
ಬೆಂಗಳೂರು(ಏ.06): ಭಾನುವಾರ ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ಸಾರ್ವಜನಿಕರೆಲ್ಲರೂ ವಿದ್ಯುತ್ ದೀಪ ಆರಿಸಿದಾಗ ಏಕಾಏಕಿ 1180 ಮೆಗಾ ವ್ಯಾಟ್‌ವರೆಗೆ ವಿದ್ಯುತ್ ಬಳಕೆ ಕಡಿಮೆಯಾಗಿದೆ. ಈ ಹಠಾತ್ ವಿದ್ಯುತ್ ಬೇಡಿಕೆ ಕುಸಿತವನ್ನು ಜಲ ವಿದ್ಯುತ್ ಉತ್ಪಾದನಾ ಸ್ಥಾವರಗಳಲ್ಲಿ ತಕ್ಷಣ ವಿದ್ಯುತ್ ಉತ್ಪಾದನೆ ಕಡಿಮೆ ಮಾಡಿಕೊಂಡು ಇಂಧನ ಇಲಾಖೆ ಯಶಸ್ವಿಯಾಗಿ ನಿರ್ವಹಣೆ ಮಾಡಿದೆ.
ಹೀಗಾಗಿ ರಾಜ್ಯದಲ್ಲಿ ರಾತ್ರಿ 9.50 ನಿಮಿಷದವರೆಗೆ ಎಲ್ಲೂ ವಿದ್ಯುತ್ ಪೂರೈಕೆಯಲ್ಲಿ ತಾಂತ್ರಿಕ ವ್ಯತ್ಯಯ ಉಂಟಾಗಿಲ್ಲ. ಸವಾಲನ್ನು ಸಮರ್ಥವಾಗಿ ಎದುರಿಸಿದ್ದೇವೆ ಎಂದು ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕರಾದ ಎನ್. ಮಂಜುಳಾ ಅವರು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.
ಮುನ್ನೆಚ್ಚರಿಕಾ ಕ್ರಮವಾಗಿ ರಾತ್ರಿ 8 ಗಂಟೆಯಿಂದಲೇ ಬಹುತೇಕ ಲೋಡ್‌ನ್ನು ಜಲವಿದ್ಯುತ್ ಸ್ಥಾವರಗಳ ಮೇಲೆ ವಹಿಸಿ ಹೆಚ್ಚು ವಿದ್ಯುತ್ ಉತ್ಪಾದನೆ ಮಾಡಲಾಯಿತು. ವಿದ್ಯುತ್ ಬೇಡಿಕೆ ಕುಸಿದಂತೆ ವಿದ್ಯುತ್ ಸ್ಥಾವರದಲ್ಲಿ ವಿದ್ಯುತ್ ಉತ್ಪಾದæ ಕಡಿಮೆ ಮಾಡಿಕೊಳ್ಳಲಾಯಿತು. 9 ನಿಮಿಷಗಳ ಬಳಿಕ ಮತ್ತೆ ವಿದ್ಯುತ್ ದೀಪ ಆನ್ ಮಾಡಿದಾಗ ಮತ್ತೆ ಜಲವಿದ್ಯುತ್ ಕೇಂದ್ರಗಳಿಗೆ ಚಾಲನೆ ನೀಡಿ ಎಲ್ಲೂ ತಾಂತ್ರಿಕ ಸಮಸ್ಯೆ ಉಂಟಾಗದಂತೆ ಎಚ್ಚರ ವಹಿಸಲಾಗಿದೆ ಎಂದರು.
9 ಗಂಟೆವರೆಗೆ 6,806 ಮೆಗಾ ವ್ಯಾಟ್ ವಿದ್ಯುತ್ ಬಳಕೆಯಾಗುತ್ತಿದ್ದರೆ 9 ಗಂಟೆ ವೇಳಗೆ 6,121 ಮೆ.ವ್ಯಾಟ್‌ಗೆ ವಿದ್ಯುತ್ ಬಳಕೆ ಕಡಿಮೆಯಾಯಿತು. ಈ ಮೂಲಕ ಏಕಾಏಕಿ ಸರಾಸರಿ 685 ಮೆ.ವ್ಯಾಟ್ ವಿದ್ಯುತ್ ಬಳಕೆ ಕಡಿಮೆಯಾಯಿತು. ಪ್ರತಿ ನಿಮಿಷಕ್ಕೂ ವಿದ್ಯುತ್ ಬಳಕೆ 300 ಮೆ.ವ್ಯಾಟ್‌ನಿಂದ 1180 ಮೆ.ವ್ಯಾಟ್‌ವರೆಗೆ ಕಡಿಮೆಯಾಗಿದೆ. ಎಲ್ಲರೂ ವಿದ್ಯುತ್ ದೀಪ ಬೆಳಗಿಸಿದ ಬಳಿಕ ಮತ್ತೆ ವಿದ್ಯುತ್ ಬಳಕೆ ಹೆಚ್ಚು ಕಡಿಮೆ ಯತಾಸ್ಥಿತಿಗೆ ಬಂದಿದೆ ಎಂದು ಕೆಪಿಟಿಸಿಎಲ್ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ರಕ್ಷಣೆಗೆ ನಿಂತ ಜಲವಿದ್ಯುತ್!:
ಏಕಾಏಕಿ ವಿದ್ಯುತ್ ಪೂರೈಕೆ ಆನ್ ಹಾಗೂ ಆಫ್ ಮಾಡಿಕೊಳ್ಳಲು ಜಲವಿದ್ಯುತ್ ಸ್ಥಾವರಗಳಿಂದ ಮಾತ್ರ ಸಾಧ್ಯ. ಹೀಗಾಗಿ ರಾತ್ರಿ 8 ಗಂಟೆಯಿಂದ ಜಲವಿದ್ಯುತ್ ಯೋಜನೆಗಳಿಂದ ಉತ್ಪಾದನಾ ಸಾಮರ್ಥ್ಯ ಹೆಚ್ಚಳ ಮಾಡಿಕೊಂಡು ಶರಾವತಿಯಿಂದ 959 ಮೆ.ವ್ಯಾಟ್‌ನಷ್ಟು(1,035 ಗರಿಷ್ಠ) ವಿದ್ಯುತ್ ಉತ್ಪಾದನೆ ಮಾಡಲಾಯಿತು. ವಾರಾಹಿಯಿಂದ 443 ಮೆ.ವ್ಯಾಟ್ (ಗರಿಷ್ಠ 460), ಭದ್ರಾ 20 ಮೆ.ವ್ಯಾಟ್ (ಗರಿಷ್ಠ 39.2) ಸೇರಿದಂತೆ ಬಹುತೇಕ ಜಲವಿದ್ಯುತ್ ಘಟಕಗಳಿಂದ ಗರಿಷ್ಠ ಸಾಮರ್ಥ್ಯದ ವಿದ್ಯುತ್ ಉತ್ಪಾದನೆಯನ್ನು ರಾತ್ರಿ 8 ಗಂಟೆಯಿಂದ ಶುರು ಮಾಡಲಾಯಿತು. ಈ ವೇಳೆ ಉಷ್ಣ ವಿದ್ಯುತ್, ಪವನ ವಿದ್ಯುತ್ ಸೇರಿದಂತೆ ಇತರೆ ಗ್ರಿಡ್‌ಗಳಿಂದ ಪೂರೈಸುವ ವಿದ್ಯುತ್ ಪ್ರಮಾಣ ಕಡಿಮೆ ಮಾಡಲಾಯಿತು.
9 ಗಂಟೆಗೆ ಎಲ್ಲರೂ ವಿದ್ಯುತ್ ದೀಪ ಆರಿಸಿದ ತಕ್ಷಣ ಶರಾವತಿ ಜಲವಿದ್ಯುತ್ ಉತ್ಪಾದನಾ ಕೇಂದ್ರದ ಸಾಮರ್ಥ್ಯವನ್ನು 959 ಮೆ.ವ್ಯಾಟ್‌ನಿಂದ ಏಕಾಏಕಿ 221 ಮೆ.ವ್ಯಾಟ್‌ಗೆ ಇಳಿಸಲಾಯಿತು. ಅದೇ ರೀತಿ ವಾರಾಹಿ ಕೇಂದ್ರದಲ್ಲಿ 443 ಮೆ.ವ್ಯಾಟ್ ವಿದ್ಯುತ್‌ನ್ನು 45 ಮೆ.ವ್ಯಾಟ್‌ಗೆ ಕಡಿಮೆ ಮಾಡಲಾಯಿತು.
ಜಲವಿದ್ಯುತ್, ಉಷ್ಣ ವಿದ್ಯುತ್ ಸೇರಿದಂತೆ 9 ಗಂಟೆವರೆಗೆ 4,155 ಮೆ.ವ್ಯಾಟ್‌ನಷ್ಟಿದ್ದ ವಿದ್ಯುತ್ ಉತ್ಪಾದನೆ ಏಕಾಏಕಿ 2,593 ಯೂನಿಟ್‌ಗೆ ಇಳಿಕೆ ಮಾಡಿಕೊಳ್ಳಲಾಯಿತು. ಬಳಿಕ 9 ಗಂಟೆ 10 ನಿಮಿಷಕ್ಕೆ ಮತ್ತೆ ಜಲವಿದ್ಯುತ್ ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ಚಾಲನೆ ನೀಡಿ ವಿದ್ಯುತ್ ವ್ಯತ್ಯಯ ಆಗದಂತೆ ನೋಡಿಕೊಳ್ಳಲಾಯಿತು.
ಶೇ.11ರಷ್ಟು ಮಾತ್ರ ಕಡಿಮೆ:
ಟ್ರಾನ್ಸ್‌ಮಿಷನ್ ಮಾರ್ಗಗಳ ಮೂಲಕ ಪೂರೈಕೆಯಾಗುತ್ತಿರುವ ವಿದ್ಯುತ್ ಶೇ.30 ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಬಳಕೆಯಾಗದಿದ್ದರೆ ತಾಂತ್ರಿಕ ಸಮಸ್ಯೆ ಉಂಟಾಗುತ್ತದೆ. ರಾತ್ರಿ ಶೇ.11 ರಷ್ಟುಪ್ರಮಾಣದ ವಿದ್ಯುತ್ ಬಳಕೆ ಮಾತ್ರ ಕಡಿಮೆಯಾಗಿದೆ. ಎಲ್ಲರೂ ಕೆಪಿಟಿಸಿಎಲ್ ಮನವಿಯಂತೆ ರೆಫ್ರಿಜರೇಟರ್, ಇತರೆ ವಿದ್ಯುತ್ ಉಪಕರಣ, ಬೀದಿ ದೀಪಗಳು ಆರಿಸಿಲ್ಲ. ಹೀಗಾಗಿ ಹೆಚ್ಚು ಸಮಸ್ಯೆ ಸೃಷ್ಟಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಲ ವಿದ್ಯುತ್ ಉತ್ಪಾದನಾ ಘಟಕಗಳ ಮೇಲೆ ಹೆಚ್ಚು ಲೋಡ್ ತೆಗೆದುಕೊಂಡು ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದ್ದೇವೆ. ಯಾವ ಭಾಗದಿಂದಲೂ ತಾಂತ್ರಿಕ ಸಮಸ್ಯೆ ವರದಿಯಾಗಿಲ್ಲ. 9 ನಿಮಿಷಗಳ ಅವಧಿಯಲ್ಲಿ 300 ಮೆ.ವ್ಯಾಟ್‌ನಿಂದ 1180 ಮೆ.ವ್ಯಾಟ್‌ವರೆಗೆ ವಿದ್ಯುತ್ ಕಡಿಮೆ ಬಳಕೆಯಾಗಿದ್ದು, ಇದರಿಂದ ವಿದ್ಯುತ್ ಪೂರೈಕೆ ವ್ಯವಸ್ಥೆಗೆ ಯಾವುದೇ ತೊಂದರೆಯಾಗದಂತೆ ನಿಭಾಯಿಸಲಾಗಿದೆ.
- ಎನ್. ಮಂಜುಳಾ, ವ್ಯವಸ್ಥಾಪಕ ನಿರ್ದೇಶಕರು, ಕೆಪಿಟಿಸಿಎಲ್.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ