ವಿವಾದಿತ ಕೃಷಿ, ಎಪಿಎಂಸಿ ಕಾಯ್ದೆಗೆ ಮತ್ತೆ ಸುಗ್ರೀವಾಜ್ಞೆ..!

By Kannadaprabha NewsFirst Published Oct 2, 2020, 9:01 AM IST
Highlights

ಎಪಿಎಂಸಿ ಕಾಯಿದೆ ಹಾಗೂ ಭೂ ಸುಧಾರಣೆ ತಿದ್ದುಪಡಿ ಸೇರಿ ಎರಡು ವಿಧೇಯಕಗಳು ವಿಧಾನಪರಿಷತ್‌ನಲ್ಲಿ ಚರ್ಚೆಯಾದರೂ ಅನುಮೋದನೆ ಬಾಕಿ ಇದೆ. ಕೈಗಾರಿಕಾ ವಿವಾದಗಳ ಕಾಯಿದೆಗೆ (ಕಾರ್ಮಿಕ ಹಕ್ಕುಗಳ ಕುರಿತ) ವಿಧಾನ ಪರಿಷತ್‌ನಲ್ಲಿ ಒಪ್ಪಿಗೆ ಸಿಗದೆ ಬಿದ್ದುಹೋಗಿತ್ತು. ಹೀಗಾಗಿ ಅಧಿವೇಶನಕ್ಕೂ ಮೊದಲು ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಿದ್ದ ಕಾಯಿದೆಯನ್ನು ಜೀವಂತವಾಗಿಡಲು ಪುನಃ ಸುಗ್ರೀವಾಜ್ಞೆ ತರಲಾಗುತ್ತಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಬೆಂಗಳೂರು(ಅ.02): ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಮತ್ತು ಕೈಗಾರಿಕಾ ವಿವಾದಗಳ ಕಾಯ್ದೆಗಳ ತಿದ್ದುಪಡಿ ಕಾಯಿದೆ ಜಾರಿಗೆ ವಿಧಾನ ಮಂಡಲ ಅಧಿವೇಶನದಲ್ಲಿ ವಿಧಾನಪರಿಷತ್‌ನ ಒಪ್ಪಿಗೆ ದೊರೆಯದ ಕಾರಣ ಮತ್ತೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ಆದೇಶ ಹೊರಡಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

ಎಪಿಎಂಸಿ ಕಾಯಿದೆ ಹಾಗೂ ಭೂ ಸುಧಾರಣೆ ತಿದ್ದುಪಡಿ ಸೇರಿ ಎರಡು ವಿಧೇಯಕಗಳು ವಿಧಾನಪರಿಷತ್‌ನಲ್ಲಿ ಚರ್ಚೆಯಾದರೂ ಅನುಮೋದನೆ ಬಾಕಿ ಇದೆ. ಕೈಗಾರಿಕಾ ವಿವಾದಗಳ ಕಾಯಿದೆಗೆ (ಕಾರ್ಮಿಕ ಹಕ್ಕುಗಳ ಕುರಿತ) ವಿಧಾನ ಪರಿಷತ್‌ನಲ್ಲಿ ಒಪ್ಪಿಗೆ ಸಿಗದೆ ಬಿದ್ದುಹೋಗಿತ್ತು. ಹೀಗಾಗಿ ಅಧಿವೇಶನಕ್ಕೂ ಮೊದಲು ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಿದ್ದ ಕಾಯಿದೆಯನ್ನು ಜೀವಂತವಾಗಿಡಲು ಪುನಃ ಸುಗ್ರೀವಾಜ್ಞೆ ತರಲಾಗುತ್ತಿದೆ.

ಸುಗ್ರಿವಾಜ್ಞೆ ಹಿಂಪಡೆಯಿರಿ, ಇಲ್ಲ ಉಗ್ರ ಹೋರಾಟ ಎದುರಿಸಿ: ಸರ್ಕಾರಕ್ಕೆ ರೈತರ ವಾರ್ನಿಂಗ್

ಮುಂದಿನ ಹಂತವಾಗಿ ಸಂಪುಟದ ತೀರ್ಮಾನವನ್ನು ರಾಜ್ಯಪಾಲರಿಗೆ ಕಳುಹಿಸಿ ಒಪ್ಪಿಗೆ ಪಡೆಯಬೇಕಾಗುತ್ತದೆ. ಇದರ ನಡುವೆ ಕೈಗಾರಿಕಾ ವಿವಾದಗಳ ತಿದ್ದುಪಡಿ ಮಸೂದೆಗೆ ವಿಧಾನಪರಿಷತ್‌ನಲ್ಲಿ ಸೋಲಾಗಿದೆ. ಎಪಿಎಂಸಿ ಹಾಗೂ ಭೂ ಸುಧಾರಣೆ ಕಾಯಿದೆಗೂ ಒಪ್ಪಿಗೆ ದೊರೆತಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ ಗುರುವಾರದ ಸಚಿವ ಸಂಪುಟದಲ್ಲಿ ಕೆಲ ತಿದ್ದುಪಡಿಗಳೊಂದಿಗೆ ಮತ್ತೆ ಸುಗ್ರೀವಾಜ್ಞೆ ಜಾರಿ ನಿರ್ಧಾರ ಕೈಗೊಂಡಿದೆ.

6 ತಿಂಗಳೊಳಗೆ ಒಪ್ಪಿಗೆ ಪಡೆಯಬೇಕು:

ಸುಗ್ರೀವಾಜ್ಞೆ ಮೂಲಕ ಹೊರಡಿಸಿರುವ ತಿದ್ದುಪಡಿ ಕಾಯಿದೆಗೆ ಆರು ತಿಂಗಳು ಜೀವ ಇರಲಿದೆ. ಅಷ್ಟರೊಳಗಾಗಿ ಸರ್ಕಾರ ಸರ್ಕಾರ ಅಧಿವೇಶನ ಕರೆದು ಉಭಯ ಸದನಗಳ ಒಪ್ಪಿಗೆ ಪಡೆಯಬೇಕು. ಇನ್ನು ಕಾರ್ಮಿಕ ಕಾಯಿದೆ ವಿಧಾನಪರಿಷತ್‌ನಲ್ಲಿ ಬಿದ್ದುಹೋಗಿದೆ. ಆದರೆ, ಈ ಕಾಯ್ದೆ ಮತ್ತೊಮ್ಮೆ ವಿಧಾನಸಭೆಯ ಅಂಗೀಕಾರ ಪಡೆದರೆ ಸಾಕಾಗುತ್ತದೆ. ವಿಧಾನಪರಿಷತ್‌ನ ಅನುಮತಿ ಬೇಕಿಲ್ಲ.

ಹಳೆಯ ಜಮೀನು ಖರೀದಿ ಮಿತಿಗೆ ಒಪ್ಪಿಗೆ:

ಭೂ ಸುಧಾರಣೆ ತಿದ್ದುಪಡಿ ಕಾಯಿದೆ ವಿಚಾರಕ್ಕೆ ಬಂದರೆ ಮೊದಲ ಸುಗ್ರೀವಾಜ್ಞೆಯಲ್ಲಿ 5 ಜನರಿರುವ ಕುಟುಂಬ 216 ಎಕರೆ (ಡಿ ದರ್ಜೆ ಭೂಮಿ) ಭೂಮಿ ಹಾಗೂ ಒಬ್ಬರೇ ಸದಸ್ಯರಿದ್ದರೆ 108 ಎಕರೆವರೆಗೂ ಖರೀದಿಸಲು ಅವಕಾಶ ನೀಡಲಾಗಿತ್ತು. ಈಗ ವಿಧಾನಸಭೆಯಲ್ಲಿ ಸರ್ಕಾರ ಸ್ಪಷ್ಟಪಡಿಸಿದಂತೆ ಒಬ್ಬ ಸದಸ್ಯರು ಇರುವ ಕುಟುಂಬಕ್ಕೆ 54 ಎಕರೆವರೆಗೆ ಹಾಗೂ 5 ಸದಸ್ಯರಿರುವ ಕುಟುಂಬಕ್ಕೆ 108 ಎಕರೆಗೆ ಸೀಮಿತಗೊಳಿಸಿ ತಿದ್ದುಪಡಿ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಉಳಿದಂತೆ ಭೂ ಸುಧಾರಣೆ ಕಾಯ್ದೆಯಡಿ ಜಾರಿಯಲ್ಲಿದ್ದ 63ಎ, 79ಎ ಹಾಗೂ ಬಿ ಸೆಕ್ಷನ್‌ ಪ್ರಕಾರ ರೈತ ಹಿನ್ನೆಲೆ ಹೊಂದಿಲ್ಲದವರು ಹಾಗೂ ನಿರ್ದಿಷ್ಟ ಆದಾಯಕ್ಕಿಂತ ಹೆಚ್ಚು ಆದಾಯ ಹೊಂದಿರುವವರು ಕೃಷಿ ಜಮೀನು ಖರೀದಿಸಲು ಅವಕಾಶ ಇಲ್ಲ ಎಂಬ ನಿಯಮಗಳನ್ನು ತೆಗೆದು ಹಾಕಲಾಗಿದೆ.

ಇತರೆ ಪ್ರಮುಖ ವಿಷಯಗಳಿಗೆ ಒಪ್ಪಿಗೆ:

ಇದೇ ವೇಳೆ ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಸೇವೆಗಳು (ನೇಮಕಾತಿ) (ತಿದ್ದುಪಡಿ)- 2020 ವಿಧೇಯಕ, ರಾಜ್ಯ ಪೊಲೀಸ್‌ ಸೇವೆಗಳು (ಪೊಲೀಸ್‌ ಕಾನ್ಸ್‌ಟೇಬಲ್, ಸಬ್- ಇನ್‌ಸ್ಪೆಕ್ಟರ್‌ ಮತ್ತು ಉಪಾಧೀಕ್ಷಕರ ಹುದ್ದೆಗೆ ಪ್ರತಿಭಾವಂತ ಕ್ರೀಡಾಪಟುಗಳ ನೇರ ನೇಮಕಾತಿ(ವಿಶೇಷ) ನಿಯಮ -2020, ಕರ್ನಾಟಕ ರಾಜ್ಯ ನಾಗರಿಕ ಸೇವೆಗಳು (ಕಾಲೇಜು ಶಿಕ್ಷಣ ಇಲಾಖೆಯ ಬೋಧಕ ಸಿಬ್ಬಂದಿ ವರ್ಗಾವಣೆ ನಿಯಂತ್ರಣ) ನಿಯಮ -2020, ಕರ್ನಾಟಕ ರಾಜ್ಯ ನಾಗರಿಕ ಸೇವೆಗಳು (ಕಾಲೇಜು ಶಿಕ್ಷಣ ಇಲಾಖೆಯ ಬೋಧಕ ಸಿಬ್ಬಂದಿ ವರ್ಗಾವಣೆ ನಿಯಂತ್ರಣ) ನಿಯಮ 2020ಕ್ಕೆ ಅನುಮೋದನೆ ನೀಡಲಾಗಿದೆ.

ವಿಜಯಪುರ ತಾಲೂಕಿನ ಬಬಲೇಶ್ವರ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಸಲು, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತಕ್ಕೆ ನೀಡಿದ ರಿಯಾಯಿತಿ ಅವಧಿಯ ವಿಸ್ತರಣೆ, ಬೆಂಗಳೂರಿನ ಮಾಗಡಿ ರಸ್ತೆಯ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಡಾ.ಜಗಜೀವನ್‌ ರಾಂ ಸಂಶೋಧನೆ ಮತ್ತು ತರಬೇತಿ ಕೇಂದ್ರ ಕಟ್ಟಡ ನಿರ್ಮಾಣ ಕಾಮಗಾರಿಗೆ 98.93 ಕೋಟಿ ರು. ನೀಡಲು ಒಪ್ಪಿಗೆ ಸೂಚಿಸಲಾಗಿಯಿತು.

ಉಳಿದಂತೆ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ತರಬೇತಿ ಪಡೆಯುತ್ತಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ವಿತರಿಸಲು ವಿವಿಧ ವೃತ್ತಿಯ 11.75 ಕೋಟಿ ರು. ವೆಚ್ಚದಲ್ಲಿ 8980 ಟೂಲ್ ಕಿಟ್‌ ವಿತರಿಸಲು ನಿರ್ಧರಿಸಲಾಯಿತು.

ಪ್ರಮುಖ ಸಚಿವರು ಗೈರು

ಸಚಿವ ಸಂಪುಟ ಸಭೆಗೆ ಪ್ರಮುಖ ಸದಸ್ಯರು ಗೈರು ಹಾಜರಾಗಿದ್ದರಿಂದ ಒಂದು ಗಂಟೆ ಅವಧಿಯಲ್ಲೇ ಸಂಪುಟ ಸಭೆ ಮುಕ್ತಾಯಗೊಂಡಿತು. ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ, ಸಚಿವರಾದ ಶಶಿಕಲಾ ಜೊಲ್ಲೆ, ಕೆ. ಗೋಪಾಲಯ್ಯ, ಪ್ರಭುಚೌಹಾಣ್‌ ಕೊರೋನಾ ಸೋಂಕಿನಿಂದಾಗಿ ಸಭೆಗೆ ಆಗಮಿಸಿರಲಿಲ್ಲ. ಇತರೆ ಕಾರಣ ನೀಡಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಚಿವರಾದ ಬಸವರಾಜ ಬೊಮ್ಮಾಯಿ, ಕೆ.ಎಸ್‌. ಈಶ್ವರಪ್ಪ, ಆನಂದ್‌ಸಿಂಗ್‌, ಆರ್‌. ಅಶೋಕ್‌ ಸೇರಿ ಕೆಲ ಸಂಪುಟ ಸದಸ್ಯರು ಗೈರಾಗಿದ್ದರು.
 

click me!