ 14, 2018 ರಂದು ಅವರು ಯೂಟ್ಯೂಬ್ ಚಾನೆಲ್ 'ಬೀಯಿಂಗ್ ಛತ್ತೀಸ್‌ಗರ್ಹಿಯಾ' ಅನ್ನು ಪ್ರಾರಂಭಿಸಿದರು. ಅವರು ಮುಂದುವರಿದಂತೆ, ಜನರು ಅವರ ಕೆಲಸವನ್ನು ಗಮನಿಸಲು ಪ್ರಾರಂಭಿಸಿದರು. ಅವರ ವಿಡಿಯೋಗಳು ಹಣ ಮಾಡತೊಡಗಿದಂತೆಲ್ಲ ನಿಧಾನವಾಗಿ ಎಲ್ಲರೂ ಯೂಟ್ಯೂಬ್ ಚಾನೆಲ್ ತೆರೆದು ಕಂಟೆಂಟ್ ತಯಾರಿಸಲು ಆರಂಭಿಸಿದರು. ಇದೀಗ ಈ ಊರಿನ ಯೂಟ್ಯೂಬರ್‌ಗಳ ಸಂಖ್ಯೆ 1110 ಆಗಿದೆ.
ಈ ಹಳ್ಳಿಯ ಕ್ರಾಂತಿಕಾರಿ ಬದಲಾವಣೆಗೆ ಸರ್ಕಾರ ಸ್ಪಂದಿಸಿದ್ದು, ಇಲ್ಲಿಗೆ ಆಧುನಿಕ ಸ್ಟುಡಿಯೋವನ್ನು ಒದಗಿಸಿದೆ. ತುಳಸಿ ಸ್ಟುಡಿಯೋ ಆಧುನಿಕ ಕ್ಯಾಮೆರಾಗಳು, ಡ್ರೋನ್ ಕ್ಯಾಮೆರಾಗಳು, ಕಂಪ್ಯೂಟರ್‌ಗಳು ಮತ್ತು ಎಡಿಟಿಂಗ್ ಸಾಫ್ಟ್‌ವೇರ್ ಸೇರಿದಂತೆ ಅಗತ್ಯ ಸಾಧನಗಳನ್ನು ಹೊಂದಿದೆ.