ಜಾನಪದ ಅಕಾಡೆಮಿ ಅಧ್ಯಕ್ಷರಾದರೂ ಕರ್ನಾಟಕ ರಾಜ್ಯೋತ್ಸವ ಪದ್ಮಶ್ರಿಗಳಂತಹ ಅತ್ಯುನ್ನತ ಪ್ರಶಸ್ತಿಗಳಿಗೆ ಭಾಜನಳಾಗಿದ್ದರೂ ಮಂಜಮ್ಮ ಜೋಗತಿ ಒಂದು ಸೂರು ಕಟ್ಟಿಕೊಳ್ಳಲು ಪಡುತ್ತಿರುವ ಪಾಡು ಮಾತ್ರ ಹೇಳತೀರದು
ವರದಿ : ಅಪ್ಪಾರಾವ್ ಸೌದಿ
ಬೀದರ್ (ಮಾ.08): ತನಗೊಲಿದಿರುವ ಜಾನಪದ ಕಲೆಗೆ ಜಾಗತಿಕ ಮನ್ನಣೆ ಸಿಕ್ಕರೂ ಜಾನಪದ ಅಕಾಡೆಮಿ ಅಧ್ಯಕ್ಷರಾದರೂ ಕರ್ನಾಟಕ ರಾಜ್ಯೋತ್ಸವ ಪದ್ಮಶ್ರಿಗಳಂತಹ ಅತ್ಯುನ್ನತ ಪ್ರಶಸ್ತಿಗಳಿಗೆ ಭಾಜನಳಾಗಿದ್ದರೂ ಮಂಜಮ್ಮ ಜೋಗತಿ ಒಂದು ಸೂರು ಕಟ್ಟಿಕೊಳ್ಳಲು ಪಡುತ್ತಿರುವ ಪಾಡು ಅಷ್ಟಿಷ್ಟಲ್ಲ. ಸರ್ಕಾರದಿಂದ ಮಂಜೂರಾದ 17*10ಅಡಿ ಆಶ್ರಯ ಮನೆ ನಿರ್ಮಾಣಕ್ಕೆ ಕಳೆದ ಮೂರ್ನಾಲ್ಕು ವರ್ಷದಿಂದ ಅಲೆದಾಟ ತಪ್ಪುತ್ತಿಲ್ಲ.
undefined
ಕಡುಬಡತನವ ಕಂಡವರು, ಗಂಡುಮಗುವಾಗಿ ಮನೆ ಮಂದಿಯ ಪ್ರೀತಿ ಗಳಿಸಿ ಎಸ್‌ಎಸ್‌ಎಲ್‌ಸಿಗೆ ಬರುತ್ತಲೇ ತೃತೀಯ ಲಿಂಗಿಯಾಗಿ ಸಮಾಜದಿಂದಷ್ಟೇ ಅಲ್ಲ ಮನೆಯರಿಂದಲೇ ಅಪಮಾನಿತಳಾದವರ. ಛೀಮಾರಿಯನ್ನೇ ಹೇರಳವಾಗಿ ಕಂಡರೂ ಧೈರ್ಯಗುಂದದೆ ಕಲಾವಿದಳಾಗಿ ಗುರುತಿಸಿಕೊಂಡು ಹೆಸರು ಮಾಡಿರುವ ಮಂಜಮ್ಮ ಜೋಗತಿ ಕಳೆದ ಸಾಲಿನಲ್ಲಿ ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯರಾಗಿದ್ದವರು ಇದೀಗ ಅಧ್ಯಕ್ಷೆಯಾಗಿ ಪದ್ಮಶ್ರೀ ಪ್ರಶಸ್ತಿ ಪಡೆಯುವ ಮಟ್ಟಕ್ಕೆ ಬೆಳೆದರೂ ಸರ್ಕಾರದ 17*10 ಅಡಿಯ ಮನೆಯ ನಿರ್ಮಾಣಕ್ಕೂ ಹೆಣಗಾಡ್ತಿದ್ದಾರೆ.
ಗುಲಬರ್ಗಾ ವಿವಿ ಪಠ್ಯಕ್ಕೆ ಮಂಜಮ್ಮ ಜೋಗತಿ ಆತ್ಮಕಥನ ...
ಈ ಕುರಿತಂತೆ ‘ಕನ್ನಡಪ್ರಭ’ಕ್ಕೆ ಮಾತನಾಡಿದ ಮಂಜಮ್ಮ ಜೋಗತಿ ಅವರು, ಸರ್ಕಾರದಿಂದ 2017-18ರಲ್ಲಿ ವಾಜಪೇಯಿ ವಸತಿ ಯೋಜನೆಯಡಿ ಕೇವಲ 17*10 ಸುತ್ತಳತೆಯ ಮನೆ ಮಂಜೂರಿ ಅಂತ, ಮರಿಯಮ್ಮನಹಳ್ಳಿಯಲ್ಲಿನ ಇದ್ದ ಕಚ್ಚಾ ಮನೆಯನ್ನು ಬೀಳಿಸಿ ಮನೆ ಕಟ್ಟಿಸಿಕೊಳ್ಳಲಾರಂಬಿಸಿದೆ. ಸರ್ಕಾರದಿಂದ ಅನುದಾನ ನಿಂತು ಮನೆ ಅಲ್ಲೇ ಕುಂತಿತು, ಬಾಡಿಗೆ ಮನೆಯಲ್ಲಿದ್ದೇನೆ, ಒಬ್ಬ ಅಜ್ಜಿಯನ್ನು ಇಬ್ಬರು ಹುಡುಗರನ್ನು ಸಾಕುತ್ತಿದ್ದೇನೆ, ಜೀವನೋಪಾಯ ಭಾರಿ ಸಂಕಷ್ಟಕ್ಕೆ ನೂಕಲ್ಪಟ್ಟಿದೆ ಎಂದು ಕಣ್ಣೀರಿಟ್ಟರು.
ಸರ್ಕಾರ ನನಗೆ ಅಕಾಡೆಮಿಯ ಅಧ್ಯಕ್ಷೆಯ ಸ್ಥಾನ ಕಲ್ಪಿಸಿಕೊಟ್ಟಿದೆ, ಪದ್ಮಶ್ರೀ ಪ್ರಶಸ್ತಿ ನೀಡಿದೆ. ಅದಕ್ಕೆ ನಾನು ಆಭಾರಿ. ಇದೆಲ್ಲದರ ಮಧ್ಯ ಬದುಕು ಕಷ್ಟಕರವಾಗಿದೆ. ಆರೋಗ್ಯಕ್ಕೇನಾದರೂ ಆದರೆ ಆಸ್ಪತ್ರೆ ಚಿಕಿತ್ಸೆಗೂ ದುಡ್ಡಿಲ್ಲ ಸಾಲ ಮಾಡಿಯೇ ಚಿಕಿತ್ಸೆ ಪಡೆಯೋ ದುಸ್ಥಿತಿ ಇದೆ ಎಂದು ಗೋಳು ತೋಡಿಕೊಂಡಿದ್ದಾರೆ.
ಸಚಿವ ಅರವಿಂದ ಲಿಂಬಾವಳಿ ಹಾಗೂ ಮಾಜಿ ಸಚಿವ ಜನಾರ್ಧನ ರೆಡ್ಡಿ ಅವರು ಭೂಮಿ ಕೊಡಿಸುವ ಭರವಸೆ ನೀಡಿದ್ದು ಮಂಜಮ್ಮ ಜೋಗುತಿ ಕನ್ನಡ ಭವನ ಮಾಡೋಣ ಎಂದು ಹೇಳಿದ್ದಾರೆ, ಮನವೀನೂ ಕೊಟ್ಟಿದ್ದೇನೆ ಏನಾಗುತ್ತೆ ಗೊತ್ತಿಲ್ಲ ಎಂದಿರುವ ಅವರ ಈ ಸಂಕಷ್ಟವನ್ನು ಸರ್ಕಾರ ಪರಿಹರಿಸಬೇಕಿದೆ, ದೇಶದ ಉನ್ನತ ಪ್ರಶಸ್ತಿ ಪಡೆದಿರುವ ಅವರಿಗೆ ಸೂರು ದೊರಕಿಸಿಕೊಡಬೇಕಿದೆ.