ರಕ್ಷಣೆಗಾಗಿ ಉಳಿಸಿಕೊಂಡಿದ್ದ ಮೊಬೈಲ್‌ ರೆಕಾರ್ಡ್‌ ರಮೇಶ್‌ಗೆ ಉರುಳಾಯ್ತಾ?

By Web DeskFirst Published Oct 13, 2019, 8:18 AM IST
Highlights

ಮೊಬೈಲ್‌ ರೆಕಾರ್ಡ್‌ಗೆ ಹೆದರಿ ರಮೇಶ್‌ ಆತ್ಮಹತ್ಯೆ?|ರಮೇಶ್‌ ಮೊಬೈಲ್‌ನಲ್ಲಿ ಪರಂ ವ್ಯವಹಾರಕ್ಕೆ ಸಂಬಂಧಪಟ್ಟಆಡಿಯೋ ರೆಕಾರ್ಡ್‌| ಕೈ ನಾಯಕರೊಂದಿಗಿನ ಸಂಭಾಷಣೆಯೂ ಇತ್ತು?| ಈ ರೆಕಾರ್ಡ್‌ಗಳು ಐಟಿಗೆ ಸಿಕ್ಕರೆ ಸಮಸ್ಯೆಯಾಗುತ್ತದೆ ಎಂದು ಹೆದರಿ ಆತ್ಮಹತ್ಯೆ ಸಾಧ್ಯತೆ| ರಕ್ಷಣೆಗಾಗಿ ಇಟ್ಟರೆ ಕಾರ್ಡ್‌ ಉರುಳಾಯಿತಾ?

ಬೆಂಗಳೂರು[ಅ.13]: ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರ ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ಕೆಲವು ಮೊಬೈಲ್‌ ಆಡಿಯೋ ರೆಕಾರ್ಡ್‌ಗಳನ್ನು ಅವರ ಆಪ್ತ ಸಹಾಯಕ ರಮೇಶ್‌ನಿಂದ ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

ಐಟಿ ತನಿಖೆ ವೇಳೆ ಈ ಆಡಿಯೋ ರೆಕಾರ್ಡ್‌ಗಳೂ ಸೇರಿದಂತೆ ಕೆಲ ಮಹತ್ವದ ದಾಖಲೆಗಳು ಪತ್ತೆಯಾದ ಹಿನ್ನೆಲೆಯಲ್ಲಿ ಆತಂಕಗೊಂಡ ರಮೇಶ್‌, ತನಗೆ ಮುಂದೆ ಸಂಕಷ್ಟಎದುರಾಗಬಹುದು ಎಂದು ದಿಗಿಲುಗೊಂಡಿದ್ದರು. ಈ ಮನಸ್ಥಿತಿಯಲ್ಲೇ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ನನ್ನ ಹೆಂಡತಿ ಮಕ್ಕಳಿಗೆ ಟಾರ್ಚರ್ ಕೊಡಬೇಡಿ, ಪರಂ ಪಿಎ ಡೆತ್‌ ನೋಟ್‌ ಪತ್ತೆ!

ಕಳೆದ ಎಂಟು ವರ್ಷಗಳಿಂದ ಆಪ್ತ ಸಹಾಯಕರಾಗಿದ್ದ ರಮೇಶ್‌ ಅವರು ಪರಮೇಶ್ವರ್‌ ಅವರ ಕೆಲ ಆಸ್ತಿ ಪರಭಾರೆ ಹಾಗೂ ಆರ್ಥಿಕ ವಹಿವಾಟಿನ ಕುರಿತು ಮಾಹಿತಿ ಹೊಂದಿದ್ದರು. ಅಲ್ಲದೆ, ಪರಮೇಶ್ವರ್‌ ಸೂಚನೆ ಮೇರೆಗೆ ಕೆಲವರಿಗೆ ಅವರು ಹಣ ಸಹ ವರ್ಗಾವಣೆ ಮಾಡಿದ್ದರು. ಈ ವ್ಯವಹಾರದ ಬಗ್ಗೆ ಸಾಕ್ಷ್ಯ ಇರಲಿ ಎಂಬ ಕಾರಣಕ್ಕಾಗಿ ರಮೇಶ್‌ ಅವರು ತಾವು ಹಣ ಪೂರೈಸಿದ್ದ ವ್ಯಕ್ತಿಗಳ ನಡುವಿನ ಮಾತುಕತೆಯನ್ನು ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿಟ್ಟಿದ್ದರು. ಈ ಆಡಿಯೋಗಳೇ ದಾಳಿ ಸಂದರ್ಭದಲ್ಲಿ ಐಟಿ ಅಧಿಕಾರಿಗಳಿಗೆ ಸಿಕ್ಕಿವೆ ಎಂದು ತಿಳಿದು ಬಂದಿದೆ. ಅಲ್ಲದೆ, ಕೆಲವು ಮುಖಂಡರು ಹಾಗೂ ಗಣ್ಯ ವ್ಯಕ್ತಿಗಳ ಜತೆ ಪರಮೇಶ್ವರ್‌ ಅವರು ಆಪ್ತ ಸಹಾಯಕರಾಗಿದ್ದರಿಂದ ರಮೇಶ್‌ ಅವರ ಮೊಬೈಲ್‌ನಿಂದಲೇ ಮಾತುಕತೆ ನಡೆಸಿದ್ದರು. ಈ ಸಂಭಾಷಣೆಗಳು ಆಟೋ ರೆಕಾರ್ಡಿಂಗ್‌ ವ್ಯವಸ್ಥೆಯಿಂದಾಗಿ ರೆಕಾರ್ಡ್‌ ಆಗಿದ್ದವು. ತಮ್ಮ ರಕ್ಷಣೆಗಾಗಿ ಮಾಡಿದ ಆಡಿಯೋ ರೆಕಾರ್ಡ್‌ಗಳೇ ಕೊನೆಗೆ ಅವರಿಗೆ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.

ನಾಯಕರ ಆಡಿಯೋ:

ಬಹುಮುಖ್ಯವಾಗಿ ಪರಮೇಶ್ವರ್‌ ಅವರು ಲೋಕಸಭಾ ಚುನಾವಣೆ ವೇಳೆ ನಡೆಸಿರುವ ಆರ್ಥಿಕ ವಹಿವಾಟಿನ ಕುರಿತು ರಮೇಶ್‌ ಸ್ಪಷ್ಟವಾಗಿ ತಿಳಿದುಕೊಂಡಿದ್ದರು ಎನ್ನಲಾಗಿದೆ. ಪರಮೇಶ್ವರ್‌ ಹಾಗೂ ಕೆಲ ಹಿರಿಯ ಕಾಂಗ್ರೆಸ್‌ ನಾಯಕರ ಸೂಚನೆ ಮೇರೆಗೆ ರಮೇಶ್‌ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳಿಗೆ ಹಣ ತಲುಪಿಸಿದ್ದರು. ಈ ವ್ಯವಹಾರದಲ್ಲಿ ಪರಮೇಶ್ವರ್‌ ಅವರಿಗೆ ರಾಜಕೀಯ ಕಾರ್ಯದರ್ಶಿ ಆಗಿದ್ದ ಈಗಿನ ರಾಜ್ಯಸಭಾ ಸದಸ್ಯರೊಬ್ಬರು ರಮೇಶ್‌ ಅವರಿಗೆ ಸಾಥ್‌ ಕೊಟ್ಟಿದ್ದರು ಎಂದು ತಿಳಿದು ಬಂದಿದೆ.

ಐಟಿ ದಾಳಿ ಬೆನ್ನಲ್ಲೇ ಮಾಜಿ ಡಿಸಿಎಂ ಪರಮೇಶ್ವರ್ ಪಿಎ ರಮೇಶ್ ಆತ್ಮಹತ್ಯೆ!

ತುಮಕೂರು, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಉತ್ತರ ಸೇರಿದಂತೆ ಕೆಲವು ಕ್ಷೇತ್ರಗಳ ಚುನಾವಣಾ ವೆಚ್ಚವನ್ನು ಪರಮೇಶ್ವರ್‌ ಅವರಿಗೆ ಕಾಂಗ್ರೆಸ್‌ ಪಕ್ಷದ ವರಿಷ್ಠರು ವಹಿಸಿದ್ದರು. ಆಗ ಕಾಂಗ್ರೆಸ್‌ ಉಸ್ತುವಾರಿ ಅವರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಪರಮೇಶ್ವರ್‌ ಅವರು ಚುನಾವಣಾ ಖರ್ಚಿನ ರೂಪರೇಷೆ ಸಿದ್ಧಪಡಿಸಿದ್ದರು. ಆಗ ತಮ್ಮ ನಂಬಿಕಸ್ಥ ಬಂಟ ರಮೇಶ್‌ ಮೂಲಕವೇ ಅವರು ಹಣ ಪೂರೈಸಿದ್ದರು ಎಂಬ ಮಾತುಗಳು ಕೇಳಿ ಬಂದಿವೆ.

ಅಲ್ಲದೆ, ನೆಲಮಂಗಲ, ಬೆಂಗಳೂರು ಹಾಗೂ ತುಮಕೂರು ಸೇರಿದಂತೆ ಕೆಲವು ಕಡೆ ಆಸ್ತಿಗಳ ಪರಭಾರೆಯಲ್ಲಿ ಪರಮೇಶ್ವರ್‌ ಪರವಾಗಿ ರಮೇಶ್‌ ವ್ಯವಹರಿಸಿದ್ದರು. ಈ ಎಲ್ಲದರ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಐಟಿ ಅಧಿಕಾರಿಗಳು, ರಮೇಶ್‌ ಅವರನ್ನು ಪ್ರಾಥಮಿಕವಾಗಿ ವಿಚಾರಣೆ ನಡೆಸಿದ್ದರು. ಈ ಪ್ರಶ್ನೆಗಳಿಗೆ ಬೆದರಿದ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗುತ್ತಿದೆ.

click me!