
ಬಾಗಲಕೋಟೆ(ಫೆ.05): ಬಾಗಲಕೋಟೆ ಜಿಲ್ಲೆಯಲ್ಲಿರುವ ತಾಲೂಕು ಕೇಂದ್ರಗಳು ಐತಿಹಾಸಿಕ ಕೇಂದ್ರಗಳಾಗಿದ್ದರಿಂದ ದೇಶ ವಿದೇಶದಿಂದ ಪ್ರವಾಸಿಗರು ಬರುತ್ತಿದ್ದು, ಅವರಿಗೆ ಹಾಗೂ ಜಿಲ್ಲೆಯ ಪ್ರವಾಸೋದ್ಯಮ ವಿನೂತ ಮಾದರಿಯಲ್ಲಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಹ್ಯಾಂಡಲೂಮ್ ಪ್ರವಾಸೋದ್ಯಮ ಚಟುವಟಿಕೆಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ ತಿಳಿಸಿದರು.
ಈ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಬಾಗಲಕೋಟೆ ಜಿಲ್ಲೆಯು ವಿಶ್ವವಿಖ್ಯಾತ ಬಾದಾಮಿಯ ಗುಹಾಂತರ ದೇವಾಲಯಗಳು, ವಿಶ್ವಪರಂಪರೆ ತಾಣ ಪಟ್ಟದಕಲ್ಲು, ದೇವಾಲಯಗಳ ತೊಟ್ಟಿಲು ಎಂದೇ ಹೆಸರಾದ ಐಹೊಳೆ ಹೀಗೆ ಐತಿಹಾಸಿಕ ಪ್ರವಾಸಿತಾಣಗಳಿವೆ. ಜಗಜ್ಯೋತಿ ಅಣ್ಣ ಬಸವಣ್ಣನವರ ಐಕ್ಯಮಂಟಪ ಹೊಂದಿರುವ ಕೂಡಲಸಂಗಮ, ಶಕ್ತಿಪೀಠವಾಗಿರುವ ಬನಶಂಕರಿಯ ದೇವಾಲಯಗಳಂತಹ ಧಾರ್ಮಿಕ ಪ್ರವಾಸಿ ತಾಣಗಳಿಗೆ ಚಿರಪರಿಚವಾಗಿದೆ. ಈ ತಾಣಗಳಿಂದಾಗಿ ಜಿಲ್ಲೆಯಲ್ಲಿ ಐತಿಹಾಸಿಕ ಪ್ರವಾಸೋದ್ಯಮ, ಧಾರ್ಮಿಕ ಪ್ರವಾಸೋದ್ಯಮ ಮಾದರಿಯ ಚಟುವಟಿಕೆಗಳು ಪ್ರಸಿದ್ಧವಾಗಿವೆ ಎಂದರು.
ನನ್ನನ್ನ ಮೂರು ಬಾರಿ ಗೆಲ್ಲಿಸಿ ಮಂತ್ರಿ ಮಾಡಿದ ಬೀಳಗಿಯಿಂದಲೇ ನನ್ನ ಸ್ಪರ್ಧೆ: ಸಚಿವ ನಿರಾಣಿ
ಪ್ರವಾಸಿ ಗೈಡ್‌ಗಳಿಗೆ ತರಬೇತಿ:
ಜಿ.ಐ. ಮಾನ್ಯತೆ ಪಡೆದ ಜಿಲ್ಲೆಯ ನೇಕಾರಿಕೆ ಉತ್ಪನ್ನಗಳನ್ನು ದೇಶಿಯ ಮತ್ತು ವಿದೇಶೀಯ ಪ್ರವಾಸಿಗರಿಗೆ ಮಾಹಿತಿ ನೀಡಲು ಕೈಮಗ್ಗ ನೇಕಾರರ ಮತ್ತು ಪ್ರವಾಸಿಮಾರ್ಗದರ್ಶಿಗಳ ಪಾತ್ರ ಅತೀ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಪರವಾನಿಗೆ ಪಡೆದು ಪ್ರವಾಸಿ ಸ್ಥಳಗಳಲ್ಲಿ ಕರ್ತವ್ಯನಿರ್ವಹಿಸುತ್ತಿರುವ ಜಿಲ್ಲೆಯ ಪ್ರವಾಸಿ ಮಾರ್ಗದರ್ಶಿಗಳಿಗೆ ನಬಾರ್ಡ್‌ದಿಂದ ಹಣಕಾಸಿನ ನೆರವಿನಲ್ಲಿ ಇಳಕಲ್ ಸೀರೆ ಮತ್ತು ಗುಳೇದಗುಡ್ಡ ಖಣ ಕೈಮಗ್ಗ ನೇಕಾರಿಕೆಯ ವಿವಿಧ ಹಂತಗಳ ಬಗ್ಗೆ ಪ್ರವಾಸಿಗರಿಗೆ ವಿವರಿಸಲು ಅನುಕೂಲವಾಗುವಂತೆ ತರಬೇತಿ ನೀಡಲಾಗಿದೆ ಎಂದರು.
ನೇಕಾರರ ಮನೆಗಳಿಗೆ ನೇರ ಭೇಟಿ:
ಈಗಾಗಲೇ ಆಯೋಜಿಸಿದ ಹ್ಯಾಂಡಲೂಮ್ ಕಾರ್ಯಕ್ರಮದಲ್ಲಿ ಪ್ರವಾಸಿಗರು ನೇರವಾಗಿ ಕೈಮಗ್ಗ ನೇಕಾರಿಕೆ ಮಾಡುವ ಮನೆಗಳಿಗೆ ಭೇಟಿ ನೀಡಿ, ಕೈಮಗ್ಗದ ಮೂಲಕ ಸೀರೆ ಮತ್ತು ಖಣ ನೇಕಾರಿಕೆಯ ಹಂತಗಳನ್ನು ತಿಳಿಯಲು ಅವಕಾಶವನ್ನು ಮಾಡಿಕೊಡಲಾಗಿದೆ. ಕೈಮಗ್ಗ ಸೀರೆ ಮತ್ತು ಖಣ ನೇಕಾರಿಕೆ ಮಾಹಿತಿಯನ್ನು ಪಡೆದ ಪ್ರವಾಸಿಗರು ತಮ್ಮ ಅನುಭವದಲ್ಲಿ, ಇದೊಂದು ವಿನೂತನ ಪ್ರವಾಸ ಕಾರ್ಯಕ್ರಮವಾಗಿದೆ. ಇದರಿಂದ ನಮಗೆ ಸೀರೆ ಮತ್ತು ಖಣ ನೇಕಾರಿಕೆ ಸಂಪೂರ್ಣ ಮಾಹಿತಿ ಪಡೆಯುವಂತಾಗಿದೆ. ಸೀರೆ ನೇಕಾರಿಕೆ ಹಿಂದಿರುವ ಪರಿಶ್ರಮದ ಬಗ್ಗೆ, ಒಂದು ಸೀರೆ ಸಿದ್ಧವಾಗಲು ತಗಲುವ ಕಾಲಾವಧಿಯ ಬಗ್ಗೆ, ವಿವಿಧ ವಿನ್ಯಾಸಗಳ ಚಿತ್ರಣದ ಬಗ್ಗೆ ಮಾಹಿತಿಯನ್ನು ಪಡೆದಿದ್ದೇವೆ ಎಂದರು.
ಭೌಗೋಳಿಕ ಸೂಚ್ಯಂಕ ಮಾನ್ಯತೆ ಪಡೆದ ಜಿಲ್ಲೆಯ ಇಳಕಲ್ ಸೀರೆ ಮತ್ತು ಗುಳೇದಗುಡ್ಡ ಖಣ ಉತ್ಪನ್ನಗಳ ಕೈಮಗ್ಗ ನೇಕಾರಿಕೆಯ ಪ್ರೋತ್ಸಾಹ ಹಾಗೂ ಪ್ರಚಾರ ಕಾರ್ಯದಿಂದಾಗಿ ಪ್ರಸ್ತುತ ಜಿಲ್ಲೆಯಲ್ಲಿ ನೂತನವಾಗಿ ಹ್ಯಾಂಡಲೂಮ್ ಪ್ರವಾಸೋದ್ಯಮ ಚಟುವಟಿಕೆಗಳನ್ನು ಕೈಗೊಳ್ಳಲು ಅವಕಾಶ ಒದಗಿಸಿದೆ. ಈ ಹಿನ್ನೆಲೆಯಲ್ಲಿ ಆಯೋಜನೆಗೊಂಡ ಕಾರ್ಯಕ್ರಮವೇ ಹ್ಯಾಂಡಲೂಮ್ ಪ್ರವಾಸ. ವಿವಿಧ ಮಾದರಿಯ ಪ್ರವಾಸ ಅನುಭವಗಳನ್ನು ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರು ಪಡೆಯಬಹುದಾಗಿದೆ. ಹೀಗಾಗಿ ಕರ್ನಾಟಕ ಸರ್ಕಾರ ಪ್ರವಾಸೋದ್ಯಮ ಇಲಾಖೆಯ ಒಂದು ರಾಜ್ಯ, ಹಲವು ಜಗತ್ತುಗಳು ಎಂಬ ಧ್ಯೇಯವಾಕ್ಯಗೆ ಜಿಲ್ಲೆಯ ಪ್ರವಾಸೋದ್ಯಮವು ಅನುಗುಣವಾಗಿದೆ ಎಂದರೆ ಅತಿಶಯೋಕ್ತಿಯಾಗದು ಎಂದು ಹೇಳಿದರು.
ರಮೇಶ ಜಾರಕಿಹೊಳಿ ನಮ್ಮ ರಾಷ್ಟ್ರೀಯ ನಾಯಕರನ್ನ ಭೇಟಿ ಮಾಡಿದ್ದು ತಪ್ಪಲ್ಲ:ಸಚಿವ ಮುರುಗೇಶ ನಿರಾಣಿ
ಎತ್ತಿನ ಬಂಡಿಯಲ್ಲಿ ಕುಳಿತು ನೇಕಾರರ ಮನೆಗೆ ಭೇಟಿ:
ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಗ್ರಾಮೀಣ ಸೊಗಡಿನ ಅನುಭವ ಮೂಡಿಸಲು ಮೊದಲಿಗೆ ಪ್ರವಾಸಿಗರನ್ನು ದೀಪದಾರತಿ, ಹೂವಿನಹಾರ, ಹಲಗಿ ಮಜಲುಗಳೊಂದಿಗೆ ಸಾಂಪ್ರಾದಾಯಿಕ ಶೈಲಿಯಲ್ಲಿ ಸ್ವಾಗತಿಸಿದ್ದು, ಎತ್ತಿನ ಬಂಡಿಯಲ್ಲಿ ಕುಳಿತು ನೇಕಾರಿಕೆ ಮಾಡುವ ಮನೆಗಳಿಗೆ ಭೇಟಿ ನೀಡಲಾಗಿದ್ದು, ಇದು ಪ್ರವಾಸಿಗರಿಗೆ ವಿನೂತನ ಅನುಭವವನ್ನು ನೀಡಿದೆ. ಕೈಮಗ್ಗ ನೇಕಾರಿಕೆಯ ವಿವಿಧ ಹಂತಗಳನ್ನು ವೀಕ್ಷಿಸಿದ ನಂತರ ಕೊನೆಯಲ್ಲಿ ಕೈಮಗ್ಗ ಸೀರೆ ಮತ್ತು ಖಣಗಳನ್ನು ನೇರವಾಗಿ ಮಾರಾಟ ಮಾಡುವ ಕೈಮಗ್ಗ ನೇಕಾರಿಕೆ ಸೊಸೈಟಿಗಳಿಗೆ ಕರೆದುಕೊಂಡು ಹೋಗಲಾಗಿದ್ದು, ಇಲ್ಲಿ ಪ್ರವಾಸಿಗರು ತಮಗೆ ಇಷ್ಟವಾದ ಕೈಮಗ್ಗ ಸೀರೆ, ಖಣಗಳನ್ನು ಖರೀದಿಸಲು ಅವಕಾಶವನ್ನು ಒದಗಿಸಿರುವುದರಿಂದ ಪ್ರವಾಸಿಗರು ಸಂತೋಷ ವ್ಯಕ್ತಪಡಿಸುತ್ತಿದ್ದಾರೆ ಎಂದರು.
ನಾಲ್ಕು ಪ್ರವಾಸ ಪ್ಯಾಕೇಜ್
ಜಿಲ್ಲೆಯ ಹ್ಯಾಂಡಲೂಮ್ ತಯಾರಿಕೆ ಕೇಂದ್ರಗಳಾದ ಇಳಕಲ್ ಸೀರೆ ಮತ್ತು ಗುಳೇದಗುಡ್ಡ, ಖಣ ಉತ್ಪನ್ನಗಳು ಭೌಗೋಳಿಕ ಸೂಚ್ಯಂಕ ಮಾನ್ಯತೆ ಪಡೆದಿವೆ. ಸದರಿ ಉತ್ಪನ್ನಗಳ ಪ್ರಚಾರಕ್ಕಾಗಿ ಜಿಲ್ಲಾಧಿಕಾರಿಗಳು ನಬಾರ್ಡ್, ಕೈಮಗ್ಗ ಮತ್ತು ಜವಳಿ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಕೈಮಗ್ಗ ನೇಕಾರಿಕೆ ಸಂಘಗಳು, ಪ್ರವಾಸಿ ಮಾರ್ಗದರ್ಶಿಗಳ ಸಹಯೋಗದಲ್ಲಿ ಜಿಲ್ಲೆಯಲ್ಲಿ ಹ್ಯಾಂಡ್‌ಲೂಮ್ ಪ್ರವಾಸೋದ್ಯಮ ಚಟುವಟಿಕೆಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ. ಸದರಿ ಚಟುವಟಿಕೆಯ ಭಾಗವಾಗಿ ಜಿಲ್ಲೆಯ ಇಳಕಲ್, ಗುಳೇದಗುಡ್ಡ, ಕಮತಗಿ, ಸೂಳೇಭಾವಿ ಊರುಗಳಲ್ಲಿರುವ ಕೈಮಗ್ಗ ನೇಕಾರಿಕೆ ಕೇಂದ್ರಗಳಿವೆ. ಈಗಾಗಲೇ ಹ್ಯಾಂಡ್‌ಲೂಮ್ ಪ್ರವಾಸದಡಿ ಪ್ರಾಯೋಗಿಕವಾಗಿ 4 ಪ್ರವಾಸ ಪ್ಯಾಕೇಜ್ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಲಾಗಿದೆ ಎಂದರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.