ಸರ್ಕಾರದ ವಿರುದ್ಧವೇ ಸಿಡಿದೆದ್ದ ಸಚಿವ : ಕಾರಣವೇನು..?

By Web DeskFirst Published Nov 17, 2018, 7:14 AM IST
Highlights

ಕರ್ನಾಟಕ ಸರ್ಕಾರದ ವಿರುದ್ಧ ಸಚಿವರೋರ್ವರು ತಿರುಗಿಬಿದ್ದಿದ್ದಾರೆ. ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಬೆಂಗಳೂರು :  ‘ನೇರ ಮೀಸಲಾತಿಗೆ ಅರ್ಹತೆಯಿರುವ ಪ್ರತಿಭಾವಂತ ಮೀಸಲು ವರ್ಗದ ಅಭ್ಯರ್ಥಿಗಳಿಗೆ ಸಾಮಾನ್ಯ ಪ್ರವರ್ಗದಡಿ (ಜನರಲ್‌ ಕೆಟಗರಿ) ಗೆಜೆ​ಟೆಡ್‌ ಹುದ್ದೆ ಪಡೆ​ಯಲು ಲಭ್ಯ​ವಿ​ರುವ ಹಾಲಿ ಅವ​ಕಾಶವನ್ನು ಕರ್ನಾ​ಟಕ ಲೋಕ​ಸೇವಾ ಆಯೋಗವು ನ್ಯಾಯಾಲಯದ ಆದೇಶದ ನೆಪದಲ್ಲಿ ರದ್ದು​ಪ​ಡಿ​ಸಲು ಮುಂದಾ​ಗಿ​ದೆ’ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್‌ ಖರ್ಗೆ ಆಕ್ಷೇಪ ವ್ಯಕ್ತ​ಪ​ಡಿಸಿದ್ದು, ಈ ಬಗ್ಗೆ ಮುಖ್ಯ​ಮಂತ್ರಿ ಎಚ್‌.ಡಿ. ಕುಮಾ​ರ​ಸ್ವಾಮಿ ಅವ​ರಿಗೆ ಖಾರ​ವಾದ ಪತ್ರ ಬರೆ​ದಿ​ದ್ದಾ​ರೆ.

ಖರ್ಗೆ ಅವರ ಈ ಪತ್ರವು ಸರ್ಕಾರದಲ್ಲಿ ಒಂದೆಡೆ ಒಡಕು ಮೂಡಿಸುವ ಸಾಧ್ಯತೆ ಇದೆ. ಇನ್ನೊಂದೆಡೆ ಸರ್ಕಾರದ ವಿರುದ್ಧ ಮೀಸಲಿಗೆ ಅರ್ಹರಾದ ಉದ್ಯೋಗಾಕಾಂಕ್ಷಿಗಳು ಹಾಗೂ ದಲಿತಪರ ಸಂಘಟನೆಗಳು ಹೋರಾಟಕ್ಕಿಳಿಯುವ ಸಾಧ್ಯತೆ ಇದೆ.

‘ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) 2015ನೇ ಸಾಲಿನ ಗೆಜೆಟೆಡ್‌ ಪ್ರೊಬೆಷನರ್ಸ್‌ ಹುದ್ದೆ ನೇಮಕಾತಿಗೆ ಸಂಬಂಧಿಸಿದಂತೆ ಈ ಆದೇಶ ಹೊರಡಿಸಲಾಗಿದೆ. ನೇರ ಮೀಸಲಾತಿಗೆ ಅರ್ಹತೆಯಿರುವ ಪ್ರತಿಭಾವಂತ ಅಭ್ಯರ್ಥಿಗಳಿಗೆ ಮೆರಿಟ್‌ ಇದ್ದರೂ ಸಾಮಾನ್ಯ ಪ್ರವರ್ಗದ (ಜನರಲ್‌ ಕೆಟಗರಿ) ಪಟ್ಟಿಯಲ್ಲಿ ಅವ​ಕಾಶ ಸಿಗದು. ಈ ವಿಚಾರದಲ್ಲಿ ಹೈಕೋ​ರ್ಟ್‌ ಆದೇಶ ಕಟ್ಟು ನಿಟ್ಟಾಗಿ ಪಾಲಿ​ಸ​ಬೇಕು ಎಂದು ರಾಜ್ಯ ಸರ್ಕಾರವು ಲೋಕಸೇವಾ ಆಯೋಗಕ್ಕೆ ನಿರ್ದೇಶನ ನೀಡಿದೆ. ಇದು ಸರಿ​ಯಲ್ಲ. ಇದ​ರಿಂದ ಸಂವಿ​ಧಾ​ನದ ಆಶ​ಯಕ್ಕೆ ಚ್ಯುತಿ​ಯುಂಟಾ​ಗ​ಲಿದ್ದು, ಕೂಡಲೇ ಈ ನಿರ್ಧಾ​ರ​ದಿಂದ ಸರ್ಕಾರ ಹಿಂದಕ್ಕೆ ಸರಿ​ಯ​ಬೇಕು’ ಎಂದು ಅವರು ಮುಖ್ಯ​ಮಂತ್ರಿ​ಯ​ವ​ರಿಗೆ ಬರೆ​ದಿ​ರುವ ಪತ್ರ​ದಲ್ಲಿ ಆಗ್ರ​ಹಿ​ಸಿ​ದ್ದಾ​ರೆ.

ಹೈಕೋರ್ಟ್‌ ಆದೇಶದ ನೆಪ ಇಟ್ಟುಕೊಂಡು ರಾಜ್ಯ ಸರ್ಕಾರವು ಕೆಪಿಎಸ್ಸಿಗೆ ನೀಡಿರುವ ನಿರ್ದೇಶನವು ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳಿಗೆ ಸೀಮಿತವಾಗಿದ್ದರೂ, ಮುಂದಿನ ದಿನಗಳಲ್ಲಿ ಎಲ್ಲಾ ನೇಮಕಗಳಿಗೂ ಈ ನಿರ್ದೇಶನವು ಮಾದರಿಯಾಗಿ ಪರಿಗಣಿಸಿ ಅನ್ವಯವಾಗಬಹುದು ಎಂಬ ಆತಂಕದ ಹಿನ್ನೆ​ಲೆ​ಯಲ್ಲಿ ಖರ್ಗೆ ಅವರು ಈ ಪತ್ರ ಬರೆ​ದಿ​ದ್ದಾರೆ.

‘ಸರ್ಕಾರವು ಮೆರಿಟ್‌ ಇದ್ದರೂ ಆಯಾ ಹಿಂದುಳಿದ ವರ್ಗದ ಸಮುದಾಯದವರು ತಮಗೆ ಮೀಸಲಿರುವ ಮೀಸಲಾತಿ ಹುದ್ದೆಗಳನ್ನು ಮಾತ್ರವೇ ಪಡೆಯಬೇಕು ಎಂಬ ನಿಯಮ ಜಾರಿ ಮಾಡಿದರೆ ಪರಿ​ಶಿ​ಷ್ಟರು, ಅಲ್ಪ​ಸಂಖ್ಯಾ​ತರು ಹಿಂದುಳಿದ ವರ್ಗಗಳು ಸೇರಿ​ದಂತೆ ಮೀಸ​ಲಾತಿ ಅರ್ಹತೆ ಹೊಂದಿ​ರುವ ವರ್ಗ​ಗ​ಳಿಗೆ ಭಾರಿ ಅನ್ಯಾಯವಾಗಲಿದೆ. ಮುಂದುವರಿದ ಕೆಲವೇ ಸಮುದಾಯಗಳು ಶೇ. 50 ರಷ್ಟುಭಾರಿ ಮೀಸಲಾತಿಯನ್ನು ಅನುಭವಿಸುವಂತಾಗುತ್ತದೆ. ಇದರಿಂದ ಸಮಾಜದಲ್ಲಿ ಮತ್ತೆ ತಾರತಮ್ಯ ಹೆಚ್ಚಾಗಿ, ಹಿಂದುಳಿದ ಸಮುದಾಯಗಳು ಮತ್ತಷ್ಟುಹಿಂದುಳಿಯುತ್ತವೆ’ ಎಂದು ಆತಂಕ ವ್ಯಕ್ತ​ಪ​ಡಿ​ಸಿ​ದ್ದಾ​ರೆ.

ಪ್ರಿಯಾಂಕ ಖರ್ಗೆ ಪತ್ರದಲ್ಲೇನಿದೆ:  ‘ಇಲ್ಲಿಯವರೆಗಿನ ನಿಯಮಗಳ ಪ್ರಕಾರ ಪರಿಶಿಷ್ಟಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಮೆರಿಟ್‌ ಇದ್ದರೆ, ಸಾಮಾನ್ಯ ಪ್ರವರ್ಗದಡಿ ನಿಗದಿಯಾಗಿರುವ ಹುದ್ದೆಗಳಲ್ಲಿ ನೇಮಕಾತಿಯಾಗುವ ಅವಕಾಶ ಇತ್ತು. ಇದರಿಂದ ಪ್ರತಿಭಾವಂತರು ನೇರ ನೇಮಕ ಹೊಂದುತ್ತಿದ್ದರು. ಕೆಪಿಎಸ್‌ಸಿಯ ಈಗಿನ ನಿರ್ಧಾರದಿಂದ ಈ ಸಮುದಾಯಗಳನ್ನು ಅವಕಾಶ ವಂಚಿತರನ್ನಾಗಿಸುವ ಹುನ್ನಾರ ನಡೆಯುತ್ತಿದೆ. ಸಂವಿಧಾನ ಕಲ್ಪಿಸಿರುವ ನೇರ ಮೀಸಲಾತಿಗೆ ಶೇ.93 ರಷ್ಟುಸಮುದಾಯಗಳು ಅರ್ಹವಾಗಿವೆ. ಇದೀಗ ಮೀಸಲಾತಿಯನ್ನು ಶೇ.50ಕ್ಕೆ ಸೀಮಿತಗೊಳಿಸಿ ಸಾಮಾನ್ಯ ಮೆರಿಟ್‌ನ ಶೇ.50 ರಷ್ಟುಸ್ಥಾನಗಳನ್ನು ಪಡೆಯುವಂತಿಲ್ಲ ಎಂದು ಹೇಳಿದರೆ ಅಷ್ಟೂಸಮುದಾಯದ ಜನರಿಗೆ ಅನ್ಯಾಯವಾಗುತ್ತದೆ. ಹೀಗಾಗಿ ಕೂಡಲೇ ಸರ್ಕಾರದ ಚಿಂತನೆಯನ್ನು ಬದಲಿಸಿಕೊಳ್ಳಬೇಕು’ ಎಂದು ಒತ್ತಾಯ ಮಾಡಿದ್ದಾರೆ.

‘ಸಂವಿಧಾನಬದ್ಧವಾಗಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಸೌಲಭ್ಯ ಪ್ರಾಪ್ತವಾಗಿದೆ. ಪರಿಶಿಷ್ಟಜಾತಿಗೆ ಶೇ.15, ಪರಿಶಿಷ್ಟಪಂಗಡಕ್ಕೆ ಶೇ.3, ಪ್ರವರ್ಗ 1ಕ್ಕೆ ಶೇ.4, ಪ್ರವರ್ಗ 2ಎಗೆ ಶೇ. 15, ಪ್ರವರ್ಗ 2ಬಿಗೆ ಶೇ.4, ಪ್ರವರ್ಗ 3ಎಗೆ ಶೇ.4, ಪ್ರವರ್ಗ 3ಬಿಗೆ ಶೇ.5 ರಂತೆ ಶೇ. 100 ರಷ್ಟುಮೀಸಲಾತಿಯಲ್ಲಿ ಶೇ.50 ರಷ್ಟನ್ನು ಹಿಂದುಳಿದ ವರ್ಗಗಳಿಗೆ ನೀಡಿದೆ. ಉಳಿದ ಶೇ.50 ರಷ್ಟುಸಾಮಾನ್ಯ ವರ್ಗದ ಹುದ್ದೆಗಳನ್ನು ಮೆರಿಟ್‌ ಆಧಾರದ ಮೇಲೆ ಮೀಸ​ಲಾತಿ ಅರ್ಹ ವರ್ಗ​ಗಳ ಅಭ್ಯ​ರ್ಥಿ​ಗಳು ಸೇರಿ​ದಂತೆ ಯಾರು ಬೇಕಾ​ದರೂ ಪಡೆಯಬಹುದು’ ಎಂದಿದ್ದಾರೆ.

‘ಆದರೆ, ಸರ್ಕಾರವು ಮೆರಿಟ್‌ ಇದ್ದರೂ ಆಯಾ ಹಿಂದುಳಿದ ವರ್ಗದ ಸಮುದಾಯದವರು ತಮಗೆ ಮೀಸಲಿರುವ ಮೀಸಲಾತಿ ಹುದ್ದೆಗಳನ್ನು ಮಾತ್ರವೇ ಪಡೆಯಬೇಕು ಎಂಬ ನಿಯಮ ಜಾರಿ ಮಾಡಿದರೆ ಪರಿ​ಶಿ​ಷ್ಟರು, ಅಲ್ಪ​ಸಂಖ್ಯಾ​ತರು ಹಿಂದುಳಿದ ವರ್ಗಗಳು ಸೇರಿ​ದಂತೆ ಮೀಸ​ಲಾತಿ ಅರ್ಹತೆ ಹೊಂದಿ​ರುವ ವರ್ಗ​ಗ​ಳಿಗೆ ಭಾರಿ ಅನ್ಯಾಯವಾಗಲಿದೆ. ಮುಂದುವರಿದ ಕೆಲವೇ ಸಮುದಾಯಗಳು ಶೇ. 50 ರಷ್ಟುಭಾರಿ ಮೀಸಲಾತಿಯನ್ನು ಅನುಭವಿಸುವಂತಾಗುತ್ತದೆ. ಇದರಿಂದ ಸಮಾಜದಲ್ಲಿ ಮತ್ತೆ ತಾರತಮ್ಯ ಹೆಚ್ಚಾಗಿ, ಹಿಂದುಳಿದ ಸಮುದಾಯಗಳು ಮತ್ತಷ್ಟುಹಿಂದುಳಿಯುತ್ತವೆ. ಹೀಗಾಗಿ ಕೂಡಲೇ ಈ ನೀತಿ​ಯಿಂದ ಹಿಂದಕ್ಕೆ ಸರಿ​ಯ​ಬೇಕು’ ಎಂದು ಅವರು ಪತ್ರ​ದಲ್ಲಿ ಮುಖ್ಯ​ಮಂತ್ರಿ​ಯ​ವ​ರನ್ನು ಆಗ್ರ​ಹಿ​ಸಿ​ದ್ದಾ​ರೆ.

ಆಗಿರುವುದೇನು?

2015ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ ನೇಮಕಕ್ಕೆ 2017ರಲ್ಲಿ ಪರೀಕ್ಷೆ ನಡೆಸಲಾಗಿದೆ, ಈಗ ಅಭ್ಯರ್ಥಿಗಳ ವ್ಯಕ್ತಿತ್ವ ಪರೀಕ್ಷೆಗೆ 1:5 ಅನುಪಾತದ ಪಟ್ಟಿಸಿದ್ಧಪಡಿಸಬೇಕಿದೆ. ಆದರೆ, ಕರ್ನಾಟಕ ಹೈಕೋರ್ಟ್‌ ‘ನೇರ ಮೀಸಲಾತಿಗೆ ಅರ್ಹವಾದ ವ್ಯಕ್ತಿಗಳು ಜನರಲ್‌ ಮೆರಿಟ್‌ ಅಡಿ ಪ್ರವೇಶ ಪಡೆಯುವಂತಿಲ್ಲ’ ಎಂದು ಆದೇಶಿಸಿದೆ. ಹಾಗಾಗಿ, ಪಟ್ಟಿಸಿದ್ಧಪಡಿಸುವಾಗ ಯಾವ ಮಾನದಂಡ ಅಳವಡಿಸಬೇಕು ಎಂದು ಕೇಳಿ ಕಳೆದ ಅ.20ಕ್ಕೆ ಕೆಪಿಎಸ್ಸಿಯು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿತ್ತು. ಈ ಸಂಬಂಧ ನ.3ಕ್ಕೆ ಸುತ್ತೋಲೆ ಹೊರಡಿಸಿರುವ ಸರ್ಕಾರ, ಹೈಕೋರ್ಟ್‌ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಲು ನಿರ್ದೇಶಿಸಿತ್ತು. ಇದರರ್ಥ, ಎಸ್ಸಿ, ಎಸ್ಟಿ, ಒಬಿಸಿ ಮೀಸಲು ಸಿಗುವವರು ಜನರಲ್‌ ಕೆಟಗರಿ ಅಡಿ ಉದ್ಯೋಗ ಪಡೆಯುವಂತಿಲ್ಲ ಎಂದಾಗಿತ್ತು.

ಖರ್ಗೆ ಆಕ್ಷೇಪ ಏನು?

ಹೈಕೋರ್ಟ್‌ ತೀರ್ಪಿನನ್ವಯ ಸರ್ಕಾರದ ಸುತ್ತೋಲೆ ಸದ್ಯಕ್ಕೆ 2015ರ ಗೆಜೆಟೆಡ್‌ ಪ್ರೊಬೇಷನರಿ ನೇಮಕಕ್ಕೆ ಅನ್ವಯವಾದರೂ, ಮುಂದಿನ ನೇಮಕಾತಿಗೆ ಸಂಬಂಧಪಟ್ಟಂತೆ ಹೊಸ ಸಂಪ್ರದಾಯವನ್ನು ಹುಟ್ಟುಹಾಕುತ್ತದೆ. ಸಂವಿಧಾನದ ಪ್ರಕಾರ ಶೇ.93ರಷ್ಟುಸಮುದಾಯ ನೇರ ಮೀಸಲಾತಿಗೆ ಒಳಪಟ್ಟಿದೆ. ಆದರೆ, ಸರ್ಕಾರದ ಹೊಸ ಸುತ್ತೋಲೆಯಿಂದಾಗಿ ಮೀಸಲಾತಿ ಕೋಟಾದವರಿಗೆ ಒಟ್ಟಾರೆ ಹುದ್ದೆಗಳ ಪೈಕಿ ಶೇ.50ರಷ್ಟುಮಾತ್ರ ಪ್ರಯೋಜನ ದೊರೆಯುತ್ತದೆ. ಉಳಿದ ಶೇ.50 ಸಾಮಾನ್ಯ ಪ್ರವರ್ಗಕ್ಕೆ ದೊರೆಯುತ್ತದೆ. ಇದರಿಂದಾಗಿ ಮೀಸಲಾತಿ ವರ್ಗಕ್ಕೆ ಅನ್ಯಾಯವಾಗುತ್ತದೆ. ಹೀಗಾಗಿ, ಸರ್ಕಾರ ತನ್ನ ನಿರ್ಧಾರ ಬದಲಿಸಿಕೊಳ್ಳಬೇಕು, ಹೈಕೋರ್ಟ್‌ ತೀರ್ಪು ಸಂಬಂಧ ಮೇಲ್ಮನವಿ ಸಲ್ಲಿಸಬೇಕು ಎಂಬುದು ಪ್ರಿಯಾಂಕ್‌ ಪತ್ರದ ಹೂರಣ.

click me!