ಅನಾರೋಗ್ಯದ ಕಾರಣ ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ಶ್ರೀ ಎಸ್ ಎಂ ಕೃಷ್ಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಂಗಳೂರು (ಏ.29): ಅನಾರೋಗ್ಯದ ಕಾರಣ ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ, ಹಿರಿಯ ರಾಜಕೀಯ ಮುತ್ಸದಿ ಶ್ರೀ ಎಸ್ ಎಂ ಕೃಷ್ಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಆಸ್ಪತ್ರೆಯಿಂದ ಮಾಹಿತಿ ಬಿಡುಗಡೆ ಮಾಡಲಾಗಿದೆ. ಎಸ್ ಎಂ ಕೃಷ್ಣ ಅವರ ಆರೋಗ್ಯ ಸ್ಥಿರವಾಗಿದೆ. ದೇಹದಲ್ಲಿ ಸಣ್ಣದಾಗಿ ಅನಾರೋಗ್ಯ ಕಾಣಿಸಿಕೊಂಡಿತ್ತು. ಡಾ. ಸತ್ಯನಾರಾಯಣ ಮೈಸೂರು ಮತ್ತು ವೈದ್ಯಕೀಯ ತಜ್ಞರ ತಂಡ ಚಿಕಿತ್ಸೆ ನೀಡುತ್ತಿದೆ. ಅವರ ದೇಹ ಚಿಕಿತ್ಸೆಗೆ ಸ್ಪಂದಿಸುತ್ತಿದೆ. ಯಾರೂ ಕೂಡ ಆತಂಕ ಪಡುವ ಅಗತ್ಯವಿಲ್ಲ ಎಂದು ಆಸ್ಪತ್ರೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ..
PM Modi Bagalkot Rally ಬಾಲಾಕೋಟ್ ಉಗ್ರರ ದಾಳಿ ಕಾಂಗ್ರೆಸ್‌ಗೆ ಅರ್ಥವಾಗದೆ ಬಾಗಲಕೋಟೆ ಅಂದುಕೊಂಡಿದ್ರು: ಮೋದಿ
ಉಸಿರಾಟದ ಸೋಂಕಿನ ಹಿನ್ನೆಲೆ ಕೆಲ ದಿನಗಳ ಹಿಂದೆ ಕೃಷ್ಣ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಎಪ್ರಿಲ್ 20ರಂದು ಶನಿವಾರ ವಿಟ್ಲ ಮಲ್ಯ ರಸ್ತೆಯಲ್ಲಿರುವ ವೈದೇಹಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಐಸಿಯುಗೆ ದಾಖಲಿಸಲಾಗಿತ್ತು. ವೈದೇಹಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಹಿರಿಯ ಹೃದ್ರೋಗ ತಜ್ಞ ಡಾ ವಿ ಕೆ ಶ್ರೀನಿವಾಸ್ ಅವರು ಕೃಷ್ಣ ತೀವ್ರವಾದ ಉಸಿರಾಟದ ಸೋಂಕಿನಿಂದ ಬಳಲುತ್ತಿದ್ದರು ಅವರಿಗೆ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿಸಿದ್ದರು. ಎರಡು ದಿನಗಳಲ್ಲಿ ಬಿಡುಗಡೆಯಾಗಿ ಮನೆಗೆ ತೆರಳಿದ್ದರು
ಇದೀಗ ಮತ್ತೆ ಅನಾರೋಗ್ಯದ ಹಿನ್ನೆಲೆ ಇಂದು (ಏಪ್ರಿಲ್ 29) ಎಸ್ ಎಂ ಕೃಷ್ಣ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ. ಎಸ್‌ಎಂ ಕೃಷ್ಣ ಅವರಿಗೆ 91 ವರ್ಷ ವಯಸ್ಸಾಗಿದೆ. ವಯೋಸಹಜವಾಗಿ ಆಗಾಗ ಅನಾರೋಗ್ಯಕ್ಕೀಡಾಗುತ್ತಿದ್ದಾರೆ.
ಕಾಂಗ್ರೆಸ್ ಗೆಲ್ಲಲು ಹಿಂದೂಗಳ ಮತ ಬೇಡವೆಂದ ಕೈ ನಾಯಕ, ಆಂಧ್ರದಲ್ಲಿ ಹಜ್ ಯಾತ್ರಿಕರಿಗೆ 1 ಲಕ್ಷದ ಭರವಸೆ
ಕೃಷ್ಣ ಅವರು 1999 ರಿಂದ 2004 ರವರೆಗೆ ಕರ್ನಾಟಕ ರಾಜ್ಯದ 16 ನೇ ಮುಖ್ಯಮಂತ್ರಿಗಳಾಗಿದ್ದರು. ಕರ್ನಾಟಕದ ಅತ್ಯಂತ ಹೆಚ್ಚು ಸುಶಿಕ್ಷಿತ ಮುಖ್ಯಮಂತ್ರಿಗಳಲ್ಲಿ ಕೃಷ್ಣ ಕೂಡ ಒಬ್ಬರು. 2004 ರಿಂದ 2008 ರವರೆಗೆ ಮಹಾರಾಷ್ಟ್ರದ 19 ನೇ ರಾಜ್ಯಪಾಲರಾಗಿದ್ದರು. 2009ರಿಂದ 2012ರವರೆಗೆ ವಿದೇಶಾಂಗ ವ್ಯವಹಾರಗಳ ಸಚಿವರಾಗಿಯು ಕೂಡ ಕರ್ತವ್ಯ ನಿರ್ವಹಿಸಿದ್ದಾರೆ. ಬಹುಕಾಲ ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದರು, ಬದಲಾದ ರಾಜಕೀಯ ಸನ್ನಿವೇಶಗಳ ಕಾರಣ ಮಾರ್ಚ್ 2017ರಲ್ಲಿ ಬಿಜೆಪಿ ಪಕ್ಷ ಸೇರಿದರು. ಇವರಿಗೆ 2023ರ ಸಾಲಿನ ಪದ್ಮವಿಭೂಷಣ ಪ್ರಶಸ್ತಿ ನೀಡಲಾಗಿದೆ. ಸದ್ಯ ಕೃಷ್ಣ ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದಾರೆ.