ಭಾರತದಲ್ಲಿ ಆ್ಯಪಲ್ ಐ-ಫೋನ್‌ಗೆ ಶೀಘ್ರದಲ್ಲೇ ನಿಷೇಧ?

First Published Jul 23, 2018, 9:49 PM IST
Highlights
  • ಮೊಬೈಲ್ ಗ್ರಾಹಕರಿಗೆ ಟೆಲಿಮಾರ್ಕೆಟಿಂಗ್ ಕಂಪನಿಗಳ ಅನಪೇಕ್ಷಿತ ‘ಕರೆ’ಕುಳಕ್ಕೆ ಕಡಿವಾಣ ಹಾಕಲು  ಟ್ರಾಯ್ ಯತ್ನ
  • ಟ್ರಾಯ್ ನಿರ್ದೇಶನವನ್ನು ಪಾಲಿಸಿದ ಗೂಗಲ್; ಬಳಕೆದಾರರ ಹಿತಾಸಕ್ತಿ ಮುಖ್ಯ ಎಂದ ಆ್ಯಪಲ್

‘ಡು ನಾಟ್ ಡಿಸ್ಟರ್ಬ್’ [DND] ಆ್ಯಪ್ ಗೆ ಸಂಬಂಧಿಸಿದಂತೆ  ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ [TRAI] ಮತ್ತು ಆ್ಯಪಲ್ ನಡುವಿನ ವಿವಾದ ಕಳೆದ ಕೆಲವು ತಿಂಗಳಿನಿಂದ ದಿನದಿಂದ ದಿನಕ್ಕೆ ಹೊಸ ಸ್ವರೂಪ ಪಡೆದುಕೊಳ್ಳುತ್ತಿದೆ. 

ಪ್ರಕರಣವು ಇದೀಗ ಎಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆಯೆಂದರೆ, ಆ್ಯಪಲ್ ಐಫೋನ್ ನ ಪರವಾನಿಗೆಯನ್ನು ಹಿಂಪಡೆಯಲು ಟ್ರಾಯ್ ಚಿಂತನೆ ನಡೆಸಿದೆಯೆಂದು ಆಂಗ್ಲ ದೈನಿಕವೊಂದು ವರದಿ ಮಾಡಿದೆ.

ಮೊಬೈಲ್ ಗ್ರಾಹಕರಿಗೆ ಟೆಲಿಮಾರ್ಕೆಟಿಂಗ್ ಕಂಪನಿಗಳು ನೀಡುತ್ತಿರುವ  ಕಿರುಕಳಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಟ್ರಾಯ್ ಇತ್ತೀಚೆಗೆ ನಿಯಮಾವಳಿಗಳನ್ನು ಪರಿಷ್ಕೃರಿಸಿದೆ. ಅದರ ಪ್ರಕಾರ, ಸ್ಮಾರ್ಟ್ ಫೋನ್ ಕಂಪನಿಗಳು ಟ್ರಾಯ್ ಶಿಫಾರಸ್ಸು ಮಾಡಿರುವ DND ಆ್ಯಪ್ 2.0ನ್ನು ಗ್ರಾಹಕರು ಮೊಬೈಲ್ ನಲ್ಲಿ ಇನ್ಸ್ಟಾಲ್ ಮಾಡಲು ಅನುವು ಮಾಡಿಕೊಡಬೇಕು.

ಆ ಆ್ಯಪನ್ನು ಇನ್ಸ್ಟಾಲ್ ಮಾಡುವಾಗ ಅದು ಫೋನ್ ನ ಹಲವಾರು ಮಾಹಿತಿಗಳನ್ನು ಕೇಳುತ್ತದೆ. ಅನಪೇಕ್ಷಿತ ಕರೆ ಮಾಡುವವರನ್ನು, ಸಂದೇಶ ಕಳುಹಿಸುವವರನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ಆ ಮಾಹಿತಿಗಳು ಬೇಕಾಗುತ್ತದೆ. ಅದಕ್ಕಾಗಿ ಟ್ರಾಯ್ ಮೊಬೈಲ್ ಕಂಪನಿಗಳಿಗೆ 6 ತಿಂಗಳ ಸಮಯಾವಕಾಶವನ್ನು ನೀಡಿದೆ.

ಟ್ರಾಯ್ ನ ಈ ನಿರ್ದೇಶನವನ್ನು ಗೂಗಲ್ ಪಾಲಿಸಿದೆ, ಹಾಗೂ ಪ್ಲೇಸ್ಟೋರ್ ನಲ್ಲಿ ಅದಕ್ಕಾಗಿ ಅವಕಾಶವನ್ನು ಮಾಡಿಕೊಟ್ಟಿದೆ. ಆದರೆ ಆ್ಯಪಲ್ ತನ್ನ ಆ್ಯಪ್ ಸ್ಟೋರ್ ನಲ್ಲಿ ಟ್ರಾಯ್ ಆ್ಯಪ್ ಗೆ ಅವಕಾಶವನ್ನು ನಿರಾಕರಿಸಿದೆ. ಬಳಕೆದಾರರ ಉಪಕರಣದ ಹಾಗೂ ಇನ್ನಿತರ ಮಾಹಿತಿಯನ್ನು ಒದಗಿಸುವುದು ಖಾಸಗಿತನದ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂಬ ವಾದವನ್ನು ಆ್ಯಪಲ್ ಮುಂದಿಟ್ಟಿದೆ. 

ಟ್ರಾಯ್ ಈ ಬಗ್ಗೆ ಆ್ಯಪಲ್ ಕಂಪನಿಗೆ ಮನವರಿಕೆ ಮಾಡಲು ಯತ್ನಿಸುತ್ತಿದ್ದು, ಆ್ಯಪಲ್ ಮಾತ್ರ ಬಳಕೆದಾರರ ಖಾಸಗಿತನದ ಹಕ್ಕಿನ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿಮಾಡಲಾಗೆಂದು ಖಂಡತುಂಡವಾಗಿ ಹೇಳಿದೆ.

ಆದರೆ, ಟ್ರಾಯ್ ಹೊಸ ನಿಯಮಾವಳಿಯನ್ವಯ,  ಕಂಪನಿಯು 6 ತಿಂಗಳಿನೊಳಗೆ ನಿಯಮಗಳನ್ನು ಪಾಲಿಸದ ಪಕ್ಷದಲ್ಲಿ, ಮೊಬೈಲ್ ಸೇವೆಯ ಪರವಾನಿಗೆಯನ್ನು ಹಿಂಪಡೆಯುವ ಮೂಲಕ ಎಲ್ಲಾ ಐಫೋನ್ ಸೀರಿಸ್ ಗಳನ್ನು ಭಾರತದಲ್ಲಿ ನಿಷೇಧಿಸಬಹುದಾಗಿದೆ.

ಭಾರತದಂತಹ ದೊಡ್ಡ ಮಾರುಕಟ್ಟೆಯಿಂದ ತನ್ನ ಉತ್ಪನ್ನಗಳನ್ನು ಹಿಂಪಡೆಯುವುದನ್ನು ಯಾವ ಕಂಪನಿಯು ಬಯಸಲಾರದು. ಒಂದು ಕಡೆ ಸರ್ಕಾರ, ಇನ್ನೊಂದು ಕಡೆ ಬಳಕೆದಾರರ ಹಿತಾಸಕ್ತಿಯನ್ನು ಆ್ಯಪಲ್ ಹೇಗೆ ನಿಭಾಯಿಸುತ್ತದೆ ಎಂದು ಮುಂದಿನ ದಿನಗಳಲ್ಲಿ ಕಾದು ನೋಡಬೇಕು. 

click me!