ನೋಂದಣಿ ಆಗದ ಔಷಧ ಅಂಗಡಿ ವಿರುದ್ಧ ಏನು ಕ್ರಮ?

By Kannadaprabha NewsFirst Published Oct 8, 2020, 7:01 AM IST
Highlights

ನೋಂದಣಿ ಮಾಡಿಸಿಕೊಳ್ಳದ ಫಾರ್ಮಾಸಿಸ್ಟ್‌  ವಿರುದ್ಧ ಕೈಗೊಂಡ ಕ್ರಮಗಳ ವಿವರ ನೀಡುವಂತೆ ಕರ್ನಾಟಕ ರಾಜ್ಯ ಫಾರ್ಮಾಸಿ ಕೌನ್ಸಿಲ್‌ಗೆ ಹೈಕೋರ್ಟ್‌ ಕೇಳಿದೆ

ಬೆಂಗಳೂರು(ಅ.08):  ನೋಂದಣಿ ನವೀಕರಣ ಮಾಡಿಸಿಕೊಳ್ಳದ ಫಾರ್ಮಾಸಿಸ್ಟ್‌ (ಔಷಧ ಮಾರಾಟಗಾರರು) ವಿರುದ್ಧ ಕೈಗೊಂಡ ಕ್ರಮಗಳ ವಿವರ ನೀಡುವಂತೆ ಕರ್ನಾಟಕ ರಾಜ್ಯ ಫಾರ್ಮಾಸಿ ಕೌನ್ಸಿಲ್‌ಗೆ ಹೈಕೋರ್ಟ್‌ ಬುಧವಾರ ನಿರ್ದೇಶಿಸಿದೆ. ಈ ಕುರಿತು ಕೊಪ್ಪಳ ಜಿಲ್ಲಾ ಕೆಮಿಸ್ಟ್‌ ಆಂಡ್‌ ಡ್ರಗ್ಸ್‌ ಅಸೋಸಿಯೇಷನ್‌ ಅಧ್ಯಕ್ಷ ಅಶೋಕ್‌ ಸ್ವಾಮಿ ಹೇರೂರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಸೂಚನೆ ನೀಡಿತು. ಅಲ್ಲದೆ, ಫಾರ್ಮಾಸಿ ಇನ್ಸ್‌ಪೆಕ್ಟರ್‌ಗಳ ನೇಮಕ ಮಾಡಿಕೊಳ್ಳದಿರುವ ನಿರ್ಣಯವನ್ನು ಮರು ಪರಿಶೀಲಿಸುವಂತೆಯೂ ಇದೇ ವೇಳೆ ನಿರ್ದೇಶನ ನೀಡಿ ವಿಚಾರಣೆಯನ್ನು ನ.18ಕ್ಕೆ ಮುಂದೂಡಿತು.

ವಿಚಾರಣೆ ವೇಳೆ ಅರ್ಜಿದಾರ ಪರ ವಕೀಲ ಸಿ.ವಿ. ಶೀಲವಂತ ವಾದ ಮಂಡಿಸಿ, ರಾಜ್ಯದಲ್ಲಿ ಫಾರ್ಮಾಸಿ ಕಾಯ್ದೆ-1948 ಮತ್ತು ಕೆಮಿಸ್ಟ್‌ ಆಂಡ್‌ ಡ್ರಗ್ಸ್‌ ಕಾಯ್ದೆ-1940 ಅನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲಾಗುತ್ತಿಲ್ಲ. 40 ಸಾವಿರಕ್ಕೂ ಹೆಚ್ಚು ಫಾರ್ಮಾಸಿಸ್ಟ್‌ಗಳು ತಮ್ಮದು ಶಾಶ್ವತ ನೋಂದಣಿ ಎಂದು ಹೇಳಿಕೊಳ್ಳುತ್ತಾರೆ. ಆದರೆ, ಕಾಯ್ದೆಯಲ್ಲಿ ಶಾಶ್ವತ ನೋಂದಣಿಗೆ ಅವಕಾಶವಿಲ್ಲ. 2012ರಿಂದ ಫಾರ್ಮಾಸಿ ಇನ್ಸ್‌ಪೆಕ್ಟರ್‌ಗಳ ನೇಮಕವಾಗಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಸರ್ಕಾರಿ ವಕೀಲರು ವಾದಿಸಿ, ರಾಜ್ಯದಲ್ಲಿ ಫಾರ್ಮಾಸಿ ಕಾಯ್ದೆ-1948 ಮತ್ತು ಕೆಮಿಸ್ಟ್‌ ಆಂಡ್‌ ಡ್ರಗ್ಸ್‌ ಕಾಯ್ದೆ-1940 ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. 2011ರ ಮಾಹಿತಿಯಂತೆ ರಾಜ್ಯದಲ್ಲಿ 50,220 ನೋಂದಾಯಿತ ಫಾರ್ಮಾಸಿಸ್ಟ್‌ಗಳಿವೆ. ಆ ಪಟ್ಟಿಯಲ್ಲಿ 48,552 ಫಾರ್ಮಾಸಿಸ್ಟ್‌ಗಳ ಹೆಸರಿದೆ. ಇದರಲ್ಲಿ 5,601 ಫಾರ್ಮಾಸಿಸ್ಟ್‌ಗಳು ನೋಂದಣಿ ನವೀಕರಣ ಮಾಡಿಸಿಕೊಂಡಿದ್ದಾರೆ. 184 ಫಾರ್ಮಾಸಿ ಇನ್ಸ್‌ಪೆಕ್ಟರ್‌ಗಳನ್ನು ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲಾಗಿತ್ತು. ಆದರೆ, ಕಾಯ್ದೆಗಳಲ್ಲಿ ಪ್ರಾಸಿಕ್ಯೂಷನ್‌ ನಡೆಸಲು ಇನ್ಸ್‌ಪೆಕ್ಟರ್‌ಗಳಿಗೆ ಅಧಿಕಾರವಿಲ್ಲದ ಕಾರಣ ನೇಮಕಾತಿ ಮುಂದುವರಿಸಲಾಗಿಲ್ಲ ಎಂದು ತಿಳಿಸಿದರು.

click me!