ಇನ್ಮುಂದೆ ವಾಟ್ಸಪ್'ನಲ್ಲಿ ಏನೇನೋ ಸಂದೇಶ ಕಳಿಸೋ ಮುನ್ನ ಎಚ್ಚರ !

By Web DeskFirst Published Sep 23, 2018, 5:07 PM IST
Highlights

ನಿಮ್ಮ ದೂರನ್ನು ವಾಟ್ಸಪ್ ಆಪ್ ನಲ್ಲಿರುವ ಸೆಟ್ಟಿಂಗ್ ನಲ್ಲಿ ಕುಂದುಕೊರತೆ ವಿಭಾಗಕ್ಕೆ  ಇಮೇಲ್ ಮೂಲಕ ದೂರು ಸಲ್ಲಿಸಿದರೆ ನಿಮ್ಮ ಸಂಪೂರ್ಣ ಮಾಹಿತಿಗಳನ್ನು ಕಲೆ ಹಾಕಿ ಪ್ರತಿಕ್ರಿಯೆ ನೀಡುವುದರ ಜೊತೆಗೆ ಕಾನೂನು ಕ್ರಮ ಅಥವಾ ಮುಂದೇನು ಮಾಡಬೇಕೆಂಬುದರ ಬಗ್ಗೆಯೂ ತಿಳಿಸಲಾಗುತ್ತದೆ. 

ನವದೆಹಲಿ[ಸೆ.23]: ವಿಶ್ವದಲ್ಲೇ ಪ್ರಬಲ ಸಾಮಾಜಿಕ ಮಾಧ್ಯಮವಾಗಿ ಹೊರಹೊಮ್ಮುತ್ತಿರುವ ವಾಟ್ಸ್'ಪ್'ನಲ್ಲಿ ಇನ್ನು ಮುಂದೆ ಇಲ್ಲ ಸಲ್ಲದ ಸುಳ್ಳು ಸುದ್ದಿಗಳನ್ನು ಗ್ರೂಪ್'ಗಳ ಮೂಲಕ  ಬೇರೆಯವರಿಗೆ ಫಾರ್ವಡ್ ಮಾಡುವಂತಿಲ್ಲ.

ಸುಳ್ಳು ಸುದ್ದಿ, ಇಲ್ಲಸಲ್ಲದ ವರದಿಗಳನ್ನು ಪತ್ತೆ ಹಚ್ಚುವುದಕ್ಕಾಗಿ ವಾಟ್ಸ್'ಪ್ ಸಂಸ್ಥೆ ಭಾರತದಲ್ಲಿ  ಕುಂದುಕೊರತೆ ಹಾಗೂ ದೂರುಗಳನ್ನು ಆಲಿಸುವ ಅಧಿಕಾರಿಗಳನ್ನು ನೇಮಿಸಿದೆ. ಆಗಸ್ಟ್ ಕೊನೆಯ ವಾರದಲ್ಲಿ ಗುಂಪು ಹತ್ಯೆ, ಪ್ರಚೋದನಾಕಾರಿ ದೃಶ್ಯಗಳು, ಸುದ್ದಿಗಳು ಮುಂತಾದ ವಿಷಯಕ್ಕೆ ಸಂಬಂಧಿಸಿದಂತೆ ಫೇಸ್ ಬುಕ್ ಮಾಲೀಕತ್ವದ ವಾಟ್ಸ'ಪ್ ಮುಖ್ಯಕಚೇರಿಯಲ್ಲಿ ಸಭೆ ಹಮ್ಮಿಕೊಳ್ಳಲಾಗಿತ್ತು.  ಈ ಸಂದರ್ಭದಲ್ಲಿಯೇ ಕೊಮಲ್ ಲಹಿರಿ ಎಂಬುವವರನ್ನು ಭಾರತದ ಕುಂದುಕೊರತೆಯ ಮುಖ್ಯಸ್ಥ ಅಧಿಕಾರಿಯನ್ನಾಗಿ ನೇಮಿಸಲಾಗಿದೆ.

ನಿಮ್ಮ ದೂರನ್ನು ವಾಟ್ಸಪ್ ಆಪ್ ನಲ್ಲಿರುವ ಸೆಟ್ಟಿಂಗ್ ನಲ್ಲಿ ಕುಂದುಕೊರತೆ ವಿಭಾಗಕ್ಕೆ  ಇಮೇಲ್ ಮೂಲಕ ದೂರು ಸಲ್ಲಿಸಿದರೆ ನಿಮ್ಮ ಸಂಪೂರ್ಣ ಮಾಹಿತಿಗಳನ್ನು ಕಲೆ ಹಾಕಿ ಪ್ರತಿಕ್ರಿಯೆ ನೀಡುವುದರ ಜೊತೆಗೆ ಕಾನೂನು ಕ್ರಮ ಅಥವಾ ಮುಂದೇನು ಮಾಡಬೇಕೆಂಬುದರ ಬಗ್ಗೆಯೂ ತಿಳಿಸಲಾಗುತ್ತದೆ. ತೀರ ಪ್ರಚೋದನಾಕಾರಿ ಮಾಹಿತಿಗಳಿದ್ದರೆ ಪೊಲೀಸರಿಗೆ ದೂರು ನೀಡುವ ಸಾಧ್ಯತೆ ಕೂಡ ಇರುತ್ತದೆ.

20 ಕೋಟಿ ಬಳಕೆದಾರರು
ಭಾರತದಲ್ಲಿ 20 ಕೋಟಿಗೂ ಹೆಚ್ಚು ಮಂದಿ ವಾಟ್ಸಪ್ ಬಳಕೆದಾರರಿದ್ದು ಸುಪ್ರಿಂ ಕೋರ್ಟ್ ಸುಳ್ಳು ಸುದ್ದಿಗಳನ್ನು ನಿಗ್ರಹಿಸಲು ಕ್ರಮ ಕೈಗೊಳ್ಳುವಂತೆ ಸಂಸ್ಥೆಗೆ ಆಗ್ರಹಿಸಿತ್ತು. ಈ ಅಂಶದಲ್ಲಿ ಕುಂದುಕೊರತೆ ಅಧಿಕಾರಿಯನ್ನು ನೇಮಿಸುವುದು ಸೇರಿತ್ತು. ಇದಕ್ಕಾಗಿ 4 ವಾರಗಳ ಸಮಯವಾಕಾಶ ನೀಡಲಾಗಿತ್ತು.

ಮುಂದಿನ ವರ್ಷ ಲೋಕಸಭಾ ಚುನಾವಣೆ ನಡೆಯಲಿದ್ದು ಸಾಮಾಜಿಕ ಮಾಧ್ಯಮಗಳಾದ ಫೇಸ್ ಬುಕ್, ಟ್ವಿಟರ್ ಹಾಗೂ ವಾಟ್ಸಪ್ ಮೂಲಕ ಸುಳ್ಳು ಸುದ್ದಿಗಳು ಹರಡುವ ಸಾಧ್ಯತೆಯಿದ್ದು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಸರ್ಕಾರ ಆದೇಶಿಸಿದೆ.ವಾಟ್ಸ್ ಅಪ್ ನಲ್ಲಿ ಪ್ರಕಟಗೊಂಡ ನಕಲಿ ಸುದ್ದಿಗಳಿಂದ ಪ್ರೇರೇಪಣೆಗೊಂಡು ದೇಶದಾದ್ಯಂತ ಹಲವು ಕಡೆ ಗುಂಪು ಹಲ್ಲೆ, ಹತ್ಯೆಗಳು ನಡೆದಿದೆ. 

click me!