Solo Trips: ಮಹಿಳೆಯರ ಸೋಲೋ ಟ್ರಿಪ್ಪಿಗೆ ಈ ಜಾಗ ಬೆಸ್ಟ್

By Suvarna News  |  First Published Mar 15, 2023, 11:07 AM IST

ಪ್ರವಾಸಕ್ಕೆ ಹೋಗುವಾಗ ಗುಂಪು ಗುಂಪಾಗಿ ಹೋದ್ರೆ ಅದ್ರ ಮಜವೇ ಬೇರೆ. ಹಾಗೆ ಒಂಟಿಯಾಗಿ ಪ್ರಯಾಣ ಬೆಳೆಸಿದ್ರೂ ಅದ್ರಲ್ಲಿ ಆನಂದ ಸಿಗುತ್ತದೆ. ಕೆಲ ಮಹಿಳೆಯರಿಗೆ ಒಂಟಿ ಪ್ರವಾಸ ಇಷ್ಟವಾಗುತ್ತದೆಯಾದ್ರೂ ಭಯದಿಂದ ಅವರು ಹಿಂದೇಟು ಹಾಕ್ತಾರೆ. ಭಾರತದಲ್ಲಿ ಕೆಲ ಸುರಕ್ಷಿತ ಸ್ಥಳವಿದೆ. ಅಲ್ಲಿಗೆ ಮಹಿಳೆಯರು ಒಂಟಿಯಾಗಿಯೇ ಹೋಗಿ ಬರಬಹುದು.
 


ದೇಶ ಸುತ್ತು ಕೋಶ ಓದು ಎಂಬ ಗಾದೆಯಿದೆ. ವಿಶಾಲವಾದ ಪ್ರಪಂಚವನ್ನು ಸುತ್ತಾಡಿದಾಗಲೇ ನಮಗೆ ಅಲ್ಲಿನ ವೈವಿಧ್ಯತೆ, ಜೀವನ ಶೈಲಿ, ಆರ್ಥಿಕ ಪರಿಸ್ಥಿಗಳ ಕುರಿತು ಅರಿವು ಮೂಡುತ್ತದೆ. ದಿನನಿತ್ಯದ ಜಂಜಾಟದಿಂದ ಮುಕ್ತಿ ಪಡೆದು ಹೊರಗೆ ಸುತ್ತಾಡುವ ಖುಷಿಯೇ ಬೇರೆ. ಅದು ನಮ್ಮನ್ನು ಬೇರೆಯದೇ ಒಂದು ಲೋಕಕ್ಕೆ ಕರೆದುಕೊಂಡುಹೋಗುತ್ತದೆ. ಪುರುಷರು ತಮಗೆ ವೀಕೆಂಡ್ ನಲ್ಲಿ ಅಥವಾ ಸಮಯ ಸಿಕ್ಕಾಗಲೆಲ್ಲ ಫ್ರೆಂಡ್ಸ್ ಅಥವಾ ಆಫೀಸ್ ಕಲೀಗ್ಸ್ ಜೊತೆ ಸುತ್ತಾಡುತ್ತಾರೆ. ಆದರೆ ಮಹಿಳೆಯರಿಗೆ ಹಾಗಾಗುವುದಿಲ್ಲ. ಮನೆ ಮಕ್ಕಳು ಎಲ್ಲವನ್ನೂ ನಿಭಾಯಿಸಿಕೊಂಡು ಒಬ್ಬಳೇ ಟೂರ್ ಗೆ ಹೋಗುವುದು ಕಷ್ಟ. ಜೊತೆಗೆ ಒಬ್ಬಳೇ ಹಾಗೆ ಸುತ್ತಾಡುವುದು ಸುರಕ್ಷಿತವಲ್ಲ ಎಂಬ ಭಾವನೆ ಅವಳಲ್ಲಿ ಇದ್ದೇ ಇರುತ್ತೆ.

ವರ್ಷಪೂರ್ತಿ ಮನೆಕೆಲಸ ಅಥವಾ ಕಚೇರಿ (Office) ಯ ಕೆಲಸದಲ್ಲಿ ಬ್ಯುಸಿ ಇರುವ ಮಹಿಳೆ (Woman) ಯರಿಗೂ ಕೂಡ ಸುತ್ತಾಡಬೇಕು ಎಂಬ ಬಯಕೆ ಮೂಡುವುದು ಸಹಜ. ಈಗಿನ ಯುವತಿಯರು ಬೈಕ್ ರೈಡಿಂಗ್ ಮೂಲಕ ಟ್ರಿಪ್ (Trip) ಗಳಿಗೆ ಹೋಗುತ್ತಾರಾದರೂ ಎಲ್ಲರಿಗೂ ಅದು ಸಾಧ್ಯವಾಗುವುದಿಲ್ಲ. ಅದರಲ್ಲೂ ಕೆಲವರಿಗೆ ತಾನು ಒಂಟಿಯಾಗಿ ಪ್ರಯಾಣಿಸಬೇಕು ಎನ್ನುವ ಹಂಬಲ ಇರುತ್ತೆ. ಅಂತಹ ಆಸೆ ಇರುವವರು ಭಾರತದ ಕೆಲವು ಪ್ರವಾಸಿ ಸ್ಥಳಗಳಿಗೆ ಒಂಟಿಯಾಗಿ ಪ್ರಯಾಣಿಸಬಹುದು. ಈ ತಾಣಗಳಲ್ಲಿ ಮಹಿಳೆಯರು ಸುರಕ್ಷಿತವಾಗಿಯೂ ಇರಬಹುದು ಮತ್ತು ಎಂಜಾಯ್ ಕೂಡ ಮಾಡಬಹುದು. ಅಂತಹ ಕೆಲವು ತಾಣಗಳ ಮಾಹಿತಿ ಇಲ್ಲಿದೆ.

Tap to resize

Latest Videos

ದೇಶದ ಸಂಸ್ಕೃತಿ ಸಾರಲು ಮರಾಠಿ ಸೀರೆಯುಟ್ಟು ಬೈಕ್ ಸವಾರಿ ಮಾಡೋ ನಾರಿ

ರಾಜಸ್ಥಾನದ ಜೈಸಲ್ಮೇರ್ :  ರಾಜಸ್ಥಾನ ಭಾರತದ ಅತ್ಯಂತ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಸುದೀರ್ಘ ಇತಿಹಾಸವನ್ನು ಹೊಂದಿದ ಈ ರಾಜ್ಯದಲ್ಲಿ ಐತಿಹಾಸಿಕ ಕೋಟೆಗಳು, ಅರಮನೆಗಳು, ದೇವಾಲಯಗಳು ಮತ್ತು ಸರೋವರಗಳನ್ನು ನೋಡಬಹುದು. ರಾಜಸ್ಥಾನದ ಜೈಸಲ್ಮೇರ್ ನಲ್ಲಿ ಮಹಿಳೆಯರು ಸುರಕ್ಷಿತವಾಗಿ ಸುತ್ತಾಡಬಹುದಾಗಿದೆ. ಇದನ್ನು ದ ಗೋಲ್ಡನ್ ಸಿಟಿ ಎಂದು ಕರೆಯಲಾಗುತ್ತದೆ. ಜೈಸಲ್ಮೇರ್ ನಲ್ಲಿ ಮಹಿಳೆಯರಿಗೆ ಸುತ್ತಾಡಲು ಹೆಚ್ಚು ಸ್ಥಳಗಳಿವೆ ಮತ್ತು ಅನೇಕ ಚಟುವಟಿಕೆಗಳು, ಶಾಪಿಂಗ್ ಗಳಿಗೆ ಸೂಕ್ತವಾದ ಸ್ಥಳೀಯ ಮಾರುಕಟ್ಟೆಗಳಿವೆ.

ಉತ್ತರಾಖಂಡದ ಮಸೂರಿ ಗುಡ್ಡ : ಉತ್ತರಾಖಂಡದ ಮಸೂರಿಗೆ ಕೂಡ ಮಹಿಳೆಯರು ಒಬ್ಬರೇ ಪ್ರಯಾಣಿಸಬಹುದು. ಡೆಹರಾಡೂನ್ ನಿಂದ ಬಸ್ ಅಥವಾ ಟ್ಯಾಕ್ಸಿ ಮೂಲಕ ಮಸೂರಿಗೆ ತಲುಪಿ ಅಲ್ಲಿ ಹೋಟೆಲ್ ಅಥವಾ ರೂಮ್ ಬುಕ್ ಮಾಡಿಕೊಳ್ಳಬಹುದು. ಇಲ್ಲಿ ಮಹಿಳೆಯರು ಯಾವುದೇ ಭಯವಿಲ್ಲದೆ ಓಡಾಡಬಹುದು. ಇಲ್ಲಿ ಕ್ಯಾಂಪ್ಟಿ ಫಾಲ್ಸ್,  ದಲೈ ಹಿಲ್ಸ್, ಮಾಲ್ ರೋಡ್, ಧಲೌಟಿ ಮುಂತಾದ ಸ್ಥಳಗಳಿಗೆ ಭೇಟಿ ನೀಡಬಹುದು. ಕಡಿಮೆ ಖರ್ಚಿನಲ್ಲಿ ಎರಡು ದಿನಗಳ ಪ್ರವಾಸ ಮಾಡಬಹುದಾಗಿದೆ.

ಕಡಿಮೆ ಖರ್ಚಿನಲ್ಲಿ ವಿದೇಶ ಪ್ರಯಾಣ… ಈ ಟಿಪ್ಸ್ ನಿಮ್ಮದಾಗಿಸಿ

ಉತ್ತರ ಪ್ರದೇಶದ ವಾರಣಾಸಿ : ಹಿಂದೂಗಳ ಪವಿತ್ರ ಸ್ಥಾನವಾದ ವಾರಣಾಸಿ ಉತ್ತರ ಪ್ರದೇಶದ ಅತ್ಯಂತ ಪ್ರಾಚೀನ ನಗರ ಕೂಡ ಹೌದು. ಇಲ್ಲಿನ ಗಂಗಾ ನದಿ ಮತ್ತು ಗಂಗಾರತಿಯನ್ನು ನೋಡುವುದೇ ಪೂರ್ವಜನ್ಮದ ಪುಣ್ಯ ಎಂದರೆ ತಪ್ಪಾಗದು. ಇಲ್ಲಿ ದೋಣಿ ವಿಹಾರವನ್ನು ಕೂಡ ಮಾಡಬಹುದಾಗಿದೆ. ಕಾಶಿ ವಿಶ್ವನಾಥನ ದರ್ಶನವನ್ನು ಕೂಡ ಪಡೆಯಬಹುದು. ಒಂಟಿಯಾಗಿ ಪ್ರವಾಸಕ್ಕೆ ಹೋಗಬಯಸುವ ಮಹಿಳೆಯರಿಗೆ ಈ ಪ್ರೇಕ್ಷಣೀಯ ಸ್ಥಳ ಸೂಕ್ತವಾಗಿದೆ.

ಉತ್ತರಾಖಂಡದ ನೈನಿತಾಲ್ : ಉತ್ತರಾಖಂಡದ ನೈನಿತಾಲ್ ತನ್ನ ಆಹ್ಲಾದಕರ ವಾತಾವರಣ, ಗಿರಿಧಾಮಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಪ್ರಕೃತಿಯನ್ನು ಪ್ರೀತಿಸುವವರ ಪಾಲಿಗೆ ಇದು ಸ್ವರ್ಗವೇ ಸರಿ. ಇಲ್ಲಿ ಟ್ರೆಕಿಂಗ್, ದೋಣಿ ವಿಹಾರ, ಶಾಪಿಂಗ್ ಗೆ ಸೂಕ್ತವಾದ ಸ್ಥಳವಿದೆ. ಇಲ್ಲಿನ ನೈನಿ ಸರೋವರ, ನೈನಾ ದೇವಿಯ ದೇವಾಲಯ, ಮೃಗಾಲಯ ಕೂಡ ನೋಡಬಹುದು.

ದೇಶದ ಪ್ರಸಿದ್ಧ ಗಿರಿಧಾಮಗಳ ಪಟ್ಟಿಯಲ್ಲಿ ನೈನಿತಾಲ್ ಹೆಸರನ್ನು ಸೇರಿಸಲಾಗಿದೆ. ಚಳಿಗಾಲ ಮತ್ತು ಬೇಸಿಗೆಯಲ್ಲಿ ಅನೇಕ ಪ್ರವಾಸಿಗರು ನೈನಿತಾಲ್ ಗೆ ಭೇಟಿ ನೀಡುತ್ತಾರೆ. ಒಂಟಿಯಾಗಿ ನೈನಿತಾಲ್ ಗೆ ಹೋಗಬಯಸುವ ಮಹಿಳೆಯರು ಬಸ್ ಅಥವಾ ರೈಲಿನಲ್ಲಿ ನೈನಿತಾಲ್ ತಲುಪಬಹುದಾಗಿದೆ. ನೈನಿತಾಲ್ ತಲುಪಿದ ನಂತರ ಮಹಿಳೆಯರು ನಿರ್ಭಯವಾಗಿ ಅಲ್ಲಿನ ನಗರಗಳಲ್ಲಿ ಸುತ್ತಾಡಬಹುದು.
 

click me!